ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್ಐಆರ್) ಕುರಿತು ಚುನಾವಣಾ ಆಯೋಗದ (ಇಸಿಐ) ‘ಕೌಂಟರ್ ಅಫಿಡವಿಟ್’ (ಪ್ರತಿ ಪ್ರಮಾಣ ಪತ್ರ) ಮಾಹಿತಿಯನ್ನು ಚಾನೆಲ್ಗಳು ಪ್ರಸಾರ ಮಾಡಲು ಪ್ರಾರಂಭಿಸಿದಾಗ ನಾವು ಪಟ್ನಾದಲ್ಲಿದ್ದೆವು. ಜನಮುಖಿ ಸಂಘಟನೆಗಳು ಆಯೋಜಿಸಿದ್ದ, ಸಾರ್ವಜನಿಕರ ಅಹವಾಲುಗಳನ್ನು ಆಲಿಸುವ ಒಂದಿಡೀ ದಿನದ ‘ಜನಸುನ್ವಾಯಿ’ ಕಾರ್ಯಕ್ರಮವನ್ನು ಆಗಷ್ಟೇ ಮುಗಿಸಿದ್ದೆವು. ಬಿಹಾರದ ಜನರಿಗೆ ‘ಎಸ್ಐಆರ್’ನಿಂದ ಯಾವ ರೀತಿಯ ಅನುಭವ ಆಗುತ್ತಿದೆ ಎನ್ನುವುದನ್ನು ಅರಿಯುವ ಕಾರ್ಯಕ್ರಮ ಅದಾಗಿತ್ತು. 19 ಜಿಲ್ಲೆಗಳ ಸುಮಾರು 250 ಮಂದಿ ಅದರಲ್ಲಿ ಪಾಲ್ಗೊಂಡಿದ್ದರು; ಹಳ್ಳಿಯಿಂದ ಬಂದವರೇ ಹೆಚ್ಚಾಗಿದ್ದರು.

ಅದರಲ್ಲೂ ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಪಟ್ನಾಗೆ ಬಂದಿದ್ದರು. ಉದ್ಯೋಗಾಕಾಂಕ್ಷಿಗಳು ಪ್ರಮುಖ ಪರೀಕ್ಷೆ ಬರೆಯಲು ರೈಲುಗಳಲ್ಲಿ ಇಡುಕಿರಿದಂತೆ ಪಯಣಿಸಿದ್ದರು. ಕಾವಡಿ ಯಾತ್ರಿಗಳೂ ಪಯಣಿಸುವ ಸಂದರ್ಭ ಇದು. ಅವರ ಜೊತೆಯಲ್ಲೇ ಮಹಿಳೆಯರೂ ರಾತ್ರಿಯಿಡೀ ರೈಲು ಪ್ರಯಾಣ ಮಾಡಿದ್ದರು. ದಣಿದಿದ್ದ ಕೆಲವರು ಆಗೀಗ ಸಣ್ಣ ನಿದ್ದೆ ತೆಗೆಯುತ್ತಿದ್ದರು. ಕುರ್ಚಿ ಮೇಲೆ ಕುಳಿತಿದ್ದರೂ ಪದೇ ಪದೇ ಮೈಮುರಿಯುತ್ತಾ, ತಮಗೆ ಮೈಕೈ ನೋವಾಗಿರುವುದನ್ನು ವ್ಯಕ್ತಪಡಿಸುತ್ತಿದ್ದರು. ನಿವೃತ್ತ ನ್ಯಾಯಮೂರ್ತಿ ಅಂಜನಾ ಪ್ರಕಾಶ್, ವಜಾಹತ್ ಹಬೀಬುಲ್ಲಾ, ಜ್ಯಾಂ ದ್ರೇಜ್, ನಂದಿನಿ ಸುಂದರ್, ಡಿ.ಎಂ. ದಿವಾಕರ್ ಹಾಗೂ ಭವರ್ ಮೇಘವಂಶಿ ಅವರನ್ನು ಒಳಗೊಂಡ ಸಮಿತಿಯ ಮುಂದೆ ಸುಮಾರು ಮೂರು ಡಜನ್ ಜನರು ತಮ್ಮ ಅನುಭವಗಳನ್ನು ಹೇಳಿಕೊಂಡರು.

ಚುನಾವಣಾ ಆಯೋಗದ ಅಫಿಡವಿಟ್ ಅನ್ನು ನಾವು ರಾತ್ರಿ ಓದಿದೆವು. ಇಡೀ ದಿನ ಬಿಹಾರದ ಬೇರೆ ಬೇರೆ ಆಡುಮಾತುಗಳಲ್ಲಿ ನಾವು ಕೇಳಿದ್ದ ಅನುಭವಗಳೆಲ್ಲ ಒಂದೊಂದಾಗಿ ಮನದಲ್ಲಿ ಮೂಡತೊಡಗಿದವು. ಅದಕ್ಕೂ ಹಿಂದಿನ ಕೆಲವು ವಾರಗಳಲ್ಲಿ ನಡೆದಿದ್ದಕ್ಕೂ, ಅಫಿಡವಿಟ್ನಲ್ಲಿ ಹೇಳಿದ ಸಂಗತಿಗೂ ತಾಳೆಯೇ ಆಗುತ್ತಿರಲಿಲ್ಲ. ಎರಡೂ ಭಿನ್ನ ಜಗತ್ತುಗಳು. ‘ಇಸಿಐ’ ಅಧಿಕೃತ ಖಾತೆಯಲ್ಲಿ ಇದ್ದುದು ಒಂದು ಸೃಜನಶೀಲ ಬರಹದ ತುಣುಕು, ಕಲ್ಪಿತ ಸ್ಥಳದ ಕುರಿತು ಹೆಣೆದ ಬರಹ. ವಾಸ್ತವದಲ್ಲಿ ಅಲ್ಲಿನ ಜನ ಒಂದು ತಿಂಗಳು ಕಂಡಿದ್ದು ಬರೀ ದುಃಸ್ವಪ್ನ.

ಒಂದು ಫೋಟೊ, ಮತದಾರರ ಗುರುತಿನ ಚೀಟಿಯ ಪ್ರತಿ ಹಾಗೂ ಆಧಾರ್ ಕಾರ್ಡ್ ನೀಡುವಂತೆ ಕಟಿಹಾರ್ನ ಹಸನ್ಗಂಜ್ನಿಂದ ಬಂದಿದ್ದ ರೈತಮಹಿಳೆ ಫೂಲ್ಕುಮಾರಿ ದೇವಿ ಅವರನ್ನು ಅಧಿಕಾರಿಗಳು ಕೇಳಿದ್ದರು (ನಿಜಕ್ಕೂ ನಡೆದದ್ದೇನು ಎನ್ನುವುದಕ್ಕೆ ಈ ಪ್ರಸಂಗ ಗಮನಿಸಿ: ‘ಇಸಿಐ’ ಅದಾಗಲೇ ನೀಡಿದ್ದ ಮುದ್ರಿಸಿದ ಅರ್ಜಿಯಲ್ಲಿ ಆ ಮಹಿಳೆಯ ಫೋಟೊ ಇತ್ತು. ಆಧಾರ್ ಸಂಖ್ಯೆಯನ್ನು ಬೇಕಿದ್ದರೆ ನಮೂದಿಸಿ ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು. ಇಸಿಐ ಪ್ರಕಾರ ಆ ಕಾರ್ಡ್ ಸ್ವೀಕಾರಾರ್ಹ ಆಗಿರಲಿಲ್ಲ). ಫೋಟೊ ತೆಗೆಸಲು ಹಾಗೂ ದಾಖಲೆಗಳ ಛಾಯಾಪ್ರತಿ ಮಾಡಿಸಲು ಫೂಲ್ಕುಮಾರಿ, ಪಡಿತರದ ಅಕ್ಕಿಯನ್ನು ಮಾರಾಟ ಮಾಡಿ ಹಣ ಹೊಂದಿಸಿಕೊಂಡಿದ್ದರು. ಅದಕ್ಕೂ ಅವರು ಪಟ್ಟಣಕ್ಕೆ ಹೋಗಬೇಕಿತ್ತು. ಆ ಕೆಲಸಕ್ಕಾಗಿ ಅಲೆದಾಡಿದ್ದರಿಂದ ಎರಡು ದಿನ ಕೂಲಿ ತಪ್ಪಿ, ಹಣ ಸಿಗದೆ, ಹಸಿವಿನಿಂದ ಇರಬೇಕಾಗಿ ಬಂತು.

ಸುಮಾರು 60 ವರ್ಷ ವಯಸ್ಸಿನ ಸುಮಿತ್ರಾ ದೇವಿ, ಸಹರಸ ಎಂಬ ಊರಿನಿಂದ ಬಂದಿದ್ದರು. ವರ್ಷಗಳ ಹಿಂದೆಯೇ ಅಗಲಿದ್ದ ಪೋಷಕರ ದಾಖಲೆಗಳು, ತನ್ನ ಜಾತಿ ಪ್ರಮಾಣಪತ್ರ ಹಾಗೂ ವಾಸಸ್ಥಾನ ದೃಢೀಕರಿಸುವ ಪತ್ರವನ್ನು ಕೇಳಿದ್ದರು ಎನ್ನುವ ಅನುಭವವನ್ನು ಅವರು ಹೇಳಿಕೊಂಡರು. ಕೇಳಿದ ದಾಖಲೆಗಳನ್ನು ಒದಗಿಸದೇ ಇದ್ದಲ್ಲಿ ‘ಸರ್ಕಾರ್ ಕೆ ಲೋಗ್’ (ಸರ್ಕಾರದ ಜನ) ಎನ್ನುವ ಸ್ಥಾನಮಾನವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದವರಿಗೆ ಎಚ್ಚರಿಕೆ ನೀಡಲಾಗಿತ್ತು. ಜಾತಿ ಪ್ರಮಾಣಪತ್ರ ಮಾಡಿಸಲು ಅವರು ₹300 ಖರ್ಚು ಮಾಡಿದ್ದರು. ಆದರೂ ಜಾತಿ ಪ್ರಮಾಣಪತ್ರವಿನ್ನೂ ಕೈ ಸೇರಿರಲಿಲ್ಲ. ಸಹರಸದವರೇ ಆದ ಗೋವಿಂದ್ ಪಾಸ್ವಾನ್ ಅವರನ್ನು ಪಾಸ್ಬುಕ್ ಹಾಗೂ ಭೂದಾಖಲೆಗಳನ್ನು ಕೇಳಲಾಗಿತ್ತು (ವಾಸ್ತವ ಏನೆಂದರೆ, ಸುಮಿತ್ರಾ ದೇವಿ ಹಾಗೂ ಗೋವಿಂದ್ ಇಬ್ಬರ ಹೆಸರುಗಳೂ 2003ರ ಮತದಾರರ ಪಟ್ಟಿಯಲ್ಲಿ ಇದ್ದವು. ಯಾವ ದಾಖಲೆಗಳನ್ನು ಒದಗಿಸುವ ಅಗತ್ಯವೂ ಅವರಿಗೆ ಇರಲಿಲ್ಲ).

ದಾಖಲೆಗಳನ್ನು ಮಾಡಿಸಿಕೊಡುವುದಾಗಿ ಹಣ ಪೀಕುವ ಮಧ್ಯವರ್ತಿಗಳ ಕಥೆಗಳೂ ನಮ್ಮ ಕಿವಿಮೇಲೆ ಬಿದ್ದವು. ಅಂಗನವಾಡಿ ಕಾರ್ಯಕರ್ತೆಯೊಬ್ಬರ ಪತಿ ‘ಬಿಎಲ್ಒ’. ಅವರು ಅರ್ಜಿ ತುಂಬಿಕೊಡಲು ಬಡವರಿಂದ ₹100 ವಸೂಲಿ ಮಾಡುತ್ತಿದ್ದರು. ಅನೇಕ ಮಹಿಳೆಯರು ತಮ್ಮ ತವರೂರುಗಳಿಂದ (ಬಹುತೇಕರು ಅಸ್ಸಾಂನವರು) ದಾಖಲೆಗಳನ್ನು ತರಲು ಅನುಭವಿಸುತ್ತಿರುವ ಪಡಿಪಾಟಲು ಬಿಚ್ಚಿಟ್ಟರು. 2003ರ ಮತದಾರರ ಪಟ್ಟಿಯಲ್ಲಿ ಅವರ ತಂದೆ–ತಾಯಿಯರ ಹೆಸರಿದ್ದರೂ ದಾಖಲೆಗಳನ್ನು ಮತ್ತೆ ಕೇಳಲಾಗಿತ್ತು.

ಈ ಘಟನೆಗಳನ್ನು ನೋಡಿದರೆ, ವಲಸೆ ಕಾರ್ಮಿಕರು ‘ಇಸಿಐನೆಟ್’ ಆ್ಯಪ್ನಲ್ಲಿ ಮೊಬೈಲ್ ನಂಬರ್ ಬಳಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಇರುವ ವ್ಯವಸ್ಥೆಯೇ ನಗೆಪಾಟಲು ಎಂದಾಯಿತು. ‘ಸ್ಟ್ರ್ಯಾಂಡೆಡ್ ವರ್ಕರ್ಸ್ ಆ್ಯಕ್ಷನ್ ಕಮಿಟಿ’ಯು ಗುರುತಿಸಿರುವ ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಜನರ ಅಹವಾಲು ಕೇಳಿದ ಕಾರ್ಯಕ್ರಮದಲ್ಲಿ ಮಂಡಿಸಲಾಯಿತು. ಬಿಹಾರದ ಹೊರಗೆ ಕೆಲಸ ಮಾಡುತ್ತಿರುವ 235 ಕಾರ್ಮಿಕರನ್ನು ಫೋನ್ ಮೂಲಕ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಮೂರನೇ ಒಂದು ಭಾಗದಷ್ಟು
ಕಾರ್ಮಿಕರು ‘ಎಸ್ಐಆರ್’ ಎನ್ನುವುದನ್ನು ಕೇಳಿಯೇ ಇರಲಿಲ್ಲ. ಆನ್ಲೈನ್ ಮೂಲಕ ಮತದಾರರ ಪಟ್ಟಿ ಸೇರಲು ಅರ್ಜಿ ಸಲ್ಲಿಸಬಹುದು ಎನ್ನುವ ವಿಷಯ ಗೊತ್ತಿದ್ದುದು ಹತ್ತನೇ ಒಂದರಷ್ಟು ವಲಸೆ ಕಾರ್ಮಿಕರಿಗೆ ಮಾತ್ರ.

ಚುನಾವಣಾ ಆಯೋಗದ ಅಧಿಕೃತ ಕಲ್ಪಿತ ಕಥೆಯ ಒಂದು ಅಂಶವನ್ನು ವಾಸ್ತವದೊಂದಿಗೆ ಹೋಲಿಸಿ ನೋಡೋಣ. ‘ಎಸ್ಐಆರ್’ ಆದೇಶದ ಮಾರ್ಗಸೂಚಿ 3 (ಬಿ) ಪ್ರಕಾರ, ಬಿಎಲ್ಒಗಳು ಪ್ರತಿ ಮನೆಗೂ ಹೋಗಿ, ಮತದಾರರ ಪಟ್ಟಿ ಸೇರ್ಪಡೆಯ ಅರ್ಜಿ ವಿತರಿಸಬೇಕು. ಅಷ್ಟೇ ಅಲ್ಲ, ಈಗ ಮತದಾರರ ಪಟ್ಟಿಯಲ್ಲಿ ಇರುವವರ ಮಾಹಿತಿಯನ್ನು ಮೊದಲೇ ಮುದ್ರಿಸಿ, ಅದರ ಪ್ರತಿಯನ್ನು ನೀಡಬೇಕು. ಅರ್ಜಿ ತುಂಬಲು ಎಲ್ಲರಿಗೂ ಮಾರ್ಗದರ್ಶನ ಮಾಡಬೇಕು. ಈ ಸರಳವಾದ ಮಾರ್ಗಸೂಚಿಯಲ್ಲಿ ಆರು ಕೆಲಸಗಳು ಅಡಕವಾಗಿವೆ. ಇದೇ ‘ಇಸಿಐ’ನ ಆರು ಸುಳ್ಳುಗಳನ್ನು ಅನಾವರಣಗೊಳಿಸುತ್ತದೆ.

ಬಿಎಲ್ಒಗಳು ತಮ್ಮ ಬೂತ್ ವ್ಯಾಪ್ತಿಯ ಎಲ್ಲ ಮನೆಗಳಿಗೂ ಹೋಗಬೇಕು. ಆದರೆ, ಅವರು ಹೋಗಿಯೇ ಇಲ್ಲ. ಕೆಲಸ ಮುಗಿಸಲು ಅಸಾಧ್ಯ ಎನ್ನುವಂತಹ ಗಡುವು ವಿಧಿಸಿದ್ದರಿಂದ ಹೋಗಲು ಅವರಿಗೆ ಸಾಧ್ಯವಾಗಿಲ್ಲ. ಅವರು ಮೊದಲ ಕೆಲವು ದಿನ ಮನೆಗಳಿಗೆ ಭೇಟಿ ನೀಡಿದರು. ‘ಮನೆ ಮನೆಗೆ ಹೋಗಿ ಕಾಲಹರಣ ಮಾಡಬೇಡಿ’ ಎಂಬ ಸೂಚನೆ ಬಂದಿದ್ದೇ ಸುಮ್ಮನಾದರು. ಅರ್ಧದಷ್ಟು ಪ್ರಕರಣಗಳಲ್ಲಿ ಬಿಎಲ್ಒಗಳನ್ನು ಹುಡುಕಿಕೊಂಡು ಮತದಾರರು ಓಡಾಡುತ್ತಿದ್ದಾರೆಯೇ ವಿನಾ, ಮತದಾರರನ್ನು ಹುಡುಕುವ ಕರ್ತವ್ಯಕ್ಕೆ ಬಿಎಲ್ಒಗಳು ಹೋಗಿಲ್ಲ. ಅರ್ಜಿಗಳನ್ನು ಬಿಎಲ್ಒಗಳು ವಿತರಿಸಬೇಕಿತ್ತು. ಆದರೆ, ನಗರ ಪ್ರದೇಶಗಳಲ್ಲಿ ಮುನ್ಸಿಪಲ್ ಸಿಬ್ಬಂದಿ ಆ ಕೆಲಸ ಮಾಡಿದ್ದಾರೆ. ಪ್ರತಿ ಮತದಾರರಿಗೆ ಪೂರ್ವ ಮಾಹಿತಿಯನ್ನು ಮುದ್ರಿಸಿದ ಪ್ರತ್ಯೇಕ ಅರ್ಜಿ ನೀಡಬೇಕು. ಪಟ್ನಾ ಸೇರಿದಂತೆ ಬಹುತೇಕ ನಗರ ಪ್ರದೇಶಗಳಲ್ಲಿ ಖಾಲಿ ಅರ್ಜಿಗಳನ್ನು ವಿತರಿಸಿದ್ದಾರೆ. ಈಗಿನ ಮತದಾರರ ಪಟ್ಟಿಯ ಅನ್ವಯ ಪ್ರತಿ ಮತದಾರರಿಗೆ ಅರ್ಜಿ ವಿತರಿಸಬೇಕು. ಆದರೆ, ಪಟ್ಟಿಯಲ್ಲಿ ಇರುವ ಎಷ್ಟೋ ಜನರಿಗೆ ಅರ್ಜಿಗಳೇ ಸಿಕ್ಕಿಲ್ಲ. ಭರ್ತಿ ಮಾಡಿದ ಅರ್ಜಿಯ ಒಂದು ಪ್ರತಿಯನ್ನು ಮತದಾರರಿಗೆ ನೀಡಬೇಕು, ಇನ್ನೊಂದು ಪ್ರತಿಯನ್ನು ಬಿಎಲ್ಒ ಇಟ್ಟುಕೊಳ್ಳಬೇಕು. ಇದಂತೂ ಬಹುತೇಕ ಕಡೆ ನಡೆದೇ ಇಲ್ಲ. ಮತದಾರರೇ ಬಲವಂತ ಮಾಡಿ, ಒಂದು ಛಾಯಾಪ್ರತಿ ತೆಗೆಸಿಕೊಂಡು ಬಂದು, ದುಂಬಾಲು ಬಿದ್ದರಷ್ಟೇ ಬಿಎಲ್ಒಗಳು ಸ್ವೀಕೃತಿ ಮುದ್ರೆ ಒತ್ತಿಕೊಟ್ಟಿರುವ ಉದಾಹರಣೆಗಳಿವೆ. ಬಿಎಲ್ಒಗಳು ಅರ್ಜಿ ತುಂಬಲು ಮಾರ್ಗದರ್ಶನ ನೀಡಬೇಕು. ಬಡಪಾಯಿ ಬಿಎಲ್ಒಗಳಿಗೆ ಅದಕ್ಕೆ ಸಮಯವಾದರೂ ಎಲ್ಲಿದೆ? ಮೊದಲೇ ಅವರು ಈ ಕಾರ್ಯಭಾರದ ಒತ್ತಡದಿಂದ ನಲುಗಿದ್ದಾರೆ. ಮತದಾರರಿಗೆ ಅವರು ತಪ್ಪು ಮಾರ್ಗದರ್ಶನ ಮಾಡದಿದ್ದರೆ ಸಾಕು ಎನ್ನುವ ಸ್ಥಿತಿ ಇದೆ.

‘ಎಸ್ಐಆರ್’ಗೆ ಸಂಬಂಧಿಸಿದ ವಂಚನೆಗಳನ್ನು ಪತ್ರಕರ್ತ ಅಜಿತ್ ಅಂಜುಮ್ ವಿಡಿಯೊ ವರದಿಗಳ ಮೂಲಕ ಬಯಲು ಮಾಡಿದ್ದಾರೆ. ಮತದಾರರ ಪಟ್ಟಿ ಸೇರಲು ಅರ್ಜಿ ಹಾಕಿರುವವರ ಗಮನಕ್ಕೇ ತಾರದೆ ಅರ್ಜಿಗಳನ್ನು ತುಂಬಿರುವ ಪ್ರಸಂಗಗಳನ್ನು ಅವರು ತೋರಿಸಿದ್ದಾರೆ. ಅನೇಕ ಮತದಾರರು ಈ ಅಕ್ರಮದ ಕುರಿತು ಹಂಚಿಕೊಂಡ ಅನುಭವಗಳನ್ನು ನಾವೂ ಕೇಳಿಸಿಕೊಂಡೆವು. ಊರಿನಲ್ಲಿ ಇಲ್ಲದ ಮತದಾರರ ಪರವಾಗಿ ಅವರ ಕುಟುಂಬದವರು ಸಹಿ ಹಾಕಿಲ್ಲ. ಇನ್ನಷ್ಟು ಪ್ರಕರಣಗಳಲ್ಲಿ ಮತದಾರರ ಗಮನಕ್ಕೆ ಬಾರದೆ ಇದ್ದರೂ ಅರ್ಜಿ ಸಲ್ಲಿಸಲಾಗಿದೆ ಎಂದು ‘ಬಿಎಲ್ಒ’ಗಳು ಹೇಳಿ ಕೈತೊಳೆದುಕೊಂಡಿದ್ದಾರೆ. ‘ಇಸಿಐ’ ವೆಬ್ಸೈಟ್ನಲ್ಲಿ, ‘ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ, ಮತ್ತೆ ಸಲ್ಲಿಸಲು ಅವಕಾಶವಿಲ್ಲ’ ಎಂಬ ಒಕ್ಕಣೆ ಕಂಡು ದಂಗಾದವರೂ ಇದ್ದಾರೆ. ‘ಇಸಿಐ’ ಹೇಳಿಕೊಂಡಿರುವಂತೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಶೇ 98.01ರಷ್ಟು ಯಶಸ್ವಿಯಾಗಿದೆ. ವಾಸ್ತವದಲ್ಲಿ, ಆ ಪೈಕಿ ಕಾಲು ಭಾಗ ಅರ್ಜಿಗಳು ಸಲ್ಲಿಕೆಯಾಗಿರುವುದು ಅದನ್ನು ಸಲ್ಲಿಸಿದ್ದಾರೆ ಎನ್ನಲಾದ ಮತದಾರರಿಗೇ ಗೊತ್ತಿಲ್ಲ! ಇದೊಂದು ದೊಡ್ಡ ವಂಚನೆ. ಇವು, ಬೃಹತ್ ಯೋಜನೆಯ ಜಾರಿಯಲ್ಲಿ ಸಹಜವಾಗಿ ಆಗಬಹುದಾದ ಕ್ರಿಯಾಲೋಪಗಳಲ್ಲ. ‘ಎಸ್ಐಆರ್’ ಕುರಿತು ಇರುವ ಗೊಂದಲಗಳ ಫಲಿತ ಇದು.

ಕೇವಲ 24 ಗಂಟೆಗಳಲ್ಲಿ ಅಧಿಸೂಚನೆ ಹೊರಡಿಸಿ, 4 ವಾರಗಳಲ್ಲಿ 8 ಕೋಟಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮಾಡಲು ಹೊರಟರೆ ಹೀಗೆಯೇ ಆಗುವುದು. ಇದಕ್ಕೆ ಬಿಎಲ್ಒಗಳನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಯೋಜನೆಯ ವಿನ್ಯಾಸದ ಲೋಪ ಇದು; ‘ಇಸಿಐ’ ನಿರ್ಧಾರದ ಹುಳುಕು. ಆಡಳಿತಶಾಹಿಗೆ ಅಚ್ಚುಕಟ್ಟಾಗಿ ಮುಗಿಸಲು ಆಗದಂತಹ ಕಾರ್ಯ ವಹಿಸಿದರೆ ಹೀಗೆಯೇ ಆಗುವುದು. ಈಗಲೂ ಕಾಲ ಮಿಂಚಿಲ್ಲ. ಜನರ ಮೇಲಿನ ಇಂತಹ ಪ್ರಯೋಗವನ್ನು ಬರ್ಖಾಸ್ತುಗೊಳಿಸಬೇಕು.

ಪಟ್ನಾದಲ್ಲಿ ನಡೆದ ‘ಜನಸುನ್ವಾಯಿ’– ಎಸ್ಐಆರ್ ತಡೆಹಿಡಿಯುವುದೇ ಸರಿ ಎಂಬ ನಿರ್ಣಯದೊಂದಿಗೆ ಮುಕ್ತಾಯಗೊಂಡಿತು.

(ಕಾಮಾಯನಿ ಸ್ವಾಮಿ ಅವರು ಬಿಹಾರದಲ್ಲಿ ಭಾರತ್ ಜೋಡೊ ಆಂದೋಲನದ ಸಂಯೋಜಕರು. ರಾಹುಲ್ ಶಾಸ್ತ್ರಿ, ಯೋಗೇಂದ್ರ ಯಾದವ್ ಇಬ್ಬರೂ ಭಾರತ್ ಜೋಡೊ ಅಭಿಯಾನದ ರಾಷ್ಟ್ರೀಯ ತಂಡದಲ್ಲಿ ಕೆಲಸ ಮಾಡುತ್ತಾರೆ. ಯೋಗೇಂದ್ರ ಯಾದವ್ ಅವರು ‘ಎಸ್ಐಆರ್’ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದಾರೆ.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.