ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತಾ ಪರಿವಾರ ಎಂಬ ‘ಪ್ರೇಮಕಾವ್ಯ’...!

Last Updated 27 ಡಿಸೆಂಬರ್ 2015, 19:41 IST
ಅಕ್ಷರ ಗಾತ್ರ

ಇತ್ತೀಚೆಗೆ ಜನತಾ ಪರಿವಾರದ ಹಿರಿ-ಕಿರಿ ನಾಯಕರೆಲ್ಲ ಸಭೆ ಸೇರಿ ವಿಲೀನ ಕುರಿತಂತೆ ಚರ್ಚಿಸಿದೆವು. ಅಲ್ಲಿ ದೇವೇಗೌಡರು- ಕುಮಾರಸ್ವಾಮಿ ಹಾಗೂ ಕಾಂಗ್ರೆಸ್- ಬಿಜೆಪಿಯ ಜನತಾ ಮೂಲದ ನಾಯಕರನ್ನು ಹೊರತುಪಡಿಸಿದಂತೆ, ಜನತಾ ಪರಿವಾರದ ಕೆಲ ಪ್ರಮುಖ ನಾಯಕರು ಭಾಗವಹಿಸಿದ್ದರು.

ಅಲ್ಲಿ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಆದರೆ ಆರಂಭದಲ್ಲೇ ಅಪಶಕುನವೆಂಬಂತೆ, ಯಡಿಯೂರಪ್ಪನವರು ಸಭೆಯ ಮುಂಚೆಯೇ ಜನತಾ ಪರಿವಾರದ ಅಸ್ತಿತ್ವವನ್ನು ಪ್ರಶ್ನಿಸಿದ್ದು, ವಿಲೀನ ಕುರಿತಂತೆ ಬಿಜೆಪಿಗಿರುವ ಆತಂಕವನ್ನು ಸೂಚ್ಯವಾಗಿಯೇ ಒಪ್ಪಿಕೊಂಡಿದ್ದರೆನ್ನಬಹುದು.

ಯಾಕೆಂದರೆ, ಇಂದು ಕರ್ನಾಟಕ ಬಿಜೆಪಿಯಲ್ಲಿರುವ ಬಹುಪಾಲು ಲಿಂಗಾಯತ ನಾಯಕರು, ಕಾರ್ಯಕರ್ತರು ಮತ್ತು ಮತದಾರರು ಕೂಡ ಜನತಾ ಪರಿವಾರದಿಂದ ಬಂದವರು. ವಿಲೀನದಿಂದಾಗಿ ಜನತಾ ಪರಿವಾರಕ್ಕಾಗುವ ಲಾಭ, ಬಿಜೆಪಿಯವರಿಗಾಗುವ ಲುಕ್ಸಾನು! ಆದ್ದರಿಂದ, ಯಡಿಯೂರಪ್ಪನವರ ಆತಂಕ ಸಹಜವೇ. ಆದರೆ, ಸಭೆಗೆ ಮುಂಚೆಯೇ ಕುಮಾರಸ್ವಾಮಿಯವರ ‘ಜೆಡಿಯುನವರೆಲ್ಲ ಜೆಡಿಎಸ್ ಸೇರಲಿ’ ಎಂಬ ಸಾರ್ವಜನಿಕ ಹೇಳಿಕೆ ಯಡಿಯೂರಪ್ಪನವರು ಮಾಡಿದ ಗಾಯದ ಮೇಲೆ ಬರೆ ಎಳೆದಂತಿತ್ತು.

ಆ ಸಭೆಯಲ್ಲಿ ನಿತೀಶ್ ಅವರ ನಿಕಟವರ್ತಿ ಲೋಕಪಾಲ ಜೈನರು ಕುಮಾರಸ್ವಾಮಿಯವರ ಹೇಳಿಕೆ ಕುರಿತು ಸಮಜಾಯಿಷಿ ಕೇಳುತ್ತಿದ್ದರೆ, ಹೊರಗೆ ಮಾಧ್ಯಮದ ಮುಂದೆ ಬಸವರಾಜ ಹೊರಟ್ಟಿಯವರು, ವಿಲೀನಕ್ಕೆ ದೇವೇಗೌಡರ ಸಮ್ಮತಿಯಿದೆ ಎಂದು ಹೇಳುತ್ತಿದ್ದುದು ರೋಚಕವಾಗಿತ್ತು! ಆದರೆ, ಸಭೆಯಲ್ಲಿದ್ದ ಹೆಚ್ಚಿನ ನಾಯಕರು ವಿಲೀನದ ನಂತರ ಜೆಡಿಎಸ್ ವರಿಷ್ಠರ ನಡೆ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದರು. ಬಹುಶಃ ಇದೇ ಕಾರಣಕ್ಕಾಗಿಯೇ ಮರುದಿನವೇ ಪ್ರಕಟವಾದ ‘ಜನತಾ ಪರಿವಾರದ ವಿಲೀನಕ್ಕೆ ಇದು ಸಕಾಲವಲ್ಲ’ ಎಂಬ ದೇವೇಗೌಡರ ಹೇಳಿಕೆ ‘ವಿಲೀನ ಮಾತುಕತೆ ಹಿಂದೆ ಜೆಡಿಎಸ್ ರಹಸ್ಯ ಕಾರ್ಯಸೂಚಿ’ಯಿದೆ ಎಂಬ ಬಹುತೇಕರ ಆತಂಕಕ್ಕೆ ಇಂಬುಗೊಟ್ಟಿತ್ತು.

ಆಗಲೇ ಮಧ್ಯವಯಸ್ಕರಾಗಿರುವ ನಮ್ಮಂತಹವರು ಜನತಾ ಪರಿವಾರವನ್ನು ಪ್ರೀತಿಸುತ್ತಾ ಬೆಳೆದವರು. ಜನತಾ ಪಕ್ಷ ಹುಟ್ಟಿದಾಗ ನಾನು ಗೋಕಾಕದ ಹೈಸ್ಕೂಲಿನಲ್ಲಿ ಓದುತ್ತಿದ್ದೆ. ಆಗ, ತುರ್ತುಪರಿಸ್ಥಿತಿಯ ನಂತರ ಗೋಕಾಕಕ್ಕೆ ಬಂದಿದ್ದ ಅಶೋಕ ಮೆಹ್ತಾ, ಜಗನ್ನಾಥರಾವ್ ಜೋಷಿ, ವಾಜಪೇಯಿ, ಚಂದ್ರಶೇಖರ ಪಾಟೀಲ (ಚಂಪಾ) ಮುಂತಾದ ಕಾಂಗ್ರೆಸ್ ವಿರೋಧಿ ನಾಯಕರ ಭಾಷಣಗಳನ್ನು ಕೇಳಿ ಪುಳಕಿತನಾಗಿದ್ದೆ.

ತುರ್ತುಪರಿಸ್ಥಿತಿ ಹಿಂಪಡೆದ ನಂತರ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ಮೊರಾರ್ಜಿ ದೇಸಾಯಿ, ಚಂದ್ರಶೇಖರ್‌, ರಾಮಕೃಷ್ಣ ಹೆಗಡೆ, ಜಾರ್ಜ್ ಫರ್ನಾಂಡಿಸ್, ಮಧು ಲಿಮಯೆ, ಚರಣ್‌ಸಿಂಗ್, ವಾಜಪೇಯಿ, ಅಡ್ವಾಣಿ ಮುಂತಾದ ಜನತಾ ಪರಿವಾರದ ನಾಯಕರು ದೇಶದಾದ್ಯಂತ ಸಂಚರಿಸಿ ಪ್ರಜಾಪ್ರಭುತ್ವ, ವ್ಯಕ್ತಿ ಸ್ವಾತಂತ್ರ್ಯ ಮತ್ತು ನ್ಯಾಯಾಂಗದ ಘನತೆಯ ಕುರಿತು ಭಾವೋದ್ವೇಗದಿಂದ ಮಾತನಾಡುತ್ತಿದ್ದರೆ, ನಮ್ಮಂತಹ ಹದಿಹರೆಯದವರ ಮೈಮನಸ್ಸುಗಳಲ್ಲೆಲ್ಲ ವಿದ್ಯುತ್ ಸಂಚಾರವಾಗುತ್ತಿತ್ತು.

ಹಳ್ಳಿಗಳಲ್ಲಿ ಬಲವಂತವಾಗಿ ‘ನಸ್‌ಬಂದಿ’ ಮಾಡಿಸಿಕೊಂಡವರು, ಭೂಸುಧಾರಣೆಯಿಂದಾಗಿ ಜಮೀನು ಕಳೆದುಕೊಂಡ ಗೌಡ- ಪಟೇಲ- ಕುಲಕರ್ಣಿಗಳು, ಅಸಲು- ಬಡ್ಡಿ ಕಳೆದುಕೊಂಡ ಮಾರ್ವಾಡಿಗಳು, ಜೀತದಾಳುಗಳನ್ನು ಕಳೆದುಕೊಂಡ ಜಮೀನುದಾರ ಮುಂತಾದವರು ಇಂದಿರಾ ಗಾಂಧಿಯವರನ್ನು ವಾಚಾಮಗೋಚರವಾಗಿ ಬೈಯುತ್ತಿದ್ದರೆ, ಅವರ ಮಾತುಗಳನ್ನು ಒರೆಗೆ ಹಚ್ಚುವಷ್ಟು ಪ್ರಬುದ್ಧರಲ್ಲದ ನನ್ನಂತಹವರು ಕೆಲ ಸಕಾರಣಗಳಿಗಾಗಿ, ಕೆಲ ‘ಮಿಥ್ಯಾರೋಪ’ಗಳನ್ನೇ ನಂಬಿ ಕಾಂಗ್ರೆಸ್‌ ಅನ್ನು ದ್ವೇಷಿಸುತ್ತ, ಜನತಾ ಪರಿವಾರದ ಪ್ರೇಮಿಗಳಾಗಿ ಬೆಳೆದಿದ್ದೇವೆ.

ದೇವೇಗೌಡರು, ಮುಲಾಯಂ ಸಿಂಗ್, ಲಾಲೂಜಿ,  ಬೊಮ್ಮಾಯಿ, ಯಡಿಯೂರಪ್ಪ, ದೇವಿಲಾಲ್‌, ಠಾಕ್ರೆ ಮುಂತಾದ ಕಾಂಗ್ರೆಸ್‌ ವಿರೋಧಿ ನಾಯಕರ ಮಕ್ಕಳನ್ನು ಹೊರತುಪಡಿಸಿದಂತೆ, ತುರ್ತುಪರಿಸ್ಥಿತಿಯಲ್ಲಿ ಪ್ರಾರಂಭವಾದ ಆ ‘ಡೇಟಿಂಗ್’ ನಮ್ಮಂತಹವರ ಬಾಳಿನಲ್ಲಂತೂ ಮದುವೆ- ಮಿಲನ- ಹುಟ್ಟು (ರಾಜಕೀಯ ಅಧಿಕಾರ?!) ಎಂಬ ತಾರ್ಕಿಕತೆಯನ್ನು ಇಂದಿನವರೆಗೂ ತಲುಪಲಾಗದ ಕಾರಣಕ್ಕಾಗಿಯೇ ಜೆ.ಪಿ.ಯವರ ಆತ್ಮ ಸಮಾಧಿಯಲ್ಲಿ ನರಳುತ್ತಿರಬಹುದು.

ಈ ‘ಚರಿತ್ರಾರ್ಹ’ ಕಾರಣಗಳಿಂದಾಗಿ ಕೆಲವರಿಗೆ ‘ಜನತಾ ಪರಿವಾರದ ವಿಲೀನ’ವೆಂಬ ಮಾತು ಇನಿಯನ ಬಿಸಿಯುಸಿರಿನಂತೆ ಭಾಸವಾಗುತ್ತಿದೆ. ಆದರೆ, ಇತ್ತೀಚೆಗೆ ಬಿಹಾರ ಚುನಾವಣೆ ವೇಳೆ ಉಲ್ಟಾ ಹೊಡೆದ ಮುಲಾಯಂ ಸಿಂಗ್ ವರಸೆ, ಬಿಜೆಪಿಯೊಂದಿಗೆ ಇಂದಿಗೂ ಮಗುಮ್ಮಾಗಿ ಚಾಲ್ತಿಯಲ್ಲಿರುವ ಕುಮಾರಸ್ವಾಮಿಯವರ ‘ಹನಿಮೂನ್’ ಮತ್ತು ದೇವೇಗೌಡರ ಸಾಂದರ್ಭಿಕ ಆಲಾಪಗಳನ್ನು ನೋಡಿದರೆ, ಜನತಾ ಪರಿವಾರದ ‘ಡಿಎನ್‌ಎ’ಯಲ್ಲಿಯೇ ಎಲ್ಲೋ ಲೋಪದೋಷವಿದೆ ಎನಿಸುತ್ತದೆ.

ಜನತಾ ಪಕ್ಷದ ಹುಟ್ಟಿಗೆ ಕಾರಣರಾದವರೂ ಎಂತಹವರು? ರಾಜಧನ ರದ್ದತಿ ಮತ್ತು ಬ್ಯಾಂಕ್ ರಾಷ್ಟ್ರೀಕರಣದಂತಹ ಇಂದಿರಾ ಗಾಂಧಿಯವರ ಪ್ರಗತಿಪರ ಕಾರ್ಯಕ್ರಮಗಳನ್ನು ವಿರೋಧಿಸುತ್ತಿದ್ದ ಸಂಸ್ಥಾ ಕಾಂಗ್ರೆಸ್, ಹಿಂದುತ್ವವನ್ನು ಪ್ರಚ್ಛನ್ನವಾಗಿ ಪ್ರತಿಪಾದಿಸುತ್ತಿದ್ದ ಜನಸಂಘ, ಮಾಜಿ ಸಂಸ್ಥಾನಿಕರು ಕಟ್ಟಿದ ಸ್ವತಂತ್ರ ಪಕ್ಷ, ‘ಜಾಟ’ ಗತ್ತುಗಾರಿಕೆಯ ಭಾರತೀಯ ಕ್ರಾಂತಿದಳ, ಆದರ್ಶ ರಾಜ್ಯದ (Utopia) ಹಗಲುಗನಸು ಕಾಣುತ್ತಿದ್ದ ಸಮಾಜವಾದಿಗಳ ‘ಅಕ್ರಮ ಕೂಡುವಿಕೆ’ಯಿಂದಾಗಿ ಹುಟ್ಟಿದ ಕೂಸೇ ಜನತಾ ಪರಿವಾರ.

ಸದರಿ ‘ಕೇಂದ್ರಬಿಂದು ವಿಮುಖ’ (Centrifugal) ಶಕ್ತಿಗಳ ಅವಕಾಶ ಮತ್ತು ಅನಿವಾರ್ಯದ ಸಮಾಗಮದಿಂದ ಜನಿಸಿದ ಜನತಾ ಪರಿವಾರ ಹಲವು ಬಾರಿ ‘ಗರ್ಭಪಾತ’ ಅನುಭವಿಸುವಂತಾಗಿದೆ. ಆದಾಗ್ಯೂ, ನಮ್ಮಂತಹವರು ಪ್ರಣಯದ ಸಂದರ್ಭದಲ್ಲಿ ಪ್ರಿಯಕರ ಕುಡಿಸಿದ ‘ಸಮಾಜವಾದಿ- ಜಾತ್ಯತೀತ’ ಬ್ರ್ಯಾಂಡಿನ ಬೌದ್ಧಿಕ ಅಮಲಿನ ಕಾರಣದಿಂದಾಗಿ ಇನ್ನೂ ಜನತಾ ಪರಿವಾರದ ವಿಲೀನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದೇವೆ.

ಮೊನ್ನೆ ವಿಲೀನಕ್ಕಾಗಿ ಮುಂದೆ ಬಂದವರಲ್ಲಿ ಹೆಚ್ಚಿನವರು ಲಿಂಗಾಯತ ನಾಯಕರು. ಈಗಿನ ಲಿಂಗಾಯತ ನಾಯಕರಲ್ಲಿ ಬಹುತೇಕರು ತಮ್ಮ ಕ್ಷೇತ್ರಗಳಿಗೆ ಸೀಮಿತರಾದವರು. ಬಸವರಾಜ ಹೊರಟ್ಟಿಯವರು ದೇವೇಗೌಡರು- ಕುಮಾರಸ್ವಾಮಿಯವರ ನೆರಳಿನಿಂದ ಸ್ವತಂತ್ರರಾಗಬೇಕೆಂದು ಜನ ಬಯಸುತ್ತಾರೆ. ಇನ್ನು ಡಾ. ನಾಡಗೌಡರು ಕಳೆದ 8 ವರ್ಷಗಳಿಂದ ಜೆಡಿಯು ಅಸ್ತಿತ್ವ ಕಾಯ್ದುಕೊಂಡು ಬಂದಿದ್ದರೂ ಅಧ್ಯಕ್ಷರಾಗಿ ಪಕ್ಷ ಸಂಘಟಿಸುವಲ್ಲಿ ದಯನೀಯವಾಗಿ ಸೋತಿದ್ದು, ರಾಜ್ಯ ನಾಯಕನಾಗಿ ಬೆಳೆಯುವ ಸುವರ್ಣಾವಕಾಶ ಕಳೆದುಕೊಂಡಿದ್ದಾರೆ.

ಇನ್ನು ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ತಿಪ್ಪಣ್ಣ ಮತ್ತು ಮಾಜಿ ಸಚಿವ ಏಕಾಂತಯ್ಯನವರಿಗೆ ವಯಸ್ಸಾಗಿದೆ. ಉಳಿದವರಲ್ಲಿ ಬಿ.ಆರ್.ಪಾಟೀಲ (ಬಿಆರ್‌ಪಿ) ಮತ್ತು ಮಹಿಮ ಪಟೇಲ್‌ ಎದ್ದು ಕಾಣುತ್ತಾರೆ. ನಿತೀಶ್‌ ಕುಮಾರರ ಗೆಳೆಯರಾಗಿರುವ ‘ಬಿಆರ್‌ಪಿ’ ಇತ್ತೀಚೆಗೆ ಬಿಹಾರ ಚುನಾವಣೆಯಲ್ಲಿ ಜೆಡಿಯು ಪರವಾಗಿ ಪ್ರಚಾರಕ್ಕೆ ಹೋಗಿದ್ದರು. ಜನತಾ ಪರಿವಾರ ವಿಲೀನವಾಗುವುದಾದಲ್ಲಿ ಅವರಿಗೆ ಮಹತ್ತರ ಪಾತ್ರವಿದೆ.

ಆದರೆ, ಇವರಲ್ಲೆಲ್ಲ ‘ವಿಲೀನ’ ಕುರಿತಂತೆ ಸ್ಪಷ್ಟತೆಯ ಕೊರತೆಯಿದೆ. ಇವರೆಲ್ಲ ಬಿಹಾರ ಫಲಿತಾಂಶದಿಂದ ಹೆಚ್ಚೇ ಆಶಾವಾದಿಗಳಾಗಿದ್ದಾರೆ. ಹೆಚ್ಚಿನವರು ದೇವೇಗೌಡರು ತಮ್ಮನ್ನು ಕರೆದು ಪಾಲು ಕೊಡುತ್ತಾರೆ ಎಂಬ ಭ್ರಮೆಯಲ್ಲಿದ್ದಂತಿದೆ. ದೇವೇಗೌಡರು ‘ಹೊಸ ಸಮೀಕರಣಕ್ಕೆ ಇದು ಸಕಾಲವಲ್ಲ’ ಎಂದು ಹ್ಞೂಂಕರಿಸಿದಾಗ ಭವಿಷ್ಯ ಕಾಣದೇ ಶಸ್ತ್ರ ಕೈಚೆಲ್ಲಿ ಶ್ರೀಕೃಷ್ಣನ ಬರವಿಗಾಗಿ ಕಾಯುವಂತಾಗಿದೆ. ಕರ್ನಾಟಕದಲ್ಲೂ ‘ಬಿಹಾರ ಮಾದರಿ’ ಪುನರಾವರ್ತನೆಯಾಗುತ್ತದೆ  ಎನ್ನುವುದು ಮೂರ್ಖತನ. ‘ಬಿಹಾರ್‌’ ಗೆಲ್ಲಬೇಕಾದರೆ ಲಾಲೂ-ನಿತೀಶ ಸಮೀಕರಣವೇ ಕಾರಣ. ಕರ್ನಾಟಕದಲ್ಲಿ ಲಾಲೂ ಸ್ಥಾನ ತುಂಬಬಲ್ಲ ಶಕ್ತಿ ದೇವೇಗೌಡರಲ್ಲಿದೆ. ಆದರೆ, ನಿತೀಶರ ಪಾತ್ರ ನಿರ್ವಹಿಸಬಹುದಾಗಿದ್ದ ‘ಹೆಗಡೆ’ ನಮ್ಮೊಂದಿಗಿಲ್ಲ. ಆದ್ದರಿಂದ, ‘ಬಿಹಾರ್’ ಪುನರಾವರ್ತನೆಯ ಕನಸೂ ಮತ್ತು ನೆರೆಮನೆಯವರ ಸೊಸೆಯ ಸೀಮಂತಕ್ಕೆ ಸಿಹಿ ಹಂಚುವುದೂ ಒಂದೇ!

‘ನಿತೀಶ’ರ ಅನುಪಸ್ಥಿತಿಯಲ್ಲೂ ದೇವೇಗೌಡರು ಮನಸ್ಸು ಮಾಡಿದರೆ ಕರ್ನಾಟಕದಲ್ಲೂ ಬಿಹಾರ ಮಾದರಿ ‘ಪುನರಾವರ್ತನೆ’ಯಾಗುವ ಎರಡು ಸಾಧ್ಯತೆಗಳಿವೆ. ಅದಕ್ಕಾಗಿ, ದೇವೇಗೌಡರು ಬಿಜೆಪಿಯವರು ಕಳಿಸಬಹುದಾದ ‘ಯಡಿಯೂರಪ್ಪ’ ಹೆಸರಿನ ‘ಅಶ್ವಮೇಧ ಕುದುರೆ’ಯನ್ನು ಕಟ್ಟಿ ಹಾಕಬೇಕಾಗುತ್ತದೆ. ಆದರೆ, ವಯಸ್ಸಾಗಿರುವ ಅವರಿಗೆ ಹೆಚ್ಚಿನ ಶಕ್ತಿ-ಯುಕ್ತಿಯ ಅವಶ್ಯಕತೆಯಿದೆ. ಅದನ್ನು ಕ್ರೋಡೀಕರಿಸಿಕೊಳ್ಳಲು ದೊಡ್ಡಗೌಡರು ಯಶೋಧರೆ, ರಾಹುಲ ಮತ್ತು ಲಿಚ್ಚವಿ ರಾಜಗದ್ದುಗೆಯ ವ್ಯಾಮೋಹ ತೊರೆದು ಬುದ್ಧನಾದ ಸಿದ್ಧಾರ್ಥನಂತಾಗಬೇಕು. ಆ ಕಾರ್ಯಸಾಧ್ಯತೆಗಾಗಿ ಲಿಂಗಾಯತರಿಗೆ ಕರುನಾಡನ್ನು ಬಿಟ್ಟುಕೊಡಬೇಕು. ಪೂರಕವಾಗಿ ಕುಮಾರಸ್ವಾಮಿ ಪಿತೃವಾಕ್ಯ ಪರಿಪಾಲಕ ಶ್ರೀರಾಮನಾಗಬೇಕು. ಸಿದ್ಧಾರ್ಥ- ಶ್ರೀರಾಮನಾಗುವುದು ಕಷ್ಟವಾದರೆ ಜನತಾ ಪರಿವಾರಕ್ಕೆ ವನವಾಸ ತಪ್ಪಿದ್ದಲ್ಲ.

ಎರಡನೇ ಸಾಧ್ಯತೆಗೆ ಲಿಂಗಾಯತ- ಒಕ್ಕಲಿಗರಿಬ್ಬರೂ ಮನಸ್ಸು ಮಾಡಬೇಕಷ್ಟೇ. ಕರ್ನಾಟಕದಲ್ಲಿ ಜನತಾ ಪ್ರಯೋಗ ಪ್ರಾರಂಭವಾದಂದಿನಿಂದ ಇಲ್ಲಿಯವರೆಗೆ ಎರಡೂ ಸಮುದಾಯದವರು ಕರುನಾಡ ಗದ್ದುಗೆಯನ್ನು ಅನುಭವಿಸಿದ್ದಾರೆ. ರಾಜಕೀಯ ಪಂಡಿತರು ಹೇಳುವಂತೆ ಜನತಾ ಪಕ್ಷವೆಂಬುದು ಅರಸರು ಕಟ್ಟಿದ ‘ಅಹಿಂದ’ಕ್ಕೆ ಪರ್ಯಾಯವಾಗಿ ರೂಪುಗೊಂಡ ಬ್ರಾಹ್ಮಣ- ಲಿಂಗಾಯತ- ಒಕ್ಕಲಿಗರ ಒಕ್ಕೂಟವಷ್ಟೇ! ಮಾಜಿ ಜನತಾ ದಳೀಯ ಸಿದ್ದರಾಮಯ್ಯನವರೊಂದಿಗೆ ಬಂದ ಕುರುಬ ಮತ್ತಿತರ ಹಿಂದುಳಿದವರು, ಜನತಾ ಪಕ್ಷವೆಂಬ ಕಟ್ಟಡಕ್ಕೆ ಬಳಸಿದ ಲಿಂಗಾಯತ- ಒಕ್ಕಲಿಗರೆಂಬ ಬಂಡೆಗಳ ಮಧ್ಯೆ ಬಿರುಕು ತುಂಬಲು ಬಳಸಿದ ಚಿಪ್ಪುಗಲ್ಲುಗಳು.

ಈ ಚಿಪ್ಪುಗಳಿಲ್ಲದೇ ಹೋದರೆ ಕಟ್ಟಡ ನಿಲ್ಲಲಾರದು. ಆದ್ದರಿಂದ, ಹೆಗಡೆ, ಬೊಮ್ಮಾಯಿ, ದೇವೇಗೌಡರು ಮತ್ತು ಪಟೇಲರ ನಂತರ ತನ್ನದೇ ‘ಸರದಿ’ ಎಂದು ನ್ಯಾಯಯುತವಾಗಿಯೇ ನಂಬಿದ್ದ ಸಿದ್ದರಾಮಯ್ಯನವರ ‘ಸರದಿ’ ತಪ್ಪುತ್ತಲೇ, ಅವರೇ ಹುರಿಗೊಳಿಸಿದ್ದ ‘ಅಹಿಂದ’ರು ವ್ಯಗ್ರರಾಗಿದ್ದು, ನೈಸರ್ಗಿಕ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಆ ಐತಿಹಾಸಿಕ ಪ್ರಮಾದವನ್ನು ಸರಿದೂಗಿಸಬೇಕಾದರೆ ಪ್ರಬಲ ಕೋಮಿನವರು ಮನಸ್ಸು ಮಾಡಬೇಕು ಮತ್ತು ಮಹಾಭಾರತದ ಸುಯೋಧನನಂತೆ ‘ಅಂಗರಾಜ ಪ್ರತಿಷ್ಠಾಪನಾಚಾರ್ಯ’ರಾಗಬೇಕು.

ದ್ವಾಪರದಲ್ಲಿ ಕುಂತಿ ಎಸಗಿದ ಪ್ರಮಾದದಿಂದಾಗಿ ಕರ್ಣನು ಸ್ಥಾನಮಾನಗಳಿಂದ ವಂಚಿತನಾಗಬೇಕಾಯಿತು. ಗೆಳೆಯ ದು(ಸು)ರ್ಯೋಧನ ಕರ್ಣನನ್ನು ‘ಅಂಗರಾಜ’ನನ್ನಾಗಿ ನೇಮಿಸಿ ಆ ಪ್ರಮಾದವನ್ನು ತುಂಬುತ್ತಾನೆ. ಮುಂದಿನ ಚುನಾವಣೆಯಲ್ಲಿ ‘ಅಹಿಂದ’ರಿಗೆ ‘ನೈಸರ್ಗಿಕ ನ್ಯಾಯ’ದ ವಾಗ್ದಾನ ನೀಡಿದಲ್ಲಿ, ಇಲ್ಲೂ ಬಿಹಾರ ಮಾದರಿ ಪುನರಾವರ್ತನೆಯಾದೀತು. ಆದರೆ, ಅಹಿಂದ ಪಟ್ಟಾಭಿಷೇಕಕ್ಕೆ ಸೂಕ್ತ ರಾಜಕುಮಾರರು ಸಿಗದಿರುವ ಸಾಧ್ಯತೆಯಿದೆ.

ಈಗ ಏನಿದ್ದರೂ ಪರಿವಾರದಲ್ಲಿ ಉಳಿದವರು ನನ್ನಂತಹ ‘ಏಕಲವ್ಯರು’ ಮಾತ್ರ. ತಾನೇ ಏಕಮೇವಾದ್ವಿತೀಯ ಬಿಲ್ಲು ವಿದ್ಯೆ ಪ್ರವೀಣನಾಗಬೇಕೆಂಬ ‘ಅಹಿಂದ ಅರ್ಜುನ’ನ ಹಟಕ್ಕೆ ಮಣಿದ ನನ್ನ ಗುರು ‘ದ್ರೋಣ’ರು ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದು ಆಗಲೇ ದಶಕವಾಗಿದೆ. ಆದರೆ, ಆ ಆರ್ಜುನನೋ ‘ಮಹಾಭಾರತ’ ಯುದ್ಧ ಗೆದ್ದು ರಾಜ್ಯವಾಳುತ್ತಿದ್ದಾನೆ ಮತ್ತು ಯುದ್ಧ ಗೆಲ್ಲಬೇಕಾದರೆ ‘ಏಕಲವ್ಯ’ರು ಬಲಿಯಾಗಲೇಬೇಕು! ಆದರೆ, ಇಂದಿಗೂ ‘ಏಕಲವ್ಯ’ರು ಪ್ರೀತಿಸುವ ಆ ‘ಗುರು’ ಮಾತ್ರ ಪಾಂಚಾಲಿಯ ಶಾಪಕ್ಕೆ ಬಲಿಯಾಗಿರುವ ಪುತ್ರ ‘ಅಶ್ವತ್ಥಾಮ’ನನ್ನು ಪುನರ್‌ ಪ್ರತಿಷ್ಠಾಪಿಸುವ ಹವಣಿಕೆಯಲ್ಲಿದ್ದಾರೆಯೇ ಹೊರತು, ಪುತ್ರರ ಸ್ಥಾನದಲ್ಲಿರುವ ‘ಏಕಲವ್ಯ’ರಿಗೆ ನ್ಯಾಯ ದೊರಕಿಸಿಕೊಡುವ ವ್ಯವಧಾನ ಅವರಿಗಿದೆಯೇ ಎನ್ನುವ ಬಗ್ಗೆ  ಅನುಮಾನವಿದೆ!

ಆದ್ದರಿಂದ, ಕಲಿಗಾಲದಲ್ಲೂ ಧರ್ಮ ಪ್ರತಿಷ್ಠಾಪನೆಗಾಗಿ ಶ್ರೀಕೃಷ್ಣ ಬರುತ್ತಾನೆಂಬ ನಿರೀಕ್ಷೆಯಿಟ್ಟುಕೊಳ್ಳದೇ ಉತ್ತರದಿಂದಲೇ ಮತ್ತೆ ‘ಮಹಾಭಾರತ’ ಪ್ರಾರಂಭವಾಗಲಿ. ಬಸವನಾಡಿನ ಭೀಮ (ಬಿಆರ್‌ಪಿ?) ಗದೆಯೆತ್ತಿಕೊಳ್ಳಲಿ ಮತ್ತು ಧನಂಜಯ ಪಾಶುಪತಾಸ್ತ್ರದ ‘ಮಹಿಮೆ’ ಮೆರೆಯಲಿ. ಹೊರಟ್ಟಿ- ನಾಡಗೌಡರು ಯದುನಂದನನ ‘ಜಾಣ್ಮೆ’ ಮೆರೆಯಲಿ.

‘ಛತ್ರಪತಿ’ ಸಿಂಧ್ಯಾರವರ ‘ಛತ್-ಛಾಯಾ’ ಶಕ್ತಿಯೂ ಇರಲೇಬೇಕು. ಆದಾಗ್ಯೂ, ಯುದ್ಧಕುಂಡಕ್ಕೆ ತರ್ಪಣವಾಗಲು ನೂರಾರು ‘ಏಕಲವ್ಯ’ರು ಸಿಕ್ಕೇ ಸಿಗುತ್ತಾರೆ! ಉತ್ತರದವರು ಶಕ್ತಿ ತೋರಿಸಿದರೆ ಮಾತ್ರ ದಕ್ಷಿಣದ ‘ಮಾಹಿಷ್ಮತಿ’ಯವರು (ಮೈಸೂರು?!) ಗೌರವಿಸುತ್ತಾರೆ ಮತ್ತು ಯುದ್ಧ ಗೆದ್ದ ನಂತರ ಬೆಂದಕಾಳೂರಿನಲ್ಲೂ ಪಾಲು ಸಿಗುತ್ತದೆ. ಇಲ್ಲದಿದ್ದರೆ, ಜನತಾ ಪರಿವಾರವೆಂಬ ಪ್ರೇಮಕಾವ್ಯ ದುರಂತ ಕಾವ್ಯವಾಗಿ, ಪ್ರಣಯ ‘ಹರಾ-ಕಿರಿ’ಯಾಗಿ, ದುರಂತ ಪ್ರೇಮಿಗಳು ಪ್ರೇತಾತ್ಮರಾಗುವ ಸಾಧ್ಯತೆಯೇ ಹೆಚ್ಚು!

ಲೇಖಕ ಜೆಡಿಯು ರಾಜ್ಯ ಉಪಾಧ್ಯಕ್ಷ, 
ಮಾಜಿ ಕೆಎಎಸ್ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT