ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿ ಮತ್ತು ಅಂತರಂಗದ ವಿವೇಕ

ಪ್ರಜಾಪ್ರಭುತ್ವದಲ್ಲಿ ಅಭ್ಯರ್ಥಿಗಿಂತಲೂ ಮತದಾರ ಸುಶಿಕ್ಷಿತನಾಗಬೇಕಾದುದು ಅಗತ್ಯ
Last Updated 7 ಜನವರಿ 2019, 19:36 IST
ಅಕ್ಷರ ಗಾತ್ರ

ಸಮಾಜದಲ್ಲಿ ಬದುಕು ರೂಪಿಸಿಕೊಳ್ಳಲು ಔಪಚಾರಿಕ ಶಿಕ್ಷಣ ಅತ್ಯಗತ್ಯ. ಆದರೆ ಸಾಮಾಜಿಕ ವ್ಯವಸ್ಥೆಯನ್ನು ರೂಪಿಸುವವರಿಗೆ, ಅಂದರೆ ರಾಜಕಾರಣಿಗಳಿಗೆ, ಕನಿಷ್ಠ ವಿದ್ಯಾರ್ಹತೆ ಇರಲೇಬೇಕು ಎಂದು ಕಟ್ಟುಪಾಡು ಮಾಡುವುದು ಅರ್ಥಹೀನ. ರಾಜಸ್ಥಾನದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಿದ್ಯಾರ್ಹತೆಯ ಮಾನದಂಡವನ್ನು ರೂಪಿಸಿದ್ದ ಈ ಹಿಂದಿನ ಸರ್ಕಾರದ ಕ್ರಮವನ್ನು ಹಾಲಿ ಸರ್ಕಾರ ರದ್ದುಪಡಿಸಿರುವುದು ಈ ಹಿನ್ನೆಲೆಯಲ್ಲಿ ಸೂಕ್ತ ನಿರ್ಧಾರವಾಗಿದೆ.

ಅಮೆರಿಕದ ಖ್ಯಾತ ಚಿಂತಕ ಥಾಮಸ್ ಜಫರ್‍ಸನ್ ಶಿಕ್ಷಣದ ಬಗ್ಗೆ ಅಪಾರವಾದ ಭರವಸೆ ಇಟ್ಟುಕೊಂಡಿದ್ದ. ‘ಅಮೆರಿಕದ ಪ್ರತಿಯೊಬ್ಬ ಪ್ರಜೆಯೂ ವಿದ್ಯಾವಂತನಾಗಿಬಿಟ್ಟರೆ ಇಡೀ ದೇಶವೇ ಸ್ವಾತಂತ್ರ್ಯ ಮತ್ತು ಸಂತೋಷಗಳಿಂದ ತುಂಬಿ ತುಳುಕುತ್ತದೆ...’ ಎಂದೆಲ್ಲ ಭವಿಷ್ಯವಾಣಿ ನುಡಿದಿದ್ದ. ಆದರೆ ಇಂದು ಅವನ ಭವಿಷ್ಯವಾಣಿ ಸುಳ್ಳಾಗಿದೆ. ಅಮೆರಿಕದಲ್ಲಿ ಅವನು ನಿರೀಕ್ಷಿಸಿದ ಶಾಂತಿ, ಸುಖ ಸಂತೋಷಗಳು ನೆಲೆಸಿಲ್ಲ. ಬದಲಾಗಿ ಅಲ್ಲಿಯ ಜನತೆ (ಮತ್ತು ಪ್ರಭುತ್ವ ಕೂಡ) ಹಿಂದೆಂದಿಗಿಂತಲೂ ಹೆಚ್ಚಿನ ಕ್ಷೋಭೆಗೆ, ಅಶಾಂತಿಗೆ ಈಡಾಗಿದೆ. ಆಧುನಿಕ ಶಿಕ್ಷಣಕ್ಕೂ ಅಂತರಂಗದ ವಿವೇಕಕ್ಕೂ ಎತ್ತಣಿಂದೆತ್ತ ಸಂಬಂಧ? ನಾಗರಿಕತೆಯ ಈ ಪೈಶಾಚಿಕ ರೂಪವನ್ನು ಮಹಾತ್ಮ ಗಾಂಧಿ ಬಹಳ ಮುಂಚಿತವಾಗಿಯೇ ಸಾಕ್ಷಾತ್ಕರಿಸಿಕೊಂಡಿದ್ದರು. ಅವರು ತಮ್ಮ ‘ಹಿಂದ್ ಸ್ವರಾಜ್’ನಲ್ಲಿ, ‘ನಮ್ಮ ಸಾಮಾಜಿಕ ಸ್ಥಿತಿಗತಿಗಳಿಗೂ, ನಾವು ಅಳವಡಿಸಿಕೊಂಡಿರುವ ಶಿಕ್ಷಣ ಪದ್ಧತಿಗೂ ಅರ್ಥಾರ್ಥ ಸಂಬಂಧ ಕಾಣಿಸುತ್ತಿಲ್ಲ’ ಎಂದು ಬರೆದಿದ್ದಾರೆ.

ನಿಜಕ್ಕೂ ನಾವು ರೂಪಿಸಿಕೊಂಡಿರುವ ಶಿಕ್ಷಣ ಪದ್ಧತಿಯೇ ದೋಷಪೂರಿತವಾದುದು, ಅವೈಜ್ಞಾನಿಕ ಕ್ರಮದ್ದು ಎನಿಸುತ್ತದೆ. ಒಬ್ಬ ವ್ಯಕ್ತಿ ಸುಶಿಕ್ಷಿತನಾದಂತೆ ಅವನು ಸಮಾಜದೊಡನೆ ಒಂದಾಗುವುದಿಲ್ಲ. ಬದಲಾಗಿ ಸಮಾಜದಿಂದ ಹಂತ ಹಂತವಾಗಿ ಪ್ರತ್ಯೇಕನಾಗುತ್ತಾನೆ; ಜೊತೆಗೆ ಸಮಾಜವನ್ನು ಸುಲಿಗೆ ಮಾಡುವ ವಿಷಯದಲ್ಲಿ ಅವನು ಹಂತ ಹಂತವಾಗಿ ಸಬಲನಾಗುತ್ತಾನೆ. ಪ್ರಜಾಪ್ರತಿನಿಧಿಯಾಗಿ ಆಯ್ಕೆಯಾಗುವ ಅಭ್ಯರ್ಥಿಗಳ ಮೇಲೆ ಶೈಕ್ಷಣಿಕ ಅರ್ಹತೆ ಹೇರುವುದು ರಾಜಕೀಯ ಸೋಗಲಾಡಿತನವೇ ಸರಿ.

ಸದ್ಯಕ್ಕೆ ನಮ್ಮ ಶಿಕ್ಷಣ ಪದ್ಧತಿ ನಮ್ಮ ಮಕ್ಕಳಿಗೆ ಹಲವರೊಂದಿಗೆ ಪೈಪೋಟಿ ನಡೆಸಿ ಅವರನ್ನು ತುಳಿದು ಮೇಲೆ ಬರುವ ವಿದ್ಯೆ ಕಲಿಸುವ ಸೇವಾರ್ಥಕ್ಕೆ ನಿಂತಿದೆ. ಶೈಕ್ಷಣಿಕ ಅರ್ಹತೆ ಗಳಿಸಿರುವ ರಾಜಕಾರಣಿಗಳು ಏನೆಲ್ಲ ಹಗರಣ ಮಾಡುತ್ತಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಭಾರತೀಯ ಸಮಾಜದ ವಾಸ್ತವಗಳನ್ನು ಬಲ್ಲವರು ಪ್ರಜಾಪ್ರತಿನಿಧಿಗಳ ಮೇಲೆ ಶೈಕ್ಷಣಿಕ ವಿದ್ಯಾರ್ಹತೆಯನ್ನು ಹೇರಬೇಕೆಂದು ಆಗ್ರಹಿಸುವುದಿಲ್ಲ.

ಅಂದಮಾತ್ರಕ್ಕೆ ಶೈಕ್ಷಣಿಕ ಅರ್ಹತೆ ಹೊಂದಿರದ ರಾಜಕಾರಣಿಗಳೆಲ್ಲ ನಿಸ್ಪೃಹರೆಂದೇನೂ ಭಾವಿಸಬೇಕಾಗಿಲ್ಲ. ಅವರಲ್ಲೂ ಭ್ರಷ್ಟರುಂಟು. ಶಿಕ್ಷಣ ಮಾತ್ರದಿಂದ ಭ್ರಷ್ಟತನ ತೊಲಗದು. ಆದರೆ ಸುಶಿಕ್ಷಿತರಲ್ಲದ ರಾಜಕಾರಣಿಗಳಿಗೆ ಹೋಲಿಸಿದರೆ ಸುಶಿಕ್ಷಿತರ ಭ್ರಷ್ಟತನದ ಕರಾಳತೆ ದಿಗಿಲು ಹುಟ್ಟಿಸುತ್ತದೆ. ಇಂದು ನಾವು ಪರಿಭಾವಿಸಿರುವಂತೆ ಪೈಪೋಟಿಯಲ್ಲಿನ ಗೆಲುವನ್ನೇ ವಿದ್ಯಾರ್ಹತೆ ಎನ್ನುವುದಾದರೆ, ರಾಜಕಾರಣಿಗಳೂ ಈ ಪೈಪೋಟಿಯ ಕಣದಲ್ಲಿ ನಿಂತೇ ತಮ್ಮ ರಾಜಕೀಯ ಜೀವನ ನಡೆಸುತ್ತಿದ್ದಾರೆ. ‘ಸುಶಿಕ್ಷಿತ’ರೆನಿಸಿಕೊಂಡವರಿಗೆ ವಿಶ್ವವಿದ್ಯಾಲಯದ ಪ್ರೊಫೆಸರುಗಳು ಜೀವಮಾನದಲ್ಲಿ ಒಮ್ಮೆ ಮಾತ್ರ ಪರೀಕ್ಷಕರಾದರೆ ರಾಜಕಾರಣಿಯ ಪಾಲಿಗೆ- ಆತ ರಾಜಕೀಯ ನಿವೃತ್ತಿ ಹೊಂದುವವರೆಗೂ– ಮತದಾರನು ಪರೀಕ್ಷಕನಾಗಿ ಮುಂದುವರಿಯುತ್ತಾನೆ. ಮತದಾರನಾದವನು ಯಾವ ವಿಶ್ವವಿದ್ಯಾಲಯದ ಪರೀಕ್ಷಕನಿಗಿಂತಲೂ ಸಮರ್ಥನಾದ ಮತ್ತು ಪ್ರಾಮಾಣಿಕನಾದ ಸತ್ವಪರೀಕ್ಷಕನಾಗಿದ್ದಾನೆ. ಪ್ರತಿಯೊಬ್ಬ ಯಶಸ್ವೀ ರಾಜಕಾರಣಿಯೂ ಒಂದರ್ಥದಲ್ಲಿ ಸುಶಿಕ್ಷಿತನೇ ಸರಿ. ಮತದಾರನ ಅಗತ್ಯ, ಇಂಗಿತ, ಮನಃಸ್ಥಿತಿಗಳನ್ನು ಅರಿತು ಅದಕ್ಕೆ ಅನುರೂಪವಾಗಿ ವರ್ತಿಸುವುದನ್ನು ಕಲಿಯುವುದೂ ಶಿಕ್ಷಣವೇ ಅಲ್ಲವೇ?

ಸಾರ್ವಜನಿಕ ಬದುಕಿನಲ್ಲಿ ಎಷ್ಟೋ ಸಲ ಶಾಪವೇ ವರವಾಗಬಹುದು. ಬಡತನದ ಹಿನ್ನೆಲೆಯಲ್ಲಿ ಬೆಳೆದಿದ್ದ ತಮಿಳುನಾಡಿನ ನಾಯಕ ಕೆ. ಕಾಮರಾಜ್, ಶಾಲಾ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿದ್ದರು. ಇವರ ಈ ಕೊರತೆಯೇ ತಮಿಳುನಾಡಿಗೆ ವರವಾಯಿತು. ಈ ಕೊರತೆಯ ಕಾರಣವಾಗಿ ಇವರ ನೇತೃತ್ವದಲ್ಲಿ ತಮಿಳುನಾಡಿನಲ್ಲಿ ಶೈಕ್ಷಣಿಕ ಕ್ರಾಂತಿ ಸಂಭವಿಸಿತ್ತು. ಮುಂದೆ ಕಾಮರಾಜ್ ತಮಿಳುನಾಡಿನ ಮುಖ್ಯಮಂತ್ರಿ ಆದ ಮೇಲೆ ಅಲ್ಲಿ ಉಚಿತ ಶಿಕ್ಷಣದ ಹರಿಕಾರರಾದರು. ಪ್ರತೀ ಹಳ್ಳಿಗೂ ಒಂದು ಪ್ರಾಥಮಿಕ ಶಾಲೆ, ಪ್ರತೀ ಗ್ರಾಮ ಪಂಚಾಯಿತಿಗೂ ಒಂದು ಪ್ರೌಢಶಾಲೆ ಇರಲೇಬೇಕೆಂದು ಕಡ್ಡಾಯ ಮಾಡಿದರು. ಶಾಲೆಗೆ ಬರುವ ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣವನ್ನು ಮತ್ತು ಮಧ್ಯಾಹ್ನದ ಬಿಸಿಯೂಟವನ್ನು ಜಾರಿಗೊಳಿಸಿದರು. ಈ ತರಹದ ನಿರ್ಧಾರಗಳಿಂದ ರಾಜ್ಯದಲ್ಲಿ ಆರ್ಥಿಕ ಅರಾಜಕತೆ ಸೃಷ್ಟಿಯಾಗುತ್ತದೆ ಎಂದು ಅಧಿಕಾರಿಗಳು ಹೆದರಿಸಿದರೂ ಅವರು ಧೃತಿಗೆಡಲಿಲ್ಲ. ಅನ್ನ-ಅಕ್ಷರಗಳ ಹಸಿವನ್ನು ಅನುಭವಿಸಿದವರಿಗಷ್ಟೇ ಈ ಬಗೆಯ ಶಿಕ್ಷಣದ ಮತ್ತು ಮಧ್ಯಾಹ್ನದ ಬಿಸಿಯೂಟದ ಅಗತ್ಯ ಮತ್ತು ಮಹತ್ವ ತಿಳಿಯುತ್ತದೆ.

ಔಪಚಾರಿಕ ಶಿಕ್ಷಣವನ್ನು ರಾಜಕಾರಣಿಗಳಿಗೆ ಕಡ್ಡಾಯ ಮಾಡುವುದರಿಂದ ಅಂತಿಮವಾಗಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಹಾನಿಯಾಗುತ್ತದೆ. ಭಾರತದಲ್ಲಿ ಲೆಕ್ಕವಿಲ್ಲದಷ್ಟು ಮಂದಿ ನಾಗರಿಕತೆಯ ಸಂಪರ್ಕದಿಂದ ದೂರವಿರುವ ಗುಡ್ಡಗಾಡುಗಳಲ್ಲಿ, ಬುಡಕಟ್ಟುಗಳಲ್ಲಿ ವಾಸಿಸುತ್ತಿದ್ದಾರೆ. ಲಡಾಖ್‍ನ ಚಾಂಗ್‍ಪಾಗಳು, ಅಂಡಮಾನ್‍ನ ಜರಾವಾಗಳು, ನಮ್ಮ ನಾಡಿನ ಪಣಿಯನ್ನರು, ಗೊಂಡರು, ಹಕ್ಕಿಪಿಕ್ಕಿಗಳು ಇತ್ಯಾದಿ. ಇಂತಹವರ ಸಾಮಾಜಿಕ ಸ್ಥಿತಿಗತಿ, ನೈತಿಕ ಮೌಲ್ಯಗಳು ಮತ್ತು ದೈನಂದಿನ ಬದುಕುಗಳ ಪ್ರಾಥಮಿಕ ತಿಳಿವಳಿಕೆಯೂ ಸುಶಿಕ್ಷಿತರೆನಿಸಿಕೊಂಡವರಿಗೆ ಇರಲಾರದು. ಅಥವಾ ಈ ಸಮುದಾಯಗಳಲ್ಲೇ ಹುಟ್ಟಿ ಶೈಕ್ಷಣಿಕ ಅರ್ಹತೆ ಗಳಿಸುವ ವಿದ್ಯಾವಂತರು ಸಹ ಎಷ್ಟೋ ಸಲ ಇವರನ್ನು ನಿರ್ಲಕ್ಷಿಸುವುದುಂಟು. ಇಂತಹ ಸಮುದಾಯಗಳು ತಮ್ಮ ಅಹವಾಲುಗಳನ್ನು ಯಾರ ಬಳಿಗೆ ತೆಗೆದುಕೊಂಡು ಹೋಗಬೇಕು? ಹೊರಗಿನವರಿಗಂತೂ ಇವರೊಡನೆ ಸ್ಪಂದಿಸಲು ಸಾಧ್ಯವಾಗುವುದಿಲ್ಲ. ಕನಿಷ್ಠ ಶೈಕ್ಷಣಿಕ ಅರ್ಹತೆಯ ಷರತ್ತನ್ನು ರದ್ದುಗೊಳಿಸಿದಾಗ ಮಾತ್ರ ಇಂತಹ ಪ್ರತಿಯೊಂದು ಸಮುದಾಯವೂ ತನ್ನ ಪ್ರಾತಿನಿಧ್ಯದ ಮಾನದಂಡವನ್ನು ತಾನೇ ರೂಪಿಸಿಕೊಳ್ಳಲು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರ್ಥಪೂರ್ಣವಾಗಿ ತೊಡಗಿಕೊಳ್ಳಲು ಅವಕಾಶವಾಗುತ್ತದೆ.

ವಿದ್ಯಾರ್ಜನೆಯಿಂದ ಸಾರ್ವಜನಿಕ ಬದುಕಿಗೆ ಅನುಕೂಲವಾಗುತ್ತದೆ ಎನಿಸಿದಲ್ಲಿ ಯೋಗ್ಯನಾದ ಯಾವ ರಾಜಕಾರಣಿಯೂ ಅದನ್ನು ಪಡೆಯಲು ಹಿಂಜರಿಯುವುದಿಲ್ಲ ಮತ್ತು ಇಂದು ವಿದ್ಯಾರ್ಜನೆಯೆಂಬುದು ಒಂದು ಸವಾಲಿನ ಸಾಧನೆಯೂ ಅಲ್ಲ. ಪ್ರಜಾಪ್ರಭುತ್ವದಲ್ಲಿ ಅಭ್ಯರ್ಥಿಗಿಂತಲೂ ಅಭ್ಯರ್ಥಿಯನ್ನು ಆರಿಸುವ ಮತದಾರ ಸುಶಿಕ್ಷಿತನಾಗಬೇಕಾದುದು ಅತ್ಯಗತ್ಯ. ಮುಂದೊಂದು ದಿವಸ ಸಮಾನ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದಲ್ಲಿ ಮತದಾನ ಮಾಡಲು ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ಕಡ್ಡಾಯ ಮಾಡಿದರೂ ತಪ್ಪಿಲ್ಲ, ಅದರಿಂದ ಪ್ರಜಾಪ್ರಭುತ್ವಕ್ಕೆ ಒಳ್ಳೆಯದೇ ಆಗುತ್ತದೆ. ಆದರೆ ಪ್ರಜಾಪ್ರತಿನಿಧಿಯಾದವನಿಗೆ ಶಿಕ್ಷಣ ಗಳಿಕೆ ಅವನ ಸಾರ್ವಜನಿಕ ಬದುಕಿನ ಒಂದು ಅಂಗವೇ ವಿನಾ ಸಾರ್ವಜನಿಕ ಬದುಕಿಗೆ ಇರಬೇಕಾದ ಒಂದು ಪೂರ್ವಾರ್ಹತೆಯಲ್ಲ, ಅದು ಪೂರ್ವಾರ್ಹತೆ ಆಗಲೂಬಾರದು.

ಒಂದು ಜನಾಂಗದ ಸಂಸ್ಕೃತಿಯನ್ನು ರೂಪಿಸುವ ಕವಿ–ಕಲಾವಿದರ, ಸಂಗೀತಗಾರರ ಶೈಕ್ಷಣಿಕ ಅರ್ಹತೆಗಳನ್ನು ಯಾರಾದರೂ ಕೆದಕಲು ಹೋಗುತ್ತಾರೆಯೇ? ಒಂದು ಸಮಾಜವನ್ನು ರೂಪಿಸುವ ಹೊಣೆ ಹೊತ್ತ ರಾಜಕಾರಣಿಯ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಲು ಹೋದರೆ ಅದು ಸಹ ಇದೇ ತರಹ ಅಸಂಬದ್ಧವಾಗಿ ತೋರುತ್ತದೆ. ಒಂದು ಸಮುದಾಯದ ರಾಜಕೀಯ ಪ್ರಾತಿನಿಧ್ಯವನ್ನೇ ನಿರ್ಲಕ್ಷಿಸುವ ಈ ಬಗೆಯ ನಿಯಮಾವಳಿಗಳು ಪ್ರಜಾಪ್ರಭುತ್ವಕ್ಕೆ ಕಳಂಕಪ್ರಾಯವಾಗುತ್ತವೆ.

ಲೇಖಕ: ಸಹಾಯಕ ಪ್ರಾಧ್ಯಾಪಕ, ಜ್ಯೋತಿನಿವಾಸ್‌ ಕಾಲೇಜ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT