ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ಮನರೇಗಾ) ರದ್ದು ಮಾಡಿ, ಅದರ ಜಾಗದಲ್ಲಿ ಹೊಸತಾಗಿ ರೂಪಿಸಿದ ‘ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್’ (ಗ್ರಾಮೀಣ್) (ಜಿ ರಾಮ್ ಜಿ) ಮಸೂದೆಯನ್ನು ಸಂಸತ್ ಅಂಗೀಕರಿಸಿದೆ; ರಾಷ್ಟ್ರಪತಿ ಅವರೂ ಅಂಕಿತ ಹಾಕಿದ್ದಾರೆ. ಹೊಸ ಯೋಜನೆ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ಅಳಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ಇದು ಯೋಜನೆಯ ಆತ್ಮವನ್ನೇ ಕಿತ್ತೊಗೆಯುತ್ತಿದೆ. ಹೀಗಾಗಿ, ಈ ಹೊಸ ಮಸೂದೆಯನ್ನು ಬಹಳ ಸೂಕ್ಷ್ಮವಾಗಿ ಪರಿಶೀಲಿಸಬೇಕು. ರಾಜ್ಯಗಳ ಸ್ವಾಯತ್ತತೆ ಬಗ್ಗೆ ಕಾಳಜಿ ಇರುವ ಎಲ್ಲರೂ ಕಳೆದ ಹತ್ತಾರು ವರ್ಷಗಳಿಂದ ನಡೆಯುತ್ತಿರುವ ‘ಕೇಂದ್ರೀಕರಣ’ದ ಕುರಿತು ಜಾಗೃತರಾಗಬೇಕು.

‘ಮನರೇಗಾ’ದಿಂದ ‘ವಿಬಿ–ಜಿ ರಾಮ್ ಜಿ’ಗೆ ನಡೆಸುತ್ತಿರುವ ಪಯಣದಲ್ಲಿ ಸರ್ಕಾರವು ಬಡಜನರ ಸ್ವಾಭಿಮಾನವನ್ನು ಕಸಿದಿದೆ. ಕೆಲಸ ಮಾಡಲು ತಯಾರಿರುವವರಿಗೆ ಕೆಲಸದ ಹಕ್ಕನ್ನು ಕೊಟ್ಟಿದ್ದ ಮನರೇಗಾ ಕಾರ್ಯಕ್ರಮ, ಬಡವರಪರವಾದ ಅತ್ಯಂತ ಪ್ರಭಾವಶಾಲಿ ಯೋಜನೆಯೆಂದು ಜಗತ್ತಿನಲ್ಲಿ ಹೆಸರು ಮಾಡಿತ್ತು. ಪ್ರಾಯೋಗಿಕವಾಗಿ ಕೆಲವೇ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಿ, ನಂತರ ದೇಶ ವ್ಯಾಪ್ತಿಗೆ ಅನ್ವಯಿಸಿ, ‘ಯೋಜನೆ’ಯಷ್ಟೇ ಆಗಿದ್ದ ಕಾರ್ಯಕ್ರಮವನ್ನು ಕಾನೂನಿನ ಮೂಲಕ ಹಕ್ಕಾಗಿ ಪರಿವರ್ತಿಸಲಾಯಿತು. ಈ ಮೂಲಕ ಬಡತನ, ಉದ್ಯೋಗ ಖಾತರಿ ಮತ್ತು ಸಾಮಾಜಿಕ ಸುರಕ್ಷತೆಗೆ ಹೊಸ ಪರಿಭಾಷೆಯನ್ನು ನಿರ್ವಚಿಸಲಾಯಿತು. ಮನರೇಗಾದಿಂದ ಕನಿಷ್ಠ ಕೂಲಿಯ ದರದಲ್ಲಿ ಹೆಚ್ಚಳವಾಯಿತು. ಬಡವರಿಗೆ ದುಡಿಮೆಯ ಹಕ್ಕು ಕೊಟ್ಟಿದ್ದಲ್ಲದೇ, ಅವರು ಊಳಿಗಕ್ಕೆ ಬೀಳದಂತೆ ನಿಲ್ಲುವ ವಾತಾವರಣವನ್ನು ಉಂಟುಮಾಡಿದ್ದು ಮಹತ್ವದ ವಿಚಾರವಾಗಿತ್ತು. ನೇರ ನಗದು ಪಾವತಿಯನ್ನು ಸರ್ಕಾರದ ಉದಾರತೆಯೆಂದು ಬಣ್ಣಿಸಿ ಅದನ್ನು ಪಡೆವವರನ್ನು ‘ಫಲಾನುಭವಿ’ಗಳೆಂದು ಗುರುತಿಸುತ್ತಿರುವ ವರ್ತಮಾನದಲ್ಲಿ ಹಕ್ಕಿನಿಂದ ಕೆಲಸ ಕೇಳಿ ಕೂಲಿಯನ್ನು ‘ಸಂಪಾದಿಸುವ’ ಮನರೇಗಾ ರದ್ದು ಮಾಡಿರುವುದು ಬಡವರ ಸ್ವಾಭಿಮಾನಿ ಮಾರ್ಗಕ್ಕೆ ಕೊಡಲಿಪೆಟ್ಟಾಗಿದೆ.

ಗ್ರಾಮದಲ್ಲಿ ಸರಿಯಾದ ಕೂಲಿ ಸಿಗದಿದ್ದರೆ ಅದನ್ನು ನಿರಾಕರಿಸುವ, ಸರ್ಕಾರಿ ಕೆಲಸವನ್ನು ಹಕ್ಕಿನಿಂದ ಪಡೆಯುವ ಆಯ್ಕೆಯಿದ್ದ ಕಾಯ್ದೆಯನ್ನು ರದ್ದುಗೊಳಿಸಿ, ಹೊಸ ‘ವಿಬಿ–ಜಿ ರಾಮ್ ಜಿ’ ಮಸೂದೆಯನ್ನು ಸ್ಥಾಯಿ ಸಮಿತಿಗೆ ಕಳುಹಿಸದೆ, ವ್ಯಾಪಕ ಪರಾಮರ್ಶೆಯಿಲ್ಲದೇ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿನ ಚರ್ಚೆಯ ನಾಟಕದ ನಂತರ ಯಾವುದೇ ಬದಲಾವಣೆಯಿಲ್ಲದೆ ಅಂಗೀಕರಿಸಲಾಗಿದೆ.

ಹೊಸ ಮಸೂದೆಯಲ್ಲಿ ಅನೇಕ ತೊಡಕುಗಳಿವೆ. ಮಸೂದೆಯ ಐದನೇ ಅಂಶದಲ್ಲಿ ಕನಿಷ್ಠ 125 ದಿನಗಳ ಕೆಲಸವನ್ನು ಕೊಡಲಾಗುವುದೆಂದು ಹೇಳಿದ್ದರೂ, ಅದಕ್ಕೆ ಇನ್ನಷ್ಟು ‘ಕಿಂತು–ಪರಂತು’ಗಳನ್ನು ಜೋಡಿಸಿ ಕೇಂದ್ರ ಸರ್ಕಾರ ಸೂಚಿಸಿದ ಜಿಲ್ಲೆ ಮತ್ತು ಗ್ರಾಮಗಳಲ್ಲಿ, ಮೊದಲೇ ಗುರುತಿಸಿ ಅಂಗೀಕರಿಸಿರುವ ರಾಷ್ಟ್ರನಿರ್ಮಾಣ ಯೋಜನೆಗಳಲ್ಲಿ, ಕೃಷಿ ಕೆಲಸಗಳು ಹೆಚ್ಚಿರುವ 60 ದಿನಗಳನ್ನು ಹೊರತುಪಡಿಸಿ, ಒಟ್ಟಾರೆ ಬಜೆಟ್ಟಿನಲ್ಲಿ ನಿಗದಿಪಡಿಸಿದ ಮೊತ್ತ ಮೀರದಂತೆ ಕೆಲಸ ಕೊಡುವುದಾಗಿ ಮಸೂದೆ ಹೇಳುತ್ತದೆ. ಅಂದರೆ, ಇದು ಜನರ ಹಕ್ಕಲ್ಲ. ಕಾರ್ಯಕ್ರಮ ಸಾರ್ವತ್ರಿಕವೂ ಅಲ್ಲ. ದಿನಗಳನ್ನು ಸರ್ಕಾರ ಹೆಚ್ಚಿಸಿದಂತೆ ಕಂಡರೂ, ಅದನ್ನು ಜಾರಿಮಾಡುವುದಕ್ಕೆ ಯಾವುದೇ ಪೂರಕ ಸೂತ್ರಗಳನ್ನು ಸರ್ಕಾರ ನೀಡಿಲ್ಲ. ಮೇಲಾಗಿ ತನ್ನ ಪಾಲನ್ನು ಶೇ 90ರಿಂದ ಶೇ 60ಕ್ಕೆ ಇಳಿಸಿ, ರಾಜ್ಯಗಳ ಮೇಲೆ ಹೆಚ್ಚಿನ ಭಾರವನ್ನು ಮಸೂದೆ ಹೇರುತ್ತದೆ. ರಾಜ್ಯದ ಬಜೆಟ್ಟನ್ನು ಕೇಂದ್ರ ಸರ್ಕಾರ ನಿರ್ದೇಶಿಸುತ್ತಿರುವಂತೆ ಕಾಣುತ್ತದೆ. ಇದನ್ನು ಯಾವುದೇ ದೃಷ್ಟಿಯಿಂದ ಪ್ರಗತಿಪರವೆಂದು ಹೇಳಲು ಸಾಧ್ಯವಿಲ್ಲ. ಕಳೆದ ದಶಕದಿಂದ ಎಲ್ಲ ಅಧಿಕಾರವನ್ನು, ಆರ್ಥಿಕ ಸಂಪನ್ಮೂಲಗಳನ್ನು ಕೇಂದ್ರೀಕರಿಸುವ, ಖರ್ಚನ್ನು ವಿಕೇಂದ್ರೀಕರಿಸುವ, ವಿಕೇಂದ್ರೀಕೃತ ಅನುದಾನಗಳನ್ನು ಮನಸೋಚ್ಛೆ ನೀಡುವ, ಅದನ್ನು ತಡಮಾಡುವ ಪ್ರಕ್ರಿಯೆಯನ್ನು ಕಂಡಿದ್ದೇವೆ.

ನಮ್ಮ ಸಂವಿಧಾನ ಒಕ್ಕೂಟ ವ್ಯವಸ್ಥೆಯನ್ನು ಆದರ್ಶವಾಗಿ ಸ್ವೀಕರಿಸಿದ್ದರೂ, ಸಂವಿಧಾನ ರಚನೆಯ ಸಂದರ್ಭದ ಅನಿವಾರ್ಯತೆಗಳು ವ್ಯವಸ್ಥೆಯನ್ನು ‘ಕೇಂದ್ರ’ದತ್ತ ವಾಲುವಂತೆ ಮಾಡಿತ್ತು. ಸ್ವಾತಂತ್ರ್ಯಾನಂತರ ಚದುರಿ ಹೋಗಿದ್ದ ರಾಜಮನೆತನಗಳ ಆಳ್ವಿಕೆಯಲ್ಲಿದ್ದ ಪ್ರಾಂತ್ಯಗಳನ್ನು ಒಂದುಗೂಡಿಸುವ ಪ್ರಕ್ರಿಯೆಯಲ್ಲಿ ಹೊಸ ರಾಜ್ಯಗಳ ಸ್ಥಾಪನೆ, ಹಳೆ ಪ್ರಾಂತ್ಯಗಳ ಮರುವಿಂಗಡಣೆಯ ಅವಶ್ಯಕತೆಯಿತ್ತು. ಹೀಗಾಗಿ, ಕೇಂದ್ರ ಸರ್ಕಾರದ ಬಳಿ ಹೆಚ್ಚು ಅಧಿಕಾರವಿದ್ದದ್ದು ಸಹಜವೂ ಆಗಿತ್ತು. ಆದರೆ ಯೋಜನಾ ಆಯೋಗ, ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಮನ್ವಯದ ಮೂಲಕ, ಮತ್ತು ಸಂವಿಧಾನದಲ್ಲಿ ಗುರುತಿಸಿರುವ ಕೇಂದ್ರ ಮತ್ತು ರಾಜ್ಯಗಳ ಪರಿಧಿಯಲ್ಲಿ ಬರುವ ಅಧಿಕಾರ ಕ್ಷೇತ್ರದ ಪಟ್ಟಿಗಳನ್ನು ಗೌರವಿಸಿ ವಿಕೇಂದ್ರೀಕರಣದ ಆತ್ಮವನ್ನು ಜಾಗೃತವಾಗಿ ಇಡಲಾಗಿತ್ತು.

ಜಿಎಸ್ಟಿ ಕಾನೂನಿನಿಂದಾಗಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟಾಯಿತು. ವ್ಯಾಪಾರ ವ್ಯವಹಾರಗಳನ್ನು ಕೈಗೊಳ್ಳಲು, ಹೂಡಿಕೆ ಆಕರ್ಷಿಸಲು ಇದು ಅತ್ಯವಶ್ಯಕವಾದ ‘ಸುಧಾರಣೆ’ ಎಂದು ಪರಿಗಣಿಸಬಹುದು. ಆದರಿದು, ಧನ ಸಂಪನ್ಮೂಲ ಮತ್ತು ಅಧಿಕಾರವನ್ನು ರಾಜ್ಯಗಳು ಕೇಂದ್ರಕ್ಕೆ ಹಸ್ತಾಂತರ ಮಾಡುವ ಆತ್ಮಘಾತುಕ ಕ್ರಿಯೆಯಾಗಿದೆ. ‘ಒಂದು ರಾಷ್ಟ್ರ–ಒಂದು ತೆರಿಗೆ’ ಎನ್ನುತ್ತಾ, ಸ್ಥಳೀಯತೆಯನ್ನು ಗೌಣವಾಗಿಸಿ, ಎಲ್ಲವನ್ನೂ ಕೇಂದ್ರದ ಜೋಳಿಗೆಯಲ್ಲಿ ಹಾಕುವ ಪ್ರಕ್ರಿಯೆಗೆ ನಾಂದಿ ಹಾಡಿದೆ. ಈಗ ರಾಜ್ಯ ಸರ್ಕಾರಗಳು ತಮ್ಮ ಸ್ವಾಯತ್ತತೆ ಕಳೆದುಕೊಂಡು, ಕೇಂದ್ರ ಸರ್ಕಾರದ ಶಾಖೆಗಳಾಗಿ ಕೆಲಸ ಮಾಡಬೇಕಾಗಿದೆ.

ಮದ್ಯ, ಇಂಧನ, ಆಸ್ತಿ, ನೋಂದಣಿ ತೆರಿಗೆಗಳನ್ನು ಬಿಟ್ಟರೆ ಮಿಕ್ಕೆಲ್ಲ ತೆರಿಗೆಗಳ ದರವನ್ನು ನಿರ್ಧರಿಸುವ ಹಕ್ಕು ಜಿಎಸ್ಟಿ ಮಂಡಳಿಯ ಕೈಯಲ್ಲಿದೆ. ರಾಜ್ಯದ ಪಾಲಿನ ತೆರಿಗೆ ತಕ್ಷಣಕ್ಕೆ ಬಂದರೂ, ಕೇಂದ್ರದ ಪಾಲಿನಿಂದ ಬರಬೇಕಾದ ಮೊತ್ತ ಹಣಕಾಸು ಆಯೋಗದ ಅನುದಾನದ ಸೂತ್ರಾನುಸಾರ ಬರುತ್ತದೆ. ತೆರಿಗೆಯ ದರ ಬದಲಿಸಲು ರಾಜ್ಯಗಳಿಗೆ ಅಧಿಕಾರವಿಲ್ಲ. ಹೋಗಲಿ, ರಾಜ್ಯಗಳು ಸಾಲ ಪಡೆದು ಬೆಳವಣಿಗೆ ಮತ್ತು ವಿಕಾಸ ಕಾರ್ಯಗಳಲ್ಲಿ ಹೂಡಿಕೆ ಮಾಡಬಹುದೆಂದರೆ, ಅದಕ್ಕೂ ಮಿತಿಗಳಿವೆ. ಅದನ್ನು ಪಾಲಿಸದಿದ್ದರೆ ದಂಡಿಸುವ ಅಧಿಕಾರ ಕೇಂದ್ರಕ್ಕಿದೆ. ಆದರೆ, ಕೇಂದ್ರಕ್ಕೆ ಈ ಯಾವುದೂ ಅನ್ವಯಿಸುವುದಿಲ್ಲ. ಹೆಚ್ಚಿನ ಸಾಲ ಪಡೆದು ಆರ್ಥಿಕ ಖೋತಾವನ್ನು ಹೆಚ್ಚಿಸಬೇಕೆಂದರೆ, ಕೇಂದ್ರ ಸರ್ಕಾರ ಸುಲಭವಾಗಿ ಕಾನೂನನ್ನು ತಿದ್ದಿ ಬೇಜವಾಬ್ದಾರಿಯಾಗಿ ವರ್ತಿಸಬಹುದು. ಜಿಎಸ್ಟಿಯಿಂದ ಪ್ರಾರಂಭವಾದ ಕೇಂದ್ರೀಕರಣ ಈಗ ಸಾಕಷ್ಟು ವಿಸ್ತಾರಗೊಂಡಿದೆ.

ಮೊದಲಿಗೆ, ರಾಜ್ಯಗಳ ಪಟ್ಟಿಯಲ್ಲಿರುವ ಕೃಷಿಗೆ ಅನ್ವಯಿಸುವ ಕಾನೂನುಗಳನ್ನು ವ್ಯಾಪಾರದ ಛದ್ಮವೇಷ ಹೊದಿಸಿ ಕೇಂದ್ರವು ತನ್ನ ಅಧಿಕಾರದ ವ್ಯಾಪ್ತಿ ಹಿಗ್ಗಿಸಲು ಪ್ರಯತ್ನಿಸಿತ್ತು. ಸಹಕಾರವೂ ರಾಜ್ಯಗಳಿಗೆ ಮೀಸಲಿಟ್ಟಿರುವ ವಿಷಯ. ಆದರೆ, ಈಗ ಗೃಹಮಂತ್ರಿಗಳ ವ್ಯಾಪ್ತಿಗೆ ಬರುವ ಹೊಸ ಸಹಕಾರ ಸಚಿವಾಲಯವನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ರಾಜ್ಯದ ವ್ಯಾಪ್ತಿಯಲ್ಲಿರುವ ಅಧಿಕಾರ ಕ್ಷೇತ್ರದಲ್ಲಿ ಕೇಂದ್ರದ ಪರೋಕ್ಷ ಕೈವಾಡ ಆರಂಭವಾಗಿದೆ. ಕಾರ್ಮಿಕ, ಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲೂ ಕೇಂದ್ರೀಕರಣ ಆಗುತ್ತಿರುವುದಲ್ಲದೇ, ಎಲ್ಲಕ್ಕೂ ಪ್ರಧಾನಮಂತ್ರಿ ಎನ್ನುವ ಉಪಸರ್ಗವನ್ನು ಜೋಡಿಸಿ ಕೈವಶ ಮಾಡಿಕೊಳ್ಳಲಾಗುತ್ತಿದೆ.

‘ವಿಬಿ–ಜಿ ರಾಮ್ ಜಿ’ ಮಸೂದೆಯೂ ಕೇಂದ್ರೀಕರಣದತ್ತ ಪಯಣಿಸಿದೆ. ಹೆಸರು ಬದಲಾಯಿಸಿ ಗಮನವನ್ನು ಬೇರೆಡೆ ಸೆಳೆವ, ಡಬ್ಬಲ್ ಎಂಜಿನ್ ಅನ್ನುತ್ತಾ ಕೇಂದ್ರದ ಕೃಪೆಯಲ್ಲಿರುವ ರಾಜ್ಯಗಳಿಗೆ ಮಾತ್ರ ಸಂಪನ್ಮೂಲಗಳನ್ನು ಕೊಡುವ, ಎಲ್ಲವನ್ನೂ ‘ಒಂದು ರಾಷ್ಟ್ರ’ದ ಕೇಂದ್ರೀಕರಣದ ಏಕತಾನತೆಯತ್ತ ಒಯ್ಯುತ್ತಿರುವುದನ್ನು ರಾಜ್ಯಗಳು ಗಮನಿಸಿ ಎಚ್ಚತ್ತುಕೊಳ್ಳಬೇಕು.

ರಾಜ್ಯಗಳ ಪ್ರಗತಿ, ಸ್ಥಳೀಯ ಸಂದರ್ಭಕ್ಕನುಸಾರವಾಗಿ ಮುಂದುವರಿಯಲು ವಿಕೇಂದ್ರೀಕರಣವು ಅತ್ಯಗತ್ಯವಾಗಿದೆ. ತೆರಿಗೆಯಾಗಲಿ, ಮಾಹಿತಿಯಾಗಲಿ, ಎಲ್ಲವನ್ನೂ ಬಕಾಸುರನಂತೆ ಕಬಳಿಸುವ ಕೇಂದ್ರ, ಹಂಚುವ ವಿಷಯಕ್ಕೆ ಬಂದಾಗ ಮಾಹಿತಿಯನ್ನೂ ಹಂಚದೆ ಕಾಪಿಟ್ಟುಕೊಳ್ಳುವ ಜುಗ್ಗತನವನ್ನು ತೋರಿಸುತ್ತದೆ, ಎಲ್ಲವೂ ಕೇಂದ್ರ ಸರ್ಕಾರದ ಪ್ರಚಾರಕ್ಕೆ ಮಾತ್ರ ಮುಡಿಪಾಗಿವೆ.

‘ವಿಬಿ–ಜಿ ರಾಮ್ ಜಿ’ ಮಸೂದೆ ಒಂದೊಂದೇ ಇಟ್ಟಿಗೆ ಜೋಡಿಸಿ ಮುತುವರ್ಜಿಯಿಂದ ಕಟ್ಟಿದ್ದ ಸಾಮಾಜಿಕ ಭದ್ರತೆಯ ಕಟ್ಟಡವನ್ನು, ಒಂದೇ ಏಟಿಗೆ ಬುಲ್ಡೋಜರ್ ಮೂಲಕ ನೆಲಸಮ ಮಾಡುತ್ತದೆ. ನಾವು ಮಸೂದೆಯನ್ನು ವಿರೋಧಿಸಬೇಕಾದ್ದು ಕನಿಷ್ಠ ಅಗತ್ಯ.

ವಿಕೇಂದ್ರೀಕರಣದ ವಿಚಾರದಲ್ಲಿ ಏನಾಗುತ್ತಿದೆ ಎನ್ನುವುದನ್ನೂ ಗಮನಿಸಬೇಕು. ಸಂವಿಧಾನದ ತಿದ್ದುಪಡಿಗೆ ಮುಂದಾಗದೆ, ಬಿಡಿ ಕಾಯ್ದೆಗಳನ್ನು ತಿದ್ದುತ್ತಾ, ಹೆಸರು ಬದಲಾಯಿಸುತ್ತಾ, ನಿರಂಕುಶತೆಯತ್ತ ಸಾಗುತ್ತಿರುವ ಪ್ರವೃತ್ತಿಯನ್ನು ನಾವು ಅರ್ಥಮಾಡಿಕೊಳ್ಳಬೇಕು.

ಐದು ವರ್ಷಗಳ ಕಾಲ ವರ್ಷಕ್ಕೆ ನೂರು ದಿನ ಕೆಲಸ ಕೊಡುತ್ತಿದ್ದ ಸರ್ಕಾರ, ಈಗ ಚುನಾವಣೆಯ ಮುನ್ನ ಖಾತೆಗೆ ಹತ್ತು ಸಾವಿರ ರೂಪಾಯಿ ಹಾಕಿ ಓಟು ಗಿಟ್ಟಿಸುವ ಕುಯುಕ್ತಿಯನ್ನು ಅನುಸರಿಸುತ್ತಿದೆ. ಜಿಎಸ್ಟಿ ಕಾಯ್ದೆ ವಿರುದ್ಧ ಹೋರಾಟ ರೂಪಿಸಿ ರಾಜ್ಯಗಳು ತಮ್ಮ ಆರ್ಥಿಕ ಸ್ವಾಯತ್ತತೆಯನ್ನು ಮರಳಿ ಪಡೆಯುವ ಹಾದಿಯಲ್ಲಿ ಹೆಜ್ಜೆಯಿಟ್ಟು ಸಮಸ್ಯೆಯ ಮರ್ಮವನ್ನು ತಲಪಬೇಕು. ಇಲ್ಲವಾದರೆ, ಅಂಚನ್ನು ಮೆಲ್ಲುತ್ತಾ ಬರುತ್ತಿರುವ ಕೇಂದ್ರದ ತಂತ್ರಗಳು ಒಂದು ದಿನ ತಿರುಳನ್ನೇ ಇಲ್ಲವಾಗಿಸಬಹುದು. ‘ವಿಬಿ–ಜಿ ರಾಮ್ ಜಿ’ ಒಂದು ಎಚ್ಚರಿಕೆಯ ಗಂಟೆ. ಈಗಲೇ ಎಚ್ಚತ್ತುಕೊಳ್ಳುವುದು ಒಳ್ಳೆಯದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.