ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ‘ಅತೃಪ್ತಿ’ಯ ಚಳಿಗಾಲ!

‘ರಾಜ್ಯ’ಗಳು ಈಗ ಭಾರತೀಯ ರಾಜಕಾರಣದ ‘ಹೊಸ ಕೇಂದ್ರ’ಗಳಾಗುತ್ತಿರುವುದಂತೂ ಸತ್ಯ
Last Updated 25 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

2019ನೇ ಇಸವಿ ಅಂತ್ಯವಾಗುತ್ತಾ ಬರುತ್ತಿದೆ. ಈ ಸಂದರ್ಭದಲ್ಲಿ ಬಂದಿರುವ ಜಾರ್ಖಂಡ್‌ ವಿಧಾನಸಭಾ ಚುನಾವಣೆಯ ಫಲಿತಾಂಶವು ‘ರಾಜಕೀಯ ಅತೃಪ್ತಿಯ ಸ್ಥಿತಿ’ ನಿರ್ಮಾಣ ಆಗುತ್ತಿರುವುದನ್ನು ಪ್ರತಿಫಲಿಸುತ್ತಿದೆ. ಆಳುವವರ ವಿರುದ್ಧ ಹರಿಯಾಣದ ಮತದಾರರು, ಒಂದು ಹಂತದವರೆಗೆ ಮಹಾರಾಷ್ಟ್ರದ ಮತದಾರರು ತೋರಿದ್ದ ‘ಸಣ್ಣ ಅಸಮಾಧಾನ’ವನ್ನು ಜಾರ್ಖಂಡ್‌ ರಾಜ್ಯದ ಮತದಾರರು ತುಸು ಮುಂದಕ್ಕೆ ಒಯ್ದಿರುವಂತೆ ಕಾಣಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿ ಮತ್ತು ಅದರ ನಾಯಕತ್ವಕ್ಕೆ ಇನ್ನೊಂದು ಅವಧಿಯ ಅಧಿಕಾರ ನೀಡಿದರು. ಆದರೆ, ಆಗ ಕಂಡ ಉತ್ಸಾಹವು ನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಮರೆಯಾದಂತಿದೆ. ರಾಷ್ಟ್ರ ಮಟ್ಟದ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ದೇಶದ ಮತದಾರರು ‘ಹೊಸ ಪ್ರಬುದ್ಧತೆ’ಯನ್ನು ತೋರಿಸುತ್ತಿರುವುದರ ಸೂಚನೆ ಇದು. ಹಾಗೆಯೇ, ‘ಒಂದು ರಾಷ್ಟ್ರ, ಒಂದೇ ಚುನಾವಣೆ’ ಎಂಬ ಪರಿಕಲ್ಪನೆಯು ಮಹಾನ್ ಆಲೋಚನೆ ಅಲ್ಲ ಎಂಬುದಕ್ಕೆ ಇದೂ ಒಂದು ನಿದರ್ಶನ.

ದೇಶದ ಮತದಾರರು 2019ರಲ್ಲಿ ನೀಡಿದ ಸಂದೇಶ ಅತ್ಯಂತ ಸ್ಪಷ್ಟ– ರಾಜ್ಯ ಮಟ್ಟದ ಚುನಾವಣೆಗಳಲ್ಲಿ ಮತದಾರನ ಮೇಲೆ ಪ್ರಭಾವ ಬೀರುವುದು ಬೇರೆ, ಲೋಕಸಭಾ ಚುನಾವಣೆಯಲ್ಲಿ ಪ್ರಭಾವ ಬೀರುವ ವಿಷಯಗಳೇ ಬೇರೆ. ಕಳೆದ ವರ್ಷ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯ ನಂತರ ಈ ಹವಾ ನಿರಂತರವಾಗಿ ಕಾಣಿಸಿಕೊಳ್ಳುತ್ತಿದೆ. ಗುಜರಾತಿನಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೂ, ವಿಧಾನಸಭೆಯಲ್ಲಿ ಎರಡಂಕಿಯ ಸ್ಥಾನಗಳಿಗೆ (ಸಂಖ್ಯಾಬಲ) ತೃಪ್ತಿಹೊಂದಬೇಕಾ
ಯಿತು. ಕಳೆದ ವರ್ಷದ ಅಂತ್ಯದ ವೇಳೆಗೆ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಆದರೆ, ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಭರ್ಜರಿ ಜಯ ಸಾಧಿಸಿತು. ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿ ಒಳ್ಳೆಯ ಸಾಧನೆ ತೋರಿತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಹರಿಯಾಣದಲ್ಲಿ ಎಲ್ಲ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಒಳ್ಳೆಯ ಸಾಧನೆ ತೋರಿಸಿತು. ವಿಧಾನಸಭಾ ಚುನಾವಣೆಗಳ ಮಟ್ಟದಲ್ಲಿ: ಹರಿಯಾಣದಲ್ಲಿ ಅಂತೂ ಇಂತೂ ಅಧಿಕಾರ ಉಳಿಸಿಕೊಂಡಿತು; ಮಹಾರಾಷ್ಟ್ರದಲ್ಲಿ ತನ್ನ ಜೊತೆಗಾರನನ್ನು ಕಳೆದುಕೊಂಡಿತು; ಜಾರ್ಖಂಡ್‌ನಲ್ಲಿ ಅಧಿಕಾರ ಕಳೆದುಕೊಂಡಿತು.

ಇದು ರವಾನಿಸಿರುವ ಸಂದೇಶ ಸ್ಪಷ್ಟವಾಗಿದೆ, ಗಟ್ಟಿಯಾಗಿದೆ– ರಾಜ್ಯಗಳ ಮಟ್ಟದ ಚುನಾವಣೆಗಳಲ್ಲಿ ಮತ ಚಲಾಯಿಸುವಾಗ ಸ್ಥಳೀಯ ವಿಚಾರಗಳು ಮತದಾರರ ನಿಲುವಿನ ಮೇಲೆ ಹೆಚ್ಚು ಪ್ರಭಾವ ಬೀರುತ್ತಿರುವಂತೆ ಕಾಣಿಸುತ್ತಿದೆ. ಜಾರ್ಖಂಡ್‌ನ ಮುಖ್ಯಮಂತ್ರಿ
ಯಾಗಿದ್ದ ರಘುವರ ದಾಸ್ ಹಾಗೂ ಬಿಜೆಪಿಯ ಸಾಧನೆ ತೃಪ್ತಿಕರವಾಗಿಲ್ಲ ಎಂಬುದನ್ನು ಹೇಳುವ ಲಕ್ಷಣಗಳು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೇ ಸ್ಪಷ್ಟವಾಗಿ ಗೋಚರಿಸಿದ್ದವು. ಇದು ಹಿಂದೆ ಹರಿಯಾಣ ವಿಧಾನಸಭಾ ಚುನಾವಣೆ ವೇಳೆಯಲ್ಲೂ ಅಲ್ಲಿನ ನಾಯಕತ್ವದ ವಿಚಾರದಲ್ಲಿ ಗೋಚರಿಸಿತ್ತು. ಪ್ರಧಾನಿಯವರ ವ್ಯಕ್ತಿತ್ವ ಹಾಗೂ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳನ್ನು ಮುಂದಿಟ್ಟುಕೊಂಡು ಚುನಾವಣಾ ಅಭಿಯಾನ ನಡೆಸುವ ತೀರ್ಮಾನವನ್ನು ಬಿಜೆಪಿ ಅಲ್ಲಿ ಏಕೆ ತೆಗೆದುಕೊಂಡಿತು ಎಂಬುದಕ್ಕೂ ಇದು ಉತ್ತರ ನೀಡುತ್ತದೆ.

ಪ್ರಧಾನಿಯವರ ಜನಪ್ರಿಯತೆ ತಗ್ಗಿಲ್ಲ; ಆದರೆ, ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಯ ಸಾಧನೆಯ ವಿಚಾರದಲ್ಲಿ ಬಿಜೆಪಿಯ ವರ್ಚಸ್ಸಿಗೆ ಧಕ್ಕೆ ಆಗಿದೆ ಎಂಬುದನ್ನು ತೋರಿಸುವ ಆಧಾರಗಳು ಲೋಕನೀತಿ–ಸಿಎಸ್‌ಡಿಎಸ್‌ ಸಮೀಕ್ಷೆಯಲ್ಲಿ ಇವೆ. ಕೇಂದ್ರದ ನಾಯಕತ್ವ
ವನ್ನು ಮತ್ತು ಕೇಂದ್ರ ಸರ್ಕಾರದ ತೀರ್ಮಾನಗಳನ್ನು ಮುಂದಿರಿಸಿಕೊಳ್ಳುವ ರಾಜಕೀಯ ಕಾರ್ಯತಂತ್ರದ ಬಗ್ಗೆ ಪುನರ್‌ ಅವಲೋಕನ ನಡೆಸಬೇಕಾದ ಅಗತ್ಯ ಬಿಜೆಪಿಗೆ ಇದೆ. ವಿಧಾನಸಭಾ ಚುನಾವಣೆಗಳಲ್ಲಿ ಮತ ಚಲಾಯಿಸುವಾಗ ಜನ, ರಾಜ್ಯ ಸರ್ಕಾರ ಒದಗಿಸಿದ ಸೇವೆಗಳ ಬಗ್ಗೆ, ಸ್ಥಳೀಯ ಸಮಸ್ಯೆಗಳಿಗೆ ಅದು ಸ್ಪಂದಿಸಿದ ರೀತಿಯ ಬಗ್ಗೆ ಗಮನಹರಿಸುತ್ತಾರೆ. ಅಲ್ಲದೆ, ಸರ್ಕಾರವು ಸ್ಥಳೀಯರ ಭಾವನೆಗಳ ಬಗ್ಗೆ ಎಷ್ಟು ಸೂಕ್ಷ್ಮವಾಗಿತ್ತು ಎಂಬುದನ್ನೂ ನೋಡುತ್ತಾರೆ. ಈ ವಿಚಾರಗಳಲ್ಲಿ ರಾಜ್ಯ ಸರ್ಕಾರ ಒಳ್ಳೆಯ ಸಾಧನೆ ತೋರಿರಲಿಲ್ಲ ಎಂಬುದನ್ನು ಜಾರ್ಖಂಡ್ ಫಲಿತಾಂಶ ಹೇಳುತ್ತಿದೆ.

ಕೇಂದ್ರದಲ್ಲಿ ಯಾವ ಸರ್ಕಾರ ಬೇಕು, ರಾಜ್ಯಗಳ ಮಟ್ಟದಲ್ಲಿ ಯಾವ ಸರ್ಕಾರ ಬೇಕು ಎಂಬುದನ್ನು ತೀರ್ಮಾನಿಸುವಾಗ ಜನ ಸ್ಪಷ್ಟವಾಗಿ, ಭಿನ್ನವಾಗಿ ಆಲೋಚಿಸುವುದು ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ಪೂರಕ ಕೂಡ ಹೌದು! ಪ್ರತೀ ರಾಜಕೀಯ ಪಕ್ಷವೂ ಗೆಲ್ಲುವ ಸಾಧ್ಯತೆ ಇರುವ ಅಥವಾ ಗೆಲ್ಲುವ ಮೈತ್ರಿಕೂಟದ ಭಾಗವಾಗಿರುವ ಸಾಧ್ಯತೆ ಇರುವ (ಕಾಂಪಿಟಿಟಿವ್‌ ಪಾರ್ಟಿ ಸಿಸ್ಟಂ) ವ್ಯವಸ್ಥೆ ರೂಪುಗೊಳ್ಳುತ್ತಿರುವ ಹೊತ್ತಿನಲ್ಲಿ ಈಗ ರವಾನೆಯಾಗಿರುವ ಸಂದೇಶ ಹೆಚ್ಚು ಗಟ್ಟಿಯಾಗಿದೆ. ರಾಷ್ಟ್ರ ಮಟ್ಟದ ಚುನಾವಣೆಯಲ್ಲಿ ಜನ ನೀಡುವ ತೀರ್ಪನ್ನು ರಾಜ್ಯ ಸರ್ಕಾರಗಳ ವಿಚಾರದಲ್ಲಿ ಜನ ತಾಳಿದ ನಿಲುವು ಎಂದು ಹೇಳುವ ಮೂಲಕ, ರಾಜಕೀಯ ಲಾಭ ಪಡೆದುಕೊಳ್ಳುವುದನ್ನು ಕೈಬಿಡಬೇಕು. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಜನ ನೀಡುತ್ತಿರುವ ತೀರ್ಪು ಭಿನ್ನ ಅಂಶಗಳನ್ನು ಆಧರಿಸಿ ನಿಂತಿರುವಂತೆ ಕಾಣುತ್ತಿದೆ.

21ನೇ ಶತಮಾನದ ಎರಡನೆಯ ದಶಕದ ಕೊನೆಯ ವರ್ಷಕ್ಕೆ ನಾವು ಪ್ರವೇಶಿಸುತ್ತಿರುವ ಈ ಸಂದರ್ಭದಲ್ಲಿ, ಭಾರತದ ಚುನಾವಣಾ ರಾಜಕೀಯ ವ್ಯವಸ್ಥೆಯಲ್ಲಿ ರೂಪ ಪಡೆಯುತ್ತಿರುವ ಸಂಕೀರ್ಣತೆಗಳು ಇನ್ನಷ್ಟು ಸ್ಪಷ್ಟವಾಗುತ್ತಿವೆ. ರಾಜಕಾರಣದ ಕೇಂದ್ರ ಬಿಂದುವಿನಲ್ಲಿ ಸ್ಥಾನ ಪಡೆದುಕೊಳ್ಳುವ ಹಂತಕ್ಕೆ ಬಿಜೆಪಿ ನಿಜಕ್ಕೂ ಬೆಳೆದುನಿಂತಿದೆ (80ರ ದಶಕದ ಕೊನೆಯ ಭಾಗದವರೆಗೆ ಕಾಂಗ್ರೆಸ್ ಪಕ್ಷವು ರಾಷ್ಟ್ರ ರಾಜಕಾರಣದಲ್ಲಿ ಹೊಂದಿದ್ದ ಪಾತ್ರಕ್ಕೆ ಇದು ಬಹಳ ಹತ್ತಿರವಾಗಿದೆ). ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿಯ ಅಸ್ತಿತ್ವ ಇದೆ. ಬಿಜೆಪಿಯ ಪ್ರಮುಖ ಎದುರಾಳಿ ಕಾಂಗ್ರೆಸ್ ಅಥವಾ ರಾಜ್ಯ ಮಟ್ಟದ ಪಕ್ಷ (ಕೆಲವೆಡೆ ವಿರೋಧಿ ಪಕ್ಷಗಳ ಮೈತ್ರಿಕೂಟವು ಬಿಜೆಪಿಗೆ ಎದುರಾಳಿ).

ಜಾರ್ಖಂಡ್‌ ಫಲಿತಾಂಶವು ರಾಜ್ಯ ಮಟ್ಟದ ಪಕ್ಷವಾದ ಜೆಎಂಎಂನ ರಾಜಕಾರಣಕ್ಕೆ ಜನ ನೀಡಿದ ಅನುಮೋದನೆ ಎಂದು ಕೆಲವರು ವಾದಿಸಿದ್ದಾರೆ. ಆದರೆ ಹೀಗೆ ಹೇಳುವಾಗ, ಜೆಎಂಎಂ ಪಕ್ಷದ ಮಿತ್ರರಾದ ಕಾಂಗ್ರೆಸ್ ಮತ್ತು ಆರ್‌ಜೆಡಿಯ ಪಾತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷವು ಹಲವು ರಾಜ್ಯಗಳಲ್ಲಿ ರಾಜ್ಯ ಮಟ್ಟದ ಪಕ್ಷಗಳಿಗೆ ತನ್ನ ಸ್ಥಾನ ಬಿಟ್ಟುಕೊಟ್ಟಿರುವುದು, ಮೈತ್ರಿಕೂಟಗಳಲ್ಲಿ ಸಣ್ಣ ಪಾಲುದಾರನ ಮಟ್ಟಕ್ಕೆ ಕುಗ್ಗಿರುವುದು ನಿಜ. ರಾಜ್ಯಗಳ ಮಟ್ಟದಲ್ಲಿ ಬಲಿಷ್ಠವಾಗಿರುವ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಮೈತ್ರಿಕೂಟಗಳು ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿರುವಂತೆ ಕಾಣಿಸುತ್ತಿದೆ.

ಪಕ್ಷಗಳಿಗೆ ಜಯ ತಂದುಕೊಡುವ ವಿಚಾರದಲ್ಲಿ ರಾಜ್ಯ ಮಟ್ಟದ ನಾಯಕರ ಪಾತ್ರ ಹಾಗೂ ಪ್ರಾಮುಖ್ಯ ಏನು ಎಂಬುದನ್ನೂ ಈ ಫಲಿತಾಂಶವು ಹೇಳುತ್ತಿದೆ. ಜಾರ್ಖಂಡ್‌ನಲ್ಲಿ ಹೇಮಂತ್‌ ಸೊರೇನ್ ಅವರು ಜೆಎಂಎಂನ ಮುಂಚೂಣಿ ನಾಯಕ.ಮಹಾರಾಷ್ಟ್ರದಲ್ಲಿ ಬಿಜೆಪಿ ತೋರಿದ ಉತ್ತಮ ಸಾಧನೆಗೂ ದೇವೇಂದ್ರ ಫಡಣವೀಸ್ ಅವರ ನಾಯಕತ್ವಕ್ಕೂ ನಂಟು ಇದೆ. 2020ರಲ್ಲಿ ನಡೆಯುವ ದೆಹಲಿ ಹಾಗೂ ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ, 2021ರಲ್ಲಿ ನಡೆಯುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಗಮನವು ರಾಜ್ಯ ಮಟ್ಟದ ನಾಯಕರ ಮೇಲೆ ಇರಲಿದೆ.

ಚುನಾವಣಾ ಕಣದಲ್ಲಿ ಇರುವ ರಾಜಕೀಯ ಪಕ್ಷಗಳು ಮತದಾರರ ಬೆಂಬಲ ಗಿಟ್ಟಿಸಿಕೊಳ್ಳಲು ರಾಜ್ಯಗಳ ಮಟ್ಟದಲ್ಲಿ ವಿಶ್ವಾಸಾರ್ಹ ಜನನಾಯಕನನ್ನು ಜನರ ಮುಂದೆ ಇರಿಸುವ ಸಾಮರ್ಥ್ಯ ಹೊಂದಿರಬೇಕು. ‘ರಾಜ್ಯ’ಗಳು ಈಗ ಭಾರತೀಯ ರಾಜಕಾರಣದ ‘ಹೊಸ ಕೇಂದ್ರ’ಗಳಾಗಿ ಮೇಲೆ ಬರುತ್ತಿರುವುದಂತೂ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT