ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಧ ವಿದ್ರೋಹ ಮತ್ತು ಬಿಹಾರ ಚುನಾವಣೆ

ಇತಿಹಾಸ ಕೇವಲ ಪುನರಾವರ್ತನೆ ಆಗದು, ಅದು ಪುನರ್‌ಧ್ವನಿಸುತ್ತದೆ ಕೂಡ !
Last Updated 15 ಡಿಸೆಂಬರ್ 2015, 19:49 IST
ಅಕ್ಷರ ಗಾತ್ರ

ಬಿಹಾರದ ರಾಜಧಾನಿ ಪಟ್ನಾದಲ್ಲಿ ಇತ್ತೀಚೆಗೆ ಜರುಗಿದ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಮತ್ತು ಅವರ ಸಚಿವ ಸಂಪುಟದ ಪ್ರಮಾಣವಚನ ಸಮಾರಂಭದಲ್ಲಿ ನಾವು ಕರ್ನಾಟಕ ಜೆಡಿಯು ಘಟಕದ ಗೆಳೆಯರು ಭಾಗವಹಿಸಿದ್ದೆವು. ನನಗಂತೂ ಅದು ಪಟ್ನಾ ನಗರಿಗೆ ಮೊದಲ ಭೇಟಿಯಾಗಿತ್ತು. ಸಾಮ್ರಾಟ ಅಶೋಕ ಮೌರ್ಯನ ಕುರಿತು ಅವನ ಅಭಿಮಾನಿ-ಆರಾಧಕನಾಗಿಯೇ ಇತಿಹಾಸವನ್ನು ಗ್ರಹಿಸಿಕೊಂಡಿರುವ ನನಗೆ, ಪ್ರಾಚೀನ ಮಗಧದ ರಾಜಧಾನಿ ಪಾಟಲೀಪುತ್ರ, ಇಂದಿನ ಪಟ್ನಾಗೆ ಭೇಟಿ ಕೊಡುವುದೇ ರೋಮಾಂಚನಕಾರಿ ಅನುಭವವಾಗಿತ್ತು.

ಪಟ್ನಾದ ಹೊರವಲಯದಲ್ಲಿರುವ ಐ.ಬಿ.ಯಲ್ಲಿ ಸ್ವಲ್ಪ ಕಾಲ ವಿಶ್ರಮಿಸಿಕೊಂಡ ನಾವು ಪಕ್ಷದ ಕಚೇರಿಗೆ ಹೊರಟೆವು. ಅಲ್ಲಿ ಸಿಕ್ಕ ಪುಟ್ಟ ಸೈಕಲ್ ಬಂಡಿಯಲ್ಲಿ ಕುಳಿತು ಹೋಗುವಾಗ, ಸೈಕಲ್ ತುಳಿಯುತ್ತಿದ್ದವನಿಗೆ ನಿನ್ನ ಹೆಸರೇನೆಂದು ಕೇಳಿದೆ. ಅದಕ್ಕವನು ತನ್ನ ಹೆಸರು ‘ರಾಮಲಲ್ಲ ಪಾಸ್ವಾನ್’ ಎಂದೂ ‘ರಾಮವಿಲಾಸ ಪಾಸ್ವಾನ’ರ ಜಾತಿಯೇ ತನ್ನದು ಎಂದು ಹೇಳಿ ಮುಗಿಸಿದ. ನನಗಾದರೋ ಆಗ ತಾನೇ ಮುಗಿದಿದ್ದ ಬಿಹಾರ ವಿಧಾನಸಭೆ ರಾಜಕೀಯ ಕುರಿತು ಅವನನ್ನು ಮಾತಿಗೆಳೆಯಬೇಕಾಗಿತ್ತು.

ಹೀಗಾಗಿ ‘ಚುನಾವಣೆ ಹೇಗೆ ಜರುಗಿತು’ ಎಂದೆ. ಅಷ್ಟರಲ್ಲಿ ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ ಲೋಕಪಾಲ ಜೈನರು ರಾಮಲಲ್ಲಾನತ್ತ ‘ಬಾಣ’ ಚಲಾಯಿಸಿಯೇ ಬಿಟ್ಟರು! ‘ನೀನು ರಾಮ ವಿಲಾಸ್‌ ಪಾಸ್ವಾನ್‌ ಮತ್ತು ಮಿತ್ರರಿಗೇ ಮತ ಹಾಕಿರಬಹುದು’ ಎಂದು. ಅವರ ಮಾತು ತಿರುಗುಬಾಣವಾದೀತೆಂಬ ಕಲ್ಪನೆಯೂ ಅವರಿಗಿರಲಿಲ್ಲ. ರಾಮಲಲ್ಲಾ ನೀಡಿದ ಉತ್ತರ ನಮ್ಮನ್ನು ನಿಬ್ಬೆರಗಾಗಿಸಿತು. ‘ಇಲ್ಲ ಸಾಬ್, ನಾವು ಈ ಸಲ ಬಾಣವನ್ನು (ಜೆಡಿಯು ಗುರುತು) ಆಯ್ದುಕೊಂಡಿದ್ದೇವೆ. ಚುನಾವಣೆಗೆ ಮುಂಚೆ ನಾವು ಲಾಲೂಜಿ ಮತ್ತು ನಿತೀಶ್ ಕುಮಾರ್ ಅವರ ರ‍್ಯಾಲಿಗೆ ಹೋಗಿದ್ದೆವು. ಅಲ್ಲಿ ನಮಗೆ ಮೀಸಲಾತಿ ಕುರಿತಂತೆ ಇರುವ ಅಪಾಯದ ಬಗ್ಗೆ ಗೊತ್ತಾಯಿತು.

ಆದ್ದರಿಂದ ನಾವು ನಮ್ಮ ಮಕ್ಕಳ ಭವಿಷ್ಯದ ರಕ್ಷಣೆ ಮಾಡುವುದಾಗಿ ಸಂಕಲ್ಪ ಮಾಡಿದವರಿಗೇ ಮತ ಹಾಕಿದ್ದೇವೆ’ ಎಂದು ಹೇಳಿದ. ನಾನು ಅವನ ಮಾತುಗಳಿಂದ ಅವಾಕ್ಕಾದರೂ ಸಾವರಿಸಿಕೊಂಡು ‘ನೀವು ಬಿಹಾರಿಗಳು ಬುದ್ಧಿವಂತರು’ ಎಂಬ ಅರ್ಥ ಬರುವಂತೆ ನನ್ನ ಹರಕು ಮುರುಕು ಹಿಂದಿಯಲ್ಲಿ ಹೇಳಿಬಿಟ್ಟೆ. ಆಗ ಮೈಮೇಲೆ ದೆವ್ವ ಬಂದಂತೆ ಮಾತನಾಡಲಾರಂಭಿಸಿದ ಆತ ‘ನಾವು ಮಗಧ ವಾಸಿಗಳು ಈ ಪುರಾತನ, ಸತ್ವಶಾಲಿ ಮಣ್ಣಿನಿಂದಲೇ ರೂಪುಗೊಂಡಿದ್ದೇವೆ. ನಮ್ಮ ಪೂರ್ವಿಕರ ರಕ್ತವೇ ನಮ್ಮ ಮೈಯಲ್ಲೂ ಹರಿಯುತ್ತಿದೆ. ಆದ್ದರಿಂದ ನಾವು ಈ ಸಾರೆ ಹೂವನ್ನು (ಬಿಜೆಪಿಯ ಕಮಲ) ಬೇರು ಸಹಿತ ಕಿತ್ತು ಬಿಸಾಕಿದ್ದೇವೆ. ಮಗಧ ಮತ್ತೊಮ್ಮೆ ನಮ್ಮದಾಗಿದೆ’ ಎಂದು ಆಕ್ರೋಶಭರಿತ ಮುಗ್ಧತೆಯಿಂದ ತನ್ನ ಭೋಜ್‌ಪುರಿ ಶೈಲಿಯಲ್ಲಿ ಹೇಳಿದಾಗ ನನಗೆ ನಿಜಕ್ಕೂ ಸತ್ಯದ ದಿಗ್ದರ್ಶನವಾಗಿತ್ತು. ‘ಇತಿಹಾಸ ಮರುಕಳಿಸುತ್ತದೆ’ ಎನಿಸಿತು. ನಾನು ಮೌರ್ಯ ಸಾಮ್ರಾಜ್ಯದ ಉತ್ತುಂಗದ ದಿನಗಳನ್ನು ನೆನಪಿಸಿಕೊಳ್ಳತೊಡಗಿದೆ.

ಅಶೋಕ ಸಾಮ್ರಾಟನ ಅಜ್ಜ ಚಂದ್ರಗುಪ್ತ ಮೌರ್ಯ, ಅವನ ತಂದೆ ಬಿಂದುಸಾರ ಮತ್ತು ಸ್ವತಃ ಅಶೋಕನೇ ಕೈಗೊಂಡ ಸಾಮ್ರಾಜ್ಯಶಾಹಿ ಯುದ್ಧಗಳಿಂದಾಗಿ ಮೌರ್ಯ ಸಾಮ್ರಾಜ್ಯ ಉತ್ತರದಲ್ಲಿ ಕಾಶ್ಮೀರದಿಂದ ದಕ್ಷಿಣದಲ್ಲಿ ಮದುರೆವರೆಗೂ, ಪಶ್ಚಿಮದಲ್ಲಿ ಗಂಧಾರದಿಂದ (ಇಂದಿನ ಆಫ್ಘಾನಿಸ್ತಾನದ ಕಂದಹಾರ್) ಪೂರ್ವದಲ್ಲಿ ನೇಪಾಳದವರೆಗೂ ಹಬ್ಬಿತ್ತು. ಇಂತಹ ವಿಶಾಲ ಸಾಮ್ರಾಜ್ಯವು ಸಾಮ್ರಾಟ ಅಶೋಕನು ಗತಿಸಿದ ಕೆಲವೇ ವರ್ಷಗಳಲ್ಲಿ, ಅದೂ ಅವನ ನೇರ ಉತ್ತರಾಧಿಕಾರಿಗಳ ಆಳ್ವಿಕೆಯ ಸಂದರ್ಭದಲ್ಲಿಯೇ ಅವಸಾನಗೊಳ್ಳುವಂತಾದದ್ದು ಒಂದು ಐತಿಹಾಸಿಕ ದುರಂತವೇ ಸರಿ. ಕೊನೆಯ ಮೌರ್ಯ ಸಾಮ್ರಾಟನ ಸೇನಾ ದಂಡನಾಯಕನು ಸೈನ್ಯದ ಸಮ್ಮುಖದಲ್ಲಿಯೇ ಸಾಮ್ರಾಟನ ರುಂಡ ಚೆಂಡಾಡುತ್ತಾನೆ ಮತ್ತು ಮಗಧ ಸಿಂಹಾಸನವನ್ನು ಆಕ್ರಮಿಸಿಕೊಳ್ಳುತ್ತಾನೆ.

ಆ ಕೊನೆಯ ಮೌರ್ಯ ಸಾಮ್ರಾಟನ ಹೆಸರು ‘ಬೃಹಧೃತ’ ಮತ್ತು ಆ ಸೇನಾ ದಂಡನಾಯಕನ ಹೆಸರು ‘ಪುಷ್ಯಮಿತ್ರ ಶುಂಘ’. ಈ ಪುಷ್ಯಮಿತ್ರನೇ  ಹೊಸ ಬ್ರಾಹ್ಮಣ ರಾಜ ಮನೆತನ ‘ಶುಂಘ’ ವಂಶದ ಸಂಸ್ಥಾಪಕ. ಆ ಕಾಲದಲ್ಲಿ ತೀವ್ರಗಾಮಿ (ಈಗ ಪ್ರಗತಿಪರ) ಮತಗಳೆಂದೇ ಗುರುತಿಸಲಾಗಿದ್ದ ಜೈನ ಮತ್ತು ಬೌದ್ಧ ಮತಾವಲಂಬಿಗಳಾಗಿದ್ದ (ಕ್ರಮವಾಗಿ) ಚಂದ್ರಗುಪ್ತ ಮೌರ್ಯ ಮತ್ತು ಅಶೋಕ ಸಾಮ್ರಾಟರ ಪ್ರಭಾವದಿಂದಾಗಿ ಕೊನೆಯ ಮೌರ್ಯ ದೊರೆ ಬೃಹಧೃತ ಒಬ್ಬ ಹಿಂದುಳಿದವರ ಪರ, ದೀನ-ದಲಿತ ಅನುರಾಗಿ ರಾಜನಾಗಿದ್ದರೆ, ಅವನ ಬ್ರಾಹ್ಮಣ ಸೇನಾನಿ ಪುಷ್ಯಮಿತ್ರ ಶುಂಘ ವೈದಿಕ ಪರಂಪರೆಯ ಪುನರುಜ್ಜೀವನದ ಕನಸು ಕಾಣುತ್ತಿದ್ದವನು.

ಹೀಗಾಗಿ, ಅಶೋಕ ಸಾಮ್ರಾಟನ ರಾಷ್ಟ್ರೋತ್ಥಾನದ ಕ್ರಮಗಳಿಂದಾಗಿ ಅಧಃಪತನಗೊಂಡಿದ್ದ ವೈದಿಕ ಮೂಢಾಚರಣೆ-ನಂಬಿಕೆಗಳ  ಪುನರುತ್ಥಾನದ ಮೊದಲನೆಯ ಅವಕಾಶ ಸಿಗುತ್ತಲೇ ವೈದಿಕರು ಶುಂಘರ ನೇತೃತ್ವದಲ್ಲಿ ರಾಜವಿದ್ರೋಹವೆಸಗಿದ್ದರು. ತತ್ಪರಿಣಾಮವಾಗಿ, ಶುಂಘರ ಮತ್ತು ಅವರ ಪರಂಪರೆಯನ್ನೇ ಮುಂದುವರಿಸಿಕೊಂಡು ಬಂದ, ಅವರ ಉತ್ತರಾಧಿಕಾರಿಗಳಾಗಿದ್ದ ಗುಪ್ತರ ಕಾಲದಲ್ಲಿ ಜಾತಿ ಮತ್ತು ವರ್ಣ ವ್ಯವಸ್ಥೆ ಗಟ್ಟಿಗೊಳ್ಳುತ್ತಲೇ ಹೋಯಿತು. ಗುಪ್ತರ ನಂತರ ಬಂದ ಬೌದ್ಧ ಮತಾವಲಂಬಿ ಹರ್ಷನ ಆಳ್ವಿಕೆ ಅಲ್ಪಕಾಲೀನವಾಗಿತ್ತು. 

ವೈದಿಕ ಬಂಡಾಯದಿಂದಾಗಿಯೇ ಹರ್ಷನ ಆಳ್ವಿಕೆಯೂ ಅವಸಾನಗೊಂಡಿದ್ದನ್ನು ಇಲ್ಲಿ ಗಮನಿಸಬೇಕು. ಹರ್ಷನ ತರುವಾಯ ಬಂದ ರಜಪೂತರು, ಚಾಲುಕ್ಯರು, ವಿಜಯನಗರದ ಅರಸರು, ಸುಲ್ತಾನರು, ಗುಲಾಮ ಸಂತತಿಯವರು ಮತ್ತು ಮೊಫಲರು ಎಲ್ಲರೂ ಅದೇ ಜಾತಿ ಆಧಾರಿತ ಶೋಷಿತ ಸಮಾಜವನ್ನು ಇನ್ನೂ ಉಸಿರುಗಟ್ಟುವಂತೆ ಗಟ್ಟಿಗೊಳಿಸುತ್ತಾ ಹೋಗಿದ್ದು ಐತಿಹಾಸಿಕ ಸತ್ಯ. ‘ಮಗಧ ಕೇ ಮಿಟ್ಟಿ’ ಕುರಿತು ಹೆಮ್ಮೆಯಿದ್ದರೂ ಬಹುಶಃ ರಾಮಲಲ್ಲಾ ಪಾಸ್ವಾನನಿಗೆ ಸುಮಾರು 2250 ವರ್ಷಗಳ ಮುಂಚೆ ಘಟಿಸಿದ ಮಗಧ ರಾಜವಿದ್ರೋಹ ಕುರಿತ ಮಾಹಿತಿಯ ಲವಲೇಶವೂ ಇರಲಿಕ್ಕಿಲ್ಲ.

ಅಲ್ಲದೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಗತಿಪರರೆಲ್ಲ ಒಂದಾಗಿ, ಪ್ರತಿಗಾಮಿ ಶಕ್ತಿಗಳಿಗೆ ನೀಡಿದ ಸಂಘಟಿತ ಪ್ರತ್ಯುತ್ತರ ಈ ಬಿಹಾರ ಚುನಾವಣೆ ಫಲಿತಾಂಶ ಎಂಬ ಕಿಂಚಿತ್ತು ಭ್ರಮೆಯೂ ಅವನಿಗಿರಲಾರದು. ಬಾಣದ ಗುರುತಿಗೆ ಮತ ಹಾಕುವ ಮೂಲಕ ಹೂವನ್ನು ಬೇರು ಸಹಿತ ಕಿತ್ತು ಬಿಸಾಡಿದೆ ಎಂಬ ಅವನ ಹೇಳಿಕೆ ಬಿಹಾರದ ಪ್ರಚಲಿತ ರಾಜಕೀಯ ಕುರಿತಂತೆ ತತ್‌ಕ್ಷಣದ ಮತ್ತು ಸ್ವಯಂಸ್ಫೂರ್ತಿಯ ಪ್ರತಿಕ್ರಿಯೆ ಮಾತ್ರ ಎಂಬುದನ್ನು ನಾವು ಮರೆಯಬಾರದು. ಆದರೆ, ಮೊನ್ನೆ ಬಿಹಾರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಯಾದವರು, ಕೂರ್ಮಿ, ಕೊಯಿರಿ, ಪಾಸ್ವಾನ, ಗಢೇರಿಯಾ, ಮುಸ್ಲಿಂ ಇತ್ಯಾದಿ ಅಹಿಂದ ವರ್ಗಗಳು ಪ್ರತಿಕ್ರಿಯಿಸಿದ ರೀತಿ ನೋಡಿದರೆ, ಬಹುಶಃ ರಾಮಲಲ್ಲಾನ ಮಾತುಗಳು ಅವರೆಲ್ಲರ ಆಶಯಗಳನ್ನೇ ಧ್ವನಿಸುತ್ತಿವೆಯೇನೋ ಎನಿಸದಿರಲಾರದು.

ಮದ್ದು ತುಂಬಿದ ಕೋಠಿ ಸ್ಫೋಟಿಸಲು ಬೆಂಕಿಯ ಒಂದು ಸಣ್ಣ ಕಿಡಿ ಸಾಕು. ಆರ್ಎಸ್ಎಸ್‌ನ ಅಧಿನಾಯಕ ಮೋಹನ ಭಾಗವತರು ಅರಿವಿದ್ದೋ ಅರಿವಿಲ್ಲದೆಯೋ ಆ ಕೆಲಸ ಮಾಡಿಯೇ ಬಿಟ್ಟರು. ಕ್ಷಣಾರ್ಧದೊಳಗೆ ಬಿಹಾರ ಚುನಾವಣೆಯೆಂಬ ಯುದ್ಧ ಭೂಮಿಯಲ್ಲಿ ಲಾಲು-ನಿತೀಶರೆಂಬ, ನಾಲ್ಕು ದಶಕಗಳಿಂದ ಮಗಧ ರಣರಂಗದಲ್ಲಿಯೇ ಪಳಗಿದ ಫಿರಂಗಿಗಳು ಭಯಂಕರವಾಗಿ ಮೊರೆಯಲು ಪ್ರಾರಂಭಿಸಿದವು. ಮೀಸಲಾತಿ ಪರಾಮರ್ಶೆ ಕುರಿತಂತೆ ಭಾಗವತರು ನೀಡಿದ ‘ಲೆಕ್ಕಾಚಾರದ’ ಹೇಳಿಕೆ ಮಗಧ ಸಾಮ್ರಾಜ್ಯಕ್ಕಾಗಿ 21ನೇ ಶತಮಾನದ ಯುದ್ಧ ಮುಗಿಯುವ ಮೊದಲೇ ಬದಲಾದ ಸಾಮಾಜಿಕ-ರಾಜಕೀಯ ವ್ಯವಸ್ಥೆಯ ಅಡಿಯಲ್ಲಿ ‘ಪುಶ್ಯಮಿತ್ರ ಶುಂಘನ ಆಧುನಿಕ ಉತ್ತರಾಧಿಕಾರಿಗಳಾರು’ ಎಂಬುದನ್ನು ನಿರ್ಣಯಿಸಿಯಾಗಿತ್ತು.

ರಾಜಗಿರ್‌ನಲ್ಲಿ ನಮಗಾದ ಅನುಭವ ಕೇವಲ ಇತಿಹಾಸದ ಪುನರಾವರ್ತನೆಯಾಗಿರದೆ, ಇತಿಹಾಸದ ಪುನರ್‌ಧ್ವನಿಯೂ ಆಗಿತ್ತು. ಪ್ರಾಚೀನ ಮಗಧದ ರಾಜಧಾನಿಯಾಗಿದ್ದ ‘ರಾಜಗೃಹ’ವೇ ಇಂದು ‘ರಾಜಗಿರ’ ಆಗಿದೆ. ಕೆಲವು ಇತಿಹಾಸಕಾರರು ಮಗಧದ ಇತಿಹಾಸವೇ ‘ಪ್ರಾಚೀನ ಭಾರತೀಯ ಇತಿಹಾಸ’ ಎಂದು ಕರೆದಿದ್ದಾರೆ. ಆ ಅರ್ಥದಲ್ಲಿ ‘ರಾಜಗಿರ’ ಪ್ರಾಚೀನ ಭಾರತದ ಪ್ರಥಮ ರಾಜಧಾನಿ ಆಗಿತ್ತೆನ್ನಬಹುದು. ಬುದ್ಧನ ಮಹಾಪರಿನಿರ್ವಾಣದ ನಂತರ ಜರುಗಿದ ಮೊದಲ ಬೌದ್ಧ ಮಹಾಸಭೆ ನಡೆದದ್ದೂ ಇಲ್ಲಿಯೇ. ಮಹಾಭಾರತದ ಜರಾಸಂಧನ ರಾಜಧಾನಿಯೂ ಇದೇ ಆಗಿತ್ತು. ಶ್ರೀಕೃಷ್ಣನ ಯೋಜನೆಯ ಮೇರೆಗೆ ಭೀಮನು ಜರಾಸಂಧನನ್ನು ವಧಿಸಿದ್ದು ಕೂಡ ಇಲ್ಲಿಯೇ.

ನಾವೆಲ್ಲ ಕನ್ನಡ ಶಾಲೆಯಲ್ಲಿ ಓದುತ್ತಿದ್ದಾಗ ಜರಾಸಂಧ ದುಷ್ಟ, ರಾಕ್ಷಸ ರಾಜನಂತೆ ಓದಿಕೊಂಡ ನೆನಪಿದೆ. ಆದರೆ, ಅಂದು ರಾಜಗಿರ್‌ನ ಬೀದಿಯಲ್ಲಿ ಹೋಗುತ್ತಿರಬೇಕಾದರೆ ರಾಜ ಮರ್ಯಾದೆಯಿಂದ ಬರುತ್ತಿದ್ದ ‘ಮಹಾರಾಜ ಜರಾಸಂಧನ’ ದರ್ಶನವಾಗಬೇಕೇ! ಚೆನ್ನಾಗಿ ಸಿಂಗರಿಸಿದ್ದ ಮಹಾರಾಜ ಜರಾಸಂಧನ ವಿಗ್ರಹವನ್ನು ಆನೆಯ ಮೇಲೆ ಅಂಬಾರಿಯಲ್ಲಿಟ್ಟು ಮೆರವಣಿಗೆ ಹೊರಟಿದ್ದರು ರಾಜಗಿರ್‌ನ ಅವನ ಆಧುನಿಕ ಪ್ರಜೆಗಳು! ವಿಚಾರಿಸಿದರೆ ಅವರು ‘ಮಹಾರಾಜ ಜರಾಸಂಧ ಜಯಂತಿ’ ಆಚರಿಸುತ್ತಿದ್ದರು ಎಂದು ತಿಳಿದ ಮೇಲೆ ನಮಗೋ ಸಾಂಸ್ಕೃತಿಕ ಆಘಾತವೋ ಆಘಾತ. ತಮಿಳು ದೇಶಕ್ಕೆ ಬಂದು ‘ರಾವಣ ಲೀಲಾ’ ಕಾರ್ಯಕ್ರಮ ನೋಡಿದರೆ ಉತ್ತರ ಭಾರತೀಯರಿಗೆ ಆಗುವ ಆಘಾತವೇ ನಮಗೂ ಆಗಿತ್ತೆನ್ನಬಹುದು.

ಈ ಕುರಿತು ನಮ್ಮ ಪ್ರವಾಸಿ ಗೈಡ್ ಅನಿಲ ಕುಮಾರ್ ಎಂಬುವವರನ್ನು ಕೇಳಿದರೆ ಅವರು ‘ಜರಾಸಂಧ ಮಗಧ ಕೇ ಮಹಾರಾಜಾ ಥೇ. ಹಜಾರೋ ಸಾಲೋ ಸೇ, ವಿಶೇಷತಃ ಪಿಚಡೇ ಜನ- ಜಾತಿ ಕೇ ಲೋಗೋನೇ ಉನ್‌ಕೇ ಜಯಂತಿ ಹರ್ ಬರಸ್ ಮನಾತೇ ಆಯೇ ಹೈ’ ಎಂದಷ್ಟೇ ಹೇಳಿದರು. ಅವರ ಉತ್ತರದಿಂದ ಸಂಪೂರ್ಣ ಸಮಾಧಾನವಾಗದಿದ್ದರೂ ‘ವಿಶೇಷತಃ ಪಿಚಡೇ ಜನ- ಜಾತಿ ಕೇ ಲೋಗ್‌’ ಎಂಬ ವಿಶೇಷಣದಲ್ಲಿ ಏನೋ ಇತಿಹಾಸದ ಹೊಳಹು ಸಿಕ್ಕೀತೇನೋ ಎಂದು ನಾನು ವಿಚಾರಿಸತೊಡಗಿದೆ. ಆದರೆ, ಅದೇ ದಿನ ನಾವು ‘ಜರಾಸಂಧ ಅಖಾರಾ’ ನೋಡಲು ಹೋದಾಗ ಸಿಕ್ಕ ಶಿವನಾರಾಯಣ ಸಾಹು ಎಂಬ ಜಾರ್ಖಂಡ್  ಕೇಡರ್‌ನ ಅಧಿಕಾರಿಯೊಬ್ಬರು ಈ ಇತಿಹಾಸದ ಹೊಳಹಿನ ಮೇಲೆ ಬೆಳಕು ಚೆಲ್ಲಿದರು.

ಅವರ ಇಂಗ್ಲಿಷ್ ಮಾತುಗಳನ್ನು ಕನ್ನಡದಲ್ಲಿ ಹೇಳುವುದಾದರೆ– ‘ಜರಾಸಂಧ ಮತ್ತು ಭೀಮಾರ್ಜುನ- ಕೃಷ್ಣರು ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಗಳಿಂದ ಬಂದವರಾಗಿದ್ದರು. ಶೂದ್ರ ವರ್ಗದಿಂದಲೇ ಬಂದಿದ್ದ ಯದುನಂದನ ಶ್ರೀಕೃಷ್ಣ ಮತ್ತು ಕುರುಸುತರಾದ ಭೀಮಾರ್ಜುನರು ಪಿತೃ ಪ್ರಧಾನ ವ್ಯವಸ್ಥೆಯನ್ನು ಪ್ರತಿನಿಧಿಸುತ್ತಿದ್ದರೆ, ಜರಾಸಂಧನು ಅವನ ಹೆಸರೇ ಸೂಚಿಸುವಂತೆ ಮಾತೃಪ್ರಧಾನ ವ್ಯವಸ್ಥೆಯಿಂದ ಬಂದವನಾಗಿದ್ದನು (ಜರಾಸಂಧನನ್ನು ‘ಜರಾ’ ಎಂಬ ರಾಕ್ಷಸಿ ಬೆಳೆಸಿದಳೆಂಬ ಕತೆಯಿದೆ). ಬಹುಶಃ ಶ್ರೀಕೃಷ್ಣ ಮತ್ತು ಭೀಮಾರ್ಜುನರು ಆಗಲೇ ಸಾಂಸ್ಕೃತೀಕರಣಗೊಂಡಿದ್ದರೆಂದು ಕಾಣುತ್ತದೆ.

ಜರಾಸಂಧ ಶ್ರೇಷ್ಠ ಶಿವಭಕ್ತನಾಗಿದ್ದರೆ, ಭೀಮಾರ್ಜುನರೋ ಖ್ಯಾತ ಭಾಗವತರು! ಸಾಕ್ಷಾತ್ ಶ್ರೀಕೃಷ್ಣ ಭಾಗವತನೇ ಅವರ ‘ದೇವಪಿತೃ’ವಾಗಿದ್ದ. ಅವರ ಭಾಷೆ, ಆಚಾರ-ವಿಚಾರ, ನಂಬುಗೆಗಳೆಲ್ಲವೂ ವಿಭಿನ್ನವಾಗಿದ್ದವು. ಇವೆಲ್ಲಕ್ಕೂ ಮಿಗಿಲಾಗಿ ಜರಾಸಂಧನೊಬ್ಬ ಸ್ಥಳೀಯ, ಮೂಲನಿವಾಸಿಗಳ ರಾಜನಾಗಿದ್ದು ತನ್ನ ಪರಾಕ್ರಮ, ರಾಷ್ಟ್ರಪ್ರೇಮ ಮತ್ತು ಸ್ವಾಭಿಮಾನಕ್ಕೆ ಹೆಸರಾಗಿದ್ದವನು. ಆ ಕಾಲಕ್ಕೆ ‘ಮಗಧ  ಮಹಾಜನಪದ’ವನ್ನು ಆರ್ಯಾವರ್ತದ ಹೊರಗಿನ, ಅನಾರ್ಯರಿಂದ ತುಂಬಿದ ಪ್ರದೇಶವೆಂದು ತುಚ್ಛ ಭಾವನೆಯಿಂದ ನೋಡಲಾಗುತ್ತಿತ್ತು. ಆದರೆ, ಪಾಂಡವ-ಕೃಷ್ಣರಾದರೋ ಆರ್ಯಾವರ್ತದಿಂದ ಬಂದವರು (ಕ್ರಮವಾಗಿ ಹಸ್ತಿನಾಪುರ ಮತ್ತು ಮಥುರೆಯವರು). ಆದ್ದರಿಂದ ಅವರು ಆಕ್ರಮಣಕಾರರು, ಹೊರಗಿನಿಂದ ಬಂದವರು.

ಶ್ರೀಕೃಷ್ಣನ ಯೋಜನೆಯಂತೆ ಜರಾಸಂಧನನ್ನು ವಧಿಸಿದ ಪಾಂಡವರು ಮಗಧವನ್ನು ಆಕ್ರಮಿಸಿಕೊಂಡರು. ಅದು ಆರ್ಯರು ಮತ್ತು ನವ ಆರ್ಯರು (ಹೊಸದಾಗಿ ಸಾಂಸ್ಕೃತೀಕರಣಗೊಂಡವರು) ಅನಾರ್ಯ ಜನಾಂಗಗಳ ಮೇಲೆ ನಡೆಸಿದ ಸಾಂಸ್ಕೃತಿಕ, ರಾಜಕೀಯ ಆಕ್ರಮಣವಾಗಿತ್ತು. (ಇದೆಲ್ಲವನ್ನೂ ಇಂಗ್ಲಿಷಿನಲ್ಲಿಯೇ ಹೇಳಿದ ಅವರು ಇದ್ದಕ್ಕಿದಂತೆ ಹಿಂದಿಯಲ್ಲಿ ಮಾತು ಬದಲಿಸಿದರು). ‘ವೋ ಬಾಹರೀ ಲೋಗ್ ಥೆ, ಲೇಕಿನ್ ಹಮಾರೇ ಜರಾಸಂಧ ಅಸಲೀ ಬಿಹಾರೀ ಹೈ. ಇಸ್‌ಲಿಯೇ ಸದಿಯೋ ಸೇ ಮಗಧವಾಸಿಯೋನೇ ಜರಾಸಂಧ ಜಯಂತಿ ಮನಾತೇ ಆಯೇ ಹೈ’ ಎಂದು ನಗುತ್ತಾ ಹೇಳಿದಾಗ ನನಗೆ ಮತ್ತೊಮ್ಮೆ ಬುದ್ಧನ ನಾಡಿನಲ್ಲಿ ಸತ್ಯದ ದರ್ಶನವಾಗಿತ್ತು. ಇತಿಹಾಸ ಕೇವಲ ಪುನರಾವರ್ತನೆಯಾಗುವುದಿಲ್ಲ, ಅದು ಪುನರ್‌ಧ್ವನಿಸುತ್ತದೆ ಕೂಡ ಎಂಬ ಸತ್ಯ! ಆದರೆ ಅಮಿತ್‌ ಷಾ ಮತ್ತು ಮೋದೀಜಿಯವರಿಗೆ ‘ಬಾಹರೀ ಔರ್ ಬಿಹಾರೀ’ ಎಂಬ ಸತ್ಯದ ದರ್ಶನವಾದಾಗ ತುಂಬ ತಡವಾಗಿತ್ತು.

ಲೇಖಕ ಜೆಡಿಯು ರಾಜ್ಯ ಉಪಾಧ್ಯಕ್ಷ, ಮಾಜಿ ಕೆಎಎಸ್ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT