ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಮನ ಹಾಸಿನಲ್ಲಿರಲಿ ಕರುಣೆ, ಮೈತ್ರಿ

ಬಾಯಿಯಲ್ಲಿ ದೇವರಾಗಿ, ಕೃತಿಯಲ್ಲಿ ರಾಕ್ಷಸರಾಗುವ ಬದಲು ಮನುಷ್ಯರಾಗುವ ಬಗೆಗೆ ಯೋಚಿಸೋಣ
Published 24 ಮೇ 2024, 23:30 IST
Last Updated 24 ಮೇ 2024, 23:30 IST
ಅಕ್ಷರ ಗಾತ್ರ

ಸತತ ನಾಲ್ಕು ವರ್ಷಗಳ ಭೀಕರ ಯುದ್ಧದಿಂದ ಎರಡೂ ಕಡೆ ಲಕ್ಷಾಂತರ ಜನ ಸತ್ತಿರುತ್ತಾರೆ. ಕೊನೆಗೂ ಶಾಂತಿಸಂಧಾನದ ಪ್ರಯತ್ನಕ್ಕೆ ಫಲ ಸಿಕ್ಕಿ, ಯುದ್ಧ ನಿಲುಗಡೆಯ ಒಪ್ಪಂದ ಜಾರಿಗೆ ಬರುತ್ತಿರುವ ಸೂಚನೆ ಸಿಕ್ಕಿರುತ್ತದೆ. ಬಸವಳಿದು ಹೋದ ಬದುಕುಳಿದ ಸೈನಿಕರು ತಾವು ಮನೆಗೆ ಮರಳುತ್ತಿದ್ದೇವೆ ಎಂಬ ಉಕ್ಕುತ್ತಿರುವ ಖುಷಿಯನ್ನು ಹತ್ತಿಕ್ಕಿಕೊಂಡು, ತಮಗೆ ತುರ್ತು ಕರೆ ಕಳಿಸಿದ ಜನರಲ್‍ನ ಮಾತುಗಳನ್ನು ಕೇಳುತ್ತಿದ್ದಾರೆ. ಸೋತ ತಾವು ಹೀಗೆ ಒಪ್ಪಂದ ಮಾಡಿಕೊಳ್ಳುವುದು ಅವನಿಗೆ ಇಷ್ಟವಿಲ್ಲ. ಒಪ್ಪಂದ ಜಾರಿಗೆ ಬರಲು ಇನ್ನು ಬರೀ ಹದಿನೈದು ನಿಮಿಷಗಳು ಬಾಕಿ ಇವೆ. ‘ನಾವು ಹನ್ನೊಂದು ಗಂಟೆಯ ಒಳಗೆ ತೀವ್ರವಾಗಿ ದಾಳಿ ಮಾಡಿ, ಶತ್ರುಗಳಿಗೆ ಪಾಠ ಕಲಿಸಿ ವಿಜಯಶಾಲಿಗಳಾಗಿ ಹಿಂದಿರುಗಬೇಕು. ತಕ್ಷಣ ದಾಳಿ ಮಾಡಲು ಸಜ್ಜಾಗಿ’ ಎಂದು ಆತ ಆದೇಶಿಸುತ್ತಾನೆ!

ದೇಹ, ಮನಸ್ಸು ನಜ್ಜುಗುಜ್ಜಾಗಿರುವ ಸೈನಿಕರಿಗೆ ಇದು ಇಷ್ಟವಿಲ್ಲ. ಆದರೆ ‘ಹೇಳಿದಷ್ಟು ಮಾಡು’ ಎಂಬುದು ಬಿಟ್ಟು ಅವರಿಗೆ ಬೇರೆ ದಾರಿ ಇಲ್ಲ. ಆ ಹದಿನೈದು ನಿಮಿಷಗಳಲ್ಲಿ ಮರಳಿ ಯುದ್ಧಕ್ಕೆ ಹೋದ ಮುಕ್ಕಾಲು ಪಾಲು ಸೈನಿಕರು ಹೆಣವಾಗುತ್ತಾರೆ! ಇದು, ಮೊದಲ ಮಹಾಯುದ್ಧದ ಕತೆಯನ್ನುಳ್ಳ ‘ಆಲ್ ಕ್ವಯೆಟ್ ಆನ್ ದಿ ವೆಸ್ಟರ್ನ್ ಫ್ರಂಟ್’ ಎಂಬ ಸಿನಿಮಾದ ಒಂದು ದೃಶ್ಯ. ಇಂತಹ ಮೂರ್ಖ ಆದೇಶ ಮಾಡಿದ ಜರ್ಮನಿಯ ಜನರಲ್‍ನ ಮನಃಸ್ಥಿತಿ ಎಂಥದ್ದಿರಬಹುದು ಎಂದು ಆಶ್ಚರ್ಯ ಆಗುತ್ತದೆ. ಇನ್ನೊಂದೆಡೆ, ಅದೇ ಜರ್ಮನಿಯ ಶಾಂತಿ ಮಾತುಕತೆಯ ಮುಖ್ಯಸ್ಥನಿಗೆ ಫ್ರಾನ್ಸ್ ‘ಎಪ್ಪತ್ತೆರಡು ಗಂಟೆಗಳೊಳಗೆ ನಮ್ಮ ಷರತ್ತುಗಳಿಗೆ ಒಳಪಟ್ಟು ನಿಮ್ಮ ನಿರ್ಧಾರ ಹೇಳಿ. ಅಲ್ಲಿಯವರೆಗೆ ಯುದ್ಧ ಮುಂದುವರಿಯುತ್ತದೆ’ ಎಂದಾಗ ಆತ ‘ದಯವಿಟ್ಟು ಅಷ್ಟುಕಾಲ ಯುದ್ಧವನ್ನು ಮುಂದೆ ತಳ್ಳಬೇಡಿ. ಇದು ಸಾವಿರಾರು ಸೈನಿಕರ ಜೀವದ ವಿಷಯ. ಪ್ರತಿ ನಿಮಿಷವೂ ಒಬ್ಬನ ಜೀವ ಉಳಿಸಬಹುದು’ ಎಂದು ಕೋರಿಕೊಳ್ಳುತ್ತಾನೆ. ಇಬ್ಬರ ನಡುವೆ ಎಷ್ಟು ವ್ಯತ್ಯಾಸ!

ಒಬ್ಬನಿಗೆ, ತನ್ನ ಕೈಲಿರುವ ಅಧಿಕಾರದಿಂದ ಯಾರನ್ನಾದರೂ ಬಲಿ ಕೊಟ್ಟು ತಾನು ವಿಜಯಿ ಅನ್ನಿಸಿ
ಕೊಳ್ಳುವ ಮತ್ತು ಆ ಮೂಲಕ ತನ್ನ ಅಧಿಕಾರವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ ಪಿಪಾಸುತನ. ಇನ್ನೊಬ್ಬನಿಗೆ, ತಾನೀಗ ಪಡೆದಿರುವ ರಾಜಿ ಸಂಧಾನದ ಅವಕಾಶವೆಂಬ ಅಧಿಕಾರವನ್ನು ಬಳಸಿ, ಎಷ್ಟು ಸಾಧ್ಯವೋ ಅಷ್ಟು ಜನರ ಪ್ರಾಣ ಉಳಿಸುವ ಜೀವಜಲವಾಗುವ ಕಾರುಣ್ಯದ ಕಣ್ಣು.

ಈ ಎರಡು ವಿರುದ್ಧ ಮನಃಸ್ಥಿತಿಗಳು ರೂಪುಗೊಳ್ಳು ವುದು ಹೇಗೆ? ಇದೊಂದು ಕೊನೆಯಿಲ್ಲದ ಹುಡುಕಾಟದ ಪ್ರಶ್ನೆಯೇ ಆಗಬಹುದು. ಆದರೆ ಇದು ಬರೀ ಜನ್ಮಜಾತ ವಾದದ್ದಂತೂ ಅಲ್ಲ. ಯಾಕೆಂದರೆ, ಕ್ರಿಸ್ತ ಪೂರ್ವದ ಬುದ್ಧನಿಂದ ಹಿಡಿದು ಕ್ರಿಸ್ತ ಶಕದ ಏಸುವಿನ ತನಕವೂ ಕಾರುಣ್ಯವನ್ನು ಬಿತ್ತುವುದಕ್ಕೆ ಮತ್ತೆ ಮತ್ತೆ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಇನ್ನೊಂದೆಡೆ, ಅಧಿಕಾರ, ಅಹಂಕಾರ, ಸ್ವಾರ್ಥದ ಬೆನ್ನು ಬಿದ್ದವರು ಯಾವ ಹೀನಾಯ ಮಟ್ಟಕ್ಕಾದರೂ ಇಳಿದು ಸುಳ್ಳು, ದ್ವೇಷ, ಕ್ರೌರ್ಯ, ಕೊಲೆಗಳ ಮೂಲಕ ತಮ್ಮ ಕಿರೀಟಕ್ಕೆ ರತ್ನಗಳನ್ನು ಪೋಣಿಸಿಕೊಳ್ಳುತ್ತಲೇ ಹೋಗುವುದನ್ನೂ ಮತ್ತೆ ಮತ್ತೆ ನೋಡುತ್ತಲೇ ಇದ್ದೇವೆ.

ಮೇಲೆ ಹೇಳಿರುವ ಸಿನಿಮಾದಲ್ಲಿ, ‘ಪಿತೃಭೂಮಿಯ ಹಿರಿಮೆ’ ಎಂಬ ರಾಷ್ಟ್ರೀಯತೆಯ ಮಾತಿನ ಪ್ರಭಾವಕ್ಕೆ ಒಳಗಾಗಿ, ಪೋಷಕರ ಮಾತನ್ನೂ ಮೀರಿ ಯುದ್ಧಕ್ಕೆ ಬಂದಿದ್ದ ಹದಿನೇಳರ ವಯಸ್ಸಿನ ಹುಡುಗರು, ತಮ್ಮ ಕಲ್ಪನೆಗಿಂತ ಭೀಕರವಾಗಿದ್ದ ಯುದ್ಧಭೂಮಿಯನ್ನು ನೋಡಿ ದಿಗ್ಭ್ರಾಂತರಾಗುತ್ತಾರೆ. ಕಣ್ಣೆದುರೇ ಪತಂಗಗಳಂತೆ ಸಾಯುತ್ತಾರೆ. ಹೇಗಾದರೂ ಜೀವ ಉಳಿಸಿಕೊಂಡಿದ್ದ ಒಬ್ಬನಿಗೆ ಜನರಲ್‍ನ ಈಗಿನ ಮಾತು ಪ್ರಭಾವಿಸುವುದಿಲ್ಲ. ಯಾಕೆಂದರೆ, ಈಗ ಯುದ್ಧ ಅವನ ಅನುಭವವಾಗಿದೆ. ಚುನಾವಣೆಯನ್ನೂ ಯುದ್ಧವೆಂಬಂತೆ ಬಿಂಬಿಸಿದ ಈ ಸಂದರ್ಭದಲ್ಲೂ ಮನಸ್ಸುಗಳನ್ನು ಆಕ್ರಮಿಸಲು ಹಲವು ಮಾತುಗಳು ಉಕ್ಕುತ್ತಿವೆ. ಚುನಾವಣಾ ಆಯೋಗ ಕೊನೆಯ ಜಾವದಲ್ಲಿ ಎಚ್ಚೆತ್ತು, ‘ವಿಭಜನೆಯ ಮಾತಾಡಬೇಡಿ’ ಎಂದಿದೆ!

ಆಧುನಿಕ ವಿದ್ಯೆ, ವಿಜ್ಞಾನ ಮೂಲದ ಚಿಂತನೆ, ಸಾಹಿತ್ಯ, ತತ್ವಜ್ಞಾನದ ಓದುವಿಕೆಯು ಮನುಷ್ಯರ ಮನಃಸ್ಥಿತಿ
ಯನ್ನು ಸದಾ ವಿಕಾಸದ ಪಥದಲ್ಲಿ ಮುನ್ನಡೆಸುತ್ತದೆ ಎಂದು ನಂಬಲಾಗುತ್ತದೆ. ಆದರೆ, ವಿದ್ಯಾರ್ಥಿ ದೆಸೆಯಲ್ಲಿರುವ ಎಳೆಯ ಹುಡುಗರು ಅದೇಕೆ ಕೊಲೆಗಡುಕರಾಗುತ್ತಿದ್ದಾರೆ? ಇಂತಹ ಕರುಳು ಕತ್ತರಿಸುವ ಪ್ರಕರಣಗಳಿಗೂ ಆಳುವವರು ಅದು ಹೇಗೆ ಏನೂ ಆಗಿಲ್ಲವೆಂಬಂತೆ ನಿರ್ಲಿಪ್ತರಾಗಿ ಪ್ರತಿಕ್ರಿಯಿಸುತ್ತಾರೆ? ಅಪರಾಧಗಳ ಮೂಲವನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ಅದು ಪುನರಾವರ್ತನೆ ಆಗದಂತೆ ನಾವೇನು ಮಾಡಬಹುದು ಎಂಬೆಡೆಗೆ, ಜವಾಬ್ದಾರಿ ಹೊತ್ತವರು ತಾಯಿ ಸಂಕಟದ ತೀವ್ರತೆಯಲ್ಲಿ ಕೆಲಸ ಮಾಡುತ್ತಿದ್ದಾರೆಯೇ?

ಜನರ ಕಷ್ಟಗಳಿಗೆ ರಾಜಕಾರಣಿಗಳು ಸ್ಪಂದಿಸಬೇಕು ಎಂಬುದಕ್ಕಿಂತ ಇಂದು ರಾಜಕಾರಣಿಗಳ ಸಂಕಷ್ಟಕ್ಕೆ ಜನರೇ ಸ್ಪಂದಿಸುವುದು ಹೆಚ್ಚಾಗಿದೆ. ಅವರು ‘ಇಂದು ಶತ್ರುತ್ವ, ನಾಳೆ ಮಿತ್ರತ್ವ’ ಎಂಬ ಆಟ ಆಡುತ್ತಿದ್ದರೆ, ಇವರು ಅವರಿಗಾಗಿ ತಮ್ಮ ಬಂಧು ಬಾಂಧವರು, ಗೆಳೆಯರೊಡನೆ ಕಾದಾಡುತ್ತಿರುತ್ತಾರೆ. ಇದೆಲ್ಲವನ್ನೂ ಮೀರಿ ಮನಸ್ಸೇ ಮಾರಾಟವಾಗಿರುವ ಸನ್ನಿವೇಶದಲ್ಲಿ ‘ತಮ್ಮವನು’ ಎಂಬ ನೆಪದಲ್ಲಿ ಅಮಾನುಷ, ಅಸಹ್ಯ ವ್ಯಭಿಚಾರಗಳನ್ನೂ ವ್ಯಭಿಚಾರಿಗಳನ್ನೂ ರಕ್ಷಿಸುವುದು ಹೇಗೆ ಎಂಬ ಲೆಕ್ಕಾಚಾರ ದಲ್ಲಿ ಮುಳುಗಿರುತ್ತಾರೆ. ಅದು ಹೇಗೆ ಇಂತಹ ದೊಡ್ಡ ಮಟ್ಟದ ಅನಾಚಾರಗಳನ್ನು ಒಪ್ಪುವವರಾಗುತ್ತಾರೆ?
‘ತಮ್ಮವರಲ್ಲದವರು’ ಮಾಡಿದಾಗ ಉಗ್ರವಾಗಿ ಖಂಡಿಸಿದವರಿಗೆ ಈಗ ಮಾತು ಹುಗಿದು ಹೋಗುವುದು ಹೇಗೆ? ಇದು ಮನುಷ್ಯನ ಮನಸ್ಸಿನ ಮಿತಿಯೇ ಅಥವಾ ಮನಸ್ಸು ಪಳಗಿಸಿದಾಗ ಆಗುವ ಸ್ಥಿತ್ಯಂತರವೇ?

ಮೆಡೋಸ್ ಟೇಲರ್ ಬರೆದಿರುವ ‘ಠಕ್ಕನೊಬ್ಬನ ಆತ್ಮಚರಿತ್ರೆ’ (ಅನು: ಎನ್.ಪಿ. ಶಂಕರನಾರಾಯಣ ರಾವ್; ಅಂಕಿತ ಪುಸ್ತಕ) ಮನುಷ್ಯನು ತಲುಪಬಲ್ಲ ಕೇಡಿನ ಆಳ ಮತ್ತು ಅದರ ನಿರರ್ಥಕತೆಯನ್ನು ಅತ್ಯಂತ ಸಮರ್ಥವಾಗಿ ದಾಟಿಸುವ ಕೃತಿ. ಭಾರತದಲ್ಲಿ ಹದಿಮೂರರಿಂದ ಹತ್ತೊಂಬತ್ತನೇ ಶತಮಾನದವರೆಗಿನ ಕಾಲದಲ್ಲಿ ಈ ಠಕ್ಕರ ಹಾವಳಿ ಇತ್ತು. ಕಾಡುದಾರಿಯಲ್ಲಿ ಪಯಣಿಸುವ ವ್ಯಾಪಾರಿಗಳನ್ನು ನಂಬಿಸಿ ಜೊತೆಗಾರರಂತೆ, ರಕ್ಷಕರಂತೆ ಅವರ ಜೊತೆಗೆ ಹೋಗುತ್ತಿದ್ದ ಈ ಠಕ್ಕರು, ಪುಟ್ಟ ಕರವಸ್ತ್ರ
ದಿಂದ ಕತ್ತು ಬಿಗಿದು ಅವರನ್ನು ಕೊಂದು ಸಂಪತ್ತು ದೋಚುತ್ತಿದ್ದರು. ತಮ್ಮ ಊರುಗಳಲ್ಲಿ ಸಭ್ಯರೂ ಕೋವಿ ದರೂ ಎಂಬಂತೆ ಅಭಿನಯಿಸುತ್ತಿದ್ದ ಈ ಕಟುಕರು ಇಂಥ ದುಷ್ಕೃತ್ಯಗಳು ತಮ್ಮ ಹೆಂಡತಿ, ಮಕ್ಕಳುಗಳಿಗೇ ಗೊತ್ತಾಗದಂತೆ ಎರಡು ಮನಃಸ್ಥಿತಿಗಳಲ್ಲಿ ಬದುಕಬಲ್ಲವರಾಗಿದ್ದರು. ಅಷ್ಟೇ ಅಲ್ಲ, ಇವರು ದೋಚಿದ ಹಣದಿಂದ ಲಂಚ ಕೊಟ್ಟು ಸಣ್ಣಪುಟ್ಟ ಸಂಸ್ಥಾನಕ್ಕೆ ಮುಖ್ಯಸ್ಥರೂ ಆಗುತ್ತಿದ್ದರು! ಸಣ್ಣಪುಟ್ಟ ರಾಜರಾಗುತ್ತಿದ್ದುದೂ ಇತ್ತು! (ಹಾಗೆ ರಾಜರಾದ ಮೇಲೆ ಸೂರ್ಯವಂಶಕ್ಕೋ  ಚಂದ್ರವಂಶಕ್ಕೋ ಸೇರಿದವರೆಂದೋ, ದೇವತಾಪುತ್ರರೆಂದೋ ಕತೆ ಕಟ್ಟಿದರಾಯಿತು!)

ಇವರು ಆ ಕ್ರೌರ್ಯವನ್ನು ಹಾಗೆ ರೂಢಿಸಿಕೊಳ್ಳುತ್ತಿದ್ದುದೂ ದೇವರ ಹೆಸರಿನಲ್ಲೇ ಎಂಬುದು ವಿಪರ್ಯಾಸ.
ತನ್ನ ಕುಟುಂಬದವರನ್ನು ಇಂತಹವರಿಂದಲೇ ಕಳೆದು ಕೊಂಡ ಬಾಲಕನೊಬ್ಬ ಮುಂದೆ ಇಂತಹವರ ದತ್ತು ಮಗನಾಗಿ ಬೆಳೆಯುತ್ತಾನೆ. ಇವೆಲ್ಲದರ ಬಗೆಗೆ ತಿರಸ್ಕಾರ ಇದ್ದ ಇವನೇ, ಹೀಗೆ ಮಾಡದೇಹೋದರೆ ತಾನು ಅಂಜುಕುಳಿ ಅನ್ನಿಸಿಕೊಳ್ಳುತ್ತೇನೆ ಎಂಬುದನ್ನು ಮೀರಲು ತಾನೂ ಕೊಲೆಗಾರನಾಗುತ್ತಾನೆ. ಮೊದಲ ಬಲಿಯನ್ನು ಯಶಸ್ವಿಯಾಗಿ ಪಡೆದ ಮೇಲೆ ಅದರ ರುಚಿ ಹತ್ತಿ, ಬಲಿ ಪಡೆಯಲು ಸದಾ ಕಾತರನಾಗಿರುತ್ತಾನೆ. ಅವನೇ ಹೇಳುವಂತೆ, ‘ಠಕ್ಕ ವೃತ್ತಿ ನೀಡುವ ಭಯಂಕರ ಉಲ್ಲಾಸ, ಅಮಲು ಇತರರಿಗೆ ತಿಳಿಯದು’. ಇಷ್ಟಾಗಿ ಇವರೆಲ್ಲರೂ ಕೈದಿಗಳಾಗಿ ಎಲ್ಲವನ್ನೂ ಕಳೆದುಕೊಂಡರು. ‘ಕೊಂದ ವರುಳಿದರೇ?’ ಎಂಬಂತೆ ಸರ್ವನಾಶವಾಗಿ ಹೋದರು.

ಬುದ್ಧ ಹೇಳುವಂತೆ, ‘(ಒಂದು) ಯುದ್ಧವು ಮತ್ತೊಂದು ಯುದ್ಧಕ್ಕೆ ಬೀಜವನ್ನು ಬಿತ್ತುತ್ತದೆ. ಹತ್ಯೆಗೈದ ವನನ್ನು ಸಂಹಾರ ಮಾಡಲು ಮತ್ತೊಬ್ಬನು ಹುಟ್ಟಿಕೊಳ್ಳು ತ್ತಾನೆ. ಆಕ್ರಮಣಕಾರನನ್ನು ಆಕ್ರಮಿಸಲು ಮತ್ತೊಬ್ಬನು ಬರುವುದು ಖಚಿತ. ದರೋಡೆಕೋರನನ್ನು ಲೂಟಿ ಮಾಡಲು ಮತ್ತೊಬ್ಬನು ಸದಾ ಸಿದ್ಧನಾಗಿರುತ್ತಾನೆ’. ಹೀಗಾಗಿ, ನಾವು ರೂಪಿಸಬೇಕಾದ ಮನಃಸ್ಥಿತಿಯು ಪ್ರಜ್ಞೆ, ಶೀಲ, ಕರುಣೆ, ಮೈತ್ರಿಯ ಆನಂದದ ತಳಹದಿಯಲ್ಲಿ ಇರಬೇಕಾಗಿದೆ. ನಮ್ಮ ಯುವಜನರು ಕೊಲೆಯಲ್ಲ, ಕಲೆಯ ಕೂಸುಗಳಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT