ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳ ಉಳಿವಿಗೆ ಕೇರಳ ಮಾದರಿ

Last Updated 28 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಅದೊಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಇರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 676. ಅದರಲ್ಲಿ 300 ವಿದ್ಯಾರ್ಥಿ­­ಗಳು ಒಂದರಿಂದ ನಾಲ್ಕನೇ ತರಗತಿಯ ತನಕದವರಾಗಿದ್ದರೆ, ಪೂರ್ವ ಪ್ರಾಥಮಿಕ ಹಂತ­ದಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ 376. ಅಲ್ಲಿ­ರುವ ಒಟ್ಟು ಶಿಕ್ಷಕರ ಸಂಖ್ಯೆ 24. ಅದರಲ್ಲಿ ಸರ್ಕಾರ ನೇಮಿಸಿದವರ ಸಂಖ್ಯೆ 10. ಶಾಲೆಯ ಶಿಕ್ಷಕರು ಮತ್ತು ಪಾಲಕರ ಸಂಘ (ಪಿ.ಟಿ.ಎ) ನೇಮಿ­ಸಿ­ರುವ ಶಿಕ್ಷಕರ ಸಂಖ್ಯೆ 14. ಹೀಗೆ ನೇಮಕ­ಗೊಂಡ ಶಿಕ್ಷಕರಿಗೆ ಶಾಲಾ ಅಭಿವೃದ್ಧಿ ನಿಧಿಯಿಂದ ಗೌರವಧನ ಪಾವತಿಸಲಾಗುತ್ತದೆ.

ಹೀಗೆ ಗೌರವ­ಧನಕ್ಕಾಗಿ ಕೆಲಸ ಮಾಡುತ್ತಿರುವ ಶಿಕ್ಷಕಿಯೊಬ್ಬರ ಮಕ್ಕಳೂ ಇದೇ ಶಾಲೆಯಲ್ಲಿದ್ದಾರೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ನೂರರಷ್ಟಿದ್ದರೇ ಹೆಚ್ಚು ಎಂಬ ಭಾವನೆ­ಇರುವ ಈ ಕಾಲದಲ್ಲಿ ಇಂಥದ್ದೊಂದು ಶಾಲೆ ಇರಲು ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಸಹಜ. ಈ  ಶಾಲೆ ಇರುವುದು ನೆರೆಯ ಕೇರಳ ರಾಜ್ಯದ ತ್ರಿಶ್ಶೂರ್ ಜಿಲ್ಲೆಯ ಕೊಟಗೆರೆ ಬ್ಲಾಕ್‌­ನಲ್ಲಿರುವ ಕೊಡಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ.

ಅಜೀಂ ಪ್ರೇಮ್‌ಜಿ ಫೌಂಡೇಶನ್, ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯೊಂದಿಗೆ ಮಾಡಿ­ಕೊಂಡಿರುವ ಒಡಂಬಡಿಕೆಯ ಭಾಗವಾಗಿ ಮಕ್ಕಳು ಹಾಗೂ ಶಾಲೆಯ ಶಿಕ್ಷಣ ವ್ಯವಸ್ಥೆಗೆ ಪೂರಕ­ವಾಗಿರುವ ವಿವಿಧ ಸಾಂಸ್ಥಿಕ ವ್ಯವಸ್ಥೆಗಳ ಬಗ್ಗೆ ಹಂತಹಂತವಾಗಿ ಅಧ್ಯಯನ ನಡೆಸಿದೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್)  ಪ್ರಾಂಶುಪಾಲರಿಗೆ ಶೈಕ್ಷಣಿಕ ಪರಿ­ಕಲ್ಪನೆಗಳ ಆಳವಾದ ಪರಿಚಯ ಮಾಡಿಕೊಡು­­ವುದರ ಭಾಗವಾಗಿ ತಂಡವೊಂದು ಕೇರಳ ರಾಜ್ಯಕ್ಕೆ ಪ್ರವಾಸ ಕೈಗೊಂಡಿತ್ತು. ಈ ಸಂದ­ರ್ಭದಲ್ಲಿ ಕಾಣಸಿಕ್ಕಿದ್ದು ಮೇಲಿನ ಶಾಲೆ. ‘ಸರ್ಕಾರಿ ಶಾಲೆ’ ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರಣಕ್ಕೆ ಸಂಪೂರ್ಣವಾಗಿ ಭಿನ್ನ­ವಾಗಿ­ರುವ ಇಂಥ ಅನೇಕ ಶಾಲೆಗಳು ಕೇರಳ­ದ­ಲ್ಲಿವೆ. ಕೊಡಲಿ ಗ್ರಾಮ ಪಂಚಾಯಿತಿ ವ್ಯಾಪ್ತಿ­ಯಲ್ಲಿ ಖಾಸಗಿ ಶಾಲೆ­ಗಳೇನೂ ಕಡಿಮೆ ಸಂಖ್ಯೆ­ಯಲ್ಲಿಲ್ಲ. ಮೇಲೆ ಉದಾಹರಿಸಿದ ಶಾಲೆಯ ಸುತ್ತಮುತ್ತ ಆರು ಖಾಸಗಿ ಶಾಲೆಗಳಿವೆ. ಆದರೆ ಅಲ್ಲೆಲ್ಲೂ ಸರ್ಕಾರಿ ಶಾಲೆಯಲ್ಲಿರುವಷ್ಟು ಸಂಖ್ಯೆಯ ವಿದ್ಯಾರ್ಥಿಗಳಿಲ್ಲ.

ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮಾನ ಎನಿಸುವ ಮಟ್ಟದ ಮಾನವ ಅಭಿವೃದ್ಧಿ ಸೂಚ್ಯಂಕ ಹೊಂದಿರುವ ಕೇರಳದಲ್ಲಿ ಇದು ಸಹಜ ಎಂದು­ಬಿಡಬಹುದು. ಆದರೆ ಅಲ್ಲಿಯೂ ಖಾಸಗಿ ಶಾಲೆ­ಗಳು ಉತ್ತಮ ಎಂದು ಭಾವಿಸುವ ಪಾಲಕ­ರಿ­ದ್ದಾರೆ. ಹಾಗೆಯೇ ಇಂಗ್ಲಿಷ್ ಮಾಧ್ಯ­ಮದ ಶಿಕ್ಷಣ ಅಗತ್ಯ ಎಂದು ತಿಳಿದಿರುವ ಪಾಲಕರ ಸಂಖ್ಯೆಯೂ ನಮ್ಮಲ್ಲಿಗಿಂತ ಕಡಿಮೆಯೇನಿಲ್ಲ. ಒಟ್ಟರ್ಥದಲ್ಲಿ ಕೇರಳದ ಸರ್ಕಾರಿ ಶಾಲೆಗಳೂ ಕರ್ನಾಟಕದ ಸರ್ಕಾರಿ ಶಾಲೆಗಳು ಎದುರಿಸುತ್ತಿರುವಂಥದ್ದೇ  ಸವಾ­ಲು­ಗಳನ್ನು ಎದುರಿಸುತ್ತಿವೆ. ಆದರೆ ಅಲ್ಲಿ ಸವಾಲನ್ನು ಎದುರಿಸುವ ತಂತ್ರವೊಂದು ಸರ್ಕಾರ ಮತ್ತು ಪಾಲಕರ ಆಸಕ್ತಿಯಿಂದಲೇ ರೂಪು­ಗೊಂಡಿ­ರುವು­ದಷ್ಟೇ ವಿಶೇಷ.

ಕರ್ನಾಟಕದಲ್ಲಿರುವಂತೆಯೇ ಕೇರಳದಲ್ಲಿ ಶಾಲಾ­ಭಿವೃದ್ಧಿ ಸಮಿತಿಗಳಿವೆ. ಆದರೆ ಅಲ್ಲಿ ಪಿ.ಟಿ.ಎ.­ಗಳು ಹೆಚ್ಚು ಪ್ರಬಲವಾಗಿವೆ. ಶಾಲಾ­ಭಿ­ವೃದ್ಧಿ ಸಮಿತಿ ಏನೇ ಮಾಡಬೇಕೆಂದರೂ ಶಾಲೆಯ ಆಗುಹೋಗುಗಳ ನಿಜವಾದ ಪಾಲು­ದಾರರಾದ ಶಿಕ್ಷಕರು ಮತ್ತು ಪಾಲಕರನ್ನು ಒಲಿಸಿಕೊಳ್ಳಲೇ­ಬೇಕಾ­ಗುತ್ತದೆ. ಕೊಡಲಿ­ಯಲ್ಲಿ­ರುವ ಶಾಲೆಯ ಉದಾಹರಣೆಯನ್ನೇ ತೆಗೆದು­ಕೊಂಡರೂ ಇದು ಅರ್ಥವಾಗುತ್ತದೆ. ಈ ಶಾಲೆಯ ಕೈತೋಟವನ್ನು ಅಭಿವೃದ್ಧಿಪಡಿಸಿ ನಿರ್ವಹಿಸುವುದು ಪಿ.ಟಿ.ಎ.

ಸರ್ಕಾರದಿಂದ ದೊರೆಯುವ ಅನುದಾನ­ದಿಂದಷ್ಟೇ ಶಾಲೆಯ ಎಲ್ಲ ಅಗತ್ಯಗಳನ್ನು ಪೂರೈಸಿ­ಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹೆಚ್ಚುವರಿ ಅಗತ್ಯಗಳನ್ನು ಪೂರೈಸಿಕೊಳ್ಳಲು ಬೇಕಿರುವ ಮೊತ್ತ­ವನ್ನು ದಾನಿಗಳಿಂದ ಪಡೆಯು­ವುದಕ್ಕೆ ಮಾಡ­ಬೇಕಾಗಿರುವ ಪ್ರಯತ್ನವೂ ಪಿ.ಟಿ.ಎ ಕಡೆ­ಯಿಂದಲೇ ನಡೆಯುತ್ತದೆ. ಶಾಲೆಯ ಎಲ್ಲ ಚಟು­ವಟಿಕೆಗಳೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಪಾಲಕರಿಗೂ ಸಂಬಂಧ­ವಿ­ರುವಂತೆ ನೋಡಿಕೊಂಡಿ­ರು­ವು­ದರಿಂದ ಒಂದು ಸಾಮುದಾಯಿಕ ಮೇಲು­ಸ್ತು­ವಾರಿ ಸಹಜ­ವಾ­ಗಿಯೇ ರೂಪುಗೊಂಡಿದೆ. ಇವೆ­ಲ್ಲದರ ಪರಿ­ಣಾಮ ಶಾಲೆಯ ಒಟ್ಟು ಚಟುವಟಿಕೆಗಳಲ್ಲೂ ಕಾಣಸಿಗುತ್ತದೆ.

ಸುಮಾರು ನಲವತ್ತು ನಿಮಿಷ ನಡೆಯುವ ಶಾಲೆಯ ಬೆಳಗಿನ ಸಭೆಯನ್ನು ಸಂಪೂರ್ಣವಾಗಿ ಮಕ್ಕಳೇ ನಡೆಸಿಕೊಡುತ್ತಾರೆ. ನಾವು ಭೇಟಿ ನೀಡಿದ ಈ ಶಾಲೆಯ ಸಭೆಯನ್ನು ಮೂರನೇ ತರ­ಗತಿಯ ಮಕ್ಕಳು  ನಡೆಸಿಕೊಟ್ಟರು. ಸುಮಾರು ಮೂವತ್ತು ಮಕ್ಕಳು ವೇದಿಕೆಯ ಮೇಲಿದ್ದರು. ದಿನ­ಪತ್ರಿಕೆಯ ಮುಖ್ಯಾಂಶಗಳಿಂದ ಆರಂಭಿಸಿ ಒಗಟು ಬಿಡಿಸುವಿಕೆ, ರಸಪ್ರಶ್ನೆ, ಗಾಂಧೀಜಿಯ ಚಿಂತನೆ... ಹೀಗೆ ಬೆಳಗಿನ ಸಭೆ ಕೇವಲ ಯಾಂತ್ರಿ­ಕವಾಗದಂತೆ ನೋಡಿಕೊಳ್ಳಲಾಗಿತ್ತು. ವೇದಿಕೆಯ ಮೇಲಿದ್ದ ಮಕ್ಕಳಿಗೆ ವೇದಿಕೆಯ ಮುಂದಿದ್ದ ಮಕ್ಕಳೂ ಪ್ರಶ್ನೆ ಕೇಳುತ್ತಿದ್ದರು. ಭಾಷೆಯೂ ಅಷ್ಟೇ ಮಲಯಾಳಂ ಮತ್ತು ಇಂಗ್ಲಿಷ್‌ಗಳೆರಡೂ ಸಂದ­ರ್ಭಕ್ಕೆ ತಕ್ಕಂತೆ ಬಳಕೆಯಾಗುತ್ತಿದ್ದವು. ಅಂದರೆ ಕಲಿಕೆಯೆಂಬುದು ತರಗತಿಯೊಳಕ್ಕೆ ಸೀಮಿತ-­ವಾ­ಗದೆ ಹೊರಗೂ ಬಂದಿತ್ತು. ಶಿಕ್ಷಕರ ಮಧ್ಯ­ಪ್ರವೇ­ಶವೇ ಇಲ್ಲದೆ ಮಕ್ಕಳ ಮಧ್ಯೆಯೇ ನಡೆಯುವ ಸಂವಹನವೇ ಅನೇಕ ವಿಚಾರಗಳನ್ನು ಅವರಿಗೆ ಕಲಿಸುತ್ತಲೂ ಇದ್ದವು. ಶಾಲೆ ಹೀಗೆ ಚಟುವಟಿಕೆ­ಯಿಂದ ತುಂಬಿಕೊಂಡಿರುವುದು ಪಾಲಕರಲ್ಲೂ ಉತ್ಸಾಹ ಹುಟ್ಟಿಸುತ್ತಿದೆ. ಜೊತೆಗೆ ಸರ್ಕಾರಿ ಶಾಲೆ­ಗಳು ಖಾಸಗಿ ಶಾಲೆಗಳಿಗಿಂತ ಉತ್ತಮ ಎನ್ನುವ ಭಾವನೆ ಮೂಡಿಸುವಲ್ಲಿ ಯಶಸ್ವಿ­ಯಾಗಿದೆ.

ಇದು ನಾವು ಸಂದರ್ಶಿಸಿದ ಒಂದು ಶಾಲೆಗೆ ಸೀಮಿತವಾದ ಮಾದರಿಯೇನಲ್ಲ. ಇದು ಕೇರಳದ ಹದಿನಾಲ್ಕೂ ಜಿಲ್ಲೆಗಳ ಬಹುದೊಡ್ಡ ಸಂಖ್ಯೆಯ ಸರ್ಕಾರಿ ಶಾಲೆಗಳಲ್ಲಿ ಕಾಣಸಿಗುತ್ತದೆ. ಹಾಗೆಯೇ ಸರ್ಕಾರದಿಂದ ಅನುದಾನ ಪಡೆ­ಯುವ ಶಾಲೆಗ­ಳಲ್ಲೂ ಇಂಥದ್ದೊಂದು ವಾತಾ­ವ­ರಣ­ವನ್ನು ಸೃಷ್ಟಿ­ಸಲು ಇಲ್ಲಿನ ಶಿಕ್ಷಣ ವ್ಯವಸ್ಥೆಗೆ ಸಾಧ್ಯವಾಗಿದೆ. ಇದರ ಹಿಂದೆ ಬಹುಮುಖ್ಯ ಪಾತ್ರ ವಹಿಸಿರು­ವುದು ಶಾಲೆಯ ಆಗು­ಹೋಗು­ಗಳಲ್ಲಿ ಪಾಲಕ­ರನ್ನು ಒಳಗೊಳ್ಳುವ ಪ್ರಯತ್ನ. ಶಾಲೆಗಳಲ್ಲಿ ಪಿ.ಟಿ.ಎ ಪ್ರಬಲವಾಗಿರುವುದೇ ಇದಕ್ಕೆ ಬಹು­ದೊಡ್ಡ ಸಾಕ್ಷಿ. ಪಾಲಕರು ಶಾಲೆಯ ಬಗ್ಗೆ ಆಸಕ್ತಿ ವಹಿಸುವುದರಿಂದ ಗ್ರಾಮ ಪಂಚಾ­ಯಿತಿಯೂ ಸೇರಿದಂತೆ ಇಡೀ ಸರ್ಕಾರಿ ವ್ಯವಸ್ಥೆ ಕೂಡಾ ಶಾಲೆಯ ಅಗತ್ಯಗಳನ್ನು ಗಂಭೀರವಾಗಿ ಪರಿಗಣಿಸ­ಲೇ­ಬೇಕಾದ ಒತ್ತಡ ಸೃಷ್ಟಿಯಾಗು­ತ್ತದೆ. ಈ ಮಾದರಿಯನ್ನು ಸೂಕ್ಷ್ಮವಾಗಿ ವಿಶ್ಲೇಷಿ­ಸಿದರೆ ಶಿಕ್ಷಕರನ್ನು ಹೊಸ ಬಗೆಯ ಬೋಧನಾ ವಿಧಾನ­ಗಳಿಗೆ ಸಿದ್ಧಪಡಿಸಿರುವ ಕೇರಳದ ಡಯ­ಟ್‌­ಗಳ ಪಾತ್ರ ಕಾಣಿಸುತ್ತದೆ.

ಶಿಕ್ಷಕರಿಗೆ ತರಬೇತಿ ನೀಡು­ವುದೆಂದರೆ ಶಾಲಾ ಅವಧಿಯಲ್ಲಿ ಅವ­ರನ್ನು ತರ­ಬೇತಿಗಾಗಿ ಕರೆಸಿಕೊಳ್ಳುವುದು ಎಂಬು­ದನ್ನು ಕೇರಳ ಸಂಪೂರ್ಣವಾಗಿ ಬದಲಾ­ಯಿ­ಸಿದೆ. ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ತರಗತಿ­ಗಳು ಸೋಮವಾರ­ದಿಂದ ಶುಕ್ರವಾರದವರೆಗಷ್ಟೇ ಇರು­ತ್ತವೆ. ಇದ­ರಿಂದ ಒಟ್ಟಾರೆ ಕೆಲಸದ ದಿನಗಳು ಕಡಿಮೆ­ಯಾ­ಗಿಲ್ಲ. ಶಿಕ್ಷಕರ ಸಾಮರ್ಥ್ಯಾಭಿವೃದ್ಧಿ ತರಬೇತಿ­ಗಳೆ­ಲ್ಲವೂ ರಜಾ ದಿನಗಳಲ್ಲೇ ನಡೆ­ಯು­ತ್ತವೆ. ಬೇಸಿಗೆ ರಜೆಯ ದಿನಗಳಲ್ಲಿ ಐದು ದಿನಗಳ ಅವಧಿಯ ತರಬೇತಿಯನ್ನು ಶಿಕ್ಷಕರಿಗೆ ನೀಡಲಾ-­ಗುತ್ತದೆ. ಈ ಅವಧಿಯ ರಜೆಯನ್ನು ಮುಂದೆ ತೆಗೆದುಕೊಳ್ಳಲು ಅನುವು ಮಾಡಿಕೊಡ­ಲಾಗು­ತ್ತದೆ. ಪರಿಣಾಮ­ವಾಗಿ ಶಿಕ್ಷಕರು ರಜಾ ದಿನ­ಗ­ಳಲ್ಲಿ ತರಬೇತಿಗೆ ಹಾಜ­ರಾಗುವುದನ್ನು ಒಂದು ಹೇರಿಕೆ ಎಂದು ಭಾವಿಸುವುದಿಲ್ಲ. ಶಿಕ್ಷಕರಲ್ಲಿ ಕಂಪ್ಯೂಟರ್ ಬಗ್ಗೆ ಜ್ಞಾನ ಮೂಡಿಸುವುದ­ಕ್ಕಾ­ಗಿಯೇ ಶಾಲೆಗ­ಳಲ್ಲಿ ಮಾಹಿತಿ ಮತ್ತು ಸಂವ­ಹನ ತಂತ್ರಜ್ಞಾನ ವಿಭಾಗ­ಗಳಿವೆ. ಈ ವಿಷಯ­ದಲ್ಲಿ ತಜ್ಞರಾಗಿರುವ ಒಬ್ಬ ಶಿಕ್ಷಕರು ತಮ್ಮ ಸಹೋದ್ಯೋಗಿಗಳಿಗೆ ಈ ಕುರಿ­ತಂತೆ ಸಂಜೆ ಏಳರ ನಂತರ ತರಬೇತಿ ನೀಡುತ್ತಾರೆ.

ಡಯಟ್‌ಗಳ ಪಾತ್ರ ಕೇವಲ ಶಿಕ್ಷಕರಿಗೆ ತರ­ಬೇತಿ ನೀಡುವುದಕ್ಕಷ್ಟೇ ಸೀಮಿತವಾಗಿ ಉಳಿ­ದಿಲ್ಲ. ಪ್ರತಿ ಪಂಚಾಯಿತಿಯಲ್ಲಿ ನೂರು ಶಾಲೆಗ­ಳನ್ನು ಆರಿಸಿಕೊಂಡು ಹಳೆಯ ವಿದ್ಯಾರ್ಥಿಗಳ ಸಂಘಟನೆ, ಪಿ.ಟಿ.ಎ, ಶಾಲಾ ನಿರ್ವಹಣಾ ಸಮಿ­ತಿಗಳು ಹಾಗೂ ಪಂಚಾಯಿತಿ ಸದಸ್ಯರಿಗೆ ತರ­ಬೇತಿ ನೀಡು­ತ್ತವೆ. ಶಾಲೆಯೊಂದು ಹೇಗೆ ಕಾರ್ಯ­ನಿರ್ವಹಿಸ­ಬೇಕು ಎಂಬುದರ ಸ್ಪಷ್ಟ ಪರಿಕಲ್ಪನೆ ಶಾಲೆ­ಯೊಂದಿಗೆ ಸಂಬಂಧವಿರುವ ಸಮುದಾಯಕ್ಕೂ ಅರಿ­ವಾಗುತ್ತದೆ. ಹಾಗೇ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶೈಕ್ಷಣಿಕ ಯೋಜನೆಯನ್ನು ತಯಾ­ರಿಸುವ ಕೆಲಸದಲ್ಲೂ ಡಯಟ್‌ನ ಪಾಲಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಜಿಲ್ಲಾ ಮಟ್ಟದಲ್ಲಿ ಶೈಕ್ಷ­ಣಿಕ ಯೋಜನೆಗಳನ್ನು ರೂಪಿಸಿ ಅನುಷ್ಠಾನ­ಗೊಳಿ­ಸುವ ಸ್ವಾತಂತ್ರ್ಯ ಡಯಟ್‌­ಗಳಿ­ಗಿದೆ. ತಮ್ಮ ಯೋಜ­ನೆಗಳ ಫಲವನ್ನು ಅರಿಯಲು ಬೇಕಾಗಿ­ರುವ ಸಂಶೋಧನೆಗಳನ್ನೂ ಇಲ್ಲಿ ಅವು ನಡೆಸು­ತ್ತವೆ. ಉದಾಹರಣೆಗೆ ತ್ರಿಶ್ಶೂರ್ ಡಯ­ಟ್‌­ನಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಲ್ಲಿ ಆಗಿ­ರುವ ಬದ­ಲಾವಣೆಗಳನ್ನು ಅರಿಯುವುದಕ್ಕೆ ಇಪ್ಪತ್ತು ಭಿನ್ನ ಅಧ್ಯಯನಗಳನ್ನು ಕೈಗೊಳ್ಳ­ಲಾ­ಗಿದೆ. ಅಂದರೆ ಫಲಿ­ತಾಂಶವನ್ನು ಕೇವಲ ಭೌತಿಕ­ವಾದ ಅಂಕಿ–ಅಂಶ­ಗಳಿಗೆ ಸೀಮಿತಗೊಳಿಸದೆ, ಅದರ ಗುಣಮಟ್ಟವನ್ನು ಗ್ರಹಿ­ಸುವ ಪ್ರಯತ್ನ ಜಿಲ್ಲಾ ಮಟ್ಟದಲ್ಲೇ ನಡೆಯು­ವುದು ವಿಶೇಷ.  ಈ ಬಗೆಯ ಕೆಲಸಗಳನ್ನು ದೇಶದ ಯಾವುದೇ ಡಯಟ್‌  ಮಾಡಬಹುದು. ಆದರೆ ಕೇರಳ­ದಲ್ಲಿ ಮಾತ್ರ ಇದೇಕೆ ಇಷ್ಟೊಂದು ಪರಿಣಾ­ಮಕಾರಿ­ಯಾ­ಗಿದೆ? ಈ ಪ್ರಶ್ನೆಗಿರುವ ಉತ್ತರ ಕೇರಳ ಸರ್ಕಾ­ರವು ಡಯಟ್ ಮತ್ತು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆ­ಗಳನ್ನು ನಿರ್ವಹಿಸುತ್ತಿರುವ ವಿಧಾನದಲ್ಲಿ ಅಡ­ಗಿದೆ. ಯಾವುದೇ ಯೋಜನೆಯನ್ನು ಕಾರ್ಯ­ರೂಪಕ್ಕೆ ತರುವುದಕ್ಕೆ ಸಂಪನ್ಮೂಲದ ಕೊರತೆ ಇಲ್ಲದಂತೆ ಸರ್ಕಾರ ನೋಡಿಕೊಳ್ಳುತ್ತದೆ.

ಪ್ರತಿ ವರ್ಷ ಶಿಕ್ಷಣ ಇಲಾಖೆ,  ಸರ್ವ ಶಿಕ್ಷಣ ಅಭಿ­­ಯಾನ, ಜಿಲ್ಲೆಯ ಎಇಒ, ಬ್ಲಾಕ್ ಮತ್ತು ಕ್ಲಸ್ಟರ್ ಸಂಪ­ನ್ಮೂಲ ಕೇಂದ್ರದ ಅಧಿಕಾರಿಗಳನ್ನು ಒಳಗೊಂಡು ಡಯಟ್‌ ಯೋಜನೆ ರೂಪಿಸಿ ಅದಕ್ಕೆ ವೆಚ್ಚವಾ­ಗುವ ಹಣದ ಅಂದಾಜನ್ನು ನೀಡು­ತ್ತದೆ. ರಾಜ್ಯದ ಎಲ್ಲ ಡಯಟ್‌ಗಳ ಯೋಜ­ನೆ­ಯನ್ನು ಕ್ರೋಡೀಕರಿಸಿ ಕೇಂದ್ರ ಮಾನವ ಸಂಪ­ನ್ಮೂಲ ಸಚಿವಾಲಯಕ್ಕೆ ಕಳುಹಿಸಿ­ಕೊಡು­ವುದು ರಾಜ್ಯ ಸರ್ಕಾರದ ಕೆಲಸ. ಕೇರಳ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದಿ­ಟ್ಟಿದೆ. ಕೇಂದ್ರ ಸರ್ಕಾರ ಒದ­ಗಿ­ಸುವ ಸಂಪನ್ಮೂ­ಲಕ್ಕಾಗಿ ಕಾಯದೆ ಯೋಜ­ನೆಗಳಿಗೆ ಅಗತ್ಯವಿರುವ ಹಣವನ್ನು ಕೇಂದ್ರ­ದಿಂದ ಹಸಿರು ನಿಶಾನೆ ಸಿಕ್ಕ ಕೂಡಲೇ ಮಂಜೂರು ಮಾಡಿ­­ಬಿಡುತ್ತದೆ. ಆದ್ದ­ರಿಂದ ಯೋಜನೆಗಳು ಸರಿ­ಯಾದ ಸಮಯಕ್ಕೆ ಜಾರಿಯಾಗುತ್ತವೆ. ಆದರೆ ಬಹುತೇಕ ರಾಜ್ಯ­ಗ­ಳಲ್ಲಿ ಈ ಬಗೆಯ ವ್ಯವಸ್ಥೆ­ಯಿಲ್ಲ. ಕೇಂದ್ರ ಮಾನವ ಸಂಪನ್ಮೂಲ ಸಚಿವಾ­ಲಯ ಹಣ ಮಂಜೂರು ಮಾಡುವುದಕ್ಕೆ ಕಾಯುವ ಪ್ರಕ್ರಿಯೆಯಲ್ಲೇ ಯೋಜನೆಗಳೆಲ್ಲವೂ ದೂಳು ತಿನ್ನುತ್ತವೆ. ಆರ್ಥಿಕ ವರ್ಷದ ಕೊನೆ­ಯಲ್ಲಿ ಅನುದಾನ ವಾಪಸ್‌ ಹೋಗದಂತೆ ನೋಡಿ­ಕೊಳ್ಳುವ ಧಾವಂತದಲ್ಲಿ ಯಾವುದೂ ಸರಿಯಾಗಿ ನಡೆಯುವುದಿಲ್ಲ.

ಮೊದಲೇ ಹೇಳಿದಂತೆ ಕೇರಳದ ಶೈಕ್ಷಣಿಕ ಕ್ಷೇತ್ರವೂ ನಮ್ಮಂತೆಯೇ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ ಅಲ್ಲಿನ ಶೈಕ್ಷಣಿಕ ವ್ಯವಸ್ಥೆ ಉತ್ಸಾಹ ಕಳೆದುಕೊಳ್ಳದೆ ಸವಾಲನ್ನು ಎದುರಿ­ಸುವ ತಂತ್ರಗಳನ್ನು ರೂಪಿಸುತ್ತಾ ಮುಂದಕ್ಕೆ ಸಾಗುತ್ತಿದೆ. ಬಹುಮುಖ್ಯವಾಗಿ ಪೋಷಕರಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ನಂಬಿಕೆಯನ್ನು ಹೆಚ್ಚಿಸು­ತ್ತಿದೆ. ಎಲ್ಲ ಭಾಗೀದಾರರು, ಶಿಕ್ಷಣ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಗಳೆಲ್ಲವೂ ಕೈ­ಜೋಡಿಸಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರಕಿ­ಸಿಕೊಡಲು ಕಾರ್ಯೋನ್ಮುಖವಾಗಿವೆ.  ಇದು ಕರ್ನಾ­­­ಟಕದ ಶಿಕ್ಷಣ ಇಲಾಖೆಗೂ ಮಾದರಿ­ಯಾ­ಗ­­ಬೇಕಾಗಿದೆ. ಆಗ ನಮ್ಮಲ್ಲೂ ನೂರಾರು ಸಂಖ್ಯೆಯ ಮಕ್ಕಳು ಮತ್ತು ಅದಕ್ಕೆ ಅನುಗು­ಣ­ವಾದ ಶಿಕ್ಷಕರಿರುವ ಪ್ರಾಥಮಿಕ ಶಾಲೆಗಳು ಅರಳುತ್ತವೆ.

(ಲೇಖಕರು ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ‘ಕರ್ನಾಟಕ ರಾಜ್ಯ ಸಂಸ್ಥೆ’ಯ ಮುಖ್ಯಸ್ಥರು)
ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT