ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕಾಲಧರ್ಮ ಮತ್ತು ಮಾನವ ಸಂಬಂಧ

ಮಾನವ ಸಂಬಂಧಗಳನ್ನು ಬೆಸೆಯುವ ಕೆಲಸಕ್ಕೆ ಬೇಕು ನಿರಂತರ ಪೋಷಣೆ
Last Updated 11 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಜಾತೀಯತೆ ಮತ್ತು ಅಸ್ಪೃಶ್ಯತೆಯು ಸಮಾಜದ ಎರಡು ಪಿಡುಗುಗಳು. ಅವು ಒಂದೇ ನಾಣ್ಯದ ಎರಡು ಮುಖಗಳು. ಸಾಮಾಜಿಕ ಅಸಮಾನತೆ, ಆರ್ಥಿಕ ಅಸಮಾನತೆ, ರಾಜಕೀಯ ಅಸಮಾನತೆ, ಧಾರ್ಮಿಕ ಅಸಮಾನತೆ ಮುಂತಾದ ಎಲ್ಲ ಅಸಮಾನತೆಗಳಿಗೆ ಪ್ರಮುಖ ಕಾರಣಗಳಿವು. ಸಂಘಜೀವನ ಆರಂಭಿಸಿದಂದಿ ನಿಂದ ಇಂದಿನವರೆಗೂ ಮಾನವ ಸಮಾಜವನ್ನು ಇವು ಕಾಡುತ್ತ ಬಂದಿವೆ. ಇವುಗಳ ನಿವಾರಣೆಗಾಗಿ ದೇಶ ವಿದೇಶಗಳ ದಾರ್ಶನಿಕರು ತಮ್ಮ ಜೀವದ ಹಂಗು ತೊರೆದು ಹೋರಾಡಿದ್ದಾರೆ; ಜಾಗೃತಿ ಮೂಡಿಸುತ್ತ ಬಂದಿದ್ದಾರೆ. ಆದರೂ ಅವು ಜೀವಂತವಾಗಿರುವುದು ಪರಮಾಶ್ಚರ್ಯ! ‌

ಅಂದಿನವರು ಹೋರಾಡಿ ಜಾಗೃತಿ ಮೂಡಿಸಿದ್ದರ ಫಲವಾಗಿ ಇಷ್ಟಾದರೂ ಸಡಿಲತೆ ಸಾಧ್ಯವಾಗಿದೆ. ಇವು ಮಾನವಕುಲದ ಪಿಡುಗುಗಳಾಗಿದ್ದು, ಹೆಮ್ಮಾರಿಯಂತೆ ಕಾಡುತ್ತವೆ. ಆಗಿಹೋದ ದಾರ್ಶನಿಕರು ಅವನ್ನು ನಿಯಂತ್ರಿಸಲು ಸಾಧ್ಯವಿಲ್ಲವೆಂದು ಕೈಕಟ್ಟಿ ಕುಳಿತಿದ್ದರೆ, ಇಂದಿನ ಸಾಮಾಜಿಕ ಸಾಮರಸ್ಯ ಕಾಣಬರುತ್ತಿರ
ಲಿಲ್ಲ. ಸಮಾಜವು ಅಮಾನವೀಯ ಆಗಿರುತ್ತಿತ್ತು. ಕ್ರೂರ ಆಚರಣೆಗಳು ಜೀವಂತವಾಗಿ ಇರುತ್ತಿದ್ದವು. ಆಯಾ ಕಾಲಘಟ್ಟದಲ್ಲಿ ಸುಧಾರಕರು ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ಮಾಡಿದ್ದಾರೆ, ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದ್ದಾರೆ.

ಇಲ್ಲೊಂದು ಸಮಯೋಚಿತ ಕಾಲ್ಪನಿಕ ಕಥೆ- ಊರ ಹೊರಗೊಂದು ಆಳವಾದ ಕಂದಕ. ಅದನ್ನು ಹೇಗಾ ದರೂ ಮುಚ್ಚಬೇಕೆಂದು ತೀರ್ಮಾನಿಸಿದ ಅಜ್ಜನೊಬ್ಬ, ಮನೆಯಲ್ಲಿದ್ದಂತಹ ಸಲಾಕೆ, ಗುದ್ದಲಿ, ಬುಟ್ಟಿ ಇತ್ಯಾದಿ ಗಳನ್ನು ತೆಗೆದುಕೊಂಡು ಹೋಗಿ, ಪಕ್ಕದ ಮಣ್ಣನ್ನು ಅಗೆಯತೊಡಗಿದ. ಊರ ಹೊರಗಿನ ಕಂದಕದೆಡೆಗೆ ಬರುವ ಮೊಮ್ಮಗ ತನ್ನ ಅಜ್ಜನ ಈ ಸಾಹಸವನ್ನು ಕಾಣುತ್ತಾನೆ. ಈ ವ್ಯರ್ಥ ಪ್ರಯತ್ನಕ್ಕೆ ತನ್ನ ಅಜ್ಜ ಕೈಹಾಕಿರು ವುದನ್ನು ಕಂಡು- ‘ಅಜ್ಜಾ, ಶತಶತಮಾನದಿಂದ ಈ ಗುಂಡಿಯು ಹಾಗೇ ಉಳಿದುಕೊಂಡು ಬಂದಿದೆ. ಯಾರೂ ಅದನ್ನು ಮುಚ್ಚುವ ಸಾಹಸಕ್ಕೆ ಮುಂದಾಗಿರಲಿಲ್ಲ. ನೀವು ಮುಂದಾಗಿರುವುದನ್ನು ಕಂಡು ನನಗೆ ಅಚ್ಚರಿ ಆಗುತ್ತಿದೆ. ನಿಮಗಿದು ಸಾಧ್ಯವೇ?’ ಎಂದು ಅಜ್ಜನನ್ನು ಕೆಣಕುತ್ತಾನೆ.

‘ಹೌದು ಪುಟ್ಟಾ, ನೀನು ಹೇಳುತ್ತಿರುವುದು ನಿಜಕ್ಕೂ ಸತ್ಯ. ನಮ್ಮೂರಲ್ಲಿ ಆಗಿಹೋದವರೆಲ್ಲ ಈ ಕಂದಕದ ಬಗೆಗೆ ಆಳವಾಗಿ ಆಲೋಚಿಸಲಿಲ್ಲ. ಅವರಂತೆ ನಾನೂ ಸುಮ್ಮನಿರ ಬಹುದಿತ್ತು. ಆದರೆ ಸುಮ್ಮನಿರಲು ನನಗೆ ಆಗುತ್ತಿಲ್ಲ’ ಎಂದ. ‘ಕಂದಕವನ್ನು ಮುಚ್ಚಲು ಸಾಧ್ಯವಿಲ್ಲವೆಂದ ಮೇಲೆ ನೀವ್ಯಾಕೆ ಆ ಕಾರ್ಯಕ್ಕೆ ಮುಂದಾದಿರಿ’ ಎಂದು ಪ್ರಶ್ನಿಸಿದ ಮೊಮ್ಮಗ. ‘ನೀನು ಹೇಳಿದಂತೆ ಕಂದಕ ಮುಚ್ಚಲು ನನ್ನ ಇಡೀ ಆಯುಷ್ಯ ಸವೆದರೂ ಸಾಧ್ಯವಾಗದು. ನನ್ನ ಕಾಲದಲ್ಲಿ ಸ್ವಲ್ಪ ಕಂದಕವನ್ನು ಮುಚ್ಚಿದಂತಹ ಸಂತೃಪ್ತಿ. ನಾನು ಇಷ್ಟು ಮುಚ್ಚುತ್ತೇನೆ. ನನ್ನ ಬಳಿಕ ನನ್ನ ಮಗ ಅದನ್ನು ಮುಚ್ಚುತ್ತ ಹೋಗಲಿ. ಆ ನಿನ್ನ ತಂದೆಯ ಬಳಿಕ ನೀನು ಕಂದಕ ಮುಚ್ಚುವ ಕಾರ್ಯವನ್ನು ಮುನ್ನಡೆಸು. ಹೀಗೆ ಕಂದಕ ಮುಚ್ಚುವ ಕಾರ್ಯವು ತಲೆಮಾರಿನಿಂದ ತಲೆಮಾರಿಗೆ ಮುಂದುವರಿದರೆ, ಒಂದು ದಿನ ಕಂದಕವು ಸಂಪೂರ್ಣವಾಗಿ ಮುಚ್ಚಿ ಹೋಗುತ್ತದೆ’ ಎನ್ನುತ್ತಾನೆ ಅಜ್ಜ.

ಪ್ರಾಜ್ಞರು, ಸಾಮಾಜಿಕ ಕಾಳಜಿಯುಳ್ಳವರು ಅಸಮಾನತೆ ಮತ್ತು ಜಾತೀಯತೆಯೆಂಬ ಆಳವಾದ ಕಂದಕವನ್ನು ಮುಚ್ಚುವ ಕಾರ್ಯವನ್ನು ಧೈರ್ಯವಾಗಿ ಮುನ್ನಡೆಸುತ್ತಾರೆ. ಕೆಲವರು ಕಂದಕವನ್ನು ನಿರ್ಮಿಸುತ್ತಾ ಹೋಗುತ್ತಾರೆ. ಕಂದಕ ಸೃಷ್ಟಿಸುವವರ ಪಟ್ಟಿಯಲ್ಲಿ ನನ್ನ ಹೆಸರು ಸೇರಬಾರದು ಕಂದಾ! ಕಂದಕ ಮುಚ್ಚುವವರ ಮಾಲಿಕೆಯಲ್ಲಿ ನನ್ನ ನಿನ್ನ ಹೆಸರು ವಿರಾಜಮಾನವಾಗಬೇಕು. ಆಗಲೇ ಸಮಸಮಾಜ ಸೃಷ್ಟಿ.

ಅಸಮಾನತೆಯಿಂದ ಕೂಡಿದ ಸಮಾಜವು ಹಲವಾರು ನ್ಯೂನತೆಗಳಿಂದ ತುಂಬಿರುತ್ತದೆ. ಈ ದಿಸೆಯಲ್ಲಿ ಒಂದು ನಕಾರಾತ್ಮಕವಾದ ಸೂತ್ರ-ಅಸ್ಪೃಶ್ಯತೆ + ಜಾತೀಯತೆ= ಅಸಮಾನತೆ.

ಇದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಆಲೋಚಿಸಬೇಕಾಗು ತ್ತದೆ. ಸಮಾಜದಲ್ಲಿ ಇವು ಮೂರೂ ಎಲ್ಲಿಯವರೆಗೆ ಅಸ್ತಿತ್ವದಲ್ಲಿ ಇರುತ್ತವೋ ಅಲ್ಲಿಯವರೆಗೆ ಸಮಸಮಾಜ ನಿರ್ಮಾಣಕ್ಕೆ ಆತಂಕ ಹಾಗೂ ಅಡಚಣೆ.

ಅಸಮಾನತೆಯಿಲ್ಲದ ಸಮಾಜ ರಚನೆ ಯಾವಾಗಲೂ ದೊಡ್ಡ ಸವಾಲು. ಮಾನವ ಸಂಬಂಧ ಬೆಸೆಯುವ ಪ್ರಕ್ರಿಯೆಯು ನಿರಂತರವಾಗಬೇಕು. ಮಾನವ ಸಂಬಂಧದ ಬೆಲೆಯನ್ನು ಅರಿಯದವರು ಜಾತೀಯತೆಗೆ ಒತ್ತಾಸೆ ನೀಡುತ್ತಾರೆ. ಅರಿತವರು ಮಾನವ ಮಾನವರ ನಡುವೆ ಜಾತಿ ಜಾತಿಯ ಮಧ್ಯೆ ಬಾಂಧವ್ಯ ಬೆಸೆಯಲು ಮುಂದಾಗುತ್ತಾರೆ. ಸಂಪ್ರದಾಯಕ್ಕಿಂತ ಸಂಬಂಧ ಮುಖ್ಯ. ಸಾಮಾಜಿಕ ಸಾಮರಸ್ಯ ಅತಿಮುಖ್ಯ.

ಸಮಾನ ಹಂಚಿಕೆಗಾಗಿ ಗೌತಮ ಅರಮನೆ ತೊರೆದ. ಸಾಮ್ರಾಜ್ಯಶಾಹಿಗಳು ಮತ್ತು ಧಾರ್ಮಿಕರು ನಡೆಸುತ್ತಿದ್ದ ಶೋಷಣೆಯ ವಿರುದ್ಧ ಏಸುಕ್ರಿಸ್ತ ಧ್ವನಿಯೆತ್ತಿದ. ಮಹಿಳೆಯರ ಮಾರಾಟವನ್ನು ತಡೆಯುವಲ್ಲಿ ಪೈಗಂಬರ್ ಹಲವಾರು ತೊಂದರೆ ಅನುಭವಿಸಬೇಕಾಯಿತು. ರಾಮಾನುಜಾಚಾರ್ಯ ಮತ್ತು ಮಧ್ವಾಚಾರ್ಯರು ತಮ್ಮ ಚೌಕಟ್ಟಿನೊಳಗಿದ್ದು, ಸಮಾನತೆಯ ಸಂದೇಶ ಸಾರಿದರು. ಕುಲದ ಕಲಹ ಬೇಡವೆಂದರು ಕನಕದಾಸರು. ನಾರಾಯಣ ಗುರು, ಶಂಕರದೇವ, ಕಬೀರದಾಸರು, ಸಂತ ಶಿಶುನಾಳ ಶರೀಫರು, ವೇಮನ, ಹೇಮರೆಡ್ಡಿ ಮಲ್ಲಮ್ಮ, ಗುರುನಾನಕ್ ಮೊದಲಾದವರು ಮಾನವ ಸಂಬಂಧವನ್ನು ಬೆಸೆದರು.

ಬಸವಣ್ಣನವರ ನೇತೃತ್ವದಲ್ಲಿ ಅಲ್ಲಮನ ಅಧ್ಯಕ್ಷತೆಯಲ್ಲಿ ಏಳುನೂರೆಪ್ಪತ್ತು ಗಣಂಗಳು ಸಾಕ್ಷಿಯಾಗಿ ಸಮ ಸಮಾಜ ರಚನೆಗೆ ಯತ್ನಿಸಿದರು. ಮಾನವ ಸಂಬಂಧವನ್ನು ಗಟ್ಟಿಗೊಳಿಸಲು ಸವರ್ಣೀಯನಾದ ಮಧುವರಸ ಮತ್ತು ದಲಿತ ಸಮುದಾಯದ ಸಮಗಾರ ಹರಳಯ್ಯ ದಂಪತಿಗಳು ತಮ್ಮ ಮಕ್ಕಳ ಕಲ್ಯಾಣ ಮಹೋತ್ಸವ ನೆರವೇರಿಸಿದ್ದು ಸುಲಭದ ಮಾತಲ್ಲ. ಜಾತಿ ಭಾವನೆಗಳು ಭದ್ರವಾಗಿದ್ದಂತಹ ದಿನಮಾನಗಳಲ್ಲಿ, ದಮನಿತ ಸಮುದಾಯಗಳ ಮುಖವನ್ನು ನೋಡಲಾಗದಂತಹ ದಿನಗಳಲ್ಲಿ, ರಾಜಬೀದಿಯಲ್ಲಿ ನಡೆಯುವ ಹಕ್ಕು ಇಲ್ಲದ ಆ ಸಂದರ್ಭದಲ್ಲಿ ಸಂಬೋಳಿ... ಸಂಬೋಳಿ ಎಂದು ನುಡಿಯುತ್ತ ಬೀದಿಯಲ್ಲಿ ಕ್ರಮಿಸಬೇಕಾಗಿತ್ತು. ಕೊರಳಲ್ಲಿ ಮಡಕೆಯನ್ನು ಕಟ್ಟಿಕೊಂಡು ಅದರಲ್ಲಿ ಉಗುಳಬೇಕಾಗಿತ್ತು. ರಸ್ತೆಯಲ್ಲಿ ಹಿಂದುಳಿದವರ ಹೆಜ್ಜೆಗಳು ಮೂಡುವಂತಿರಲಿಲ್ಲ. ಅದಕ್ಕಾಗಿ ಸೊಂಟಕ್ಕೆ ಮುಳ್ಳುಕಂಟಿಯನ್ನು ಕಟ್ಟಿಕೊಂಡು ನಡೆಯಬೇಕಾಗಿತ್ತು. ಜಾತಿಯ ಜಟಿಲತೆಯಿಂದ ಜರ್ಜರಿತವಾಗಿದ್ದಂತಹ ಸಮಾಜದಲ್ಲಿ ಸವರ್ಣೀಯರು ಮತ್ತು ಅವರ್ಣೀಯರ ನಡುವೆ ವೈವಾಹಿಕ ಸಂಬಂಧ ಏರ್ಪಡಿಸಿದ್ದು, ವಚನ ಚಳವಳಿಯ ಮಹತ್ತರವಾದ ಅಷ್ಟೇ ದಿಟ್ಟ ಕ್ರಮ. ಹರಳಯ್ಯನ ಮಗ ಶೀಲವಂತ, ಮಧುವಯ್ಯನ ಮಗಳು ಲಾವಣ್ಯವತಿ ಇಬ್ಬರ ಮದುವೆಯು ಉಚ್ಚವರ್ಗ ಮತ್ತು ಕೆಳವರ್ಗದ ನಡುವೆ ಸಂಬಂಧ ಬೆಳೆಸಿತು.

12ನೇ ಶತಮಾನದ ಪರಿಸ್ಥಿತಿ ಹೀಗಿದ್ದರೆ, ಬಾಬಾಸಾಹೇಬ ಅಂಬೇಡ್ಕರರ ಕಾಲದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಕೆರೆ ಮತ್ತು ಬಾವಿಯ ನೀರನ್ನು ಬಳಸುವ ಅವಕಾಶವನ್ನು ನಿರಾಕರಿಸಲಾಗಿತ್ತು. ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳೊಟ್ಟಿಗೆ ಕುಳಿತು ಕಲಿಯುವ ಅವಕಾಶ ಇರಲಿಲ್ಲ. ಸಹಭೋಜನ ಇಲ್ಲವೇ ಇಲ್ಲ.

ಸಂತರು, ಶರಣರು ಮತ್ತು ದಾರ್ಶನಿಕರು ಸರ್ವವನ್ನೂ ಕಳೆದುಕೊಂಡು ಮಾನವ ಸಂಬಂಧವನ್ನು ಗಟ್ಟಿಗೊಳಿಸುತ್ತಾರೆ. ಮೂಲಭೂತವಾದವು ಮಾನವ ಸಂಬಂಧವನ್ನು ಹೊರತುಪಡಿಸಿ, ಉಳಿದುದನ್ನು ಪಡೆಯಲು ಹವಣಿಸುತ್ತದೆ. ಮಾನವ ಸಂಬಂಧವನ್ನು ನಿರಾಕರಿಸುವ ಹಂತದಲ್ಲಿ, ಅನಾಗರಿಕ ಹಾಗೂ ಅಮಾನವೀಯ ಯುಗದತ್ತ ಸಮಾಜವು ತಳ್ಳಲ್ಪಡುತ್ತದೇನೋ ಎಂಬ ಸಂದೇಹ.

ಸಮಕಾಲೀನ ಸಂದರ್ಭದಲ್ಲಿ ಸರ್ವಧರ್ಮ ಮತ್ತು ಸರ್ವಜಾತಿಗಳಲ್ಲೂ ಸ್ವಜಾತಿಯನ್ನು ಮೀರಿ ಅನ್ಯ ಜಾತಿಧರ್ಮಗಳೊಂದಿಗೆ ಸಂಬಂಧ ಕುದುರಿಸುವ ಯತ್ನಗಳು ನಡೆಯುತ್ತಲೇ ಇವೆ. ಈ ಸಂಬಂಧಕ್ಕೆ ಸೇತುವೆ ಪ್ರೀತಿ-ಪ್ರೇಮ. ಸರ್ವಧರ್ಮದ ಆಚೆಗೆ ಒಂದು ಧರ್ಮವಿದೆ. ಅದು ಕಾಲಧರ್ಮ. ಮತಧರ್ಮಗಳು ಮಾನವ ಸಂಬಂಧ ವನ್ನು ನಿರಾಕರಿಸಿದರೆ, ಕಾಲಧರ್ಮವು ಮಾನವ ಸಂಬಂಧವನ್ನು ಮುಂದುವರಿಸುತ್ತದೆ. ಸಮಸಮಾಜ ಸ್ಥಾಪಿಸುವಲ್ಲಿಸಮತೆ + ಮಮತೆ= ಸಮಾನತೆ.

ಬಹುಮುಖ್ಯ ಇವುಗಳ ಪಾತ್ರ. ಇದುವೇ ಸಮಕಾಲೀನ ಧರ್ಮದ ಸೂತ್ರ. ಇಂಥ ಸೂತ್ರಗಳಿಗೆ ಒಳಗಾದಾಗ ಸಮಾಜವು ಸುಸೂತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT