ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ನೀಟ್‌ಗೆ ಅನಾರೋಗ್ಯ..! ಕಾಯುವವರಾರು?

ಒಂದು ಸ್ಪರ್ಧಾತ್ಮಕ ಪರೀಕ್ಷೆಯನ್ನೂ ಸುಸಜ್ಜಿತವಾಗಿ ನಡೆಸದಷ್ಟು ನಮ್ಮ ವ್ಯವಸ್ಥೆ ಹೀನಾಯವಾಗಿದೆಯೇ?
Published 28 ಜೂನ್ 2024, 23:32 IST
Last Updated 28 ಜೂನ್ 2024, 23:32 IST
ಅಕ್ಷರ ಗಾತ್ರ

ಇದೇ ತಿಂಗಳ 23ರಂದು ನಡೆಯಬೇಕಿದ್ದ ಈ ಬಾರಿಯ ವೈದ್ಯಕೀಯ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್‌) ನನ್ನ ಪುತ್ರನೂ ಸಿದ್ಧತೆ ನಡೆಸಿದ್ದ. ಅರ್ಜಿ ತುಂಬುವಾಗ, ಎಷ್ಟೇ ಪ್ರಯತ್ನಪಟ್ಟರೂ ನಮ್ಮ ಊರು ಶಿವಮೊಗ್ಗದಲ್ಲಿನ ಪರೀಕ್ಷಾ ಕೇಂದ್ರ ದೊರಕದಿದ್ದಾಗ, ಲಭ್ಯವಿದ್ದ ಕೇಂದ್ರಗಳಲ್ಲಿಯೇ ಒಂದನ್ನು ಆಯ್ದುಕೊಳ್ಳಬೇಕಾಗಿತ್ತು. ನಮ್ಮೂರಿನಿಂದ ಸುಮಾರು ಇನ್ನೂರು ಕಿಲೊಮೀಟರ್ ದೂರದಲ್ಲಿದ್ದ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆಯ ಹಿಂದಿನ ದಿನವೇ ನಾನು ಮತ್ತು ನಮ್ಮವರು ಮಗನೊಡನೆ ಪಯಣ ಬೆಳೆಸಿದೆವು. ಬರೋಬ್ಬರಿ ಒಂದು ವರ್ಷದಿಂದ ಪರೀಕ್ಷಾ ಸಿದ್ಧತೆಯನ್ನು ನಡೆಸಿದ್ದ ಅವನಲ್ಲಿ ಒಂದಿಷ್ಟು ಮಾನಸಿಕ ಸ್ಥೈರ್ಯ ತುಂಬುವ ಆಶಯ ನಮ್ಮದಾಗಿತ್ತು.

ಪರೀಕ್ಷಾ ಕೇಂದ್ರವಿದ್ದ ಊರನ್ನು ತಲುಪಿ, ಹೋಟೆಲಿನ ಕೊಠಡಿಯೊಂದರಲ್ಲಿ ತಂಗಿದೆವು. ಆ ಹೋಟೆಲಿನಲ್ಲಿ ಅಡ್ಡಾಡುವಾಗ, ನಮ್ಮಂತೆಯೇ ತಮ್ಮ ಮಕ್ಕಳನ್ನು ಇದೇ ಪ್ರವೇಶ ಪರೀಕ್ಷೆಗೆ ಕರೆತಂದಿದ್ದ ಹಲವು ಪೋಷಕರು ಅಲ್ಲಿ ತಂಗಿದ್ದುದು ತಿಳಿದುಬಂತು. ಮತ್ತೆ ಕೆಲವರು ತಮ್ಮ ಸಹೋದರ, ಸಹೋದರಿಯರೊಂದಿಗೆ ಬಂದಿದ್ದರು. ನವವಿವಾಹಿತ ತರುಣಿಯೂ ಪತಿಯೊಂದಿಗೆ ಪರೀಕ್ಷೆಗಾಗಿ ಬಂದಿದ್ದನ್ನು ಸೂಕ್ಷ್ಮವಾಗಿ ಗಮನಿಸಿದೆ.

ಮರುದಿನ ಬೆಳಿಗ್ಗೆ ಏಳು ಗಂಟೆಗೆಲ್ಲಾ ಪರೀಕ್ಷಾ ಕೇಂದ್ರಕ್ಕೆ ತೆರಳಬೇಕಾಗಿತ್ತು. ಊಟಕ್ಕೆಂದು ರೆಸ್ಟೊರೆಂಟ್‍ಗೆ ಹೋದಾಗ, ಅಲ್ಲಿ ಇವನಂತೆಯೇ ಪರೀಕ್ಷೆ ಬರೆಯಲು ಬಂದಿದ್ದ ಅನೇಕ ವೈದ್ಯಕೀಯ ವಿದ್ಯಾರ್ಥಿಗಳೂ (ವೈದ್ಯರು) ಊಟಕ್ಕೆಂದು ಬಂದಿದ್ದರು. ಎಲ್ಲರ ಮುಖದಲ್ಲೂ ಒಂದು ಬಗೆಯ ಆತಂಕ ಎದ್ದು ಕಾಣುತ್ತಿತ್ತು. ಕೆಲವರ ಮುಖವಂತೂ ನಿದ್ದೆಗಾಣದೆ ಬಾಡಿಹೋಗಿತ್ತು. ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಮಕ್ಕಳಿಗೆ ಜೊತೆಯಾಗಿ ಬಂದಿದ್ದ ತಂದೆತಾಯಿಯೂ ಒತ್ತಡದಲ್ಲಿ ಇದ್ದಂತೆ ತೋರುತ್ತಿತ್ತು.

ಊಟ ಮುಗಿಸಿ ಕೋಣೆಗೆ ಬಂದ ನಾವು, ಬೆಳಿಗ್ಗೆ ಬೇಗ ಎದ್ದು ಪರೀಕ್ಷಾ ಕೇಂದ್ರಕ್ಕೆ ಹೊರಡುವ ಬಗ್ಗೆ, ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕಾಗಿದ್ದ ಮುಖ್ಯ ದಾಖಲೆಗಳ ಬಗ್ಗೆ ಮಾತನಾಡುತ್ತಾ ಕುಳಿತಿದ್ದೆವಷ್ಟೆ. ಸುಮಾರು ಹತ್ತು ಗಂಟೆಯ ಸಮಯವಿರಬಹುದು. ಗೆಳತಿಯೊಬ್ಬಳು ಕರೆ ಮಾಡಿ, ನನ್ನ ಮಗನಿಗೆ ಶುಭಾಶಯ ಕೋರುತ್ತಿದ್ದವಳು, ಆ ಕ್ಷಣ ತನ್ನ ಮೊಬೈಲ್‍ಗೆ ಬಂದ ಮುಖ್ಯ ಸುದ್ದಿಯನ್ನು ಓದುತ್ತಾ ‘ಏನೇ ಇದು, ನೀಟ್ ಮುಂದೂಡಲಾಗಿದೆ ಅಂತ ಸುದ್ದಿ ಕಾಣಿಸುತ್ತಿದೆಯಲ್ಲ’ ಎಂದಳು. ನಾನು ಖಡಾಖಂಡಿತವಾಗಿ ‘ಅದು ಕೆಲ ದಿನಗಳ ಹಿಂದಷ್ಟೇ ವಿವಾದದಲ್ಲಿ ಸಿಲುಕಿದ್ದ ವೈದ್ಯಕೀಯ ಪದವಿಯ (ಯುಜಿ) ನೀಟ್ ವಿಚಾರವಿರಬಹುದು’ ಎಂದು ವಾದ ಮಾಡಲು ಆರಂಭಿಸಿದೆ. ಆಗ ಅವಳು ಸುದ್ದಿಯನ್ನು ಸರಿಯಾಗಿ ಗಮನಿಸಿ, ಮರುದಿನ ಬೆಳಿಗ್ಗೆ ಒಂಬತ್ತಕ್ಕೆ ಆರಂಭವಾಗಬೇಕಾಗಿದ್ದ ವೈದ್ಯಕೀಯ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯ ಬಗ್ಗೆಯೇ ಇರುವ ಸುದ್ದಿ ಅದು ಎಂದು ಖಾತರಿಪಡಿಸಿದಳು. ಆಗ ನನ್ನ ಮನಸ್ಸಿಗೆ ಒಂದು ಬಗೆಯ ಶೂನ್ಯ ಆವರಿಸಿದಂತೆ ಭಾಸವಾಯಿತು.

ಅರೆ, ಪರೀಕ್ಷೆಗೆ ಇನ್ನು ಹತ್ತು–ಹನ್ನೊಂದು ಗಂಟೆಗಳ ಗಡುವೂ ಇಲ್ಲದಿರುವಾಗ ಇಂತಹ ಸುದ್ದಿಯೇ? ಅಷ್ಟರಲ್ಲಾಗಲೇ ಎಲ್ಲ ಪರಿಚಿತರಿಂದ ಕರೆಗಳು ಬರಲು ಆರಂಭವಾದವು. ಆದರೂ ಅದು ನಿಜವೇ ಅಥವಾ ಸುಳ್ಳು ಸುದ್ದಿಯೇ ಎಂಬ ದಿಗಿಲು ಕಾಡತೊಡಗಿದ್ದೂ ನಿಜ. ಅಲ್ಲಿಯವರೆಗೆ ಟಿ.ವಿ. ಚಾನೆಲ್‌ಗಳ ಸುದ್ದಿಗೆ ಹೋಗದ ನಾವು, ತಕ್ಷಣ ಟಿ.ವಿ.ಯನ್ನು ಹಚ್ಚಿದೆವು. ಅಲ್ಲಿಯೂ ‘ನೀಟ್ ಮುಂದೂಡಲಾಗಿದೆ’ ಎಂಬ ಸುದ್ದಿ ಪರದೆಯ ಅಡಿಬರಹದಲ್ಲಿ ಗೋಚರಿಸುತ್ತಿತ್ತು.

ಮಗ ಹತಾಶನಾಗಿದ್ದ. ಅವನನ್ನು ಯಾವ ರೀತಿಯಲ್ಲಿಯೂ ಸಮಾಧಾನ ಮಾಡಲು ತೋಚದ ನಾನು ಕೊಠಡಿಯಿಂದ ಹೊರಬಂದಿದ್ದೆ. ಅಲ್ಲಿದ್ದ ಸುಮಾರು ಹದಿನೈದಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅವರ ಪೋಷಕರದ್ದೂ ಅದೇ ಬಗೆಯ ತಳಮಳ. ಸುದ್ದಿಯನ್ನು ನಂಬುವುದೇ ಬೇಡವೇ ಎಂಬ ದ್ವಂದ್ವ ಬೇರೆ. ಅಲ್ಲಿ ಮಾತಿಗೆ ಸಿಕ್ಕ ಪೋಷಕರದ್ದು ವಿಧವಿಧದ ಕತೆಗಳು! ಒಬ್ಬ ವಿದ್ಯಾರ್ಥಿನಿಯ ಮದುವೆಯ ದಿನವನ್ನು ನೀಟ್ ಮುಗಿದ ಬಳಿಕ ಮಾಡಲು ನಿರ್ಧರಿಸಿ, ಬರುವ ಶ್ರಾವಣ ಮಾಸದಲ್ಲಿ ಗೊತ್ತು ಮಾಡಿದ್ದರಂತೆ. ಇದೀಗ ಮುಂದೂಡಲ್ಪಟ್ಟ ಪರೀಕ್ಷೆಯ ದಿನಾಂಕ ಆ ದಿನಗಳಲ್ಲಿಯೇ ಬಂದರೆ ಏನು ಮಾಡುವುದು ಎಂಬುದು ಆಕೆಯ ತಾಯಿಯ ಆತಂಕ.

ಒಂದು ವರ್ಷದಿಂದ ತಪಸ್ಸಿಗೆ ಕುಳಿತಂತೆ ತಯಾರಿ ನಡೆಸಿದ್ದ ಗೆಳೆಯರ ಗುಂಪೊಂದು, ಬರುವ ತಿಂಗಳಲ್ಲಿ ಹೊರದೇಶಕ್ಕೆ ಪ್ರವಾಸ ಗೊತ್ತು ಮಾಡಿತ್ತಂತೆ. ಇದೀಗ ಮುಂಗಡ ಟಿಕೆಟ್‍ಗಾಗಿ ವಿನಿಯೋಗಿಸಿದ ಹಣವನ್ನೂ ಮರಳಿ ಪಡೆಯುವಂತಿಲ್ಲ, ಪರೀಕ್ಷೆ ಬಿಟ್ಟು ಪ್ರವಾಸವನ್ನೂ ಮಾಡುವಂತಿಲ್ಲ ಎಂಬುದು ಆ ವಿದ್ಯಾರ್ಥಿಗಳ ಗೋಳು. ನಲವತ್ತರ ಹರೆಯದ ವೈದ್ಯರೊಬ್ಬರು ವೈದ್ಯಾಧಿಕಾರಿಯಾಗಿ ತಾವು ಕೆಲಸ ನಿರ್ವಹಿಸುತ್ತಿದ್ದ ಆಸ್ಪತ್ರೆಯ ಕೆಲಸಕ್ಕೆ ಮೂರು ತಿಂಗಳು ವೇತನರಹಿತ ರಜೆ ಹಾಕಿ, ಈ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರಂತೆ. ಮರುದಿನದಿಂದ ಕೆಲಸಕ್ಕೆ ಹಾಜರಾಗದಿದ್ದರೆ ಕೆಲಸದಿಂದ ತೆಗೆದರೂ ತೆಗೆಯಬಹುದು ಎಂಬುದು ಅವರ ಆತಂಕವಾಗಿತ್ತು. ಇತ್ತ ಕೆಲಸ ಮತ್ತು ವೇತನವೂ ಇಲ್ಲ, ಪರೀಕ್ಷೆಯೂ ನಡೆಯಲಿಲ್ಲ ಎಂಬುದು ಅವರ ಅಳಲು.

ನವವಿವಾಹಿತ ವೈದ್ಯೆ, ನೀಟ್ ಮುಗಿಸಿ ಮಧುಚಂದ್ರಕ್ಕೆ ಹೋಗುವ ಯೋಜನೆಯಲ್ಲಿದ್ದಳಂತೆ. ಇದೀಗ ತನ್ನ ಯೋಜನೆ ತಲೆಕೆಳಗಾಯಿತು ಎಂಬುದು ಆಕೆಯ ದುಃಖ. ಒಬ್ಬ ವಿದ್ಯಾರ್ಥಿನಿಯಂತೂ ಜೋರಾಗಿ ಅಳುತ್ತಾ, ತನ್ನ ಅಪ್ಪನನ್ನು ಕುರಿತು, ಯಾವ ಕಾರಣಕ್ಕೂ ತಮ್ಮನಿಗೆ ವೈದ್ಯಕೀಯ ಶಿಕ್ಷಣ ಬೇಡ, ತನಗೊಬ್ಬಳಿಗೇ ಈ ಯಾತನೆ ಸಾಕು ಎನ್ನುತ್ತಾ ಕಂಬನಿಗರೆಯುತ್ತಿದ್ದಳು. ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಮಕ್ಕಳೊಂದಿಗೆ ಬಂದಿದ್ದ ಪೋಷಕರು ವೃಥಾ ತಮ್ಮ ಸಮಯ ಮತ್ತು ಹಣ ವ್ಯರ್ಥವಾದುದರ ಬಗ್ಗೆಯೂ ನೊಂದಿದ್ದರು.

ಇವೆಲ್ಲವೂ ನಾನು ಕಣ್ಣಾರೆ ಕಂಡ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳ ನೋವು-ಹತಾಶೆಯ ಕತೆ. ಇನ್ನು ದೇಶದಾದ್ಯಂತ ಈ ಪರೀಕ್ಷೆಗೆ ಅರ್ಜಿ ಹಾಕಿದ ಸರಿಸುಮಾರು ಎರಡು ಲಕ್ಷ ವಿದ್ಯಾರ್ಥಿಗಳ ಕತೆಗಳೇನೋ.

ಎಂಬಿಬಿಎಸ್ ಪದವಿಯ ನಂತರ ಸ್ನಾತಕೋತ್ತರ ಪದವಿ ಮಾಡಲೇಬೇಕಾದ ಅನಿವಾರ್ಯ ಇಂದಿನ ದಿನಗಳಲ್ಲಿದೆ. ಇಡೀ ದೇಶದಲ್ಲಿ ಲಭ್ಯವಿರುವ ಬರೀ ನಲವತ್ತು ಸಾವಿರ ಸೀಟುಗಳಿಗಾಗಿ ಸುಮಾರು ಎರಡು ಲಕ್ಷದಷ್ಟು ವೈದ್ಯರು ಈ ಪರೀಕ್ಷೆಯನ್ನು ಬರೆಯುತ್ತಾರೆ. ಒಮ್ಮೆ ಸ್ನಾತಕೋತ್ತರ ಪದವಿಗೆ ಪ್ರವೇಶ ದೊರೆಯದವರು ಮತ್ತೆ ಮರುವರ್ಷ ನಡೆಯುವ ಪರೀಕ್ಷೆಗೆ ತಯಾರಿ ನಡೆಸುತ್ತಾರೆ. ವರ್ಷಗಟ್ಟಲೆ ಅಧ್ಯಯನದಲ್ಲಿ ತೊಡಗುತ್ತಾರೆ.

ವೈದ್ಯಕೀಯ ವಿಜ್ಞಾನ ವಿಭಾಗದ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ಪ್ರತಿವರ್ಷವೂ ವೈದ್ಯಕೀಯ ಸ್ನಾತಕೋತ್ತರ ಪದವಿಗಾಗಿ ಪ್ರವೇಶ ಪರೀಕ್ಷೆ ನಡೆಸುತ್ತದೆ. ಆನ್‍ಲೈನ್‍ನಲ್ಲಿ ನಡೆಯುವ ಈ ಪರೀಕ್ಷೆಗೆ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ನೆರವನ್ನು ಟಾಟಾ ಕಂಪನಿಯ ಸಲಹಾ ಸೇವೆಗಳಿಂದ ಪಡೆದುಕೊಳ್ಳುತ್ತದೆ. ಸಾಮಾನ್ಯವಾಗಿ ಪರೀಕ್ಷೆ ಆರಂಭವಾಗುವ ಒಂದು ಗಂಟೆಗೆ ಮುನ್ನವಷ್ಟೇ ಪ್ರಶ್ನೆಪತ್ರಿಕೆಯನ್ನು ಹೊರಬಿಡಲಾಗುತ್ತದೆ. ಆದರೆ ಈ ಬಾರಿ ಎಂತಹ ಸೂಕ್ಷ್ಮವಾದ ಕಾರಣವನ್ನು ಗಮನಿಸಿಯೋ ಏನೋ ದಿಢೀರ್ ಎಂದು ಪರೀಕ್ಷೆಯನ್ನು ಮುಂದೂಡುವ ನಿರ್ಧಾರವನ್ನು ಭಾರತೀಯ ಆರೋಗ್ಯ ಸಚಿವಾಲಯ ತೆಗೆದುಕೊಂಡಿದೆ.

ಈ ಬಾರಿಯ ವೈದ್ಯಕೀಯ ಪದವಿ ಪ್ರವೇಶ ಪರೀಕ್ಷೆ ಬಗೆಗಿನ ಅಕ್ರಮದ ಆರೋಪಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಕಾರಣ ಏನೇ ಇರಲಿ, ಪರೀಕ್ಷೆಯ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಪರೀಕ್ಷೆಯನ್ನು ಮಂದೂಡುವುದು ವಿದ್ಯಾರ್ಥಿಗಳ ಎದೆಗುಂದಿಸುತ್ತದೆ. ಬಹಳಷ್ಟು ಅನನುಕೂಲಗಳಿಗೆ ಕಾರಣವಾಗುತ್ತದೆ.

ಎಲ್ಲ ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತಾ ಮುನ್ನಡೆಯುತ್ತಿರುವ ನಮ್ಮ ದೇಶ, ಸಮಾಜದ ಆರೋಗ್ಯವನ್ನು ಸಂರಕ್ಷಿಸುವ ವೈದ್ಯರಿಗಾಗಿ ನಡೆಸುವ ಪ್ರವೇಶ ಪರೀಕ್ಷೆಯನ್ನು ಶಿಸ್ತುಬದ್ಧವಾಗಿ ನಡೆಸಲು ಆಗದಿರುವುದು ನಿಜಕ್ಕೂ ವಿಷಾದಕರ. ಕೆಲವು ವರ್ಷಗಳ ಹಿಂದೆ ಆಯಾ ರಾಜ್ಯ ಮಟ್ಟದಲ್ಲಿಯೇ ಈ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಆಗ ಎಲ್ಲವೂ ಬಹುತೇಕ ಸುಲಲಿತವಾಗಿಯೇ ನಡೆಯುತ್ತಿತ್ತು. ಇದೀಗ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಪರೀಕ್ಷಾ ಮಂಡಳಿ ಎಂಬ ಸ್ವಾಯತ್ತ ಸಂಸ್ಥೆಗೆ ವೈದ್ಯಕೀಯ ಸ್ನಾತಕೋತ್ತರ ಪರೀಕ್ಷೆಯ ಜವಾಬ್ದಾರಿಯನ್ನು ಕೊಡಲಾಗಿದೆ. ಪ್ರಶ್ನೆಪತ್ರಿಕೆಯ ಗೋಪ್ಯತೆಯನ್ನು ಕಾಪಾಡಿಕೊಳ್ಳುವಂತಹ ಕಟ್ಟುನಿಟ್ಟಿನ ಕಾರ್ಯತಂತ್ರಗಳನ್ನು ರೂಪಿಸಿ, ಅನುಷ್ಠಾನಗೊಳಿಸದ ಮಂಡಳಿಯ ಕ್ಷಮತೆಯ ಬಗ್ಗೆ ಪ್ರತಿಯೊಬ್ಬರೂ ಅನುಮಾನಿಸುವಂತಹ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ.

ಆಧುನಿಕ ತಂತ್ರಜ್ಞಾನವನ್ನು ಬಳಸಿ ನಡೆಸುವ ಈ ಪರೀಕ್ಷೆಗಳಲ್ಲಿ ಅಕ್ರಮಗಳು ನುಸುಳುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಈ ಮೊದಲು ಇತ್ತು. ಆದರೆ ಈಗ ನಡೆದಿರುವ ಪ್ರಮಾದವನ್ನು ಗಮನಿಸಿದರೆ, ತಂತ್ರಜ್ಞಾನವೇ ಮುಳುವಾಯಿತೆ ಎಂಬ ಗುಮಾನಿ ಹುಟ್ಟಿಕೊಳ್ಳುತ್ತದೆ. ಮತ್ತೊಂದೆಡೆ, ಮಂಡಳಿಯ ಅಧಿಕಾರಿಗಳಿಂದ ಲೋಪವಾಗಿರಬಹುದೇ ಎಂಬ ಸಂಶಯವೂ ಸುಳಿಯುತ್ತದೆ. ಇಂತಹ ಮಹತ್ವದ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸುವ ಸಾಮರ್ಥ್ಯ ಇಲ್ಲದ ಅಧಿಕಾರಿಗಳನ್ನು ಮಂಡಳಿಯ ಆಯಕಟ್ಟಿನ ಹುದ್ದೆಗಳಲ್ಲಿ ಕೂರಿಸಲಾಗಿದೆಯೇ ಎಂಬ ಪ್ರಶ್ನೆಯೂ ಕಾಡುತ್ತದೆ. ಈ ವಿಷಯ ಈಗ ಸಂಸತ್ತಿನ ಕಲಾಪದಲ್ಲೂ ಪ್ರತಿಧ್ವನಿಸಿದೆ. ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಬಗ್ಗೆ ತನಿಖೆ ನಡೆಸುವ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ವಿಷಯದಲ್ಲಿ ಸರ್ಕಾರ ಬದ್ಧವಾಗಿದೆ ಎಂದು ತಮ್ಮ ಭಾಷಣದಲ್ಲಿ ಭರವಸೆ ನೀಡಿದ್ದಾರೆ. ಈಗ ಆಗಿರುವಂತಹ ಎಡವಟ್ಟು ಮರುಕಳಿಸದ ರೀತಿಯಲ್ಲಿ ಕಠಿಣ ಸಂದೇಶ ರವಾನೆಯಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT