ಯಾವುದೇ ಪ್ರಶಸ್ತಿ ಪ್ರಕಟವಾದ ಕೂಡಲೇ ಅಭಿನಂದನೆಗಳ ಜೊತೆ ಜೊತೆಗೇ ಆಕ್ಷೇಪಗಳು ಹಿಂಬಾಲಿಸುವುದು ಇತ್ತೀಚೆಗೆ ವಾಡಿಕೆಯಾಗಿಬಿಟ್ಟಿದೆ. ಇಂಥ ಸಂದರ್ಭದ ಟೀಕೆ–ಟಿಪ್ಪಣಿಗಳ ಹಿಂದೆ ಪ್ರಶಸ್ತಿ ದೊರಕದವರ ದುಃಖ ಮತ್ತು ಅಸಮಾಧಾನದ ಪಾತ್ರವನ್ನು ಪೂರ್ತಿಯಾಗಿ ಅಲ್ಲಗಳೆಯಲಾಗದು. ಆದಾಗ್ಯೂ ಪ್ರಶಸ್ತಿಗಳನ್ನು ಕೊಡುವವರು ಮತ್ತು ಪಡೆಯುವವರು ಪ್ರಶ್ನಾತೀತರೂ, ವಿಮರ್ಶಾತೀತರೂ ಆಗಬೇಕಿಲ್ಲ ಎಂಬ ಹಿನ್ನೆಲೆಯಲ್ಲಿ ಇಂತಹ ಟೀಕೆಗಳನ್ನು ಪರಾಂಬರಿಸುವ ಅಗತ್ಯವಿದೆ. ಈ ವಿಷಯ ಕುರಿತ ಚರ್ಚೆ ಎಂದಿಗೂ ಮುಗಿಯದ ಕಥೆ ಎಂಬ ಸ್ಪಷ್ಟ ಅರಿವಿಟ್ಟುಕೊಂಡೇ, ಕಾಲಾನುಸಾರ ಚಿಂತನೆಯ ಕಿಡಿ ಹೊತ್ತಿಸುವ ಮೂಲಕ ಸಂಬಂಧಿಸಿದ ವ್ಯವಸ್ಥೆ ಮತ್ತು ವ್ಯಕ್ತಿಗಳಲ್ಲಿ ಒಂದಿಷ್ಟಾದರೂ ಎಚ್ಚರಿಕೆ ಹುಟ್ಟಿಸುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕಿದೆ.

ಚಂದ್ರಶೇಖರ ಪಾಟೀಲರು ತಮ್ಮದೇ ಆದ ವ್ಯಂಗ್ಯಶೈಲಿಯಲ್ಲಿ ಹೇಳಿದಂತೆ ‘ಪ್ರಶಸ್ತಿ ಪಡೆದು
ಕೊಳ್ಳುವ ಮತ್ತು ಹೊಡೆದುಕೊಳ್ಳುವ’ ಎರಡೂ ಬಗೆಯ ಜನರು ಎಲ್ಲಾ ಕಾಲದಲ್ಲೂ ಇರುವವರೇ. ಆದರೆ, ಪ್ರಶಸ್ತಿ–ಪುರಸ್ಕಾರಗಳ ಹಪಹಪಿ ಮತ್ತು ಪ್ರಚಾರದ ವ್ಯಸನಕ್ಕೆ ಬಲಿಯಾದವರ ಸಂಖ್ಯೆ ಇತ್ತೀಚೆಗಿನ ದಿನಮಾನಗಳಲ್ಲಿ ಯಾವ ಲೆಕ್ಕಾಚಾರಕ್ಕೂ ಸಿಗದಷ್ಟು ಅಗಾಧವಾಗಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ.

ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಆರೇಳು ಸಾವಿರ ಆಕಾಂಕ್ಷಿಗಳ ಅರ್ಜಿ, ಮೂವತ್ತು ಸಾವಿರ ಆನ್ಲೈನ್ ಶಿಫಾರಸುಗಳು ಇಲಾಖೆಯನ್ನು ತಲುಪಿದ್ದು ದಾಖಲೆಯೇ ಸರಿ. ಜೊತೆಗೆ, ಆಕಾಂಕ್ಷಿಗಳ ಅರ್ಜಿಗಳೊಂದಿಗೆ ಸಚಿವರು, ಶಾಸಕರು, ಅಧಿಕಾರಿಗಳು ಮತ್ತು ಮಠಾಧೀಶರ ಶಿಫಾರಸು ಪತ್ರಗಳ ಸುರಿಮಳೆ. ಸಾಧಕರ ಅರ್ಜಿಗಳ ಪ್ರವಾಹ ಯಾವ ರೀತಿಯಲ್ಲಿ ಹರಿದುಬಂದಿತ್ತೆಂದರೆ, ರೋಸಿಹೋದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ತಾವು ಹೋದಲ್ಲೆಲ್ಲ ಸಂಗ್ರಹವಾಗುವ ಅರ್ಜಿಗಳನ್ನು ಹೊತ್ತುತರಲು ಒಂದು ಪ್ರತ್ಯೇಕ ವಾಹನವನ್ನೇ ವ್ಯವಸ್ಥೆ ಮಾಡಿದ್ದರಂತೆ. ಬಹುಶಃ, ಈ ಅನುಭವದ ಹಿನ್ನೆಲೆಯಲ್ಲಿ ಈ ಬಾರಿ ಅರ್ಜಿ ಕರೆಯುವ ಪರಿಪಾಠವನ್ನೇ ನಿಲ್ಲಿಸಿ, ಸಮಿತಿಯ ಮೂಲಕವೇ ಸಾಧಕರನ್ನು ಗುರುತಿಸುವ ವಿಧಾನ ಆರಂಭಿಸಿದ್ದು ಆರೋಗ್ಯಕರ ಮಾರ್ಗ. ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ರಚನೆಯಾದ 64 ಸದಸ್ಯರ ಆಯ್ಕೆ ಸಮಿತಿಯು, 2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಕ್ಕೆ ಸಾಧಕರನ್ನು ಆಯ್ಕೆ ಮಾಡಿದೆ.

ಇಷ್ಟಾಗಿಯೂ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗಳು ವಿವಾದಕ್ಕೆ, ಅಪಸ್ವರಗಳಿಗೆ ಅತೀತವಾಗಲಿಲ್ಲ. ಇದಕ್ಕೆ ಸಾಧಕರ ಆಯ್ಕೆಗೆ ಅಳವಡಿಸಿಕೊಂಡ ಮಾನದಂಡಗಳ ಅಸ್ಪಷ್ಟತೆ, ಕ್ಲಿಷ್ಟತೆ ಜೊತೆಗೆ ಸಲಹಾ ಸಮಿತಿಯ ಆಯ್ಕೆಯ ಪ್ರಾಥಮಿಕ ಹಂತದಲ್ಲಿನ ಎಡವಟ್ಟುಗಳೂ ತಕ್ಕಮಟ್ಟಿಗೆ ಕಾರಣವಾಗಿವೆ. ಸಲಹಾ ಸಮಿತಿಯ ಸದಸ್ಯರ ಪಟ್ಟಿಯನ್ನು ಬಹಿರಂಗವಾಗಿ ಪ್ರಕಟಿಸುವ ಮೂಲಕ ಪಾರದರ್ಶಕತೆಯ ಪ್ರದರ್ಶನದ ಜೊತೆಗೆ ಲಾಬಿಕೋರರಿಗೆ ನೆರವು ನೀಡಿದಂತಾಗಿದ್ದು ವಿಪರ್ಯಾಸಕರ. ಮೊದಲ ಹಂತದಲ್ಲಿ ಸಲಹಾ ಸಮಿತಿಯ ಸದಸ್ಯರಿಗೇ ಅಭಿನಂದನೆ ಸಲ್ಲಿಸುವ, ಸನ್ಮಾನಿಸುವ ಚಟುವಟಿಕೆಗಳು ಆರಂಭವಾದವು. ಅನೇಕ ಸದಸ್ಯರು ತಮ್ಮನ್ನು ಆಯ್ಕೆ ಮಾಡಿದ ಸರ್ಕಾರಕ್ಕೆ ಕೃತಜ್ಞತೆ ಅರ್ಪಿಸುವಲ್ಲಿ ನಿರತರಾದರು.

ಪ್ರತೀ ವರ್ಷ ಸಾಧಕರ ಆಯ್ಕೆಗೆ ಅನುಸರಿಸಲು ನಿಗದಿ ಮಾಡಿಕೊಂಡಿರುವ ಪ್ರಮುಖ ಅಳತೆಗೋಲು
ಗಳಲ್ಲಿ ಪ್ರಾದೇಶಿಕ ಪ್ರಾತಿನಿಧ್ಯ, ಮಹಿಳಾ ಪ್ರಾತಿನಿಧ್ಯ ಹಾಗೂ ಸಾಮಾಜಿಕ ನ್ಯಾಯ ಪ್ರಮುಖವಾದವುಗಳು. ಆದರೆ, ಒಟ್ಟು ಎಪ್ಪತ್ತು ಪುರಸ್ಕೃತರ ಪಟ್ಟಿಯಲ್ಲಿ ಕೇವಲ 12 ಮಹಿಳೆಯರು ಅವಕಾಶ ಪಡೆದಿರು
ವುದು, ಪ್ರದೇಶವಾರು ಸಮತೋಲನದಲ್ಲಿ ಸಾಕಷ್ಟು ಹೊಯ್ದಾಟ ಕಾಣಿಸಿರುವುದು ಗಮನಾರ್ಹ ಕೊರತೆಗಳಾಗಿವೆ. ನಿರ್ದಿಷ್ಟವಾಗಿ ಪತ್ರಕರ್ತರ ಕೋಟಾ ಪರಿಶೀಲಿಸಿದರೆ, ಆಯ್ಕೆಯಾದ ಎಲ್ಲರೂ ದಕ್ಷಿಣ ಕರ್ನಾಟಕಕ್ಕೆ ಸೇರಿರುವುದು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದ ಸಾಧಕರಲ್ಲಿ ಸಹಜವಾಗಿ ಪರಕೀಯ ಭಾವನೆಗೆ ಕಾರಣವಾಗಿದೆ. ಸರಿದೂಗಿಸುವಿಕೆಯ ಕಸರತ್ತು ಸುಲಭಸಾಧ್ಯವಲ್ಲ ಎಂಬ ಅರಿವಿನೊಂದಿಗೇ ಈ ಲೋಪವನ್ನು ಗ್ರಹಿಸುವುದು ಅನಿವಾರ್ಯ.

ಪುರಸ್ಕಾರಕ್ಕೆ ಭಾಜನರಾದ ಮತ್ತು ವಂಚಿತರಾದ ವ್ಯಕ್ತಿಗಳನ್ನು ಪ್ರತ್ಯೇಕ ಘಟಕಗಳಾಗಿ ಅವಲೋಕಿಸಿದಾಗ ಅಭಿವ್ಯಕ್ತಿ ಪಡೆಯುವ ಕಥೆಗಳಲ್ಲಿ ಸ್ವಾರಸ್ಯ, ದುರಂತ, ಯೋಗ್ಯತೆ, ದೈನ್ಯತೆ, ನಿರ್ಲಜ್ಜೆ, ಅಸಹಾಯಕತೆ ಹಾಗೂ ಅಮಾಯಕತೆಗಳನ್ನು ಸ್ಪಷ್ಟವಾಗಿ ಓದಬಹುದು. ಇನ್ನು ವಿವಿಧ ವಲಯಗಳ ಪ್ರಸಿದ್ಧರು ತಮ್ಮ ಒಲವಿನ/ಜಾತಿಯ ಸಾಧಕರ ಸಾಧನೆಯ ಯಾದಿ ಹಿಡಿದು ರಾಜ್ಯೋತ್ಸವ ಪ್ರಶಸ್ತಿಗಾಗಿ ಮಾಡುವ ಕಸರತ್ತಿಗೆ, ಸಿದ್ಧತೆಗೆ ಮಿತಿಯೇ ಇಲ್ಲ. ಅಷ್ಟೇಕೆ, ಈ ವಿಷಯದಲ್ಲಿ ತಮ್ಮ ನಿಲುವಿನ ಪ್ರತಿಭೆಗೆ ಪುರಸ್ಕಾರದ ಕಿರೀಟ ತೊಡಿಸಲು ವಿವಿಧ ಬಣ–ಪಂಥಗಳ ಪಡೆ ಹಿಂದೆ ಬೀಳುವುದಿಲ್ಲ. ಒಟ್ಟಾರೆ, ಪ್ರಶಸ್ತಿ ಪಡೆಯುವ ಅರ್ಹರಿಗಿಂತ ಹೊಡೆಯುವವರ, ಕೊಡಿಸುವವರ, ಲಾಬಿಕೋರರ ಸಂಖ್ಯೆಯೇ ಜಾಸ್ತಿ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಕ್ಕೆ ನಿಯಮವೇನು ಎಂಬ ಪ್ರಶ್ನೆಗೆ ಸಾಹಿತ್ಯಾಸಕ್ತ ಹಿರಿಯರೊಬ್ಬರು ಹೇಳುವಂತೆ, ‘60 ವರ್ಷ ವಯಸ್ಸಾಗಿರಬೇಕು ಮತ್ತು ಅವರ ಹೆಸರನ್ನು ಮುಖ್ಯಮಂತ್ರಿ ಕಚೇರಿ ತಿರಸ್ಕರಿಸಬಾರದು’. ಪ್ರಶಸ್ತಿ ವಲಯದ ಆಗುಹೋಗುಗಳನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಈ ಮಾತಿನಲ್ಲಿರುವ ವ್ಯಂಗ್ಯ ಮತ್ತು ವಾಸ್ತವದ ಅರಿವಿರುತ್ತದೆ.

ಇವೆಲ್ಲ ಮೇಲ್ಪದರದ ವಿಷಯಗಳಿಗೆ ಹೊರತಾಗಿ ಪ್ರಭುತ್ವ ಮತ್ತು ಪ್ರಶಸ್ತಿಗಳ ನಡುವಿನ ಸಂಬಂಧ, ಸಂಘರ್ಷಗಳನ್ನು ಕುರಿತ ಅನೇಕ ಪ್ರತಿಕ್ರಿಯೆಗಳು ವಿಶೇಷ ಗಮನಕ್ಕೆ ಅರ್ಹವಾಗಿರುವುದನ್ನು ಗಂಭೀರ
ವಾಗಿ ಪರಿಗಣಿಸಬೇಕಿದೆ.

ದಿಡ್ಡಳ್ಳಿ ಜನರ ಸಮಸ್ಯೆ ಬಗೆಹರಿಸದ, ರೈತವಿರೋಧಿ ಮಸೂದೆಗಳನ್ನು ಹಿಂದೆಗೆದುಕೊಳ್ಳದ, ದೇವನಹಳ್ಳಿಯ ರೈತರ ಬೇಡಿಕೆಯ ಬಗ್ಗೆ ಸ್ಪಷ್ಟ ನಿಲುವು ತಾಳದ, ನಕ್ಸಲ್ ಹೋರಾಟಗಾರರ ಹಕ್ಕೊತ್ತಾಯಗಳನ್ನು ಪರಿಹರಿಸದ, ಕಾರ್ಪೊರೇಟ್ ಸಂಸ್ಥೆಗಳ ಹಿತಕ್ಕಾಗಿ ಜನಸಮೂಹಗಳ ಒಕ್ಕಲೆಬ್ಬಿಸುವಿಕೆ ನಿಲ್ಲಿಸದ, ಗಣಿಗಾರಿಕೆಗಾಗಿ ಭೂಮಿ–ಅರಣ್ಯ ಪರಭಾರೆ ತಡೆಯದ, ಧರ್ಮಸ್ಥಳ ಪ್ರಕರಣದಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಳ್ಳದ, ಸರ್ಕಾರಿ ಶಾಲೆಗಳನ್ನು ಉಳಿಸದ, ಜನಪರ ಹೋರಾಟಗಳನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ಸೀಮಿತ ಮಾಡಿದ ಸರ್ಕಾರಗಳು ಕೊಡುವ ಪ್ರಶಸ್ತಿಗಳು ಏನನ್ನು ಪ್ರತಿನಿಧಿಸುತ್ತವೆ ಎಂಬ ಸೂಕ್ತ ಪ್ರಶ್ನೆಯನ್ನು ಎತ್ತಿದ್ದಾರೆ ಲೇಖಕ ಕೆ.ಎನ್. ನಂದಕುಮಾರ್. ಪ್ರಭುತ್ವ ಕೊಡಮಾಡುವ ಇಂತಹ ಪುರಸ್ಕಾರಗಳನ್ನು ಪಡೆದುಕೊಳ್ಳುವವರು ಯಾರನ್ನು /ಯಾವುದನ್ನು ಪ್ರತಿನಿಧಿಸುತ್ತಾರೆ, ಪ್ರಶಸ್ತಿ ಪಡೆದವರ ಕೃತಿಗಳಿಗೆ ಮಾತುಗಳಿಗೆ ಯಾವ ಮೌಲ್ಯ ಸೇರಿಕೊಳ್ಳುತ್ತದೆ ಎಂಬುದು ಅವರ ಪ್ರಶ್ನೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಟೀಕಿಸುವ ಕಾಂಗ್ರೆಸ್ ವಿರೋಧಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂಬ ಆರೋಪ ಕೂಡ ಕೆಲವು ವಲಯಗಳಿಂದ ಕೇಳಿಬಂದಿದೆ. ಅಂದರೆ, ನಿಜ ಅರ್ಥದಲ್ಲಿ ಪ್ರಗತಿಪರ ಗುಣವುಳ್ಳ ಇಂತಹ ಪ್ರಭುತ್ವದ ಟೀಕಾಕಾರರು ಪಕ್ಷ ರಾಜಕಾರಣದಲ್ಲಿ ಕಳೆದುಹೋದವರಿಗೆ ಸಹ್ಯವಾಗಿ ಕಾಣಿಸುತ್ತಿಲ್ಲ. ಪ್ರಶಸ್ತಿ ‘ವಿಜೇತರ’ ಪಟ್ಟಿಯಲ್ಲಿ ತಮ್ಮವರೊಬ್ಬರ ಹೆಸರು ನೋಡುತ್ತಲೇ ಅವರ ಫೋನಿಗೊಂದು ಮೆಸೇಜು ಹಾಕಿದ ಲೇಖಕರೊಬ್ಬರು, ‘ದಯವಿಟ್ಟು ಪ್ರಶಸ್ತಿಯನ್ನು ನಿರಾಕರಿಸುವ ಮಾತು ಆಡದಿರಿ’ ಎಂದು ಸದ್ಭಾವನೆ ವ್ಯಕ್ತಪಡಿಸುವ ಮೂಲಕ ತಮ್ಮ ಪ್ರಭುತ್ವವಾದಿ ನಿಲುವನ್ನು ತೋರ್ಪಡಿಸಿದ್ದಾರೆ.

ಮತ್ತೊಂದೆಡೆ ಪುರಸ್ಕಾರಕ್ಕೆ ಈಡಾದ ತಮ್ಮ ಪರಿಚಯದ ಅನೇಕರ ಅರ್ಹತೆಯನ್ನು ಅನುಮೋದಿಸು
ತ್ತಲೇ ರಾಜ್ಯೋತ್ಸವ ಪ್ರಶಸ್ತಿ ‘ರಾಜಸತ್ತೆಯ ಕೆಟ್ಟ ಸಂಪ್ರದಾಯ’ದ ಮುಂದುವರಿಕೆ. ಇಂಥ ಪ್ರಶಸ್ತಿಗಾಗಿ ಆಸೆಪಡುವವರು ಸರ್ಕಾರವನ್ನು ಎಂದೂ ನೇರವಾಗಿ ಟೀಕಿಸಲಾರರು. ಅವರದೇನಿದ್ದರೂ ಚಿಂತನೆಯ ಮುಸುಕಿನೊಳಗಿರುವ ಗುಲಾಮಗಿರಿ ಎನ್ನುತ್ತಾರೆ ಜಿ.ಎನ್. ಅಶೋಕವರ್ಧನ್. ರಾಜ್ಯೋತ್ಸವ ಪ್ರಶಸ್ತಿಗಳು ಪ್ರಜಾಸತ್ತೆಗೆ ಅವಮಾನ ಎಂಬುದು ಅವರ ಖಚಿತ ನಿಲುವು.

ಇಸ್ಮತ್ ಪಜೀರ್ ಅವರದ್ದು ಇನ್ನೊಂದು ಆಯಾಮದ ಆಲೋಚನೆ. ಅವರು, ‘ವೈದ್ಯರಿಗೆ ವೈದ್ಯಕೀಯ ಸೇವೆಗಾಗಿ, ಉದ್ಯಮಿಗಳಿಗೆ ಉದ್ಯಮ ಕ್ಷೇತ್ರದ ಸಾಧನೆಗಾಗಿ, ಸಾಹಿತಿಗಳಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ, ಪತ್ರಕರ್ತನಿಗೆ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿ ನೀಡ
ಬಹುದಾದರೆ– ಕೂಲಿ ಕಾರ್ಮಿಕರಿಗೆ, ಚಪ್ಪಲಿ ಹೊಲಿಯುವವರಿಗೆ, ಕಸ ಗುಡಿಸುವವರಿಗೆ, ತಲೆ ಹೊರೆ ವ್ಯಾಪಾರ ಮಾಡುವವರಿಗೆ, ಅವರವರ ವೃತ್ತಿ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಯಾಕೆ ಪ್ರಶಸ್ತಿ ಕೊಡಬಾರದು?’ ಎಂಬ ಪ್ರಶ್ನೆಯನ್ನು ಮುಂದಿರಿಸಿದ್ದಾರೆ. ಒಂದು ನಾಗರಿಕ ಸಮಾಜಕ್ಕೆ ವೈದ್ಯ, ಪತ್ರಕರ್ತ, ಸಾಹಿತಿ ಎಷ್ಟು ಅಗತ್ಯವೋ, ಕೂಲಿ, ಹಮಾಲಿ, ಚಮ್ಮಾರ, ಮುಂತಾದವರೂ ಅಷ್ಟೇ ಅಗತ್ಯ ಎಂಬುದು ಅವರ ತರ್ಕ.

ಜಾಗತಿಕ ಮನ್ನಣೆ ಗಳಿಸಿರುವ ನೊಬೆಲ್ ಪ್ರಶಸ್ತಿಯೂ ವಿವಾದಕ್ಕೆ ಹೊರತಾಗಿಲ್ಲ ಎಂಬುದು ಮತ್ತೊಂದು ಕಥೆ. ಅಸ್ತಿತ್ವವಾದಿ ಚಿಂತಕ, ಫ್ರೆಂಚ್ ನಾಟಕಕಾರ ಜೀನ್ ಪಾಲ್ ಸಾರ್ತ್ರೆಗೆ 1964ರಲ್ಲಿ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಒಲಿದುಬಂದಿತ್ತು. ಅದನ್ನು ಸರಾಗವಾಗಿ ತಿರಸ್ಕರಿಸಿದ ಆತ ಅದಕ್ಕೆ ನೀಡಿದ ಸರಳ ಕಾರಣ: ‘ಈ ಬಗೆಯ ಪ್ರಶಸ್ತಿಗಳು ನನ್ನ ಬರಹಗಳ ಪರಿಣಾಮಗಳನ್ನು ಮಿತಗೊಳಿಸುತ್ತವೆ’. ಇಂತಹ ‘ತಿರಸ್ಕಾರದ ತಿಳಿವಳಿಕೆ’ಗೆ ತೆರೆದುಕೊಂಡಾಗ ನಮ್ಮ ‘ಪುರಸ್ಕಾರದ ಪುಳಕ’ ನಿಯಂತ್ರಣಕ್ಕೆ ಬಂದೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.