ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ನಾಡುಳಿಯುವ ದಾರಿ ಕಾಡಿನಲ್ಲಿದೆ

ಮನವು ವನವಾದಾಗ ಹುಟ್ಟುವ ವಿಸ್ಮಯದ ಅರಿವು ಅನುಭವಿಸುವೆಡೆಗೆ ನಮ್ಮ ಪಯಣವಿರಲಿ
Published 25 ಸೆಪ್ಟೆಂಬರ್ 2023, 0:20 IST
Last Updated 25 ಸೆಪ್ಟೆಂಬರ್ 2023, 0:20 IST
ಅಕ್ಷರ ಗಾತ್ರ

‘ನಿತ್ಯ ಹರಿದ್ವರ್ಣ, ಅರೆ ನಿತ್ಯಹರಿದ್ವರ್ಣ, ಪೂರ್ತಿ ಎಲೆ ಉದುರಿಸುವ ಮರಗಳು ಹೀಗೆ ನಾನು ಗಿಡಗಳನ್ನು ಪ್ರತ್ಯೇಕಿಸಿ ನೆಡಿಸಿದ್ದೆ. ಆದರೆ ಬೆಳಿತಾ ಬೆಳಿತಾ ಅವು ಇಂಟರ್‌ಕಾಸ್ಟ್ ಮದುವೆ ಮಾಡಿಕೊಂಡು ಅಲ್ಲಿಯದು ಇಲ್ಲಿ, ಇಲ್ಲಿಯದು ಅಲ್ಲಿ ಒಂದರೊಳಗೊಂದು ಬೆರೆತು ಹುಟ್ಟಿ ದಟ್ಟವಾದುವು’ ಎಂದು ತಾವು ಹುಟ್ಟುಹಾಕಿದ ಕಾಡನ್ನು ತೋರಿಸುತ್ತಾ ‘ಹಸಿರುಹಾದಿ’ಯ ತಜ್ಞ ಅ.ನ.ಯಲ್ಲಪ್ಪ ರೆಡ್ಡಿಯವರು ವಿವರಿಸುತ್ತಿದ್ದರು.

ಬೆರೆತು ಬಾಳುವುದೇ ಪ್ರಕೃತಿ ಎನ್ನುವುದನ್ನು ಅವು ಸಾಬೀತು ಮಾಡಿದ್ದುವು. ಆದರೆ ಹುಲುಮಾನವರಾದ ನಾವು ಎಲ್ಲವನ್ನೂ ಬಹಳ ಶಿಸ್ತಾಗಿ ಪ್ರತ್ಯೇಕಿಸಿ ಬೇಲಿ ಹಾಕಿ, ಕಾಂಪೌಂಡ್ ಕಟ್ಟಿ ಕುಬ್ಜಗೊಳಿಸಿ ‘ಚಂದ’ ನೋಡುತ್ತಿರುತ್ತೇವೆ. ಬದುಕಿನ ಪ್ರತಿ ಹಂತದಲ್ಲೂ ಇಂತಹ ಹತ್ತು ಹಲವು ಗಡಿಗೆರೆಗಳನ್ನು ಹಾಕುವುದಕ್ಕೆ ಮತ್ತು ಅವುಗಳನ್ನು ಕಾಪಿಡುವುದಕ್ಕೇ ನಮ್ಮ ಅರೆವಾಸಿ ಚೈತನ್ಯವನ್ನು ವ್ಯಯ ಮಾಡುತ್ತಾ ಆಯಾಸಗೊಳ್ಳುತ್ತಿದ್ದೇವೆ. ‘ಗಂಧರ್ವರ ಸೀಮೆಯಾಯಿತು ಕಾಡಿನಾ ನಾಡು’ ಎನ್ನುವ ಬೇಂದ್ರೆಯವರ ಸಾಲಿನ ಅರ್ಥ ಇನ್ನೂ ನಮಗೆ ಗೊತ್ತೇ ಆಗಿಲ್ಲ. ಯಾಕೆಂದರೆ ನಾಡೊಳಗೆ ಮತ್ತು ನಮ್ಮೊಳಗೆ ನಾವು ಕಾಡನ್ನು ಕಾಪಿಟ್ಟುಕೊಂಡಿಲ್ಲ.

ದಿನದಿನವೂ ವಿಸ್ತರಿಸಿಕೊಳ್ಳುತ್ತಿರುವ, ನಮ್ಮ ಭೌತಿಕ ಪ್ರಪಂಚದ ಪ್ರಪಾತ ಬಹಳ ಆಳವಾದುದು ಮಾತ್ರವಲ್ಲ, ವಿಚಿತ್ರವಾದುದೂ ಹೌದು. ಯಾಕೆಂದರೆ, ಬರೆಯುತ್ತಿರುವ ನನ್ನನ್ನೂ ಸೇರಿಸಿಕೊಂಡು ನಾವೆಲ್ಲರೂ ಈ ಪ್ರಪಾತದೊಳಗೇ ಮಹಲು ಕಟ್ಟಲು ಹವಣಿಸುತ್ತಿರುವಂತೆ ನನಗೆ ಭಾಸವಾಗುತ್ತದೆ. ಹೂಡಿಕೆಯ ಹೆಸರಿನಲ್ಲಿ, ತಜ್ಞರ ವೇಷದಲ್ಲಿ, ಅಧಿಕಾರಿಗಳು, ನೌಕರರು, ಸೇವಕರ ಮುಖವಾಡದಲ್ಲಿ, ಧಾರ್ಮಿಕತೆಯ ಸೋಗಿನಲ್ಲಿ, ರಾಜಕಾರಣದ ಅಂಗಳದಲ್ಲಿ, ಎಲ್ಲೆಲ್ಲೂ ಇಂದು ಮರಗಳ್ಳರು, ಖನಿಜಗಳ್ಳರು, ಭೂಗಳ್ಳರು, ಜೂಜುಕೋರರು, ಗಾಂಜಾ ವಹಿವಾಟುದಾರರು, ದರೋಡೆಕೋರರು, ಕಳ್ಳರು, ಸುಳ್ಳರು ಎಲ್ಲರೂ ಅಧಿಕೃತತೆಯ ಮನ್ನಣೆ ಪಡೆಯುತ್ತಿದ್ದಾರೆ. ಇವರನ್ನೆಲ್ಲಾ ರಕ್ಷಿಸುವ ಅಭೇದ್ಯ, ಅನೂಹ್ಯ ಕೋಟೆಯಲ್ಲಿ, ಇದ್ಯಾವುದರ ಪರಿವೆ ಇಲ್ಲದೆ, ‘ಸುಶಿಕ್ಷಿತ, ಮಧ್ಯಮ ವರ್ಗದ ಮನಃಸ್ಥಿತಿ’ಯಲ್ಲಿ ಸುಖದ ಮುಸುಕನ್ನು ನಾವು ಹುಡುಕುತ್ತಿದ್ದೇವೆ. ಈ ‘ಜುಗಾರಿ ಕ್ರಾಸ್’ನಲ್ಲಿ ಒಂದೆಡೆ, ಕಿರಿಯರು, ಹಿರಿಯರು ಎನ್ನದೆ ಆನ್‍ಲೈನ್ ಬುಕಿಂಗ್ ಮಾಡುವ ಗ್ರಾಹಕರಾಗುತ್ತಾ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಿಸುವ ಕೊಡುಗೆಯಲ್ಲಿ ಪುಳಕಿತರಾಗುತ್ತಿರುತ್ತೇವೆ. ಇನ್ನೊಂದೆಡೆ, ಅಧಿಕಾರದ ಸವಾರಿ ಮಾಡುವುದು ಹೇಗೆ ಎಂದು ಅಸ್ವಸ್ಥರಾಗುತ್ತಿರುತ್ತೇವೆ.

ಬಹಳ ತಮಾಷೆಯೆಂದರೆ, ಇತ್ತೀಚೆಗೆ ಕೆಲವರು, ಕೋಟು ಧರಿಸುವುದೆಂದರೆ ಕಿರೀಟ ಧರಿಸಿದಂತೆ ಎಂದು ಭಾವಿಸತೊಡಗಿರುವುದು. ಯಾವುದೇ ಒಂದು ಹುದ್ದೆಗೆ ಅದು ಯಾವುದೋ ರೂಪದಲ್ಲಿ ಏರಿದವರು ತಕ್ಷಣವೇ ಕೋಟು ಧರಿಸತೊಡಗುತ್ತಾರೆ. ಹೀಗೇ ಇತ್ತೀಚೆಗೆ ಒಬ್ಬರು ಕೋಟು ಧರಿಸಿ ಪ್ರತ್ಯಕ್ಷರಾದರು. ಅವರು ಯಾರೆಂದು ತಕ್ಷಣಕ್ಕೆ ಯಾರಿಗೂ ತಿಳಿಯಲಿಲ್ಲ. ಆದರೆ ತಮ್ಮ ಕೋಟಿಗೆ ಬೆಲೆ ಕೊಡದೆ, ಎದ್ದು ನಿಲ್ಲದೆ ಇರುವವರನ್ನು ಕಂಡು ಆ ವ್ಯಕ್ತಿ ಸಿಡಿಮಿಡಿಗೊಂಡಿತು. ಯಾವುದೋ ನೆಪದಲ್ಲಿ ಹಿಂದೆ ಮುಂದೆ ವಿಚಾರಿಸದೆ ‘ನೋಟಿಸ್ ಜಾರಿ ಮಾಡುತ್ತೇನೆ’ ಎಂದು ಕಿರುಚಾಡಿತು. ತಮ್ಮ ಹುದ್ದೆಯನ್ನು ‘ಅಧಿಕಾರ’ ಎಂದು ತಪ್ಪಾಗಿ ವ್ಯಾಖ್ಯಾನಿಸಿಕೊಂಡು ಬಳಲುವ, ಬಳಲಿಸುವ ಇಂತಹವರ ಬಗೆಗೆ ಅಯ್ಯೋ ಎಂದು ಕನಿಕರಿಸಬೇಕೆನಿಸುತ್ತದೆ. ನಮ್ಮೊಳಗಿನ ಕಾಡು ನಾಶವಾಗಿ ಬರಡಾಗುತ್ತಿರುವುದರ ಲಕ್ಷಣಗಳಿವು. ಶ್ರೇಣೀಕರಣದ ವ್ಯಾಧಿ ನರನಾಡಿಯೊಳಗೆಲ್ಲಾ ಹಬ್ಬಿ ಹರಡಿ, ನಮ್ಮೆದುರು ಇರುವವರೆಲ್ಲಾ ಮನುಷ್ಯರಾಗಿ ಕಾಣಿಸದೆ ಅಧೀನ ಸ್ಥಿತಿಯಲ್ಲಿ ಇರುವವರಾಗಿ ಕಾಣಿಸುವ ಬಡತನವಿದು.

ಇತ್ತೀಚೆಗೆ ಕೋಲ್ಕತ್ತದ ಸಾಮಾನ್ಯ ರೈಲಿನಲ್ಲಿ ಒಂದು ದೃಶ್ಯ ನೋಡಿದೆ. ಬಹಳ ಚೆನ್ನಾಗಿ ಏಕತಾರಿ ನುಡಿಸುತ್ತಾ, ಹಾಡುತ್ತಾ ಬಂದ ವ್ಯಕ್ತಿಯ ಜೊತೆಗೆ ಪ್ರಯಾಣಿಕರೂ ಕೆಲವರು ತಮ್ಮ ಸ್ಟೇಟಸ್ ಮರೆತು ಚಪ್ಪಾಳೆ ಹಾಕುತ್ತಾ, ಗುನುಗುತ್ತಾ, ಸಂತೋಷ ಪಡುತ್ತಾ ಕೊನೆಗೆ ಅಷ್ಟಿಷ್ಟು ಹಣ ಕೊಡುವವರು ಕೊಟ್ಟರು. ಆತನನ್ನು ಭಿಕ್ಷುಕನೆನಿಸದೆ ತಮ್ಮೊಳಗಿನ ಒಬ್ಬ ಎಂಬಂತೆ ಪರಿಗಣಿಸಿದ್ದು ನನಗೆ ಅಪೂರ್ವವೆನಿಸಿತು. ಇಂತಹ ಭಾವಗಳನ್ನು ಬದುಕಿಸಿಕೊಳ್ಳುವುದು ಎಷ್ಟು ಸುಖಕರವಾದುದು.

ನಮ್ಮೊಳಗಿನ ವ್ಯಾಧಿಗಳನ್ನು ಗುಣಮುಖಗೊಳಿಸುವಲ್ಲಿ ಹೀಗೆ ಬೆರೆಯುವಿಕೆಯ ಬದುಕು ಮಾತ್ರವಲ್ಲ, ಕಿರಿದರಲ್ಲೂ ಹಿರಿದನ್ನು ನೋಡುವ ಕಣ್ಣು ಹೊಂದಿರಬೇಕು. ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೊ’ ಕಾದಂಬರಿಯಲ್ಲಿ ಒಂದು ಮಾತು ಬರುತ್ತದೆ- ‘ಕ್ವಚಿತ್ತಾಗಿ ಕೇಳಿದ ಅವಳ ಪ್ರಶ್ನೆ ತಕ್ಷಣವೇ ನನ್ನ ಮನಸ್ಸಿನ ನೂರೆಂಟು ವ್ಯಾಧಿಗಳನ್ನು ಎತ್ತಿ ತೋರಿಸಿತು. ಎಂಥ ತಪ್ಪಾದ ಆಲೋಚನಾ ಲಹರಿಯಲ್ಲಿ, ತರ್ಕ ಸರಣಿಯಲ್ಲಿ ಸಿಕ್ಕಿಕೊಂಡಿದ್ದೇವೆ ಎಂದೆನಿಸಿತು. ಆ ಕೂಡಲೇ ನನ್ನ ಮನಸ್ಸು ಹೊಸ ತರ್ಕಕ್ಕೆ, ಹೊಸ ಸರಳತೆಗೆ, ಹೊಸ ವಿಸ್ತಾರಕ್ಕೆ ಪರಿವರ್ತನೆಗೊಂಡಿತು. ನನಗೆ ಸಮಸ್ಯೆಗಳು ಸ್ಪಷ್ಟವಾಗಿ, ಸರಳವಾಗಿ ಕಾಣತೊಡಗಿದವು’.

ಕರ್ವಾಲೊ ಮೂಲಕ ಪರಿಚಯವಾದ, ನೋಡಲು ಗಮಾರನಂತಿರುವ ಮಂದಣ್ಣ ಕಳ್ಳಬಟ್ಟಿ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದು, ಅವನನ್ನು ಬಚಾವ್ ಮಾಡಲು ತಾನು ಮತ್ತು ಕರ್ವಾಲೊ ಕೋರ್ಟಿನಲ್ಲಿ ಅವನ ಪರವಾಗಿ ಸಾಕ್ಷ್ಯ ಹೇಳಬೇಕಾಗುತ್ತದೆ ಎಂಬ ವಿಚಾರದಿಂದ, ತಮ್ಮಂತಹವರು ಇಂತಹ ಪ್ರಕರಣದಲ್ಲಿ ಇವನಿಗೆ ಸಾಕ್ಷ್ಯ ಹೇಳುವುದೇ? ಕರ್ವಾಲೊ ಇಂತಹವನನ್ನು ನೆಚ್ಚಿಕೊಂಡಿದ್ದಾರಲ್ಲ ಅವರಿಗೆ ಬುದ್ಧಿ ಇದೆಯೇ? ತಾನೆಲ್ಲೋ ಯಾವುದೋ ಚಕ್ರವ್ಯೂಹದಲ್ಲಿ ಸಿಲುಕುತ್ತಿದ್ದೇನೆ, ಈ ಊರನ್ನೇ ಬಿಟ್ಟು ಹೊರಟುಬಿಡಬೇಕು ಎಂದೆಲ್ಲಾ ನಿರೂಪಕ ಚಡಪಡಿಸುತ್ತಿದ್ದಾಗ, ಹೆಂಡತಿ, ‘ಮಂದಣ್ಣ ನಿರಪರಾಧಿಯಾಗಿದ್ದರೆ ನೀವಾಗಲೀ ಕರ್ವಾಲೊ ಅವರಾಗಲೀ ಯಾಕೆ ಕೋರ್ಟಿಗೆ ಹೋಗಿ ಸಾಕ್ಷ್ಯ ಹೇಳಬಾರದು. ಅದರಲ್ಲೇನು ಅವಮಾನ?’ ಎಂದು ಕೇಳುತ್ತಾಳೆ. ಅತ್ಯಂತ ಸಾಮಾನ್ಯ ಎನಿಸಬಹುದಾದ ಈ ಪ್ರಶ್ನೆಯೊಳಗಿರುವ ಅಗಾಧತೆ ಅವರಿಗೆ ಧಿಗ್ಗನೆ ಬೆಳಕಿನಂತೆ ಗೋಚರಿಸುತ್ತದೆ. ಬಹುಶಃ ಇದು ತೇಜಸ್ವಿಯವರ ಬದುಕು ಮತ್ತು ಬರಹದ ಪಯಣದ ದಿಕ್ಕನ್ನೇ ಬದಲಿಸಿದ ಮಾತುಗಳಾಗಿರಬೇಕು ಎನಿಸುತ್ತದೆ. ಈ ಬೆಳಕೇ ನಮಗೀಗ ಪ್ರತಿಕ್ಷಣ ಬೇಕಿರುವುದು. ಆದರೆ ನಮ್ಮ ಮನಸ್ಸುಗಳು ಹಲವು ರೀತಿಯ ಶ್ರೇಣೀಕರಣದ ಜಿಗ್ಗುಗಳಲ್ಲಿ ತೊಳಲಾಡುತ್ತಿವೆ. ಅದನ್ನೇ ಹಲವು ರೀತಿಯ ಅಹಂಗಳನ್ನಾಗಿಸಿಕೊಂಡು ಮೆರೆದಾಡುವುದರಲ್ಲಿ ಮುಳುಗೇಳುತ್ತಿವೆ.

ಹೆಂಡತಿಯ ಮಾತು ಎಂಬ ಅಲಕ್ಷ್ಯವೆಂತೋ ಅಂತೆಯೇ ಮಂದಣ್ಣನಂತಹ ಹಳ್ಳಿ ಗಮಾರರಿಗೇನು ಗೊತ್ತಿರುತ್ತದೆ ಎಂಬ ನಿರ್ಲಕ್ಷ್ಯವೂ ನಮ್ಮ ವ್ಯಾಧಿಗಳ ಮುಂದುವರಿದ ರೂಪವೇ ಆಗಿರುತ್ತದೆ. ತೇಜಸ್ವಿಯವರ ಎಲ್ಲ ಕಾದಂಬರಿಗಳ ಪಯಣವೂ ಕಾಡಿನೆಡೆಗೇ ಇರುವುದು ಈ ವ್ಯಾಧಿಯ ನಿವಾರಣೆಯ ದಾರಿಯಾಗಿಯೂ ನಮಗೆ ಕಾಣಬೇಕಿದೆ.

ಕಾಡೆಂದರೆ ಸೌಂದರ್ಯ, ಆಸರೆ, ಪರಸ್ಪರತೆ, ಮೌನ, ಉಲಿ, ಗರ್ಜನೆ, ಸಹಬಾಳ್ವೆ ಮತ್ತು ಅಂತಿಮವಾಗಿ ಸಮೃದ್ಧಿ. ಇವೆಲ್ಲವನ್ನೂ ಅಲ್ಲೇ ಇಟ್ಟು, ಬಿಟ್ಟು ಅದರೊಂದಿಗೆ ಒಡನಾಟ ಸಾಧಿಸುವುದೂ ಸಮೃದ್ಧಿಯೇ. ಆದರೆ ಇದಕ್ಕೆ ವಿರುದ್ಧ ದಾರಿಯಲ್ಲಿ ನಾಡುಗಳು ಮುನ್ನಡೆಯುತ್ತಿವೆ. ಇದರಿಂದ ಹುಟ್ಟುವ ಜಡತ್ವದ ಪರಿಣಾಮ ಏನಾಗಿರುತ್ತದೆ ಎಂಬುದರ ಸೂಚನೆಯನ್ನೂ ತೇಜಸ್ವಿಯವರು ನಮಗೀಗಾಗಲೇ ನೀಡಿ ಹೋಗಿದ್ದಾರೆ (ತೇಜಸ್ವಿಯವರು ಬದುಕಿದ್ದಿದ್ದರೆ ಇದೇ 8ರಂದು ಅವರಿಗೆ 85 ವರ್ಷ ತುಂಬಿರುತ್ತಿತ್ತು). ಉತ್ಸಾಹದ ಕುದಿಯಲ್ಲಿರುವ ಯುವ ಚೈತನ್ಯಕ್ಕೆ ಸಾಧಿಸುವ ಹಂಬಲವಿದ್ದರೂ ಅದಕ್ಕೊಂದು ದಿಕ್ಕು ದೆಸೆ ಇರುವುದಿಲ್ಲ. ‘ಪಾಪ ನಮ್ಮ ಕ್ರಾಂತಿಕಾರಿಗಳಿಗೆ ನಿಜವಾದ ಪ್ರೀತಿಯೋ! ಖೋಟಾ ಪ್ರೀತಿಯೋ ಅಂತೂ ಒಟ್ಟಿನಲ್ಲಿ ಅದು ತುಂಬಿ ತುಳುಕುತಿತ್ತು. ಆದರೆ ಅದಕ್ಕೆ ಅಡ್ಡಿಯಾಗಿರುವವರು ನಮ್ಮ ದೇಶದ ಸಮಾಜ, ರಾಜಕಾರಣಿಗಳು, ಅಧಿಕಾರಶಾಹಿ, ಸರ್ಕಾರ ಇತ್ಯಾದಿಗಳೆಲ್ಲಾ ಎಂಬುದು ಗೊತ್ತಿರಲಿಲ್ಲ... ತಾವು ಯಾರ, ಯಾವುದರ ವಿರುದ್ಧ ಹೋರಾಡಬೇಕು ಎಂಬುದೂ ಗೊತ್ತಿರಲಿಲ್ಲ. ‘ಪೂರ್ವಾಪರ ವಿವೇಚನೆ ಎನ್ನುವುದು ಅವರ ಶಬ್ದಕೋಶದಲ್ಲೇ ಇರಲಿಲ್ಲ’. ಹಾಗಾಗಿ ಮುನ್ನುಗ್ಗಿ ಹೊಡೆದಾಟ ಮಾಡುವುದೇ ಕ್ರಾಂತಿ ಅಂದ್ಕೋತಾರೆ’ (ಚಿದಂಬರ ರಹಸ್ಯ).

ಇದರೊಂದಿಗೆ, ‘ನಿಯಂತ್ರಿಸಲಾಗದ ಜನಬೆಂಬಲದ ಅಪಾಯಗಳು’ ಕೂಡ ಯಾವುದೇ ಸಂಘ–ಸಂಸ್ಥೆಗಳನ್ನು ಮುಳುಗಿಸುತ್ತವೆ ಎನ್ನುವ ‘ಮಾಯಾಲೋಕ’ದ ಮಾತುಗಳು ಕೂಡಾ ನಮ್ಮೊಳಗೆ ಮೊರೆಯಬೇಕು.

‘ಭೂಮಿ ಇಂದು ಬಿಸಿಯ ಮಟ್ಟ ಮೀರಿ ಕುದಿಯ ಮಟ್ಟ ತಲುಪಿದೆ’ ಎಂದು ಯಲ್ಲಪ್ಪ ರೆಡ್ಡಿಯವರು ಆತಂಕಿತರಾಗಿದ್ದರು. ನಮ್ಮ ಒಳಗೂ ಹೊರಗೂ ಕಾಡು ಬೆಳೆಯುವುದರಿಂದ ಮಾತ್ರ ಎಲ್ಲ ರೀತಿಯ ಕುದಿಗಳು ತಣಿಯಬಲ್ಲವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT