ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಕಾರಮ್: ವಿಫಲವಾದ ಹೊಸ ಅಣೆಕಟ್ಟು

ಈ ಅಣೆಕಟ್ಟೆಯ ಪ್ರಕರಣದಿಂದ ದೇಶ ಕಲಿಯಬೇಕಾದ ಪಾಠವಿದೆ
Last Updated 2 ಸೆಪ್ಟೆಂಬರ್ 2022, 19:32 IST
ಅಕ್ಷರ ಗಾತ್ರ

ಆಗಸ್ಟ್ ತಿಂಗಳ ಎರಡನೆಯ ವಾರದಲ್ಲಿ ದೇಶದಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಗಾಗಿ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದ ಸಮಯದಲ್ಲೇ, ಮಧ್ಯಪ್ರದೇಶದ ಧಾರ್ ಮತ್ತು ಖಾರ್ಗೋನ್ ಜಿಲ್ಲೆಗಳ 18 ಹಳ್ಳಿಗಳ 40,000 ಮಂದಿ ಜೀವ ಉಳಿಸಿಕೊಳ್ಳುವ ತರಾತುರಿಯಲ್ಲಿದ್ದರು. ಯಾವುದೇ ಸಮಯದಲ್ಲಿ ಅಪ್ಪಳಿಸಬಹುದಾಗಿದ್ದ ಅನಾಹುತದ ನಿರೀಕ್ಷೆಯಲ್ಲಿ ತುದಿಗಾಲಿನಲ್ಲಿ ನಿಂತಿದ್ದ ಮಧ್ಯಪ್ರದೇಶ ಸರ್ಕಾರವು ಆಪತ್‍ರಕ್ಷಕ ಭಾರತೀಯ ಸೇನೆಯ ನೆರವನ್ನು ಕೋರಿತ್ತು. ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯಾ ತಂಡಗಳು ಕಾರ್ಯಾಚರಣೆಗೆ ಸಿದ್ಧವಾಗಿದ್ದವು. ರಾಜ್ಯದ ಮುಖ್ಯಮಂತ್ರಿಯವರು ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹ ಸಚಿವರ ಸಂಪರ್ಕದಲ್ಲಿದ್ದರು.

ಇಂತಹ ಆತಂಕ, ತುರ್ತುಪರಿಸ್ಥಿತಿಗೆ ಕಾರಣವಾಗಿದ್ದು, ಧಾರ್ ಜಿಲ್ಲೆಯ ಭರೂದ್‍ಪುರ ಅಥವಾ ಕಾರಮ್ ಅಣೆಕಟ್ಟೆಯಲ್ಲಿ ನೀರಿನ ಸೋರಿಕೆ, ಎದ್ದು ಕಾಣುವ ಬಿರುಕು ಮತ್ತು ಅಣೆಕಟ್ಟೆ ಬಿರಿಯಬಹುದಾದ ಸಾಧ್ಯತೆ. ಕಾರಮ್, ಮಧ್ಯಪ್ರದೇಶದ ಪ್ರಮುಖ ನದಿಯಾದ ನರ್ಮದೆಯ ಉಪನದಿ. ಧಾರ್ ಜಿಲ್ಲೆಯ ಧರ್ಮಪುರಿ ತಾಲ್ಲೂಕಿನಲ್ಲಿ ಕಾರಮ್ ನದಿಗೆ ಅಣೆಕಟ್ಟೆಯೊಂದನ್ನು ನಿರ್ಮಿಸಲಾಗುತ್ತಿದೆ. ₹ 305 ಕೋಟಿ ಅಂದಾಜುವೆಚ್ಚದ ಈ ಯೋಜನೆ ಪ್ರಾರಂಭವಾದದ್ದು 2018ರಲ್ಲಿ. 590 ಮೀಟರ್ ಉದ್ದ, 52 ಮೀಟರ್ ಎತ್ತರದ ಈ ಅಣೆಕಟ್ಟೆಯ ಸಂಗ್ರಹಣಾ ಸಾಮರ್ಥ್ಯ 43.98 ಮಿಲಿಯನ್ ಕ್ಯೂಬಿಕ್ ಮೀಟರ್‌ಗಳು (ಮಿಕ್ಯೂಮಿ). ಒಟ್ಟು 10,500 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುವ ಈ ಅಣೆಕಟ್ಟೆಯ ನಿರ್ಮಾಣ ಕಾರ್ಯ ಈ ವರ್ಷದ ಜೂನ್ ತಿಂಗಳಲ್ಲಿ ಮುಗಿಯಬೇಕಿತ್ತು. ಆದರೆ ಈಗ ಶೇ 80ರಷ್ಟು ಕೆಲಸ ಮುಗಿದಿದ್ದು, ಈ ವರ್ಷದ ಮಳೆಗಾಲದಿಂದ ಮೊದಲ ಬಾರಿಗೆ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಾರಂಭವಾಯಿತು.

ಆಗಸ್ಟ್ 10ರಂದು ಅಣೆಕಟ್ಟೆಯಿಂದ ನೀರು ಸೋರಲು ಪ್ರಾರಂಭವಾಗಿ, 11ರಂದು ಸೋರಿಕೆಯ ಪ್ರಮಾಣ ಗಮನಾರ್ಹವಾಗಿ ಏರಿತು. ಸೋರಿಕೆಯನ್ನು ತಡೆಯಲು ಸಾಧ್ಯವಾಗದಿದ್ದಾಗ, 13ರಂದು ಬೆಳಗಿನ ಜಾವ ಭಾರತೀಯ ಸೇನೆಯ ಎಂಜಿನಿಯರುಗಳ ತಂಡವು ನೀರಿನ ಸೋರಿಕೆಯನ್ನು ತಡೆಯುವ ಕೆಲಸ ಪ್ರಾರಂಭಿಸಿತು.

ಈ ಮಧ್ಯೆ, ಅಣೆಕಟ್ಟೆಯಲ್ಲಿ ಬಿರುಕು ಕಾಣಿಸಿಕೊಂಡಿ ದ್ದರಿಂದ ಮಧ್ಯಪ್ರದೇಶ ಸರ್ಕಾರವು ಅಣೆಕಟ್ಟೆಯ ಕೆಳಭಾಗದ 18 ಹಳ್ಳಿಗಳ 40,000 ಜನರನ್ನು ಲಗು ಬಗೆಯಿಂದ ಸ್ಥಳಾಂತರಗೊಳಿಸಿತು. ಅಣೆಕಟ್ಟೆ ಒಡೆದು ನೀರು ಪ್ರವಾಹದೋಪಾದಿಯಲ್ಲಿ ಮುನ್ನುಗ್ಗುವ ಸಾಧ್ಯತೆ ಇದ್ದುದರಿಂದ ಧಾರ್ ಜಿಲ್ಲೆಯ ಮೂಲಕ ಸಾಗುವ ಮುಂಬೈ- ಆಗ್ರಾ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಪ್ರತಿಬಂಧಿಸಲಾಯಿತು. ಈ ಹಂತದಲ್ಲಿ ಕಾರ್ಯಾಚರಣೆಯ ತಂತ್ರವನ್ನು ಬದಲಿಸಿದ ಸರ್ಕಾರ, ಅಣೆಕಟ್ಟೆಯ ಒಂದು ಭಾಗವನ್ನು ಒಡೆದು, ನೀರು ಹೊರಹೋಗಲು ಮಾರ್ಗ ಕಲ್ಪಿಸಿ, ಕಟ್ಟೆಯ ಗೋಡೆಯ ಮೇಲೆ ನೀರಿನ ಒತ್ತಡ ತಗ್ಗಿಸಲು ನಿರ್ಧರಿಸಿತು.

ಜೆಸಿಬಿ ಯಂತ್ರಗಳಿಂದ ಆರು ಮೀಟರ್ ಗೋಡೆಯನ್ನು ಎಚ್ಚರಿಕೆಯಿಂದ ಕೆಡವಿ, ಹೊರನುಗ್ಗಿದ ನೀರು ತಾತ್ಕಾಲಿಕವಾಗಿ ನಿರ್ಮಿಸಿದ ಕಾಲುವೆಯ ಮೂಲಕ ಸಾಗುವಂತೆ ಮಾಡುವ ಪ್ರಯತ್ನ ಪ್ರಾರಂಭವಾಯಿತು. ಆಗಸ್ಟ್ 14ರಂದು ಬೆಳಗಿನ ಜಾವ 3 ಗಂಟೆಗೆ, ಕೆಡವಿದ ಗೋಡೆಯ ಮೂಲಕ ಹೊರ ನುಗ್ಗಿದ ನೀರು, ಕಾಲುವೆಯಲ್ಲಿ ಹರಿದು ಮುಂದೆ ಮತ್ತೆ ನದಿಯನ್ನು ಸೇರಿತು. ರಾತ್ರಿ 10 ಗಂಟೆಯ ವೇಳೆಗೆ, ಅಣೆಕಟ್ಟೆಯಲ್ಲಿ ಸಂಗ್ರಹವಾಗಿದ್ದ 15 ಮಿಕ್ಯೂಮಿ ನೀರು ಹೊರಗೆ ಹರಿದಿದ್ದರಿಂದ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಇಡೀ ದೇಶಕ್ಕೆ ಮುಜುಗರವಾಗುವಂತೆ ಸಂಭವಿಸಬಹುದಾಗಿದ್ದ ಅವಘಡದಿಂದ ಜನ ಪಾರಾದರು. ಆದರೆ ಮೊದಲ ಬಾರಿಗೆ ನೀರು ಸಂಗ್ರಹವಾದ ಮಳೆಗಾಲದಲ್ಲೇ ವಿಫಲವಾದ ದೇಶದ ಮೊದಲ ಹೊಸ ಅಣೆಕಟ್ಟೆ ಎಂಬ ಕುಖ್ಯಾತಿ ಇದೀಗ ಈ ಅಣೆಕಟ್ಟೆಗೆ ಅಂಟಿದೆ.

ಅಣೆಕಟ್ಟುಗಳ ವೈಫಲ್ಯ ನಮ್ಮ ದೇಶದಲ್ಲಿ ಬಹಳ ಅಪರೂಪವೇನಲ್ಲ. ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಕುಸಿತ, ಬಿರಿತ, ಒಡೆತಗಳಿಂದ 42 ಅಣೆಕಟ್ಟುಗಳು ವಿಫಲವಾಗಿವೆ. 1979ರಲ್ಲಿ ಗುಜರಾತ್‍ನ ಮಚು ಅಣೆಕಟ್ಟೆಯ ವೈಫಲ್ಯದಿಂದ 12,000 ಮನೆಗಳು ನಾಶವಾಗಿ, 2,000 ಮಂದಿ ಪ್ರಾಣ ಕಳೆದುಕೊಂಡ ಭೀಕರ ನಿದರ್ಶನವಿದೆ. ಇಂತಹ ಅವಘಡಗಳನ್ನು ಅಧ್ಯಯನ ಮಾಡಿರುವ ವಿಜ್ಞಾನಿಗಳು ಅಣೆಕಟ್ಟುಗಳ ವೈಫಲ್ಯಕ್ಕೆ ನಾಲ್ಕು ಮುಖ್ಯ ಕಾರಣಗಳನ್ನು ಗುರುತಿಸಿದ್ದಾರೆ.

ಮೊದಲನೆಯದು, ಓವರ್ ಟಾಪಿಂಗ್. ಅಣೆಕಟ್ಟೆಯ ಜಲಾಶಯದಿಂದ ನೀರು ಹರಿದು ಹೋಗುವ ಕೋಡಿಯ (ಸ್ಪಿಲ್‍ವೇ) ವಿನ್ಯಾಸ ಸರಿಯಿಲ್ಲದಿದ್ದಾಗ ಅಥವಾ ಕೋಡಿ ಮುಚ್ಚಿಹೋಗಿದ್ದಾಗ, ಮಳೆಗಾಲದಲ್ಲಿ ಜಲಾಶಯದ ನೀರಿನ ಮಟ್ಟ ತ್ವರಿತಗತಿಯಲ್ಲಿ ಏರಿ, ಅಣೆಕಟ್ಟೆಯ ಮೇಲ್ಭಾಗದಲ್ಲಿ ಹರಿದು ಕಟ್ಟೆ ಕುಸಿಯುತ್ತದೆ. ಎರಡನೆಯ ಕಾರಣ, ಅಣೆಕಟ್ಟೆಯ ಅಸ್ಥಿಭಾರದಲ್ಲಿ ಕಾಣಿಸಿಕೊಳ್ಳುವ ಲೋಪದೋಷ, ನ್ಯೂನತೆಗಳು. ಅಣೆಕಟ್ಟೆಯ ಕಟ್ಟಡದೊಳಗೆ ಜಿನುಗುವ ನೀರು ದೀರ್ಘಕಾಲದಲ್ಲಿ ಉಂಟುಮಾಡುವ ಕೊರೆತ, ಶಿಥಿಲತೆಯು ಮೂರನೆಯ ಮುಖ್ಯ ಕಾರಣವಾದರೆ, ನೀರನ್ನು ಸಾಗಿಸುವ ನಾಲೆ, ಕೊಳವೆಗಳು, ಏಕಮುಖ ಕವಾಟಗಳ ವೈಫಲ್ಯವು ನಾಲ್ಕನೆಯ ಕಾರಣ.

ಇವುಗಳಲ್ಲದೇ ಭೂಕಂಪನ, ಭೂಕುಸಿತ ಮುಂತಾದ ನೈಸರ್ಗಿಕ ಕಾರಣಗಳೂ ಉಂಟು. ಈ ಎಲ್ಲ ಕಾರಣಗಳ ಪರಿಚಯವಿರುವ ಕೇಂದ್ರ ಜಲ ಆಯೋಗವು ದೇಶದ ಎಲ್ಲ ಅಣೆಕಟ್ಟುಗಳ ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನು ಅನುಮಾನಕ್ಕೆ ಆಸ್ಪದವೇ ಇಲ್ಲದಂತೆ ನಿರೂಪಿಸಿದೆ. ಆದರೆ ಈ ಸಮಗ್ರ ಸೂಚನೆಗಳಲ್ಲಿ ಎಷ್ಟು ಕಾರ್ಯಗತವಾಗಿವೆ ಎಂಬುದು ಪ್ರಶ್ನಾರ್ಹ.

ನಮ್ಮ ದೇಶದಲ್ಲಿ ಬೃಹತ್ ಅಣೆಕಟ್ಟುಗಳ ಸುರಕ್ಷತೆಯ ಸ್ಥಿತಿಗತಿಗಳ ಬಗ್ಗೆ ಒಂದು ಸ್ಥೂಲಚಿತ್ರವನ್ನು 2017ರಲ್ಲಿ ಸಂಸತ್ತಿನಲ್ಲಿ ಮಂಡನೆಯಾದ ಮಹಾಲೇಖಪಾಲರ (ಸಿಎಜಿ) ವರದಿ ನೀಡುತ್ತದೆ. ಆ ವರದಿಯಂತೆ, ದೇಶದ 5,264 ಬೃಹತ್ ಅಣೆಕಟ್ಟುಗಳಲ್ಲಿ (ಇಂದಿನ ಸಂಖ್ಯೆ 5,745) ಆಪತ್ತಿನ ತುರ್ತು ಸಮಯದ ಯೋಜನೆಗಳಿರುವುದು 349 ಅಣೆಕಟ್ಟುಗಳಲ್ಲಿ ಮಾತ್ರ.

ಪ್ರತೀ ರಾಜ್ಯದಲ್ಲಿ ಇರುವ ಅಣೆಕಟ್ಟು ಸುರಕ್ಷತಾ ಸಂಸ್ಥೆ, ಮಳೆಗಾಲಕ್ಕೆ ಮುಂಚೆ ಮತ್ತು ಮಳೆಗಾಲದ ನಂತರ, ಆಯಾ ರಾಜ್ಯದಲ್ಲಿರುವ ಪ್ರತಿಯೊಂದು ಬೃಹತ್ ಅಣೆಕಟ್ಟೆ ಯನ್ನೂ ವಿಶದವಾದ ಪರೀಕ್ಷೆಗೆ ಒಳಪಡಿಸಿ, ಅದರ ವರದಿಯನ್ನು ಮುಂದಿನ ವರ್ಷದ ಏಪ್ರಿಲ್ ಒಳಗಾಗಿ ಕೇಂದ್ರ ಜಲ ಆಯೋಗಕ್ಕೆ ಕಳುಹಿಸಬೇಕು. ಆದರೆ ಸಿಎಜಿ ಪರಿಶೀಲಿಸಿದ 17 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎರಡು ರಾಜ್ಯಗಳು ಮಾತ್ರ ಈ ವರದಿ ಯನ್ನು ಸಲ್ಲಿಸಿದ್ದವು. ಮಧ್ಯಪ್ರದೇಶದಲ್ಲಿ 906 ಬೃಹತ್ ಅಣೆಕಟ್ಟುಗಳಿದ್ದು, ಕೇಂದ್ರ ಜಲ ಆಯೋಗದ ಸೂಚನೆಯಂತೆ ವರ್ಷದಲ್ಲಿ ಎರಡು ಬಾರಿ ಅವುಗಳ ವಿಶದ ಪರೀಕ್ಷೆ ನಡೆಯಬೇಕು. ಆದರೆ 2016-19ರ ಮೂರು ವರ್ಷಗಳಲ್ಲಿ ಸರಾಸರಿ ಶೇ 24ರಷ್ಟು ಅಣೆಕಟ್ಟುಗಳು ಮಾತ್ರ ಪರಿಶೀಲನೆಗೆ ಒಳಗಾಗಿವೆ.

ಬೃಹತ್ ಅಣೆಕಟ್ಟುಗಳ ಸುರಕ್ಷತೆಗೆ ಅಗತ್ಯವಾದ ಸಮಸ್ತ ವಿಧಿವಿಧಾನಗಳನ್ನೂ ಒಳಗೊಂಡಿರುವ ‘ಅಣೆಕಟ್ಟು ಸುರಕ್ಷತಾ ಅಧಿನಿಯಮ- 2021’, ರಾಷ್ಟ್ರಪತಿಗಳ ಅಂಕಿತದ ನಂತರ 2021ರ ಡಿಸೆಂಬರ್‌ ನಿಂದ ವಿಧ್ಯುಕ್ತವಾಗಿ ಜಾರಿಗೆ ಬಂದಿದೆ. ಅಣೆಕಟ್ಟುಗಳ ಸುರಕ್ಷತೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದಿಷ್ಟವಾದ ಜವಾಬ್ದಾರಿಗಳನ್ನು ನೀಡಲು ಅಗತ್ಯವಾದ ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟನ್ನು ಇದು ಒದಗಿಸಿದೆ.

ಬೃಹತ್ ಅಣೆಕಟ್ಟುಗಳ ಮೇಲೆ ಕಣ್ಗಾವಲು, ದಿನನಿತ್ಯದ ಕಾರ್ಯಾಚರಣೆ, ನಿರ್ವಹಣೆಗೆ ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸುವ ಕೆಲಸ ನಡೆಯುತ್ತಿದೆ. ಆದರೆ ಈ ಅಧಿನಿಯಮದಲ್ಲಿ ನಿರ್ಮಾಣದ ಹಂತ ದಲ್ಲಿರುವ ಅಣೆಕಟ್ಟುಗಳ ಪ್ರಸ್ತಾಪವೇ ಇಲ್ಲದಿರುವುದರಿಂದ, ಕರಾಮ್‌ನಂತಹ ಅಣೆಕಟ್ಟುಗಳ ಸುರಕ್ಷತೆ ಈ ಅಧಿನಿಯಮದ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತದೆ ಎಂಬುದನ್ನು, ‘ಸೌತ್ ಏಷ್ಯಾ ನೆಟ್‍ವರ್ಕ್ ಆನ್ ಡ್ಯಾಮ್ಸ್, ರಿವರ್ಸ್ ಆ್ಯಂಡ್ ಪೀಪಲ್’ ಸಂಸ್ಥೆ ಎತ್ತಿ ತೋರಿಸಿದೆ.

ಕೇಂದ್ರ ಜಲ ಆಯೋಗದ ಭಾಗವಾದ, ನ್ಯಾಷನಲ್ ರಿಜಿಸ್ಟರ್ ಆಫ್ ಲಾರ್ಜ್ ಡ್ಯಾಮ್ಸ್ ಮೂಲದಂತೆ, ನಮ್ಮ ದೇಶದಲ್ಲಿ ನಿರ್ಮಾಣದ ವಿವಿಧ ಹಂತಗಳಲ್ಲಿರುವ 447 ಬೃಹತ್ ಅಣೆಕಟ್ಟುಗಳಿದ್ದು, ಸುರಕ್ಷತೆಯ ದೃಷ್ಟಿಯಿಂದ ಅವುಗಳನ್ನು ಈ ಅಧಿನಿಯಮದ ವ್ಯಾಪ್ತಿಗೆ ತ್ವರಿತವಾಗಿ ತರಬೇಕಾದ ಅಗತ್ಯವಿದೆ. ಇದು, ಕಾರಮ್ ಅಣೆಕಟ್ಟೆಯ ಪ್ರಕರಣದಿಂದ ದೇಶ ಕಲಿಯಬೇಕಾದ ಪಾಠ ಎಂಬುದು ತಜ್ಞರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT