ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Doctor's Day| ತಾಯಿ ಉಳಿಸಿ, ಮಗುವನ್ನು ಮಡಿಲು ಸೇರಿಸಿದ ತೃಪ್ತಿ: ಡಾ. ಪಲ್ಲವಿ

Published 30 ಜೂನ್ 2023, 23:34 IST
Last Updated 30 ಜೂನ್ 2023, 23:34 IST
ಅಕ್ಷರ ಗಾತ್ರ

ಡಾ.ಪಲ್ಲವಿ ವಿ.ಆರ್., ಸ್ತ್ರೀ ಗಂಥಿ ವಿಭಾಗದ ಮುಖ್ಯಸ್ಥೆ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಬರುವ ಪ್ರತಿ ಕ್ಯಾನ್ಸರ್ ರೋಗಿಯದ್ದೂ ಒಂದೊಂದು ಕಥೆ ಇರುತ್ತದೆ. ಹೆಚ್ಚಿನವರು ಕ್ಯಾನ್ಸರ್ ಉಲ್ಬಣಗೊಂಡ ಬಳಿಕ ಬರುವುದರಿಂದ ಚಿಕಿತ್ಸೆ ಸವಾಲಿನಿಂದಲೇ ಕೂಡಿರುತ್ತದೆ. ನಾವು ಭಾವುಕರಾದಲ್ಲಿ ರೋಗಿಗಳು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಾರೆ. ಹಾಗಾಗಿ, ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುತ್ತೇವೆ. ಆದರೆ, ಇತ್ತೀಚೆಗೆ ದಾಖಲಾಗಿದ್ದ 22 ವರ್ಷದ ಮಹಿಳೆಯೊಬ್ಬಳ ಪ್ರಕರಣ ವೃತ್ತಿ ಜೀವನದಲ್ಲಿ ಮೊದಲ ಬಾರಿ ನನ್ನನ್ನು ಭಾವುಕಗೊಳಿಸಿತು. ಇದಕ್ಕೆ ಕಾರಣ, ಕ್ಯಾನ್ಸರ್ ಪೀಡಿತ ಆ ಮಹಿಳೆಗೆ ಎರಡು ವಾರಗಳ ನವಜಾತ ಶಿಶುವಿತ್ತು. ತಾಯಿ ಹೊರತುಪಡಿಸಿದರೆ ಆ ಮಹಿಳೆ ಜತೆಗೆ ಯಾರೂ ಇರಲಿಲ್ಲ. ಚಿಕಿತ್ಸೆಗೆ ಕೈಯಲ್ಲಿ ಹಣವೂ ಇರಲಿಲ್ಲ. 

ಮಂಡ್ಯದ ಕೋಣನಹಳ್ಳಿಯ ಮಹಿಳೆಗೆ ಅವಧಿಪೂರ್ಣ ಮಗು ಜನಿಸಿತ್ತು. ಅವಳಿಗೆ ಸಿಸೇರಿಯನ್ ಮಾಡಲಾಗಿತ್ತು. ಆ ವೇಳೆ ಹೊಟ್ಟೆಯಲ್ಲಿ ಗಡ್ಡೆ ಇರುವುದನ್ನು ಗುರುತಿಸಿದ ಸ್ಥಳೀಯ ವೈದ್ಯರು, ನಮ್ಮ ಸಂಸ್ಥೆಗೆ ಶಿಫಾರಸು ಮಾಡಿದ್ದರು. ಅವಳ ಸ್ಥಿತಿ ಕ್ಲಿಷ್ಟಕರವಾಗಿತ್ತು. ಅವಳಿಗೆ ಶಸ್ತ್ರಚಿಕಿತ್ಸೆ ಮಾಡುವ ಸ್ಥಿತಿಯೂ ಇರಲಿಲ್ಲ. ಗಡ್ಡೆ ದೊಡ್ಡದಾಗಿ ಬೆಳೆಯುತ್ತಿದ್ದುದರಿಂದ ಕಿಮೋಥೆರಪಿ ಮಾಡುವಂತೆಯೂ ಇರಲಿಲ್ಲ. ರೋಗಿಗೆ ಹೆಚ್ಚು ಕಡಿಮೆ ಆದರೆ, ಮಗುವಿನ ಕಥೆಯೇನು ಎಂಬ ಕಳವಳವಿತ್ತು. ಉಳಿಸಿಕೊಡುವಂತೆ ಅವಳ ತಾಯಿ ನಿತ್ಯ ಕಣ್ಣೀರು ಹಾಕುತ್ತಿದ್ದರು. ಅಂತಿಮವಾಗಿ ರಿಸ್ಕ್ ತೆಗೆದುಕೊಂಡು, ಅರಿವಳಿಕೆ ತಜ್ಞರ ನೆರವಿನಿಂದ ಶಸ್ತ್ರಚಿಕಿತ್ಸೆ ಮಾಡಿದೆವು. ಈಗ ಮಹಿಳೆ ಚೇತರಿಸಿಕೊಂಡಿದ್ದಾಳೆ. ಈ ಪ್ರಕರಣ ನನ್ನ ವೃತ್ತಿ ಜೀವನದಲ್ಲಿ ವಿಶೇಷ ಸ್ಥಾನ ಪಡೆದಿದೆ. ಈಗ ತಾಯಿ–ಮಗುವನ್ನು ನೋಡಿದರೆ ಖುಷಿ ಆಗುತ್ತದೆ. 

ಈ ಪ್ರಕರಣದಲ್ಲಿ ಮಹಿಳೆಗೆ ಸರ್ಕಾರಿ ಯೋಜನೆಯಡಿ ಉಚಿತ ಚಿಕಿತ್ಸೆ ಒದಗಿಸಲು ಬಿಪಿಎಲ್ ಕಾರ್ಡ್ ಸಹ ಇರಲಿಲ್ಲ. ಇದರಿಂದ ಆಸ್ಪತ್ರೆ, ಸಾಮಾಜಿಕ ಕಾರ್ಯಕರ್ತರ ನೆರವಿನಿಂದ ಚಿಕಿತ್ಸೆಯ ಅಷ್ಟೂ ವೆಚ್ಚವನ್ನು ಭರಿಸಲಾಯಿತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT