ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಮುನಿದ ಪ್ರಕೃತಿ– ನಿಸರ್ಗವೇ ಮದ್ದು!

ಇಂತಹ ಪರಿಹಾರವು ಹೊಸ ಸಮಸ್ಯೆಗಳನ್ನು ಸೃಷ್ಟಿಸದೆ, ಹೊಸ ಪ್ರಯೋಜನಗಳಿಗೆ ದಾರಿ ಮಾಡುತ್ತದೆ
ಅಕ್ಷರ ಗಾತ್ರ

ಜಾಗತಿಕ ತಾಪಮಾನದ ಹೆಚ್ಚಳ ಮತ್ತು ವಾಯುಗುಣ ಬದಲಾವಣೆಯ ತೀವ್ರಪರಿಣಾಮಗಳನ್ನು ಎದುರಿಸಲು ನಮ್ಮ ಮುಂದೆ ಸ್ಥೂಲವಾಗಿ ಎರಡು ಮಾರ್ಗಗಳಿವೆ. ಮೊದಲನೆಯದು, ವಾಯುಮಂಡಲಕ್ಕೆ ನಿರಂತರವಾಗಿ ಸೇರುತ್ತಿರುವ ಹಸಿರುಮನೆ ಅನಿಲಗಳನ್ನು ಹಂತ ಹಂತ ವಾಗಿ ಕಡಿಮೆ ಮಾಡಿ, ನಿರ್ದಿಷ್ಟ ಮಟ್ಟದಲ್ಲಿ ಕಾಯ್ದುಕೊಳ್ಳುವುದು. ಎರಡನೆಯದು, ಈ ಬದಲಾವಣೆಗಳು ತರುತ್ತಿರುವ ಪರಿಣಾಮಗಳನ್ನು ಸಾಧ್ಯವಾದಷ್ಟು ನಿಯಂತ್ರಿಸಿ, ಅವುಗಳ ಅಪಾಯವನ್ನು ಕಡಿಮೆ ಮಾಡಿ, ಅಂತಹ ಪರಿಸ್ಥಿತಿಗೆ ಹೊಂದಿಕೊಂಡು ಬಾಳುವಂತಹ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು. ಈ ಎರಡೂ ರೀತಿಯ ಪ್ರಯತ್ನಗಳು ಇಂದು ಬಹುತೇಕ ದೇಶಗಳಲ್ಲಿ ನಡೆಯುತ್ತಿವೆ.

ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವು ಈ ಎರಡನೆಯ, ಅಂದರೆ ಬದಲಾಗುತ್ತಿರುವ ಪರಿಸ್ಥಿತಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವ, ವಿವಿಧ ದೇಶಗಳ ಪ್ರಯತ್ನಗಳನ್ನು ಕ್ರೋಡೀಕರಿಸಿ, ಜಾಗತಿಕ ಮಟ್ಟದ ವರದಿಯನ್ನು 2014ರಿಂದ ಪ್ರಕಟಿಸುತ್ತಿದೆ. ಈ ಸರಣಿಯ ಐದನೆಯ ವರದಿ ಕಳೆದ ವರ್ಷ ಪ್ರಕಟವಾಗಿದ್ದು, ಬದಲಾಗುತ್ತಿರುವ ಪರಿಸ್ಥಿತಿಗೆ ಹೊಂದಿಕೊಳ್ಳುವ ನಮ್ಮ ಪ್ರಯತ್ನದಲ್ಲಿ ತಂತ್ರಜ್ಞಾನ ಪ್ರೇರಿತ, ಎಂಜಿನಿ ಯರಿಂಗ್ ಚಾಲಿತ ಅತ್ಯಧಿಕ ಬಂಡವಾಳದ ‘ಬೂದು ಪರಿಹಾರ’ಕ್ಕಿಂತ (ಗ್ರೇ ಸಲ್ಯೂಷನ್), ನೈಸರ್ಗಿಕ ವ್ಯವಸ್ಥೆಗಳನ್ನು ಬಲಪಡಿಸುವ ‘ನಿಸರ್ಗಾಧಾರಿತ ಪರಿಹಾರ’ಗಳಿಗೆ ಅತಿ ಹೆಚ್ಚಿನ ಗಮನ ನೀಡಬೇಕಾದ ತುರ್ತು ಅಗತ್ಯವನ್ನು ಒತ್ತಿ ಹೇಳಿದೆ. ಪ್ರಕೃತಿ ವ್ಯವಸ್ಥೆಗಳನ್ನು ಗೌರವಿಸಿ, ನೈಸರ್ಗಿಕ ಸಂಪನ್ಮೂಲಗಳನ್ನು ಹಿತಮಿತವಾಗಿ ಎಚ್ಚರಿಕೆಯಿಂದ ಬಳಸುತ್ತಿದ್ದ ಸಾಂಪ್ರದಾಯಿಕ ಜಾಣ್ಮೆಗೆ ಮೊರೆ ಹೋಗಬೇಕೆಂಬ ವಾದವನ್ನು ಜಾಗತಿಕಮಟ್ಟದಲ್ಲಿ ಎತ್ತಿ ಹಿಡಿದಿದೆ.

ಎಲ್ಲ ನೈಸರ್ಗಿಕ ಪರಿಸರ ವ್ಯವಸ್ಥೆಗಳಿಗೂ ಅಸ್ವಸ್ಥತೆಯನ್ನು ತಕ್ಕಮಟ್ಟಿಗೆ ದುರಸ್ತಿ ಮಾಡಿಕೊಳ್ಳುವ ಅಂತರ್ಗತ ಸಾಮರ್ಥ್ಯವಿದೆ. ನಶಿಸಿಹೋಗುತ್ತಿರುವ ಈ ಸಾಮರ್ಥ್ಯವನ್ನು ಪುನರುಜ್ಜೀವಿಸಿ, ವಾಯುಗುಣ ಬದಲಾವಣೆಯ ಪರಿಣಾಮಗಳನ್ನು ಎದುರಿಸುವ ಜಾಣ್ಮೆಯೇ ನಿಸರ್ಗಾಧಾರಿತ ಪರಿಹಾರದ ತಿರುಳು. ಇಲ್ಲಿ ಬೃಹತ್ ಅಣೆಕಟ್ಟೆಗಳ ನಿರ್ಮಾಣಕ್ಕೆ ಅವಕಾಶವಿಲ್ಲ. ವಿಶಾಲವಾದ ಜಲಾಶಯಗಳಿಲ್ಲ. ಸಮುದ್ರದ ಅಲೆಗಳ ಕೊರೆತ ಎದುರಿಸಲು ತಡೆಗೋಡೆಗಳಿಲ್ಲ. ಅವುಗಳ ಬದಲಿಗೆ ತರಿಭೂಮಿಯ ಪುನರುಜ್ಜೀವನ ಮತ್ತು ಸಂರಕ್ಷಣೆಯಿಂದ ಪ್ರವಾಹವನ್ನು ನಿರ್ವಹಿಸುವ ಜಾಣ್ಮೆಯಿದೆ. ಅರಣ್ಯೀಕರಣ ದಿಂದ ಮಣ್ಣಿನ ಸವಕಳಿಯನ್ನು ತಡೆದು, ಅಂತರ್ಜಲದ ಮರುಪೂರಣ ಮಾಡಿ, ಬರಗಾಲವನ್ನು ಎದುರಿಸುವ ಉಪಾಯಗಳಿವೆ. ಹವಳದ ದಿಬ್ಬಗಳು ಮತ್ತು ಕಾಂಡ್ಲಾ ಸಸ್ಯಗಳ ನಿರ್ವಹಣೆಯಿಂದ ಸಮುದ್ರದ ಅಲೆಗಳ ಕೊರೆತ ವನ್ನು ತಡೆಯುವ ಕೌಶಲವಿದೆ. ವಿವಿಧ ನಿಸರ್ಗಾಧಾರಿತ ಪರಿಹಾರಗಳನ್ನು ಯಶಸ್ವಿಯಾಗಿ ಬಳಸಿಕೊಂಡು ನೀರು, ನೆಲ, ಜೀವವೈವಿಧ್ಯಗಳನ್ನು ಸಂರಕ್ಷಿಸಿರುವ ನೂರಾರು ಸ್ಥಳೀಯ ನಿದರ್ಶನಗಳು ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ದೊರೆಯುತ್ತವೆ.

ಇಂತಹ ಪರಿಹಾರದ ಅತಿಮುಖ್ಯ ಅನುಕೂಲ ವೆಂದರೆ, ಸಮಸ್ಯೆಯೊಂದನ್ನು ಪರಿಹರಿಸುವ ಪ್ರಯತ್ನದಲ್ಲಿ ಅದು ಹೊಸ ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ. ಬದಲಿಗೆ ಏಕಕಾಲದಲ್ಲಿ ಅನೇಕ ಹೊಸ ಪ್ರಯೋಜನ ಗಳನ್ನು ಒದಗಿಸುತ್ತದೆ. ಪರಿಹಾರವೂ ಬಹುತೇಕ ಶಾಶ್ವತ. ಆದರೆ ಇದೇ ಮಾತನ್ನು ಬೂದು ಪರಿಹಾರಗಳ ಬಗ್ಗೆ ಹೇಳುವಂತಿಲ್ಲ. ಈ ಎರಡು ಪರಿಹಾರಗಳ ಹೋಲಿಕೆಗೆ ಉದ್ದೇಶಿತ ಮೇಕೆದಾಟು ಅಣೆಕಟ್ಟೆಗಿಂತ ಬೇರೊಂದು ನಿದರ್ಶನ ಬೇಕಿಲ್ಲ. ರಾಜಕೀಯವನ್ನು ಹೊರಗಿಟ್ಟು ಈ ಹೋಲಿಕೆ ಮಾಡೋಣ.

ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ 4.75 ಟಿಎಂಸಿ ಅಡಿಗಳಷ್ಟು ಕುಡಿಯುವ ನೀರನ್ನು ಹೆಚ್ಚುವರಿಯಾಗಿ ಒದಗಿಸುವುದು ಈ ಯೋಜನೆಯ ಉದ್ದೇಶ. 400 ಮೆಗಾವಾಟ್‍ಗಳಷ್ಟು ವಿದ್ಯುತ್‌ ಉತ್ಪಾದನೆಯೂ ಉಂಟು. ಇದಕ್ಕಾಗಿ ಮೇಕೆ ದಾಟುವಿನಿಂದ 1.5 ಕಿ.ಮೀ. ದೂರದ ಒಂಟಿಗೊಂಡ್ಲು ಬಳಿ ಕಾಂಕ್ರೀಟ್ ಗುರುತ್ವ ಅಣೆಕಟ್ಟೆಯನ್ನು ನಿರ್ಮಿಸಲಾಗುತ್ತದೆ. ₹ 9,000 ಕೋಟಿ ಅಂದಾಜು ವೆಚ್ಚದ ಈ ಬೂದು ಯೋಜನೆ ಜಾರಿಯಾದರೆ, ಬೆಂಗಳೂರಿಗೆ ನೀರು ದೊರೆಯುತ್ತದೆ ನಿಜ. ಆದರೆ ಅಣೆಕಟ್ಟೆಯ ನಿರ್ಮಾಣದೊಂದಿಗೆ ಸಮಸ್ಯೆಗಳ ಸರಮಾಲೆಯೇ ಪ್ರಾರಂಭವಾಗುತ್ತದೆ.

ಮೇಕೆದಾಟು ಬಳಿ ಕಾವೇರಿ ಇಕ್ಕಟ್ಟಾದ ಜಾಗದಲ್ಲಿ ಅತಿ ರಭಸವಾಗಿ ಹರಿಯುತ್ತದೆ. ಅಣೆಕಟ್ಟೆಯ ನಿರ್ಮಾಣದಿಂದ ಅದರ ಮೂಲ ಸ್ವರೂಪವೇ ಬದಲಾಗಿ, ನದಿ ನಿಂತ ನೀರಾಗುತ್ತದೆ. 5,000 ಹೆಕ್ಟೇರ್‌ಗಳಷ್ಟು ಅರಣ್ಯವು ಜಲಾಶಯದಲ್ಲಿ ಮುಳುಗುತ್ತದೆ. ‘ಹೊಳೆಮತ್ತಿ’ ಯಂತಹ, ಅಲ್ಲಿನ ಪರಿಸರ ವ್ಯವಸ್ಥೆಯ ಮೇಲೆ ಗಾಢ ಪ್ರಭಾವ ಬೀರುವ ಹಲವು ‘ಮೂಲಾಧಾರ ಪ್ರಭೇದ’ಗಳು ಕಣ್ಮರೆಯಾಗುತ್ತವೆ. ಈ ಭಾಗದಲ್ಲಿರುವ ವಿಶ್ವವಿಖ್ಯಾತ ‘ಹಂಪ್‍ಬ್ಯಾಕ್ ಮಶೀರ್’ ಮೀನು ಅಲ್ಲಿ ಬದುಕುವುದು ಅಸಾಧ್ಯವಾಗುತ್ತದೆ. ವನ್ಯಜೀವಿಗಳ ಆವಾಸ ಮತ್ತಷ್ಟು ತುಂಡಾಗಿ, ನೆಲೆ ಕಳೆದುಕೊಂಡ ವನ್ಯಜೀವಿಗಳು ಅರಣ್ಯದಂಚಿನತ್ತ ಬರುವುದರಿಂದ ಮಾನವ-ವನ್ಯಜೀವಿ ಸಂಘರ್ಷದ ಪ್ರಕರಣಗಳು ಏರುತ್ತವೆ. ಸಸ್ಯಸಮೂಹದ ಸಂಯೋಜನೆ ಬದಲಾಗಿ ಹಲವಾರು ಆಕ್ರಮಣಕಾರಿ ಸಸ್ಯಪ್ರಭೇದಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ನೀರಿನಲ್ಲಿ ಮುಳುಗಿ ಕೊಳೆಯುವ ಸಸ್ಯಸಮೂಹ ಮತ್ತು ಜೌಗುನೆಲ ಉತ್ಪಾದಿಸುವ ಮೀಥೇನ್ ಅನಿಲ ವಾಯುಮಂಡಲಕ್ಕೆ ಸೇರುತ್ತದೆ. ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣ ವಾಗುವ ಮೀಥೇನ್, ಕಾರ್ಬನ್ ಡೈ ಆಕ್ಸೈಡ್‍ಗಿಂತ ಇಪ್ಪತ್ತೊಂದು ಪಟ್ಟು ಹೆಚ್ಚು ಪ್ರಭಾವಶಾಲಿಯೆಂಬ ಅಂಶ ಸಮಸ್ಯೆಯನ್ನು ಮತ್ತಷ್ಟು ತೀವ್ರಗೊಳಿಸುತ್ತದೆ. ಈ ಎಲ್ಲ ಪರಿಣಾಮಗಳಿಗಿಂತ ಹೆಚ್ಚಾಗಿ, ಮುಂದಿನ ಆರೇಳು ದಶಕ ಗಳ ಒಳಗಾಗಿ ಹೂಳು ತುಂಬಿದ ಈ ಅಣೆಕಟ್ಟೆ ನಿರರ್ಥಕ ವಾಗುತ್ತದೆ.

ಮೇಕೆದಾಟು ಅಣೆಕಟ್ಟೆಯನ್ನು ಕಟ್ಟದೆ, ನಿಸರ್ಗಾಧಾರಿತ ವಿಧಾನಗಳಿಂದಲೇ ಬೆಂಗಳೂರಿನ ನೀರಿನ ದಾಹವನ್ನು ತಣಿಸುವುದು ಸಾಧ್ಯವೇ? ‘ಖಂಡಿತವಾಗಿ ಸಾಧ್ಯ’ ಎನ್ನುವುದು ಈ ಸಮಸ್ಯೆಯ ಎಲ್ಲ ಆಯಾಮಗಳನ್ನೂ ವಿವರವಾಗಿ ಅಧ್ಯಯನ ಮಾಡಿ ರುವ, ಭಾರತೀಯ ವಿಜ್ಞಾನ ಮಂದಿರದ ಪರಿಣತ ವಿಜ್ಞಾನಿಗಳ ಆಭಿಪ್ರಾಯ. ಬೆಂಗಳೂರಿನ ವಾರ್ಷಿಕ ಗೃಹ ಬಳಕೆಯ ನೀರಿನ ಬೇಡಿಕೆ ಸುಮಾರು 21 ಟಿಎಂಸಿ ಅಡಿ. ಮಳೆಯಿಂದ ದೊರೆಯುವ ವಾರ್ಷಿಕ ನೀರಿನ ಪ್ರಮಾಣ ಸುಮಾರು 15 ಟಿಎಂಸಿ ಅಡಿ. ಪ್ರತಿವರ್ಷ ನಗರ ಉತ್ಪಾದಿಸುವ 20 ಟಿಎಂಸಿ ಅಡಿಗಳಷ್ಟು ನೀರನ್ನು ಸಂಸ್ಕರಿಸಿ 16 ಟಿಎಂಸಿ ಅಡಿಗಳಷ್ಟು ನೀರನ್ನು ಮತ್ತೆ ಬಳಸಬಹುದು. ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿನ ಕೆರೆಗಳ ಪುನರುಜ್ಜೀವನ, ಮಳೆನೀರಿನ ಸಮರ್ಥ ಸಂಗ್ರಹಣೆ, ಕೊಳಚೆ ನೀರಿನ ಸಂಸ್ಕರಣೆ, ಪುನರ್ಬಳಕೆ ಮತ್ತು ಜವಾಬ್ದಾರಿಯುತ ನಿರ್ವಹಣೆಯಿಂದ ಮೇಕೆದಾಟುವಿನಿಂದ ನೀರು ತರದೇ ನಗರದ ನೀರಿನ ಬೇಡಿಕೆಯನ್ನು ಪೂರೈಸಬಹುದು ಎಂಬುದು ವಿಜ್ಞಾನಿಗಳ ಖಚಿತ ಅಭಿಮತ.

ನಿಸರ್ಗಾಧಾರಿತ ಪರಿಹಾರಗಳನ್ನು ಅನುಷ್ಠಾನಕ್ಕೆ ತರು ವುದರಲ್ಲಿರುವ ಅತಿದೊಡ್ಡ ಅಡ್ಡಿಯೆಂದರೆ ಸರ್ಕಾರಗಳ ನಿರಾಸಕ್ತಿ ಮತ್ತು ಹಣಕಾಸಿನ ಕೊರತೆ. ಬೂದು ಯೋಜನೆ ಗಳಲ್ಲಿ ಹಣದ ಹೊಳೆಯೇ ಹರಿಯುವುದರಿಂದ ಸಂಬಂಧಪಟ್ಟವರಿಗೆಲ್ಲ ಅದರಲ್ಲಿಯೇ ಅಪಾರ ಆಸಕ್ತಿ. ಮಡಗಾಸ್ಕರ್, ಸೆನಗಲ್ ಮುಂತಾದ ದೇಶಗಳಲ್ಲಿ ನಿಸರ್ಗಾಧಾರಿತ ಯೋಜನೆಗಳಿಗೆ ವಿಶ್ವಬ್ಯಾಂಕ್ ಆರ್ಥಿಕ ನೆರವು ನೀಡಿದೆ. ಆದರೆ ಅದರ ಹತ್ತು ಪಾಲಿನಷ್ಟು ಹಣವನ್ನು ಫಾಸಿಲ್ ಇಂಧನದ ಅಭಿವೃದ್ಧಿ, ಬಳಕೆಗಳಿಗೆ ನೀಡಿದೆ. ವಾಯುಗುಣ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ವಿಶೇಷ ಹಣ ಸಹಾಯ ನೀಡುವ ಗ್ಲೋಬಲ್ ಎನ್ವೈರನ್‍ಮೆಂಟ್‍ ಫೆಸಿಲಿಟಿ, ಗ್ರೀನ್ ಕ್ಲೈಮೇಟ್ ಫಂಡ್, ಅಡಾಪ್ಟೇಶನ್ ಫಂಡ್ ಮುಂತಾದ ಎಲ್ಲ ಜಾಗತಿಕ ಸಂಸ್ಥೆಗಳ ಹಣೆಬರಹವೂ ಇದೇ. ಬೂದು ಯೋಜನೆಗಳಿಗೆ ಶೇ 87ರಷ್ಟು ನೆರವು ದೊರೆತರೆ, ನಿಸರ್ಗಾಧಾರಿತ ಯೋಜನೆಗಳಿಗೆ ಶೇ 13, ಸಾಲ ನೀಡಲು ನಿಬಂಧನೆಗಳೂ ಹೆಚ್ಚು.

ವಾಯುಗುಣ ಬದಲಾವಣೆಯ ಗಂಭೀರ ಪರಿಣಾಮ ಗಳನ್ನು ಅಲ್ಪವೆಚ್ಚದಲ್ಲಿ ಸಮರ್ಥವಾಗಿ ಎದುರಿಸಬಲ್ಲ ನಿಸರ್ಗಾಧಾರಿತ ಯೋಜನೆಗಳು ಎಲ್ಲ ಸರ್ಕಾರಗಳಿಗೆ ಆಡಂಬರದ ಪ್ರದರ್ಶಿಕೆಗಳು ಮಾತ್ರ. ಈ ತೋರಿಕೆಯ ಕಾಳಜಿ ಪ್ರಾಮಾಣಿಕ ಆದ್ಯತೆಯಾಗಿ ಬದಲಾಗಬೇಕೆಂಬುದು ವಿಶ್ವಸಂಸ್ಥೆ ವರದಿಯ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT