ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಮ್ಮದ್‌ ಆಜಂ ನಾವೇ ಆಗಿದ್ದರೆ?

Last Updated 21 ಜುಲೈ 2018, 2:53 IST
ಅಕ್ಷರ ಗಾತ್ರ

ಅರೆಕ್ಷಣ ಸುಮ್ಮನೆ ಯೋಚಿಸೋಣ. ಬೀದರ್‌ನ ಮುರ್ಕಿಯಲ್ಲಿ ಜಮಾಯಿಸಿದ್ದ ಆ ಉದ್ರಿಕ್ತ ಗುಂಪಿನ ಕೈಗೆ ಸಿಕ್ಕ ಮಹಮ್ಮದ್‌ ಆಜಂ ನಾವೇ ಆಗಿದ್ದರೆ? ವಾಟ್ಸ್‌ ಆ್ಯಪ್‌ ಹೊತ್ತುತಂದ ಆಗಿನ ಘಟನೆಗಳೆಲ್ಲ ಧುತ್ತೆಂದು ಕಣ್ಮುಂದೆ ಬಂದು, ಆತ ತಿಂದ ಹೊಡೆತ, ಅನುಭವಿಸಿದ ಹಿಂಸೆ, ವಿನಾಕಾರಣ ಪ್ರಾಣ ಕಳೆದುಕೊಳ್ಳುವ ಹೊತ್ತಿನಲ್ಲಿ ಎದುರಿಸಿದ ಸಂಕಟ... ಎಲ್ಲವೂ ನೆನಪಾಗಿ ಮೈ ಜುಮ್ಮೆಂದು ನಡುಗುತ್ತದೆ.

ದ್ವೇಷದ ಬೆಂಕಿಯಿಂದ ದೂರದ ಮನೆಯೊಂದು ಹೊತ್ತಿ ಉರಿದಾಗ ಅದರ ಬೆಳಕೇನೋ ಕೆಲವರಿಗೆ ವಿಕೃತ ಖುಷಿಯನ್ನು ಕೊಟ್ಟಿರಬಹುದು. ಆದರೆ, ಖುದ್ದು ಬಿಸಿ ಅನುಭವಿಸಿದವರಿಗೆ ಮಾತ್ರ ಅದರ ನೋವು ಗೊತ್ತಾಗಬಲ್ಲದು.

ಊರಿಗೆ ಬಂದ ಅಪರಿಚಿತರನ್ನೆಲ್ಲ ಪ್ರೀತಿಯಿಂದ ಮಾತನಾಡಿಸಿ, ಬೆಲ್ಲ–ನೀರು ಕೊಟ್ಟ ಸಮಾಜವಲ್ಲವೇ ನಮ್ಮದು? ಯಾರ ಮನೆಗೆ ಬಂದ ಅಜ್ಜನೋ ಇನ್ಯಾರ ಮನೆಗೆ ಬಂದ ಚಿಕ್ಕಪ್ಪನೋ ದಾರಿಯಲ್ಲಿ ಸಿಕ್ಕಾಗ ಕೊಟ್ಟ ಪೆಪ್ಪರಮೆಂಟನ್ನು ಬಾಯಿಗೆ ಹಾಕಿ, ಚಪ್ಪರಿಸಿದವರಲ್ಲವೇ ನಾವು? ಹಿಂದೆ ಸಾಕ್ಷರತಾ ಯೋಜನೆಗಾಗಿ ಯುವಕರು ಹಳ್ಳಿ–ಹಳ್ಳಿಗೆ ಅಲೆಯುತ್ತಿದ್ದಾಗ ಯಾವ ಜಾತಿ, ಯಾವ ಕುಲ ಎಂದೆಲ್ಲ ಎಣಿಸದೆ ಹೊಟ್ಟೆ ತುಂಬಾ ಊಟ ಹಾಕಿದವರಲ್ಲವೇ ಅಲ್ಲಿನ ಅಮ್ಮಂದಿರು? ಈಗೇಕೆ ಹೊರಗಿನಿಂದ ಬಂದವರ ಮೇಲೆ ಅಷ್ಟೊಂದು ಸಿಟ್ಟು? ಸಮಾಜದ ನಡುವೆ ಹರಿಯುತ್ತಿದ್ದ ಪ್ರೀತಿ, ಅಂತಃಕರಣದ ಸೆಲೆಯನ್ನೇ ಬತ್ತಿಸಿದ ಈ ದ್ವೇಷದ ಬೆಂಕಿಗೆ ಕಾರಣವಾದರೂ ಏನು? ಹತ್ತಾರು ಪ್ರಶ್ನೆಗಳು ಸುರುಳಿ, ಸುರುಳಿಯಾಗಿ ಬಿಚ್ಚಿಕೊಳ್ಳುತ್ತಿವೆ.

Lynching (ಲಿಂಚಿಂಗ್‌) ಎಂಬ ಶಬ್ದಕ್ಕೆ ಸಮಾನಾರ್ಥಕ ಪದ ಕನ್ನಡದಲ್ಲಿ ಇನ್ನೂ ಸೃಷ್ಟಿಯಾಗಿಲ್ಲ. ‘ಗುಂಪುಗೂಡಿ ವಿವೇಚನಾರಹಿತವಾಗಿ ಹತ್ಯೆಗೈಯುವುದು’ ಎಂದು ಪೂರಾ ವಾಕ್ಯದಲ್ಲೇ ಅದರ ಅರ್ಥವನ್ನು ಹೇಳಬೇಕಾಗುತ್ತದೆ. ಅಂದರೆ ನಮ್ಮ ಜಾಯಮಾನಕ್ಕೆ ಇಂತಹ ಅಪರಾಧ ಕೃತ್ಯ ತೀರಾ ಹೊಸದು. ಹಿಂದೆಯೂ ಗೋವುಗಳ ಸಾಗಾಣಿಕೆ ನಡೆಯುತ್ತಿತ್ತು. ದನಗಳ ಕಳ್ಳತನ ಪ್ರಕರಣಗಳು ಸಂಭವಿಸುತ್ತಿದ್ದವು. ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿಗಳೂ ಹರಡುತ್ತಿದ್ದವು. ಆದರೆ, ಹತ್ಯೆಗೈಯುವಂತಹ ಘಟನೆಗಳು ನಡೆಯುತ್ತಿರಲಿಲ್ಲ.

ಕಣ್ಣೆದುರಿನಲ್ಲೇ ಒಂದೊಂದಾಗಿ ಹೆಣಗಳು ಬೀಳುತ್ತಿದ್ದರೂ ಧರ್ಮಗುರುಗಳು, ರಾಜಕೀಯ ನೇತಾರರು ಹಾಗೂ ಸಮಾಜದ ಮುಖಂಡರು ಮೌನಕ್ಕೆ ಶರಣಾಗಿರುವುದು ಬಲು ಸೋಜಿಗ. ‘ದೇಶದ ಪ್ರತಿಯೊಂದು ಆಗು–ಹೋಗಿಗೂ ತಾವೇ ವಾರಸುದಾರರು ಎಂಬಂತೆ ಪ್ರತಿಕ್ರಿಯಿಸುವ ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ಇಷ್ಟೊಂದು ಮೌನ ತಾಳಿರುವುದೇಕೆ’ – ಈ ಪ್ರಶ್ನೆಯನ್ನು ಹಿಂದೆ ಕಾನೂನು ಸಚಿವರೂ ಆಗಿದ್ದ ಬಿಜೆಪಿ ಶಾಸಕ ಎಸ್‌.ಸುರೇಶಕುಮಾರ್‌ ಅವರ ಮುಂದಿ
ಟ್ಟರೆ, ‘ಸಮೂಹ ಸನ್ನಿಯಿಂದ ನಡೆಯುವ ಹತ್ಯೆಗಳನ್ನು ಗಟ್ಟಿತನದಿಂದ ಮತ್ತು ಅಷ್ಟೇ ಪ್ರಭಾವಶಾಲಿಯಾಗಿ ರಾಜಕೀಯ ಪಕ್ಷಗಳು ವಿರೋಧಿಸಿಲ್ಲ’ ಎಂದು ಒಪ್ಪಿಕೊಳ್ಳುತ್ತಾರೆ.

‘ನೂರಾರು ಜನ ಸೇರಿ, ಕಾನೂನನ್ನು ಧಿಕ್ಕರಿಸಿ ವ್ಯಕ್ತಿಯನ್ನು ಹತ್ಯೆಗೈಯಲು ಮುಂದಾದಾಗ ಅದನ್ನು ತಡೆಯುವಂತಹ ಧೈರ್ಯವನ್ನು ಮೊದಲು ಸುತ್ತಲಿನ ಸಮಾಜ ತೋರಬೇಕು’ ಎಂದೆನ್ನುವ ಅವರು, ‘ಇಂತಹ ಘಟನೆಗ
ಳನ್ನು ತಡೆಯಲು ಸರ್ಕಾರ, ಸಮಾಜ ಮತ್ತು ಪೊಲೀಸ್‌ ವ್ಯವಸ್ಥೆ ಮೂರೂ ವಿಫಲವಾಗಿವೆ’ ಎಂದು ಅಭಿಪ್ರಾಯಪಡುತ್ತಾರೆ. ‘ಗುಂಪುಗಳ ಈ ಕೃತ್ಯ ಪಕ್ಷಗಳಿಗೆ ರಾಜಕೀಯ ವಿಷಯ ಅಲ್ಲ ಎನಿಸಿರಬೇಕು. ಆದರೆ, ಅವುಗಳು ತಮ್ಮ ನಿಲುವನ್ನು ಪುನರ್‌ವಿಮರ್ಶೆ ಮಾಡಿಕೊಂಡು ದೊಡ್ಡದಾಗಿ ಧ್ವನಿ ಎತ್ತಬೇಕು’ ಎಂದೂ ಸಲಹೆ ಕೊಡುತ್ತಾರೆ.

ಗುಂಪಿನಲ್ಲಿ ಗೋವಿಂದ; ಇಂತಹ ದೊಂಬಿಗಳಲ್ಲಿ ಪಾಲ್ಗೊಂಡರೆ ಏನೂ ಆಗುವುದಿಲ್ಲ. ‘ಅನಾಮಧೇಯ’ ಅಪರಾಧಿಗಳಲ್ಲಿ ನಮ್ಮ ಪತ್ತೆಯನ್ನು ಹಚ್ಚಲು ಆಗುವುದಿಲ್ಲ ಎಂಬ ಉಡಾಫೆ ಮನೋಭಾವ ಇಂತಹ ಪ್ರಕರಣಗಳಲ್ಲಿ ಎದ್ದು ಕಾಣುವಂತಹದ್ದು. ‘ಮಕ್ಕಳ ಕಳ್ಳರು ಇಲ್ಲ. ವಾಟ್ಸ್‌ ಆ್ಯಪ್‌ ಸಂದೇಶಗಳು ಪಸರಿಸುವ ವದಂತಿಗಳಿಂದ ಹಿಂಸೆಗೆ ಇಳಿಯಬೇಡಿ’ ಎಂದು ಪೊಲೀಸ್‌ ಇಲಾಖೆಯಿಂದ ಕರಪತ್ರಹಂಚಲಾಗಿದೆಯಂತೆ. ಒಂದುವೇಳೆ ಸಿಕ್ಕವರು ಅಪರಾಧಿ
ಗಳೇ ಇರಬಹುದು. ಅವರನ್ನು ಪೊಲೀಸರಿಗೆ ಒಪ್ಪಿಸಬೇಕೇ ಹೊರತು ಹಿಡಿದು ದಂಡಿಸುವುದಲ್ಲ. ಹೀಗೆ ದೈನೇಸಿಯಂತೆ ಮನವಿ ಮಾಡುವ ಬದಲು ‘ಯಾರನ್ನೇ ಆಗಲಿ ದಂಡಿಸಿದರೆ ಹುಷಾರ್‌’ ಎಂಬ ಸಂದೇಶವನ್ನು ತಾನೆ ಇಲಾಖೆ ಸಾರಬೇಕಾಗಿರುವುದು?

‘ವದಂತಿ ಸಂದೇಶಗಳನ್ನು ರವಾನಿಸುವವರನ್ನು ಮಾಹಿತಿ ತಂತ್ರಜ್ಞಾನ ದುರ್ಬಳಕೆ ಪ್ರಕರಣದಲ್ಲಿ ಬಂಧಿಸಿ ಜೈಲಿಗೆ ಕಳುಹಿಸುತ್ತಿದ್ದೇವೆ. ಇದರಿಂದ ಜನರಲ್ಲಿ ಭಯ ಬಂದಿದೆ. ಚಾಮರಾಜಪೇಟೆ ಪ್ರಕರಣದ ನಂತರ ವದಂತಿ ಹರಡುವುದು ಕಡಿಮೆಯಾಗಿದೆ’ ಎಂದು ಹೇಳುತ್ತಾರೆ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಮಲ್‌ಪಂತ್.

ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಯ (ಐಸೆಕ್‌) ಪ್ರಾಧ್ಯಾಪಕ ಪ್ರೊ. ಮನೋಹರ ಯಾದವ್‌, ಲಿಂಚಿಂಗ್‌ ಪ್ರಕರಣಗಳಿಗೆ ಹೊಸದೊಂದು ಆಯಾಮವನ್ನೇ ನೀಡುತ್ತಾರೆ. ‘ಗೋವು ಸಾಗಣೆ ಸಂದರ್ಭ
ದಲ್ಲಿ ನಡೆದ ಘಟನೆಗಳಲ್ಲಿ ಶೇ 86ರಷ್ಟು ಮುಸ್ಲಿಮರು ಮತ್ತು ಶೇ 8ರಷ್ಟು ದಲಿತರು ಹತ್ಯೆಗೀಡಾಗಿದ್ದಾರೆ. ಇತರ ವರ್ಗಗಳ ಎದೆಯಲ್ಲಿ ಶತಮಾನಗಳಿಂದ ಉರಿಯುತ್ತಿರುವ ಕಿಚ್ಚು ಈ ಎರಡೂ ಸಮುದಾಯಗಳನ್ನು ಸುಡುತ್ತಿದೆ. ಅಮಾನು
ಷವಾಗಿ ಕೊಲ್ಲುವ ಈ ಘಟನೆಗಳೆಲ್ಲ ರಾಜಕೀಯ ಬೆಂಬಲದ ಸಂಘಟಿತ ದಾಳಿಗಳಾಗಿವೆ’ ಎಂದು ವಿಶ್ಲೇಷಿಸುತ್ತಾರೆ.

ಲಿಂಚಿಂಗ್‌ ಪ್ರಕರಣಗಳನ್ನು ಎರಡು ವಿಧಗಳನ್ನಾಗಿ ಮಾನವಶಾಸ್ತ್ರಜ್ಞರು ಗುರ್ತಿಸಿದ್ದಾರೆ. ಮೊದಲನೆಯದು ಸೈದ್ಧಾಂತಿಕ ದಾಳಿಯಾದರೆ (ಗೋವು ಸಾಗಣೆ), ಎರಡನೆಯದು ಭಾವೋದ್ರೇಕದ ದಾಳಿ (ಮಕ್ಕಳ ಕಳ್ಳರು).
‘ಎರಡೂ ತರಹದ ಪ್ರಕರಣಗಳನ್ನೂ ವಿಶ್ಲೇಷಣೆ ಮಾಡಿನೋಡಿ, ಬಲಿಯಾದವರಲ್ಲಿ ಬಹುಪಾಲು ಜನ ಮುಸ್ಲಿಮರು ಇಲ್ಲವೆ ದಲಿತರೇ ಆಗಿದ್ದಾರೆ’ ಎಂದು ಪ್ರೊ. ಯಾದವ್‌ ಬೊಟ್ಟು ಮಾಡುತ್ತಾರೆ.

ಹತ್ಯೆ ಘಟನೆಗಳನ್ನು ಮತ್ತೊಂದು ಆಯಾಮದಿಂದ ನೋಡುತ್ತಾರೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಜತೆ ಗುರುತಿಸಿಕೊಂಡಿರುವ ಸಾಮರಸ್ಯ ವೇದಿಕೆಯ ವಾದಿರಾಜ್‌. ‘ಅಮಾಯಕರ ಮೇಲಿನ ದಾಳಿಯನ್ನು ಯಾವ
ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ ನಿಜ. ಆದರೆ, ಪೊಲೀಸ್‌ ವ್ಯವಸ್ಥೆ ಮೇಲಿನ ನಂಬಿಕೆ ಕಳೆದುಕೊಂಡವರು ಇಂತಹ ಘಟನೆಗಳಲ್ಲಿ ಪಾಲ್ಗೊಂಡಿರುವ ಸಾಧ್ಯತೆ ಇದೆ. ಪೂರಾ ವ್ಯವಸ್ಥೆ ಚೆನ್ನಾಗಿದ್ದು, ಎಲ್ಲವೂ ಜನರದೇ ತಪ್ಪು
ಎಂದು ಸಾರಾಸಗಟಾಗಿ ಹೇಳುವುದು ತರವಲ್ಲ. ಸುಳ್ಳಿನ ಆಧಾರದ ಮೇಲೆ ಸದೃಢ ಸಮಾಜ ಕಟ್ಟಲೂ ಆಗಲ್ಲ. ಘಟನೆ ಗಳನ್ನು ಮೇಲ್ಮಟ್ಟದಲ್ಲಿ ಅವಲೋಕಿಸಿ ನೋಡುವುದಲ್ಲ; ಆಳಕ್ಕಿಳಿದು ನೋಡಬೇಕು’ ಎಂದು ವಾದಿಸುತ್ತಾರೆ.

ಮುಗ್ಧರ ಮೇಲಿನ ದಾಳಿಗಳನ್ನು ಯಾರೂ ಸಮರ್ಥನೆ ಮಾಡುವುದಿಲ್ಲ. ಆದರೆ, ತಪ್ಪಿತಸ್ಥರಿಗೆ ಶಿಕ್ಷೆಯೂ ಆಗುವುದಿಲ್ಲ. ಇದು ಸದ್ಯ ನಮ್ಮ ನಡುವಿನ ವಿಷಮ ಸನ್ನಿವೇಶ. ಲಿಂಚಿಂಗ್‌ಗೆ ಪ್ರತ್ಯೇಕ ಕಾಯ್ದೆ ಇಲ್ಲವಾದರೂ ಅಂತಹ ಕೃತ್ಯಗಳಲ್ಲಿ ಭಾಗಿಯಾದವರನ್ನು ಐಪಿಸಿ ಕಲಂ ಅಡಿಯಲ್ಲೇ ಶಿಕ್ಷೆಗೆ ಗುರಿಪಡಿಸಬಹುದು. ‘ಸುಪ್ರೀಂ ಕೋರ್ಟ್‌ ಹೊಸ ಕಾಯ್ದೆ ರೂಪಿಸುವ ಕುರಿತು ಮಾತನಾಡುತ್ತಿದೆ. ಈಗಿರುವ ಕಾಯ್ದೆಗಳ ಅಡಿಯಲ್ಲಿ ಸರ್ಕಾರ ಏನು ಕ್ರಮ ಕೈಗೊಂಡಿದೆ’ ಎಂದು ಚಿಂತಕ ಜಿ.ರಾಮಕೃಷ್ಣ ಪ್ರಶ್ನಿಸುತ್ತಾರೆ.

ನಾಗರಿಕ ಸಮಾಜವೇ ರಕ್ತದಾಹದಿಂದ ಹೀಗೆ ಅನಾಗರಿಕವಾಗಿ ಹತ್ಯೆಗೈಯುವ ಮಟ್ಟಕ್ಕೆ ಇಳಿದ ಘಟನೆಗಳ ಹಿಂದೆ ಮನೋವಿಜ್ಞಾನದ ಪ್ರಶ್ನೆಯೂ ಅಡಗಿದೆಯೇ? ‘ಮಕ್ಕಳ ಕಳ್ಳರು ಎಂದೊಡನೆ ಯಾರಿಗಾದರೂ ಆತಂಕ ಆಗುವುದು ಸಹಜ. ಆಗ ಅವರು ವ್ಯಗ್ರಗೊಳ್ಳುವ ಸಾಧ್ಯತೆ ಇದೆ’ ಎಂಬ ಮನೋವಿಜ್ಞಾನಿಗಳ ಹೇಳಿಕೆಯನ್ನು ರಾಮಕೃಷ್ಣ ಅವರು ಒಪ್ಪುವುದಿಲ್ಲ. ‘ಇದು ಮನೋವೈಕಲ್ಯದ ಪ್ರಶ್ನೆಯಲ್ಲ; ಯೋಜಿತವಾದ ಕೃತ್ಯ. ಮರೆಯಲ್ಲಿ ಇದ್ದು, ಕೆಲವರು ಕುಮ್ಮಕ್ಕು ಕೊಡುತ್ತಿದ್ದಾರೆ. ಚುನಾವಣೆಗಳು ಬೇರೆ ಬರುತ್ತಿವೆಯಲ್ಲ’ ಎಂದು ಅವರು ಹೇಳುತ್ತಾರೆ.

ಕಾಡಿನ ಪ್ರಾಣಿಗಳಿಗೂ ನೈಸರ್ಗಿಕ ನಿಯಮ ಇದೆ. ಹಸಿದಾಗ ಮಾತ್ರ ಅವುಗಳು ದಾಳಿ ಮಾಡುತ್ತವೆ. ರಕ್ತದ ದಾಹದಲ್ಲಿ ಕುದಿಯುತ್ತಿರುವ ಮನುಷ್ಯ, ಮನುಷ್ಯನನ್ನೇ ಕೊಲ್ಲುವಂತಹ ಕ್ರೌರ್ಯ ಈಗ ಮೆರೆದಾಡುತ್ತಿದೆ. ಜೀವ ತೆಗೆ
ಯುವುದು ಸಲೀಸಾಗಿದೆ. ಇದನ್ನು ನಾಗರಿಕತೆ ಎನ್ನಲಾದೀತೇ? ಹೌದು, ಬಿದ್ದ ಒಂದೊಂದು ಹೆಣದ ಸಮಾಧಿ ಕೂಡ ಮನುಷ್ಯತ್ವಕ್ಕೇ ಕೊಡುತ್ತಿರುವ ಮಣ್ಣಾಗಿ ಗೋಚರಿಸುತ್ತಿದೆ.

ಮೇ 15: ಬಳ್ಳಾರಿಯ ಸಂಗನಕಲ್ಲು ಗ್ರಾಮದಲ್ಲಿ ಕಳ್ಳರೆಂದು ಭಾವಿಸಿ, ಮೂವರು ಭಿಕ್ಷುಕರಿಗೆ ಥಳಿತ.

ಮೇ 19: ಕಲಬುರ್ಗಿ ಜಿಲ್ಲೆಯ ಕೋಡ್ಲಾ ಗ್ರಾಮದಲ್ಲಿ ಅವತಾರ್‌ ಸಿಂಗ್‌ ಎಂಬುವರ ಮೇಲೆ ಹಲ್ಲೆ. ಆರು ಮಂದಿಯ ಬಂಧನ.

ಮೇ 22: ಕೆಲಸ ಕೊಡಿಸುವುದಾಗಿ ಹಣ ಪಡೆದು ತಮಗೆ ವಂಚಿಸಿದವನನ್ನು ಹುಡುಕಿಕೊಂಡು ವಿಜಯ
ಪುರದ ಸಿಂದಗಿ ತಾಲ್ಲೂಕಿಗೆ ಬಂದಿದ್ದ ಮೆಹಬೂಬ್ ಜಹಾಗೀರದಾರ, ತೌಶೀಪ್ ಜಹಾಗೀರದಾರ, ಬಸಪ್ಪ ಗೌಡರ, ಮಲ್ಲಪ್ಪ ಬಿರಾದಾರ ಎಂಬುವರನ್ನು ಸ್ಥಳೀಯರು ಕೈ–ಕಾಲು ಕಟ್ಟಿ ಥಳಿಸಿದ್ದರು.

ಮೇ 23: ಬೆಂಗಳೂರಿನ ಪುಲಕೇಶಿನಗರದಲ್ಲಿ ನೇಪಾಳ ಹಾಗೂ ಬಿಹಾರದ 12 ಕಾರ್ಮಿಕರ ಮೇಲೆ ನೂರಕ್ಕೂ ಹೆಚ್ಚು ಮಂದಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದರು. ರಕ್ಷಣೆಗೆ ತೆರಳಿದ್ದ ಪೊಲೀಸರಿಗೆ ಬೈದು, ಹೊಯ್ಸಳ ವಾಹನವನ್ನೂ ಜಖಂಗೊಳಿಸಿದ್ದರು.

ಮೇ 23: ಬೆಂಗಳೂರಿನ ಚಾಮರಾಜಪೇಟೆಯ ಪೆನ್ಶನ್‌ ಮೊಹಲ್ಲಾದಲ್ಲಿ ರಾಜಸ್ಥಾನದ ಕಾಲೂರಾಮ್ ಎಂಬುವರನ್ನು ಮಕ್ಕಳ ಕಳ್ಳನೆಂದು ಭಾವಿಸಿ ಜನ
ಬ್ಯಾಟ್, ದೊಣ್ಣೆಗಳಿಂದ ಹೊಡೆದು ಸಾಯಿಸಿದ್ದರು.

ಮೇ 23: ಬೆಂಗಳೂರಿನ ವಿದ್ಯಾರಣ್ಯಪುರದ ವಡೇರಹಳ್ಳಿಯಲ್ಲಿ ಮನೆ ಬಾಡಿಗೆ ಕೇಳಲು ತೆರಳಿದ್ದ ಮಹಿಳೆಯನ್ನು ಮಕ್ಕಳ ಕಳ್ಳಿ ಎಂದುಕೊಂಡು ಜನ, ಅವರಿಗೆ ಮನಸೋಇಚ್ಛೆ ಥಳಿಸಿದ್ದರು.

ಮೇ 24: ಬೆಂಗಳೂರಿನ ವೈಟ್‌ಫೀಲ್ಡ್‌ ನಿವಾಸಿಗಳು ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಮೂವರು ಮಹಿಳೆಯ
ರನ್ನು ಮನೆಯೊಂದರಲ್ಲಿ ಕೂಡಿ ಹಾಕಿದ್ದರು. ಪೊಲೀಸರು ಅವರನ್ನು ರಕ್ಷಣೆ ಮಾಡಿದ್ದರು.

ಮೇ 28: ಟ್ರ್ಯಾಕ್ಟರ್‌ನ ಬಿಡಿಭಾಗಗಳನ್ನು ತೆಗೆದುಕೊಂಡು ಹೋಗಲು ಚಿಕ್ಕಮಗಳೂರಿಗೆ ಬಂದಿದ್ದ ಬಾಳೇಹೊನ್ನೂರಿನ ವ್ಯಕ್ತಿಯೊಬ್ಬರಿಗೆ ಹೆನ್ರಿ ಕಾರ್ನರ್ ಬಳಿ ಜನ ಥಳಿಸಿದ್ದರು.

ಮೇ 30: ಬೆಂಗಳೂರಿನ ದೊಡ್ಡನೆಕ್ಕುಂದಿಯಲ್ಲಿ ಗಾಂಜಾ ನಶೆಯಲ್ಲಿ ತಿರುಗಾಡುತ್ತಿದ್ದ ಚಂದ್ರಶೇಖರ್ ಎಂಬುವರನ್ನು ಜನ ಮಕ್ಕಳ ಕಳ್ಳನೆಂದು ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದರು.

ಜೂನ್ 4: ಹುಬ್ಬಳ್ಳಿ ಬಳಿಯ ಬ್ಯಾಹಳ್ಳಿ ಗ್ರಾಮದಲ್ಲಿ ಮಹಿಳೆಯರು ಆಂಧ್ರಪ್ರದೇಶದ ರಾಜು ಎಂಬುವರನ್ನು ಥಳಿಸಿದ್ದರು. ಅವರು ಕೂಲಿ ಅರಸಿ ಗ್ರಾಮಕ್ಕೆ ಬಂದಿದ್ದವರು ಎಂಬ ಸತ್ಯ ನಂತರ ಗೊತ್ತಾಗಿತ್ತು.

ಜೂನ್ 8: ಹಾವೇರಿ ಜಿಲ್ಲೆಯ ಗೌರಪುರ ಗ್ರಾಮಕ್ಕೆ ಉದ್ದಿನ ಬೇಳೆ ಮಾರಲು ಬಂದಿದ್ದ ಯುವಕನ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದರು. ಆತ ಹಣ ಮಾತ್ರವಲ್ಲದೆ, ಹಳೇ ಬಟ್ಟೆಗಳನ್ನೂ ಪಡೆದು ಬೇಳೆ ಮಾರುತ್ತಿದ್ದ. ಬ್ಯಾಗ್‌ನಲ್ಲಿ ಮಕ್ಕಳ ಬಟ್ಟೆಗಳು ಇದ್ದುದ್ದೇ ಜನರ ಅನುಮಾನಕ್ಕೆ ಕಾರಣವಾಗಿತ್ತು.

ಜೂನ್ 10: ನರಗುಂದ ಪಟ್ಟಣದಲ್ಲಿ ಭಿಕ್ಷೆ ಬೇಡುತ್ತಿದ್ದ 13 ರಿಂದ 15ರ ವಯೋಮಾನದ ಮೂವರು ಮಕ್ಕಳಿಗೆ ಸ್ಥಳೀಯರು ಅಮಾನವೀಯವಾಗಿ ಥಳಿಸಿದ್ದರು.

ಜುಲೈ 13: ಗೆಳೆಯನ ಮನೆಗೆ ಊಟಕ್ಕೆ ತೆರಳಿದ್ದಾಗ ಮಕ್ಕಳ ಕಳ್ಳರೆಂದು ಭಾವಿಸಿ ತಮ್ಮ ಮೇಲೆ ಹಲ್ಲೆ ನಡೆಸಲು ಮುಂದಾದ ಗ್ರಾಮಸ್ಥರಿಂದ ತಪ್ಪಿಸಿಕೊಳ್ಳುವಾಗ, ಕಾರು ಅಪಘಾತಕ್ಕೀಡಾಗಿ ಹೈದರಾಬಾದ್‌ನ ಮಹಮ್ಮದ್ ಆಜಂ ಎಂಬುವರು ಮೃತಪಟ್ಟರು. ಬೀದರ್ ಜಿಲ್ಲೆಯ ಕಮಲನಗರದಲ್ಲಿ ಈ ದುರಂತ ಸಂಭವಿಸಿದ್ದು, ಪೊಲೀಸರು 30ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.

ಜುಲೈ 17: ಕೆ.ಆರ್.ಪೇಟೆ ತಾಲೂಕಿನ ನಾಯಸಿಂಗನ ಹಳ್ಳಿ ಗ್ರಾಮದಲ್ಲಿ ತನ್ನ ಮಗನನ್ನು ಎತ್ತಿಕೊಂಡು ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರಿಗೆ ಜನ ಹಿಗ್ಗಾಮುಗ್ಗಾ ಹೊಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT