ಪಂಚಾಯಿತಿ ಸದಸ್ಯರು ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಿದ್ಯಾರ್ಹತೆ ಹೊಂದಿರಬೇಕು ಎಂದು ಹರಿಯಾಣ ಸರ್ಕಾರ 2015ರ ಸೆಪ್ಟೆಂಬರ್ನಲ್ಲಿ ತಂದಿರುವ ಪಂಚಾಯತ್ ರಾಜ್ ತಿದ್ದುಪಡಿ ಮಸೂದೆಯನ್ನು ಸುಪ್ರೀಂಕೋರ್ಟ್ ಡಿಸೆಂಬರ್ 10ರಂದು ಎತ್ತಿ ಹಿಡಿದಿದೆ. ಇದರಿಂದ, ಸರ್ವರನ್ನೂ ಒಳಗೊಂಡ ಗ್ರಾಮೀಣಾಭಿವೃದ್ಧಿಯ ಬುಡಕ್ಕೇ ಕೊಡಲಿ ಏಟು ಬಿದ್ದಂತಾಗಿದೆ. ಧ್ವನಿಯಿಲ್ಲದವರ ಗಂಟಲನ್ನು ಒತ್ತಿ ಹಿಡಿದು ಕೂಗು ಎಂದಂತಾಗಿದೆ. ಇದು ದೇಶದಲ್ಲಿ ಮುಂಚೂಣಿಯಲ್ಲಿರುವ ಕ್ರಾಂತಿಕಾರಿ ಪಂಚಾಯತ್ ರಾಜ್ ಬೆಳವಣಿಗೆಗೆ ಆದ ಹಿನ್ನಡೆಯಾಗಿದೆ.

ಹರಿಯಾಣ ಪಂಚಾಯತ್ ರಾಜ್ ತಿದ್ದುಪಡಿ ಮಸೂದೆಯ ಪ್ರಕಾರ ಪಂಚಾಯತ್ ರಾಜ್ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಇರಬೇಕಾದ ಕನಿಷ್ಠ ವಿದ್ಯಾರ್ಹತೆಗಳು ಹೀಗಿವೆ: ಸಾಮಾನ್ಯ ವರ್ಗದ ಪುರುಷರಿಗೆ ಮೆಟ್ರಿಕ್ಯುಲೇಷನ್, ಸಾಮಾನ್ಯ ವರ್ಗದ ಮಹಿಳೆಯರಿಗೆ 8ನೇ ತರಗತಿ, ಪರಿಶಿಷ್ಟ ಜಾತಿಯ ಪುರುಷರಿಗೆ 8ನೇ ತರಗತಿ, ಪರಿಶಿಷ್ಟ ಜಾತಿಯ ಮಹಿಳೆಯರಿಗೆ 5ನೇ ತರಗತಿ. ಇದರ ಜೊತೆಗೆ, ಎಲ್ಲ ಅಭ್ಯರ್ಥಿಗಳ ಮನೆಯಲ್ಲೂ ಸುಸ್ಥಿತಿಯಲ್ಲಿರುವ ಶೌಚಗೃಹ ಇರಬೇಕು, ಸಹಕಾರಿ ಬ್ಯಾಂಕ್ಗಳಲ್ಲಿ ಯಾವುದೇ ಸಾಲ ಇರಕೂಡದು ಹಾಗೂ ನಿಯಮಿತವಾಗಿ ವಿದ್ಯುತ್ ಬಿಲ್ ಪಾವತಿಸಿರಬೇಕು.

ಇದನ್ನು ಪ್ರಶ್ನಿಸಿ ಕೆಲವರು ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಿದ್ದರಿಂದ ಸೆಪ್ಟೆಂಬರ್ 18ರಂದು ಈ ಕಾನೂನು ಜಾರಿಯಾಗದಂತೆ ತಡೆಯಾಜ್ಞೆ ವಿಧಿಸಲಾಗಿತ್ತು. ಆದರೆ ಈಗ ಹರಿಯಾಣ ಸರ್ಕಾರದ ಅದೇ ಮಸೂದೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದರಿಂದ ಪಟ್ಟಭದ್ರ ಹಿತಾಸಕ್ತಿಗಳು ಚಿಗುರೊಡೆಯುವಂತಾಗಿದೆ.

ಇಂತಹುದೇ ರೀತಿಯ ರಾಜಸ್ತಾನದ ಪಂಚಾಯತ್ ರಾಜ್ ತಿದ್ದುಪಡಿ ಮಸೂದೆ 2015ರ ಮಾರ್ಚ್ ತಿಂಗಳಲ್ಲಿ ಅಂಗೀಕಾರಗೊಂಡಿತು. ಅದರ ಪ್ರಕಾರ, ಅಲ್ಲಿನ ಜಿಲ್ಲಾ ಪರಿಷತ್ ಅಥವಾ ಪಂಚಾಯಿತಿ ಸಮಿತಿಗಳಿಗೆ ಸ್ಪರ್ಧಿಸಬೇಕಾದರೆ ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು; ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ 8ನೇ ತರಗತಿ ಹಾಗೂ ಪರಿಶಿಷ್ಟ ಜಾತಿ, ಪಂಗಡದವರಾದರೆ ಕನಿಷ್ಠ 5ನೇ ತರಗತಿ ಉತ್ತೀರ್ಣರಾಗಿರಬೇಕು.

ಈ ಬಗ್ಗೆ ಕರ್ನಾಟಕ ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು ಒಂದು ಹೇಳಿಕೆ ನೀಡಿದರು. ಅದೆಂದರೆ: ‘ಹರಿಯಾಣ ಸರ್ಕಾರ ಜಾರಿಗೆ ತಂದಿರುವ ಕಾಯ್ದೆ ಮಹತ್ವದ್ದು. ವಿದ್ಯಾವಂತರು ಅಧಿಕಾರದ ಚುಕ್ಕಾಣಿ ಹಿಡಿದರೆ ನೈಜ ಅಭಿವೃದ್ಧಿ ಸಾಧ್ಯ ಎಂಬ ಕಲ್ಪನೆಯ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರದ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಉತ್ತಮ ಅಂಶಗಳು ಎಲ್ಲಿಂದ ಬಂದರೂ ಅಳವಡಿಸಿಕೊಳ್ಳಬಹುದು. ರಾಜ್ಯದ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿದೆ’.
ಆದರೆ ನಮ್ಮ ದೇಶದ ಪ್ರಸ್ತುತ ಪರಿಸ್ಥಿತಿಯಲ್ಲಿ ಇಂತಹ ತೀರ್ಮಾನಗಳು, ತೀರ್ಪುಗಳು ಯಾವುದೇ ಕಾರಣಕ್ಕೂ ಸಮಂಜಸವಲ್ಲ.

ಅಲ್ಲದೇ ಅವು ಆಭಾಸಕರವೂ ಹೌದು. ಅಂತಹ ಆಲೋಚನೆಗಳು ಸಹ ಅಸಂಬದ್ಧ ಎನಿಸುತ್ತವೆ. ಇದೊಂದು ರೀತಿಯಲ್ಲಿ ದೇಶದ ಯಾವುದೋ ಮೂಲೆಯಲ್ಲಿ ವಾಸಿಸುತ್ತಿರುವ ಒಬ್ಬ ಸಾಮಾನ್ಯ ವ್ಯಕ್ತಿಯು ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿದಂತೆ; ಯಾರೋ ಮಾಡಿದ ತಪ್ಪುಗಳಿಗೆ ಬಲಿಯಾಗಿರುವ, ಬಲಿಯಾಗುತ್ತಿರುವ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ. ಉರಿಯುತ್ತಿರುವ ಆ ಗಾಯಕ್ಕೆ ಉಪ್ಪು ಹಾಕಿದಂತೆ ಅನ್ನಿಸುತ್ತದೆ.

ಇಷ್ಟೇ ಅಲ್ಲದೆ ಅಭ್ಯರ್ಥಿ ಆಕಾಂಕ್ಷಿಗಳು ತಮ್ಮ ಮನೆಗಳಲ್ಲಿ ಸುಸ್ಥಿತಿಯಲ್ಲಿರುವ ಶೌಚಾಲಯವನ್ನು ಹೊಂದಿರಬೇಕು, ಸಹಕಾರಿ ಬ್ಯಾಂಕ್ಗಳಲ್ಲಿ ಯಾವುದೇ ಸಾಲ ಇರಕೂಡದು ಹಾಗೂ ನಿಯಮಿತವಾಗಿ ವಿದ್ಯುತ್ ಬಿಲ್ ಪಾವತಿಸಿರಬೇಕು ಎಂಬಂತಹ ನಿರ್ಬಂಧಗಳು ಬಡವರನ್ನು ಮೂಲೆಗುಂಪಾಗಿಸಲು ಕಾನೂನಾತ್ಮಕ ಚೌಕಟ್ಟು ರೂಪಿಸಿದಂತಿದೆ. ದಿನನಿತ್ಯ ಕೆಲಸ ಮುಗಿಸಿ ಹೈರಾಣಾಗಿ ಬಂದು ವಿಶ್ರಮಿಸಿಕೊಳ್ಳಲು ಮೂರಡಿ ಜಾಗಕ್ಕೂ ಪರದಾಡುವ ಪರಿಸ್ಥಿತಿಯಿರುವ, ಪರರ ಜಾಗದಲ್ಲಿ ಸದಾ ಜೀವವನ್ನು ಕೈಯಲ್ಲಿ ಹಿಡಿದು ವಾಸಿಸಬೇಕಾದಂತಹ ಸಂದರ್ಭವಿರುವ ಅನೇಕರಿಗೆ ಮನೆಗಳಲ್ಲಿ ಶೌಚಾಲಯ ಇರಲೇಬೇಕು, ಸಾಲ ಇರಕೂಡದು ಎಂಬಂತಹ ಕಾನೂನುಗಳು ಎಷ್ಟರಮಟ್ಟಿಗೆ ನ್ಯಾಯ ಒದಗಿಸಬಲ್ಲವು?

ದೇಶಕ್ಕೆ ಸ್ವಾತಂತ್ರ್ಯ ದೊರಕಿ 68 ವರ್ಷಗಳು ತುಂಬಿದರೂ ಶಿಕ್ಷಣದ ಪರಿಕಲ್ಪನೆಗೆ ಸ್ಪಷ್ಟ ಅರ್ಥ ನೀಡಲಾಗದೆ, ಬ್ರಿಟಿಷರು ಬಿಟ್ಟು ಹೋದ ಸಾಂಪ್ರದಾಯಿಕ ಶಿಕ್ಷಣಕ್ಕೇ ಜೋತುಬಿದ್ದು, ಸಾಕ್ಷರತೆಯ ಸಾಕ್ಷಾತ್ಕಾರವನ್ನು ಸಾಧ್ಯವಾಗಿಸಲಾಗದೆ, ಆರ್ಥಿಕವಾಗಿ ಸದೃಢ ಸಮಾಜವನ್ನು ರೂಪಿಸಲಾಗದೆ ಒದ್ದಾಡುತ್ತಿವೆ ನಮ್ಮ ಎಲ್ಲ ಸರ್ಕಾರಗಳು. ಸರ್ಕಾರಿ ದಾಖಲೆಗಳಲ್ಲಿ ಶೇ 100 ಸಾಕ್ಷರತೆ ಸಾಧಿಸುವ ಸಲುವಾಗಿ ಮೇಲಿನ ಹಂತದ ಸರ್ಕಾರಗಳು ಗ್ರಾಮೀಣ ಪ್ರದೇಶದ, ಜನರಿಗೆ ಅತ್ಯಂತ ಸಮೀಪದ ಸರ್ಕಾರವಾದ ಸ್ಥಳೀಯ ಸರ್ಕಾರಗಳನ್ನು ತಮ್ಮೆಲ್ಲ ಪ್ರಯೋಗಗಳ ಪ್ರಯೋಗಶಾಲೆಗಳನ್ನಾಗಿ ಮಾಡುತ್ತಿರುವಂತಹ ಪ್ರಯತ್ನಗಳಲ್ಲಿ ಇದೂ ಒಂದು ಎಂಬಂತೆ ಭಾಸವಾಗುತ್ತದೆ.

ಇಂತಹ ಮಸೂದೆಗಳು ಹಾಗೂ ತೀರ್ಪುಗಳು ಸಾಮಾಜಿಕ ನ್ಯಾಯ ಆಧರಿಸಿದ ಜನರ ಮೂಲಭೂತ ಹಕ್ಕಾದ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತವೆ. ಸಂವಿಧಾನದ ಮೂಲ ಆಶಯವಾದ ‘ಎಲ್ಲರ ಒಳಗೊಳ್ಳುವಿಕೆ’ಯ ಪ್ರಜಾಪ್ರಭುತ್ವದ ತತ್ವಕ್ಕೆ ವಿರುದ್ಧವಾಗಿವೆ. ದೇಶದ ಸಂವಿಧಾನವು ಒತ್ತಿ ಹೇಳುವ ‘ಕಾನೂನಿನ ಎದುರು ಸರ್ವರೂ ಸಮಾನರು’ ಎಂಬ ಮಾತನ್ನು ಇದು ಕಡೆಗಣಿಸುತ್ತದೆ ಹಾಗೂ ಚುನಾವಣೆಗೆ ಸ್ಪರ್ಧಿಸಲು ಸಂವಿಧಾನ ನಮಗೆ ಕೊಟ್ಟಿರುವ ಮೂಲಭೂತ ಹಕ್ಕಿಗೆ ಕಡಿವಾಣ ಹಾಕಿದಂತಾಗುತ್ತದೆ. ಇದು ತಳಮಟ್ಟದ ಭಾಗವಹಿಸುವಿಕೆಯ ಪ್ರಜಾಪ್ರಭುತ್ವವನ್ನು ತಡೆಗಟ್ಟುತ್ತದೆ.

ಇಂತಹ ಕಾನೂನುಗಳಿಂದಾಗಿ ಬಹಳಷ್ಟು ಮಂದಿ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗುತ್ತಾರೆ. ದೇಶದ ವಾಸ್ತವ ಸ್ಥಿತಿಗತಿಗಳನ್ನು ಕಡೆಗಣಿಸಿ ಅಂಗೀಕರಿಸಿದ ಇಂತಹ ಕಾನೂನು ತಿದ್ದುಪಡಿಗಳು, ನೀಡಿದ ತೀರ್ಪುಗಳಿಂದ, ಪ್ರಾಥಮಿಕ ಶಿಕ್ಷಣ ಸೌಲಭ್ಯ, ಗುಣಮಟ್ಟದ ಶಿಕ್ಷಣಕ್ಕೆ ಗಮನ ಕೊಡಬೇಕಾಗಿದ್ದ ಕೇಂದ್ರ- ರಾಜ್ಯ ಸರ್ಕಾರಗಳು ಅವುಗಳನ್ನು ಕಡೆಗಣಿಸಿದ ತಪ್ಪಿಗೆ ಜನಸಾಮಾನ್ಯರನ್ನು ಶಿಕ್ಷಿಸಿದಂತಾಗುತ್ತದೆ. ಇದು ಗ್ರಾಮೀಣ ಭಾಗದ ದುರ್ಬಲ, ಅಂಚಿಗೆ ತಳ್ಳಲಾಗಿರುವ ಅಸುರಕ್ಷಿತ ವರ್ಗದವರನ್ನು ರಾಜಕೀಯದಿಂದ ಹೊರಗಿಡುತ್ತದೆ. ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ರಾಜಕೀಯವಾಗಿ ಸಶಕ್ತರಾಗಬಹುದಾದ ಅವರ ಅವಕಾಶಗಳಿಗೆ ಅಡ್ಡಿ ಉಂಟುಮಾಡುತ್ತದೆ. ಇದು ಪ್ರಜಾಸತ್ತೆಯ ಆಶಯಗಳಿಗೆ ವಿರುದ್ಧವಾದುದು. ವಿದ್ಯಾರ್ಹತೆ ನಿಗದಿಪಡಿಸಿದರೆ ಗ್ರಾಮೀಣ ಅನಕ್ಷರಸ್ಥರಿಗೆ ಅನ್ಯಾಯವಾಗುತ್ತದೆ. ಓದು-ಬರಹ ಗೊತ್ತಿಲ್ಲದ ಕಾರಣಕ್ಕೆ ಪಕ್ಷಪಾತಕ್ಕೆ ಒಳಗಾಗುತ್ತಾರೆ.

‘ಪ್ರತಿಯೊಬ್ಬರೂ ಪ್ರತಿಭಾವಂತರು. ಆದರೆ ನೀವು ಒಂದು ಮೀನಿನ ಸಾಮರ್ಥ್ಯವನ್ನು ಅದರ ಮರ ಹತ್ತುವ ಶಕ್ತಿಯನ್ನು ನೋಡಿ ತೀರ್ಮಾನಿಸುವುದಾದರೆ, ಅದು ಅದರ ಜೀವನವಿಡೀ ತಾನು ಮೂರ್ಖನೆಂದು ನಂಬಿಕೊಂಡೇ ಇರಬೇಕಾಗುತ್ತದೆ’ ಎಂಬ ಆಲ್ಬರ್ಟ್ ಐನ್ಸ್ಟೀನ್ನ ಮಾತು ಇಲ್ಲಿ ಹೆಚ್ಚು ಪ್ರಸ್ತುತ.

ಸಾಕ್ಷರತೆಯು ಓದು-ಬರಹದ ಜ್ಞಾನ ನೀಡುತ್ತದೆ ನಿಜ; ಆದರೆ ಸಾಕ್ಷರತೆಯೇ ಶಿಕ್ಷಣವಲ್ಲ. ಶಿಕ್ಷಣವು ಅಗತ್ಯ ಮಾಹಿತಿ, ಜ್ಞಾನ, ಕೌಶಲಗಳನ್ನು ಪಡೆದುಕೊಂಡು ವ್ಯಕ್ತಿಯ ಸಾಮರ್ಥ್ಯಾಭಿವೃದ್ಧಿಗೆ ಪೂರಕವಾಗಿ ಸೂಕ್ತವಾದ ಸ್ಪಷ್ಟ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಕ್ಷರತೆಯು ಸಾಮರ್ಥ್ಯಾಭಿವೃದ್ಧಿಯ ಒಂದು ಅಂಶ ಮಾತ್ರವೇ ಹೊರತು ಸಾಕ್ಷರತೆಯೇ ಸಾಮರ್ಥ್ಯಾಭಿವೃದ್ಧಿಯಲ್ಲ. ಹೀಗಾಗಿ ಸಾಕ್ಷರತೆಯೇ ಸಾಮರ್ಥ್ಯಾಭಿವೃದ್ಧಿಯನ್ನು ನಿರ್ಧರಿಸುವ ಹಂತಕ್ಕೆ ಏರಬಾರದು.

ಮೈಸೂರಿನ ಪಿರಿಯಾಪಟ್ಟಣದ ಜಾನಕಮ್ಮ ಅವರು ಹೇಳಿದ ಮಾತು ನೆನಪಾಗುತ್ತದೆ- ‘ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗೆ ವಿದ್ಯೆಯೇ ಅಗತ್ಯವಲ್ಲ. ನನಗೆ ವಿದ್ಯೆ ಇಲ್ಲ. 20 ವರ್ಷಗಳಿಂದ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ, ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದೇನೆ. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಕೋಟಿ ರೂಪಾಯಿ ಅನುದಾನ ಪಡೆದು ಬಡ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಹಾಸ್ಟೆಲ್ ಕಟ್ಟಿಸಲಾಗಿದೆ. ಆದರೆ ಅಭ್ಯರ್ಥಿಯಾದವರಿಗೆ ಬುದ್ಧಿ ಇರಬೇಕು. ಆಲೋಚನೆ ಮಾಡುವ, ಜನರ ಅಗತ್ಯಗಳಿಗೆ ಸ್ಪಂದಿಸುವ ಗುಣ ಇರಬೇಕು’.

2011ರ ಜನಗಣತಿಯ ಪ್ರಕಾರ ದೇಶದ ಒಟ್ಟು ಜನಸಂಖ್ಯೆ 121 ಕೋಟಿ. ಅವರಲ್ಲಿ ಶೇ 69ರಷ್ಟು ಜನ ಗ್ರಾಮೀಣ ಪ್ರದೇಶಕ್ಕೆ ಸೇರಿದವರು. ಅವರಲ್ಲಿ ಸಾಕ್ಷರರು ಎಂದು ಪರಿಗಣಿಸಲಾದವರು ಕೇವಲ ಪ್ರತಿಶತ 58 ಜನ ಮಾತ್ರ. ಅದರಲ್ಲೂ ಮಹಿಳಾ ಸಾಕ್ಷರರ ಪ್ರಮಾಣ ಶೇ 24! ಅಂದರೆ ಇಂತಹ ಕಾನೂನುಗಳು, ತಿದ್ದುಪಡಿ ಮಸೂದೆಗಳು ಜಾರಿಗೆ ಬಂದರೆ ದೇಶದ ಗ್ರಾಮೀಣ ಜನಸಂಖ್ಯೆಯ ಶೇ 58ರಷ್ಟು ಜನರಷ್ಟೇ, ಅದರಲ್ಲೂ ಕೇವಲ ಶೇ 24ರಷ್ಟು ಮಹಿಳೆಯರು ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಪಡೆಯುತ್ತಾರೆ! ಇದು ಸುವ್ಯವಸ್ಥಿತ ರೀತಿಯಲ್ಲಿ ಬದಿಗೆ ಒತ್ತಲಾಗಿರುವವರನ್ನು ಇನ್ನೂ ಬದಿಗೊತ್ತಿ, ಹಿಂದುಳಿದವರನ್ನು ಮತ್ತಷ್ಟು ಹಿಂದಕ್ಕೆ ತಳ್ಳಿ, ಧ್ವನಿಯಿಲ್ಲದವರ ಧ್ವನಿಯನ್ನು ಹತ್ತಿಕ್ಕಿ, ಸಮಾಜದ ಸುರಕ್ಷಿತವಲ್ಲದ ವರ್ಗದವರನ್ನು ಅಸುರಕ್ಷಿತರನ್ನಾಗಿ ಮಾಡುತ್ತದೆ.

ಸಾಕ್ಷರತೆಯ ಮಟ್ಟ ಕಡಿಮೆ ಇರುವ ಅನೇಕರು ತಮ್ಮ ತಮ್ಮ ಪಂಚಾಯಿತಿಗಳಲ್ಲಿ ಉತ್ತಮ ಆಡಳಿತ ನಡೆಸಿರುವುದಲ್ಲದೆ, ಗ್ರಾಮದ ಅಭಿವೃದ್ಧಿಗೆ, ಸಮುದಾಯದ ಏಳ್ಗೆಗೆ ಶ್ರಮಿಸಿದ ಹಲವಾರು ಉದಾಹರಣೆಗಳಿವೆ. ಅವರಿಗೆ ಅಕ್ಷರ ಜ್ಞಾನ ಇಲ್ಲದಿರಬಹುದು; ತಮ್ಮ ಹಳ್ಳಿಗಳ ಬಗ್ಗೆ ಕಾಳಜಿ ಇದೆ, ತಮ್ಮ ಸಮುದಾಯಗಳ ಏಳ್ಗೆಗೆ ಸಹಕರಿಸಬೇಕೆಂಬ ಹಂಬಲವಿದೆ, ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿಗೆ ಮೂಲ ಎಂಬ ಜ್ಞಾನವಿದೆ. ಜನರನ್ನು, ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಕಾರ್ಯ ನಿರ್ವಹಿಸುವ ಕೌಶಲವಿದೆ, ಅನುಭವವಿದೆ. ಗೊತ್ತಿಲ್ಲದ ವಿಷಯವನ್ನು ತಿಳಿದಿರುವವರಿಂದ ಕೇಳಿ ತಿಳಿದುಕೊಳ್ಳಬೇಕು ಎಂಬ ತುಡಿತವಿದೆ. ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಳ್ಳಿಗಳ ಅಭಿವೃದ್ಧಿಯಾಗಬೇಕು, ಸಾಮರಸ್ಯದಿಂದ ಒಡಗೂಡಿದ ಸಮುದಾಯವಿರಬೇಕು, ಜನಸ್ನೇಹಿ ಸಮಾಜ ನಿರ್ಮಾಣವಾಗಬೇಕು ಎಂಬ ಕನಸಿದೆ.

ಈ ಕನಸನ್ನು ನನಸು ಮಾಡಲು ಶತಾಯ ಗತಾಯ ಪ್ರಯತ್ನಿಸಬೇಕು ಎಂಬ ಛಲವಿದೆ. ಕೇವಲ ವಿದ್ಯೆಯೊಂದಿದ್ದರೆ ಗಾಂಧೀಜಿ ಕನಸಿನ ಗ್ರಾಮ ಸ್ವರಾಜ್ಯವನ್ನು ನನಸಾಗಿಸಲು ಸಾಧ್ಯವಿಲ್ಲ. ಈ ಎಲ್ಲ ಗುಣಗಳು, ಮನೋಭಾವಗಳು, ಕೌಶಲಗಳು ಇದ್ದರೆ ಮಾತ್ರ ನಿಜವಾದ ಉತ್ತಮ ಆಡಳಿತ ನಡೆಸಲು ಸಾಧ್ಯ. ಗ್ರಾಮ ಸ್ವರಾಜ್ಯ ಕಟ್ಟಲು ಸಾಧ್ಯ.

ಹೀಗಾಗಿ ಕೇವಲ ಸಾಂಪ್ರದಾಯಿಕ ಶಿಕ್ಷಣಕ್ಕೆ ಮಹತ್ವ ನೀಡದೇ, ಎಲ್ಲ ಹಂತದ ಸರ್ಕಾರದ ಚುನಾಯಿತ ಪ್ರತಿನಿಧಿಗಳಿಗೆ ತಮ್ಮ ಪಾತ್ರ ಮತ್ತು ಜವಾಬ್ದಾರಿ ನಿರ್ವಹಿಸಲು ಅಗತ್ಯವಾದ ವಿಷಯಾಧಾರಿತ ಸಾಮರ್ಥ್ಯಾಭಿವೃದ್ಧಿಯಅಗತ್ಯ ಮನಗಂಡು ಅಂತಹ ಶಿಕ್ಷಣಕ್ಕೆ ಸರ್ಕಾರ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಇಂತಹ ಜವಾಬ್ದಾರಿಯುತ ಸ್ಥಾನಕ್ಕೆ ಚುನಾಯಿತರಾಗಿ ಅಧಿಕಾರ ಸ್ವೀಕರಿಸುವ ಮೊದಲು, ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಹಕಾರಿಯಾಗುವಂತಹ ವಿಷಯಾಧಾರಿತ ಸಾಮರ್ಥ್ಯಾಭಿವೃದ್ಧಿ ತರಬೇತಿಗಳನ್ನು ಕಡ್ಡಾಯಗೊಳಿಸಬೇಕು. ತರಬೇತಿಗಳು ಏಕರೂಪವಾಗಿರದೆ, ಪ್ರಸ್ತುತ ಪರಿಸ್ಥಿತಿ, ಚುನಾಯಿತ ಪ್ರತಿನಿಧಿಗಳ ಕಲಿಕೆ ಹಾಗೂ ಶಿಕ್ಷಣದ ಮಟ್ಟವನ್ನು ಗಮನದಲ್ಲಿರಿಸಿಕೊಂಡು ಅವರ ಸಾಮರ್ಥ್ಯಾಭಿವೃದ್ಧಿ ಮಾಡುವಂತಹ ವಿಕೇಂದ್ರೀಕೃತ ಕಾರ್ಯಕ್ರಮ ರೂಪುಗೊಳ್ಳಬೇಕು.

ನಮ್ಮ ದೇಶದ, ರಾಜ್ಯದ ಕಾನೂನುಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು. ಆಡಳಿತದ ಚುಕ್ಕಾಣಿ ಹಿಡಿಯುವ ಎಲ್ಲ ಹಂತದ ಸರ್ಕಾರದ ಚುನಾಯಿತ ಪ್ರತಿನಿಧಿಗಳಿಗೂ ಹಮ್ಮಿಕೊಳ್ಳುವ ಎಲ್ಲ ಬಗೆಯ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಗಳೂ ಗ್ರಾಮ ಸ್ವರಾಜ್ಯದ ತತ್ವಗಳ ಬುನಾದಿಯ ಮೇಲೇ ಆಯೋಜನೆಗೊಳ್ಳಬೇಕು ಮತ್ತು ಅವು ನಿರಂತರವಾಗಿ ನಡೆಯುವಂತೆ ಇರಬೇಕು. ಜೊತೆಗೆ ಅವು ಆಯಾ ಕಾಲಕ್ಕೆ, ಗುಂಪಿಗೆ, ಅಗತ್ಯವಿರುವವರಿಗೆ ಅನುಗುಣವಾಗಿ ನವೀಕರಣಗೊಳ್ಳಬೇಕು. ಆಗ ಮಾತ್ರ ‘ಶಿಕ್ಷಣ’ ಎಂಬ ಪದಕ್ಕೆ ‘ಕಲಿಕೆ’ ಎಂಬ ಪದವು ಮೇಳೈಸಿ ನೈಜ ‘ಸಾಮರ್ಥ್ಯಾಭಿವೃದ್ಧಿ’ಗೆ ಅಂಕಿತ ಹಾಕಿದಂತಾಗುತ್ತದೆ.

ಲೇಖಕಿ ದಿ ಕನ್ಸರ್ನ್್ಡ ಫಾರ್ ವರ್ಕಿಂಗ್
ಚಿಲ್ಡ್ರನ್ ಸಂಸ್ಥೆಯ ಕಾರ್ಯಕರ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.