ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಹೀಗೊಂದು ನೋಟ

ರಾಜ್ಯ ರಾಜಕಾರಣದ ಮೇಲೆ ಈ ಫಲಿತಾಂಶ ದೀರ್ಘಾವಧಿಯ ಪರಿಣಾಮ ಬೀರಲಿದೆ
Published 1 ಮಾರ್ಚ್ 2024, 23:30 IST
Last Updated 1 ಮಾರ್ಚ್ 2024, 23:30 IST
ಅಕ್ಷರ ಗಾತ್ರ

2019ರ ಲೋಕಸಭಾ ಚುನಾವಣೆ ವೇಳಾಪಟ್ಟಿಯ ಮಾದರಿಯಲ್ಲಿಯೇ 2024ರ ಚುನಾವಣೆಯೂ ನಡೆಯುತ್ತದೆ ಎಂದು ಭಾವಿಸುವುದಾದಲ್ಲಿ, ಮೊದಲ ಸುತ್ತಿನ ಮತದಾನ ನಡೆಯುವುದಕ್ಕೆ ಇನ್ನು 40ಕ್ಕಿಂತ ತುಸುವೇ ಹೆಚ್ಚು ದಿನಗಳು ಉಳಿದಿವೆ. ಕರ್ನಾಟಕದಲ್ಲಿರಾಜಕೀಯ ವಾತಾವರಣ ಕಾವು ಪಡೆದು
ಕೊಳ್ಳುತ್ತಿದೆ. ಬಿಜೆಪಿ (ಮತ್ತು ಮಿತ್ರಪಕ್ಷ ಜೆಡಿಎಸ್‌) ಹಾಗೂ ಕಾಂಗ್ರೆಸ್ ತಮ್ಮೆಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಜನರ ಬೆಂಬಲ ಗಿಟ್ಟಿಸಲು ಮುಂದಾಗಿವೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಲೋಕಸಭಾ ಚುನಾವಣೆಯ ಐದು ಆಯಾಮಗಳು ನಮ್ಮ ಗಮನಸೆಳೆಯುವಂತೆ ಇವೆ.

ಕರ್ನಾಟಕದ ಫಲಿತಾಂಶದ ವೈಶಿಷ್ಟ್ಯ: ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯನ್ನು ಕರ್ನಾಟಕದ ಮತದಾರರು ಯಾವತ್ತಿಗೂ ಭಿನ್ನವಾಗಿಯೇ ನೋಡುತ್ತಾ ಬಂದಿದ್ದಾರೆ. ಇದು ಮೊದಲು ಸಾಬೀತಾಗಿದ್ದು 1984–85ರಲ್ಲಿ. ಆಗ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷ ಆಡಳಿತ ನಡೆಸುತ್ತಿತ್ತು. ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷವು ಕಳಪೆ ಸಾಧನೆ ತೋರಿತು. ಆದರೆ ಕೆಲವೇ ತಿಂಗಳ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯಿತು. ಕೆಲವು ವರ್ಷ (1989, 1999, 2004) ಲೋಕಸಭೆಗೆ ಹಾಗೂ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆದ ನಂತರ ಕರ್ನಾಟಕದಲ್ಲಿ ಕಳೆದ ಮೂರು ಬಾರಿ (2008–09, 2013–14, 2018–19) ವಿಧಾನಸಭಾ ಚುನಾವಣೆ ನಡೆದ ಒಂದೇ ವರ್ಷದಲ್ಲಿ ಲೋಕಸಭಾ ಚುನಾವಣೆ ಎದುರಾಗಿದೆ. ಈ ಬಾರಿಯೂ ಅದೇ ರೀತಿ ಆಗುತ್ತಿದೆ. ವಿಧಾನಸಭಾ ಚುನಾವಣೆ ಫಲಿತಾಂಶಕ್ಕಿಂತ ಲೋಕಸಭಾ ಚುನಾವಣೆಯ ಫಲಿತಾಂಶವು ಭಿನ್ನವಾಗಿರ
ಬಹುದೇ ಎಂಬ ಕುತೂಹಲ ಕೆರಳಿಸಿದೆ. 2008ರಲ್ಲಿ ಬಿಜೆಪಿಯು ವಿಧಾನಸಭಾ ಚುನಾವಣೆಯಲ್ಲಿ ಬಹುಮತಕ್ಕೆ ಬಹಳ ಸನಿಹ ಬಂದಿತ್ತು (ಮೂರು ಸ್ಥಾನಗಳ ಕೊರತೆ ಎದುರಿಸಿತು), ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚಿಸಿತು. ಮಾರನೆಯ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಮೂರನೆಯ ಎರಡರಷ್ಟು ಸ್ಥಾನಗಳನ್ನು ಗೆದ್ದುಕೊಂಡಿತು.

2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯಿತು, ಸಿದ್ದರಾಮಯ್ಯ ಮುಖ್ಯಮಂತ್ರಿ
ಯಾದರು. ಬಿಜೆಪಿಯಿಂದ ಹೊರನಡೆದು ಬಿ.ಎಸ್. ಯಡಿಯೂರಪ್ಪ ಅವರು ಕೆಜೆಪಿ ಸ್ಥಾಪಿಸಿದ್ದರು, ಬಿಜೆಪಿ ಹೋಳಾಗಿತ್ತು. ಮಾರನೆಯ ವರ್ಷ, ಅಂದರೆ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು. ಲೋಕನೀತಿ–ಸಿಎಸ್‌ಡಿಎಸ್‌ 2014ರ ಚುನಾವಣೆ ನಂತರ ನಡೆಸಿದ ಸಮೀಕ್ಷೆಯು, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪ್ರಿಯವಾಗಿದ್ದರೂ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ನಿರ್ಣಾಯಕ ಅಂಶವಾಗಿದ್ದರು ಎಂದು ಹೇಳಿತು. ಅಲ್ಲದೆ, ಲೋಕಸಭಾ ಚುನಾವಣೆಗೂ ಮೊದಲು ಯಡಿಯೂರಪ್ಪ ಬಿಜೆಪಿಗೆ ಮರಳಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗಲಿಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಸರ್ಕಾರ ರಚಿಸಿದವು. 2019ರ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಎದುರಿಸಿದರೂ, ತಲಾ ಒಂದು ಸ್ಥಾನದಲ್ಲಿ ಮಾತ್ರ ಗೆಲುವು ಕಂಡವು. ಆ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ತೋರಿತು.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿತು. ಹಿಂದಿನ ಫಲಿತಾಂಶಗಳನ್ನು ಗಮನಿಸಿದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಎರಡು ಪ್ರಮುಖ ಸ್ಪರ್ಧಾಳುಗಳ ನಡುವೆ ಮುಕ್ತ ಸ್ಪರ್ಧೆಯೊಂದು ನಡೆಯಲಿರುವುದು ಗೊತ್ತಾಗುತ್ತದೆ.

ಮೈತ್ರಿಯ ಹುಟ್ಟು: ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಬಿಜೆಪಿಯು ಚುನಾವಣಾ ಹಣಾಹಣಿಯನ್ನು ಕಾಂಗ್ರೆಸ್ ಜೊತೆಗಿನ ನೇರಸ್ಪರ್ಧೆಯನ್ನಾಗಿ ಪರಿವರ್ತಿಸಿದೆ. ಜೆಡಿಎಸ್ ಜೊತೆಗಿನ ಹೊಂದಾಣಿಕೆಯು ಬಿಜೆಪಿ ಪಾಲಿಗೆ ಒಂದು ಹಂತ ಕೆಳಕ್ಕೆ ಬಂದಂತಾಗಿದ್ದರೂ, ಅದನ್ನು ಎರಡು ದೃಷ್ಟಿಕೋನ
ಗಳಿಂದ ಗಮನಿಸಬೇಕು. ಮೊದಲನೆಯದಾಗಿ, ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಜೊತೆ ನೇರ ಚುನಾವಣಾ ಹಣಾಹಣಿ ಇರಲಿದೆ. ಹೀಗಾದಾಗ ಕಾಂಗ್ರೆಸ್ ಪಕ್ಷಕ್ಕೆ ಸವಾಲು ಒಡ್ಡುವುದಕ್ಕೆ ಸಹಾಯವಾಗುತ್ತದೆ. ಬಿಜೆಪಿಯು ದೇಶದಾದ್ಯಂತ ಕಾಂಗ್ರೆಸ್ಸನ್ನು ರಾಜಕೀಯವಾಗಿ ಗುರಿಯಾಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿನ ಕಾರ್ಯತಂತ್ರವನ್ನು ಕಾಣಬೇಕು.

ಎರಡನೆಯದಾಗಿ, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ, ಮಹತ್ವದ್ದಾಗಿರುವ ಒಕ್ಕಲಿಗ ಮತಗಳನ್ನು ಬುಟ್ಟಿಗೆ ಹಾಕಿಕೊಂಡು ಬಿಜೆಪಿಯು ಹಳೆ ಮೈಸೂರು ಭಾಗದಲ್ಲಿ ಸಂಘಟನೆಯನ್ನು ಬಲಪಡಿಸಿ
ಕೊಳ್ಳುವ ಬಯಕೆಯನ್ನು ಹೊಂದಿದೆ. ಬಿಜೆಪಿಯು ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಾಗಲೆಲ್ಲ,
ಆ ಪಕ್ಷದ ಮತಗಳು ಬಿಜೆಪಿ ಕಡೆ ಬಹಳ ಸುಲಭವಾಗಿ ಬಂದಿವೆ ಎಂಬುದನ್ನು ಹಿಂದಿನ ನಿದರ್ಶನಗಳು ಹೇಳುತ್ತವೆ. ಆದರೆ, ಬಿಜೆಪಿಯ ಮತಗಳು ಮೈತ್ರಿಪಕ್ಷಕ್ಕೆ ಎಲ್ಲ ಬಾರಿಯೂ ಸರಾಗವಾಗಿ ಹರಿದಿಲ್ಲ.

ಪ್ರಮುಖ ಪಕ್ಷಗಳಿಗೆ ಮಹತ್ವದ್ದು: ಕರ್ನಾಟಕದ ಚುನಾವಣಾ ಕಣವು ಮೂರೂ ಪಕ್ಷಗಳಿಗೆ ಬಹಳ ಮಹತ್ವದ್ದು. ಬಿಜೆಪಿಗೆ ‘ವಿಷನ್ 370’ ಗುರಿಯನ್ನು ಸಾಧಿಸಲು ಕರ್ನಾಟಕದಲ್ಲಿ ಸ್ಥಾನಗಳನ್ನು ಉಳಿಸಿ
ಕೊಳ್ಳುವುದು ಮಹತ್ವದ್ದಾಗಿದೆ. ಕಾಂಗ್ರೆಸ್ಸಿಗೆ ಕರ್ನಾಟಕದಲ್ಲಿ ಬಿಜೆಪಿಗೆ ಎದುರಾಗಿ ಒಳ್ಳೆಯ ಸ್ಪರ್ಧೆ ಒಡ್ಡುವುದು ರಾಜ್ಯದಲ್ಲಿನ ಸರ್ಕಾರದ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದು. ಜೆಡಿಎಸ್ ಪಕ್ಷವು ಈ ಚುನಾವಣೆಯನ್ನು ಅಳಿವು–ಉಳಿವಿನ ಪ್ರಶ್ನೆಯಾಗಿ ಸ್ವೀಕರಿಸಿದೆ. ಹೀಗಾಗಿ, ಈ ಲೋಕಸಭಾ ಚುನಾವಣೆಯ ಫಲಿತಾಂಶವು ರಾಜ್ಯದ ರಾಜಕಾರಣದ ಮೇಲೆ ದೀರ್ಘಾವಧಿಯ ಪರಿಣಾಮವನ್ನು ಬೀರಲಿದೆ ಎಂಬುದು ಸ್ಪಷ್ಟ.

ಪ್ರಮುಖ ಪಕ್ಷಗಳ ಕಾರ್ಯತಂತ್ರ: ಬಿಜೆಪಿ ನಾಲ್ಕು ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಚುನಾವಣೆ ಎದುರಿಸುವ ಸಾಧ್ಯತೆ ಇದೆ. ನರೇಂದ್ರ ಮೋದಿ ಅವರ ಹೆಸರು, ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಆಕ್ರಮಣಕಾರಿ ನಿಲುವು, ರಾಷ್ಟ್ರವ್ಯಾಪಿಯಾಗಿ ತಾನು ಹೇಳುತ್ತಿರುವ ಸಂಗತಿಗಳನ್ನು ಇಲ್ಲಿಯೂ ಉಲ್ಲೇಖಿಸುವುದು ಹಾಗೂ ರಾಮ ಮಂದಿರ ಆ ವಿಷಯಗಳು. ಈ ವಿಷಯಗಳಲ್ಲಿ ಯಾವುದಕ್ಕೆ ಎಷ್ಟು ಆದ್ಯತೆಯನ್ನು ಬಿಜೆಪಿ ನೀಡಲಿದೆ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ.

ಕಾಂಗ್ರೆಸ್ ಪಕ್ಷವು ಸ್ಥಳೀಯ ಸಂಗತಿಗಳನ್ನು ಮುಂದಿರಿಸಿಕೊಂಡು ಚುನಾವಣೆಯನ್ನು ಎದುರಿಸಲಿದೆ ಎಂಬುದು ಸ್ಪಷ್ಟ. ರಾಜ್ಯವನ್ನು ಗುರಿಯಾಗಿಸಿಕೊಂಡು ಕೇಂದ್ರವು ಎಸಗುತ್ತಿರುವ ತಾರತಮ್ಯದ ವಿರುದ್ಧ ಮುಖ್ಯಮಂತ್ರಿಯವರು ಮೊಳಗಿಸಿರುವ ಕಹಳೆಯು ಕಾಂಗ್ರೆಸ್ಸಿನ ಪ್ರಮುಖ ವಿಷಯವಾಗಿರುತ್ತದೆ ಎಂಬಂತೆ ಕಾಣುತ್ತಿದೆ. ಐದು ಗ್ಯಾರಂಟಿಗಳ ವಿಚಾರವಾಗಿ ಜನಸಾಮಾನ್ಯರಲ್ಲಿ ಪೂರಕವಾದ ಭಾವನೆಯೊಂದನ್ನು ಬೆಳೆಸಲು ಪಕ್ಷವು ಹೆಚ್ಚಿನ ಆದ್ಯತೆ ನೀಡಲಿದೆಯೇ ಎಂಬುದನ್ನು ಗಮನಿಸಬೇಕಿದೆ. ಮೊದಲನೆಯ ವಿಷಯಕ್ಕಿಂತ ಎರಡನೆಯ ವಿಷಯ ಹೆಚ್ಚು ಶಕ್ತಿಯುತವಾದುದು ಎಂದು ಅನಿಸುತ್ತದೆ.

ಅಭ್ಯರ್ಥಿಗಳ ಬದಲಾವಣೆ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಹಳ ಬದಲಾವಣೆಗಳನ್ನು ತರಬಹುದು. ಬಿಜೆಪಿಯು ಹಲವರನ್ನು ಬದಲಾಯಿಸಲಿದೆ ಎಂಬ ಮಾತುಗಳು ಈಗಾಗಲೇ ಇವೆ. 2019ರಲ್ಲಿ ಕಣಕ್ಕೆ ಇಳಿದಿದ್ದ ಅಭ್ಯರ್ಥಿಗಳ ಪೈಕಿ ಯಾರನ್ನೆಲ್ಲ ಅಭ್ಯರ್ಥಿಗಳನ್ನಾಗಿ ಮುಂದುವರಿಸಬೇಕು ಎಂಬ ವಿಚಾರದಲ್ಲಿ ಕಾಂಗ್ರೆಸ್ಸಿನಲ್ಲಿ ವಿಸ್ತೃತ ಚರ್ಚೆಗಳು ನಡೆದಿವೆ. ಜೆಡಿಎಸ್‌ ಪಾಲಿಗೆ ಇದು ಪಕ್ಷವು ಎಷ್ಟು ಸ್ಥಾನಗಳಲ್ಲಿ ಕಣಕ್ಕೆ ಇಳಿಯಲಿದೆ ಎಂಬುದನ್ನು ಆಧರಿಸಿರಲಿದೆ.

ಎಲ್ಲ ಪಕ್ಷಗಳಲ್ಲಿ ಕಾಣುತ್ತಿರುವ ಒಂದು ಪರಿವರ್ತನೆ ಬಹಳ ಸ್ಪಷ್ಟವಾಗಿದೆ. ಮೂರೂ ಪಕ್ಷಗಳಲ್ಲಿನ ಅಭ್ಯರ್ಥಿಗಳು ರಾಷ್ಟ್ರ ರಾಜಕಾರಣ ಪ್ರವೇಶಿಸುವುದಕ್ಕಿಂತಲೂ ರಾಜ್ಯದ ರಾಜಕಾರಣದಲ್ಲಿ ಮುಂದುವರಿಯಲು ಹೆಚ್ಚು ಆಸ್ಥೆ ವಹಿಸುತ್ತಿದ್ದಾರೆ. ಸರ್ಕಾರದಲ್ಲಿ ಪ್ರಮುಖ ಹುದ್ದೆಗಳು ಸಿಗಬಹುದು ಎಂಬ ಭರವಸೆ ಇಲ್ಲದಿದ್ದರೆ ಅಥವಾ ವಿರೋಧ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿಗಳು ಸಿಗಬಹುದು ಎಂಬ ಭರವಸೆ ಮೂಡದಿದ್ದಲ್ಲಿ ಅವರು ಲೋಕಸಭಾ ಚುನಾವಣೆಯ ಕಣಕ್ಕೆ ಇಳಿಯಲು ಮನಸ್ಸು ಮಾಡುತ್ತಿಲ್ಲ. ರಾಜ್ಯದ ಸಂಸದರ ಕಾರ್ಯಕ್ಷಮತೆಯ ಬಗ್ಗೆ ಈಚೆಗೆ ನಡೆದ ಒಂದು ಮೌಲ್ಯಮಾಪನವು ಸದನದಲ್ಲಿ ಅವರು ಬಹಳ ಸೀಮಿತ ಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತಿರುವುದನ್ನು ತೋರಿಸಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಸ್ಪರ್ಧೆಯು ಚುರುಕು ಪಡೆದುಕೊಳ್ಳುತ್ತಿದೆ. ಮುಂದಿನ ಎರಡು ತಿಂಗಳು ರಾಜ್ಯದಲ್ಲಿ ಬಹಳ ತುರುಸಿನ ರಾಜಕೀಯ ಚಟುವಟಿಕೆಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT