ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಕೆಲಸಗಾರರಿಗೆ ತೆರೆದ ಬಾಗಿಲು

ಜಪಾನ್‌ನ ಈ ಪರಿವರ್ತನೆಗೆ ಆರ್ಥಿಕತೆ ಹಾಗೂ ಜನಸಂಖ್ಯೆಯ ಸ್ವರೂಪ ಕಾರಣ
Last Updated 16 ಜನವರಿ 2019, 20:15 IST
ಅಕ್ಷರ ಗಾತ್ರ

ಕಾರ್ಮಿಕರ ಕೊರತೆಯಿಂದ ತೊಂದರೆಗೆ ಸಿಲುಕಿರುವ ಜಪಾನ್‌, ಇನ್ನಷ್ಟು ಹೆಚ್ಚು ವಿದೇಶಿಯರಿಗೆ ತನ್ನ ದೇಶದಲ್ಲಿ ಕೆಲಸ ಮಾಡಲು ಅವಕಾಶ ನೀಡಿದೆ. ಅಲ್ಲಿನ ಸಂಸತ್ತು ಅಂಗೀಕಾರ ನೀಡಿದ ಮಸೂದೆಯೊಂದರ ಅನ್ವಯ, ಐದು ವರ್ಷಗಳ ಅವಧಿಯ ನಾಲ್ಕು ಲಕ್ಷದಷ್ಟು ವೀಸಾಗಳನ್ನು ಕೌಶಲರಹಿತ ಕಾರ್ಮಿಕರಿಗೆ ಈ ವರ್ಷದಿಂದಲೇ ನೀಡಲಾಗುತ್ತದೆ.

ಜಪಾನ್‌ ಪಾಲಿಗೆ ಇದು ನೆನಪಿಟ್ಟುಕೊಳ್ಳಬೇಕಾದ ನಡೆ. ಇದು ನೆರೆಯ ದೇಶಗಳನ್ನೂ ಅಚ್ಚರಿಗೆ ಕೆಡವಿದೆ. ಬಹುಶಃ ಜಪಾನ್ ತನ್ನ ಬಗ್ಗೆಯೇ ಅಚ್ಚರಿಪಟ್ಟುಕೊಂಡಿದೆ. ವಲಸೆಯ ವಿಚಾರದಲ್ಲಿ ಒಂದು ಕಾಲದಲ್ಲಿ ಕರಾಳ ಮಿತಿಗಳನ್ನು ಅಪ್ಪಿಕೊಂಡಿದ್ದ ಜಪಾನ್ ಈಗ ಮನಸ್ಸಿಲ್ಲದಿದ್ದರೂ ಇನ್ನೊಂದು ದಿಕ್ಕಿನತ್ತ ಸಾಗಿದೆ. ವಿದೇಶಿಯರನ್ನು ತನ್ನತ್ತ ಕರೆಯುತ್ತಿದೆ.

ಜಪಾನ್‌ನ ಈ ಪರಿವರ್ತನೆಗೆ ಮುಖ್ಯ ಕಾರಣ ಆರ್ಥಿಕತೆ ಹಾಗೂ ಅಲ್ಲಿನ ಜನಸಂಖ್ಯೆಯ ಸ್ವರೂಪ. ದುಡಿಯುವ ವಯಸ್ಸಿನ ಜನರ ಸಂಖ್ಯೆ ಕಡಿಮೆ ಆಗುತ್ತಿರುವ ಕಾರಣ ಕೆಲಸಗಾರರನ್ನು ಹುಡುಕಿಕೊಳ್ಳಲು ಆ ದೇಶಕ್ಕೆ ಬೇರೆ ಆಯ್ಕೆಗಳು ಇಲ್ಲ. ಆದರೆ ಈ ತೀರ್ಮಾನ ಎಲ್ಲರಲ್ಲೂ ಸಂತಸ ಮೂಡಿಸಿಲ್ಲ.

‘ವಲಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಟ್ಟುಕೊಳ್ಳುವುದರಿಂದ ಈ ಅನನ್ಯ ದೇಶದ ಗಡಿ ದುರ್ಬಲವಾಗಬಹುದು’ ಎನ್ನುತ್ತಾರೆ ಟೋಕಿಯೊದ ಹೊರವಲಯದ ಕಾಶಿವಾದಲ್ಲಿನ ನರ್ಸಿಂಗ್ ಹೋಂ ಕಂಪನಿಯೊಂದರ ನಿರ್ದೇಶಕ ಕೊಯಿಚಿರೊ ಗೋಟೊ. ಗೋಟೊ ಅವರಂತಹ ವ್ಯಕ್ತಿಗಳು ಹೊಸ ಕ್ರಮವನ್ನು ಮನಸ್ಸಿಲ್ಲದಿದ್ದರೂ ಸ್ವಾಗತಿಸುತ್ತಾರೆ. 70 ಕೊಠಡಿಗಳು ಇರುವ ನರ್ಸಿಂಗ್ ಹೋಮ್‌ಗೆ ಅವರಿಗೆ ಕೆಲಸಗಾರರು ಬೇಕು. ‘ಕೆಲಸಕ್ಕೆ ಬೇಕಾಗಿದ್ದಾರೆ’ ಎನ್ನುವ ಜಾಹೀರಾತುಗಳಿಗೆ ಪ್ರತಿಯಾಗಿ ಕೆಲಸ ಕೋರಿ ಅರ್ಜಿಗಳೇ ಬರುತ್ತಿಲ್ಲ. ‘ವಿದೇಶಿ ಕೆಲಸಗಾರರು ನಮಗೆ ನೆರವಾಗದಿದ್ದರೆ ನಮ್ಮ ವಹಿವಾಟು ಉಳಿದುಕೊಳ್ಳುವುದಿಲ್ಲ’ ಎನ್ನುತ್ತಾರೆ ಅವರು.

ಕೆಲಸಗಾರರ ತೀವ್ರ ಕೊರತೆ ಎದುರಿಸುತ್ತಿರುವ ಹಡಗು ನಿರ್ಮಾಣ, ಕೃಷಿ, ಕಟ್ಟಡ ನಿರ್ಮಾಣದಂತಹ 14 ಕ್ಷೇತ್ರಗಳಲ್ಲಿ ಕೆಲಸಗಾರರನ್ನು ನೇಮಿಸಿಕೊಳ್ಳಲು ಹೊಸ ಉಪಕ್ರಮದ ಅಡಿ 2.6 ಲಕ್ಷದಿಂದ 3.45 ಲಕ್ಷದವರೆಗೆ ಐದು ವರ್ಷಗಳ ಅವಧಿಯ ವೀಸಾ ನೀಡಲಾಗುತ್ತದೆ. ಉನ್ನತ ಕೌಶಲ ಹೊಂದಿರುವ ಕೆಲಸಗಾರರಿಗೆ ಪ್ರತ್ಯೇಕ ವೀಸಾ ನೀಡುವ ವ್ಯವಸ್ಥೆ ಇದರಲ್ಲಿ ಇದ್ದು, ಅವರಿಗೆ ಜಪಾನ್‌ನಲ್ಲಿ ಬಯಸಿದಷ್ಟು ಕಾಲ ವಾಸಿಸುವ, ತಮ್ಮ ಕುಟುಂಬದ ಸದಸ್ಯರನ್ನು ಜಪಾನ್‌ಗೆ ಕರೆಸಿಕೊಳ್ಳುವ ಸೌಲಭ್ಯ ನೀಡಲಾಗುತ್ತದೆ.

ಪ್ರಧಾನಿ ಶಿಂಜೊ ಅಬೆ ಅವರ ಬಲಪಂಥೀಯ ಒಲವಿನ ಆಡಳಿತದ ಪಾಲಿಗೆ ಈ ಕ್ರಮ ಬಹಳ ಮಹತ್ವದ್ದು. ಮೂರು ವರ್ಷಗಳ ಹಿಂದೆ ವಿಶ್ವಸಂಸ್ಥೆಯ ಮಹಾಸಭೆಯ ಸಂದರ್ಭದಲ್ಲಿ ಅಬೆ, ‘ವಲಸಿಗರನ್ನು ಒಪ್ಪಿಕೊಳ್ಳುವ ಮೊದಲು ನಾವು ಮಾಡಬೇಕಿರುವ ಕೆಲಸಗಳು ಬಹಳಷ್ಟಿವೆ’ ಎಂದಿದ್ದರು. ಜನಸಂಖ್ಯೆ ಕುಸಿತದಿಂದ ಉಂಟಾಗಿರುವ ಕೆಲಸಗಾರರ ಕೊರತೆ ನೀಗಲು ಅಬೆ ಮಹಿಳೆಯರಿಗೆ ಹೆಚ್ಚು ಕೆಲಸ ಕೊಡುವುದು, ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದು ಹಾಗೂ ರೋಬೊಗಳನ್ನು ಬಳಸಿಕೊಳ್ಳುವ ಪರ ಮಾತನಾಡಿದ್ದರು. ಆದರೆ, ‘ಆಂತರಿಕ ಕ್ರಮಗಳನ್ನು ಮಾತ್ರ ನೆಚ್ಚಿಕೊಂಡು ದೇಶದ ಜನಸಂಖ್ಯಾ ಸಮಸ್ಯೆ ಪರಿಹರಿಸುವುದು ಸಾಧ್ಯವಿಲ್ಲ’ ಎಂಬುದನ್ನು ಪರಿಸ್ಥಿತಿಯು ಅಬೆ ಮತ್ತು ಅವರ ಸಂಪ್ರದಾಯವಾದಿ ಬೆಂಬಲಿಗರಿಗೆ ಮನವರಿಕೆ ಮಾಡಿಕೊಟ್ಟಿತು.

ವಲಸಿಗರಿಗೆ ಅವಕಾಶ ನೀಡದಿದ್ದರೆ, ಮುಂದಿನ 25 ವರ್ಷಗಳ ಅವಧಿಯಲ್ಲಿ ಜಪಾನ್‌ನ ಜನಸಂಖ್ಯೆ ಸರಿಸುಮಾರು ಶೇಕಡ 13ರಷ್ಟು ಕಡಿಮೆ ಆಗಲಿದೆ ಎಂದು ಅಂದಾಜಿಸಲಾಗಿದೆ. 65 ವರ್ಷಕ್ಕಿಂತ ಹೆಚ್ಚು ವಯಸ್ಸಾದವರ ಪ್ರಮಾಣ ಶೇಕಡ 25ರಷ್ಟಿರುವುದು, ಈ ಅವಧಿಯಲ್ಲಿ ಶೇಕಡ 33ರಷ್ಟಕ್ಕಿಂತ ಹೆಚ್ಚಾಗುವ ಅಂದಾಜು ಇದೆ. 2025ರೊಳಗೆ ಜಪಾನ್‌ನಲ್ಲಿ ಅಂದಾಜು 3.77 ಲಕ್ಷ ದಾದಿಯರ ಅಗತ್ಯ ಎದುರಾಗಲಿದೆ ಎಂದು ಸರ್ಕಾರ ಲೆಕ್ಕಹಾಕಿದೆ.

ಕೆಲಸಗಾರರ ಕೊರತೆಯು ತುರ್ತಾಗಿ ಗಮನ ನೀಡಬೇಕಾದ ವಿಷಯ. ವಿದೇಶಗಳ ಕೆಲಸಗಾರರು ಬೇಕು ಎಂದು ಅಬೆ ಅವರು ಸಂಸತ್ತಿನಲ್ಲಿ ಈಚೆಗೆ ಹೇಳಿದ್ದರು. ಆದರೆ, ವಿರೋಧ ಪಕ್ಷಗಳಿಂದ ಸಾಕಷ್ಟು ಟೀಕೆಗೆ ಗುರಿಯಾಗಿರುವ ಹೊಸ ಕ್ರಮವು ವಲಸೆ ನೀತಿಯ ಅಪ್ಪುಗೆಯಂತೆ ಕಾಣಿಸುತ್ತಿಲ್ಲ. ಕೈಗಾರಿಕಾ ಸಂಘಟನೆಗಳು ಈ ಮಸೂದೆಗೆ ಸಾಕಷ್ಟು ಒತ್ತಡ ಹೇರಿದ್ದರೂ, ವಿದೇಶಿ ಕೆಲಸಗಾರರು ಮಾಡಬಹುದಾದ ಕೆಲಸಗಳನ್ನು ಮಿತಿಗೊಳಿಸುವ ಹಾಗೂ ಅವರು ಜಪಾನ್‌ನಲ್ಲಿ ನೆಲೆಸಬಹುದಾದ ಅವಧಿಗೆ ಮಿತಿ ಹೇರುವ ರೂಪದಲ್ಲಿ ಇದೆ ಈ ಮಸೂದೆ.

‘ಜಪಾನ್‌ ದೇಶವನ್ನು ಬಹುಸಂಸ್ಕೃತಿಯ ನಾಡನ್ನಾಗಿ ಮಾಡುವ ಮಸೂದೆ ಇದಲ್ಲ. ಇನ್ನಷ್ಟು ಹೆಚ್ಚಿನ ಪ್ರಮಾಣ
ದಲ್ಲಿ ಜಾಗತಿಕವಾಗಿಸುವ ಮಸೂದೆಯೂ ಇದಲ್ಲ. ಇದು ಕೆಲಸಗಾರರ ಅಗತ್ಯಗಳಿಗೆ ಮಾತ್ರ ಸಂಬಂಧಿಸಿದ ರಾಜಕೀಯ’ ಎನ್ನುತ್ತಾರೆ ಹಂಬರ್ಗ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಗೇಬ್ರಿಯಲ್ ವೊಟ್. ಇವರು ಜಪಾನಿನ ರಾಜಕೀಯ ಮತ್ತು ಸಮಾಜದ ಬಗ್ಗೆ ಅಧ್ಯಯನ ನಡೆಸಿದವರು.

ಹೊಸ ಕಾನೂನು ಜಪಾನಿನ ಅಧಿಕೃತ ನೀತಿಯಲ್ಲಿ ಬದಲಾವಣೆಯನ್ನು ತೋರಿಸುತ್ತಿದೆಯಾದರೂ, ಜಪಾನ್‌ ಹಿಂದಿನಿಂದಲೂ ಹಿಂಬಾಗಿಲ ಮೂಲಕ ವಿದೇಶಿ ವಲಸಿಗರನ್ನು ಬಿಟ್ಟುಕೊಂಡಿದೆ. ಸರ್ಕಾರ ನೀಡುವ ಅಂಕಿ–ಅಂಶದ ಅನ್ವಯ ಅಕ್ಟೋಬರ್‌ ವೇಳೆಗೆ ಅಲ್ಲಿ 13 ಲಕ್ಷ ವಿದೇಶಿ ಕೆಲಸಗಾರರು ಇದ್ದರು.

ಅಲ್ಲಿನ ಹಲವು ಉದ್ಯೋಗದಾತರು ತರಬೇತಿ ನಿರತ ಕೆಲಸಗಾರರನ್ನು ಕಡಿಮೆ ಬೆಲೆಗೆ ದುಡಿಸಿಕೊಳ್ಳುತ್ತಾರೆ, ಹಲವರು ದೌರ್ಜನ್ಯಕ್ಕೆ ಗುರಿಯಾಗುವುದೂ ಇದೆ. 2015ರಿಂದ 2017ರ ನಡುವಿನ ಅವಧಿಯಲ್ಲಿ ಬೇರೆ ಬೇರೆ ದೇಶಗಳ 63 ಜನ ತರಬೇತಿನಿರತ ಕೆಲಸಗಾರರು ಅಪಘಾತ ಅಥವಾ ಅನಾರೋಗ್ಯದಿಂದ ಮೃತಪಟ್ಟಿ
ದ್ದಾರೆ ಎಂದು ಸರ್ಕಾರ ವರದಿ ಮಾಡಿದೆ. ಈ ಅವಧಿಯಲ್ಲಿ ಇನ್ನೂ ಆರು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೊಸ ಕಾನೂನು, ವಿದೇಶಿ ಕಾರ್ಮಿಕರ ಶೋಷಣೆಯನ್ನು ಇನ್ನಷ್ಟು ಹೆಚ್ಚು ಮಾಡಬಹುದು ಎಂಬ ಆತಂಕ ವ್ಯಕ್ತಪಡಿಸಿದವರೂ ಇದ್ದಾರೆ. ‘ಮೇಲ್ವಿಚಾರಣೆ ಇಲ್ಲದಿದ್ದರೆ ಈ ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸಲು ಆಗದು’ ಎನ್ನುತ್ತಾರೆ ಸಮಾಜಶಾಸ್ತ್ರದ ಪ್ರೊಫೆಸರ್ ಷಿಕಾಕೊ ಕಷಿವಜಕಿ. ವಿದೇಶಗಳ ಕೆಲಸಗಾರರನ್ನು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬರಮಾಡಿಕೊಳ್ಳುವುದರಿಂದ ಸಮಾಜವನ್ನು ಕಲಕಿದಂತೆ ಆಗುವುದಿಲ್ಲವೇ ಎಂಬ ಪ್ರಶ್ನೆಯನ್ನು ರಾಜಕೀಯದ ಎಡ ಹಾಗೂ ಬಲ ಪಂಥಗಳಲ್ಲಿ ಗುರುತಿಸಿಕೊಂಡಿರುವ ರಾಜಕಾರಣಿಗಳು ಕೇಳುತ್ತಿದ್ದಾರೆ. ವಿದೇಶಿಯರ ಕುರಿತು ಇಲ್ಲಿ ಎಷ್ಟು ಆಳವಾದ ಅನುಮಾನ ಇದೆ ಎಂಬುದನ್ನು ಈ ಪ್ರಶ್ನೆಯು ತೋರಿಸುತ್ತಿದೆ.

‘ವಿದೇಶಿಯರು ಜಪಾನಿನ ಸಮಾಜ ಕಲ್ಯಾಣ ವ್ಯವಸ್ಥೆಯನ್ನು ಬಳಸಿಕೊಳ್ಳುವುದನ್ನು ತಡೆಯಬೇಕು’ ಎಂದು ಅಬೆ ಅವರ ರಾಜಕೀಯ ಪಕ್ಷಕ್ಕೆ ಸೇರಿದ ಶಾಸಕರೊಬ್ಬರು ಬಲಪಂಥೀಯ ಪತ್ರಿಕೆಯೊಂದರಲ್ಲಿ ಬರೆದಿದ್ದಾರೆ. ‘ವ್ಯವಸ್ಥೆಯನ್ನು ಸೂಕ್ಷ್ಮವಾಗಿ ರೂಪಿಸಿದ ನಂತರವೇ ನಾವು ಬಾಗಿಲು ತೆರೆಯಬೇಕು. ಇಲ್ಲವಾದರೆ, ಬಾಗಿಲು ಮುಚ್ಚುವುದು ಸುಲಭಕ್ಕೆ ಸಾಧ್ಯವಾಗುವುದಿಲ್ಲ’ ಎಂದು ಎಡಪಂಥೀಯ ಒಲವಿನ ಶಿಯೋರಿ ಯಮಾವೊ ಕಳೆದ ತಿಂಗಳು ಸದನದಲ್ಲಿ ಎಚ್ಚರಿಕೆಯ ಮಾತು ಹೇಳಿದ್ದರು.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT