ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ, ಚಳವಳಿ ಮತ್ತು ಪರಂಪರೆ

ಹುಸಿಯ ಬೆನ್ನೇರಿದ ಸಾಹಿತಿಗಳನ್ನು ದೃಷ್ಟಿಯಲ್ಲಿಟ್ಟು ಚಳವಳಿಯನ್ನೇ ತಿರಸ್ಕರಿಸುವುದು ಸರಿಯೇ?
Last Updated 5 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

‘ಶುದ್ಧ ಸಾಹಿತ್ಯ’ಕ್ಕೆ ಒಲಿದ ಎಸ್.ಎಲ್.ಭೈರಪ್ಪನವರು ಚಳವಳಿಯಿಂದ ಪ್ರೇರಿತವಾದ ಸಾಹಿತ್ಯವನ್ನು ‘ಸ್ಲೋಗನ್ ಸಾಹಿತ್ಯ’ವೆಂದು ವ್ಯಾಖ್ಯಾನಿಸಿದ್ದಾರೆ. ‘ಸಾಹಿತ್ಯದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ’ ಎಂಬ ತಮ್ಮ ಅಭಿಪ್ರಾಯವನ್ನು ಪುನರುಚ್ಚರಿಸಿದ್ದಾರೆ.

ಆದರೆ, ನಮ್ಮ ಸಾಹಿತ್ಯ ಚರಿತ್ರೆಯನ್ನೊಮ್ಮೆ ಅವಲೋಕಿಸಿದರೆ, ಪಂಪನ ಕಾಲದಿಂದಲೂ ಒಂದಲ್ಲ ಒಂದು ಚಳ ವಳಿಯೇ ನಮ್ಮ ಪರಂಪರೆಯನ್ನು ಬೆಳೆಸಿರುವುದನ್ನು ಕಾಣಬಹುದು. ಪಂಪ ಒಂದು ಧಾರ್ಮಿಕ ವಸ್ತುವನ್ನು ಕಾವ್ಯವಸ್ತುವನ್ನಾಗಿ ರೂಪಾಂತರಿಸಿದ. ಅವನು ಅಭಿಜಾತ ಭಾಷೆಯಾದ ಸಂಸ್ಕೃತದೊಂದಿಗಾಗಲೀ ಅಥವಾ ಪೂರ್ವಪುರಾಣ, ಮಹಾಭಾರತದಂತಹ ಅಭಿಜಾತ ಕಾವ್ಯಗಳೊಂದಿಗಾಗಲೀ ಅಂದಿನ ತಮಿಳು ಕವಿಗಳಂತೆ ಪೈಪೋಟಿಗಿಳಿಯಲಿಲ್ಲ. ಬದಲಾಗಿ, ಅವುಗಳ ನೆರವಿನಿಂದಲೇ ಕನ್ನಡ ನುಡಿಯನ್ನು, ಕನ್ನಡ ಪ್ರಜ್ಞೆಯನ್ನು ವಿಸ್ತರಿಸುವ ಪ್ರಯತ್ನ ಮಾಡಿದ್ದು ಸಾಹಿತ್ಯದ ನೆಲೆಯಲ್ಲಿ ಒಂದು ಚಳವಳಿಯೇ ಸರಿ. ಮಡಿವಂತಿಕೆಗೆ ಹೊರತಾದ ಪಂಪನ ನಿಲುವು ಮುಂದೆ ಕನ್ನಡ ಕಾವ್ಯ ಪರಂಪರೆಯ ಗತಿಯನ್ನು ನಿರ್ಧರಿಸಿತು. ಸಾಮಾಜಿಕ ಚಳವಳಿಯ ವಿಷಯಕ್ಕೆ ಬರುವುದಾದರೆ ಬಸವ, ಕನಕ, ಪುರಂದರ, ಷರೀಫ ರಂಥ ಭಕ್ತಿಕವಿಗಳ ಕೃತಿ-ಚಾರಿತ್ರ್ಯ ನಮ್ಮ ಕಣ್ಮುಂದಿವೆ.

ಚಳವಳಿಗೆ ಹೊರತಾದ ‘ಶುದ್ಧ ಸಾಹಿತ್ಯ’ ವಾಸ್ತವವನ್ನು ಕಾಣಲಾರದೆ ನಿರ್ಜೀವವಾಗಿಬಿಡುತ್ತದೆ. ಶುದ್ಧಿ-ಅಶುದ್ಧಿಯ ಬೇರುಗಳು ಆಳದಲ್ಲಿ ಜೊತೆಗೂಡಿಯೇ ಇರುವ ಕಾರಣ,ಪೂರ್ಣದೃಷ್ಟಿಯುಳ್ಳ ಸಾಹಿತ್ಯಕ್ಕೆ ಈ ಬಗೆಯ ಕೃತಕ ವಿಭಜನೆ ಅಪ್ರಸ್ತುತವೆನಿಸುತ್ತದೆ. ಜಗತ್ತಿನ ಶ್ರೇಷ್ಠ ಸಾಹಿತಿಯಾದ ಟಾಲ್‍ಸ್ಟಾಯ್‍ನಲ್ಲಿ ಅಂತರಂಗದ ನೈತಿಕತೆ, ಸಾಹಿತ್ಯಿಕ ಪ್ರತಿಭೆ ಮತ್ತು ಸಾಮಾಜಿಕ ಚಳವಳಿಗಳನ್ನು ಪ್ರತ್ಯೇಕಿಸಲಾ ಗುವುದಿಲ್ಲ. ಅವೆಲ್ಲವೂ ಅನನ್ಯವೆಂಬಂತೆ ಕೊನೆವರೆಗೂ ಅವನಲ್ಲಿ ಜೊತೆಯಾಗೇ ಉಳಿದುಬಿಟ್ಟವೆ. ಕೊನೆಗಾಲದಲ್ಲಿ ಅಧ್ಯಾತ್ಮಕ್ಕೆ ಒಲಿದಿದ್ದ ಟಾಲ್‍ಸ್ಟಾಯ್ ಇನ್ನು ತನಗೆ ಈ ಸಾಹಿತ್ಯ ರಚನೆ ಮತ್ತು ಸಾಮಾಜಿಕ ಚಳವಳಿಗಳ ಗೊಡವೆಯೇ ಬೇಡವೆಂದು ಮತ್ತೆ ಮತ್ತೆ ಸಂಕಲ್ಪಿಸಿದರೂ ಅವನ ಪ್ರತಿಭೆ ಅವನಿಗೆ ವಿರಕ್ತಿಮಾರ್ಗ ಹಿಡಿಯಲು ಬಿಡಲಿಲ್ಲ.

‘ಚಳವಳಿ ಸಾಹಿತಿ’ಗಳಿಗೆ ಕುವೆಂಪು ಬಹು ಹಿಂದೆಯೇ ‘ಚಳವಳಿಯ ರೂಪದಿಂದ ಯಾವುದನ್ನಾದರೂ ಮಾಡಲು ಹೊರಟರೆ ಅದು ಶಾಶ್ವತವಾಗಿ ಸಫಲವಾಗುವುದು ಕಷ್ಟವಾಗುತ್ತದೆ’ ಎಂದು ಕಿವಿಮಾತು ಹೇಳಿದ್ದರು. ಒಬ್ಬ ನಿಜವಾದ ಸಾಹಿತಿ ಯಾವುದೇ ಚಳವಳಿಯ ಅನುಯಾಯಿಯಾಗಲಾರ. ಅನುಯಾಯಿಗಳಲ್ಲಿ ಸೃಜನಶೀಲತೆ ನಿರೀಕ್ಷಿಸಲಾಗದು. ಅದಕ್ಕೇ ಅಡಿಗರು ‘ಕಲಿಸು ಸವಾರಿಗುದುರೆಯಾಗದಹಾಗೆ’ ಎಂದು ತಮ್ಮ ‘ಪ್ರಾರ್ಥನೆ’ಯಲ್ಲಿ ಬಿನ್ನವಿಸಿಕೊಂಡದ್ದು. ಭೈರಪ್ಪನವರು ಭಾವಿಸುವಂತೆ ಸಾಹಿತಿಯಾದವನು ಚಳವಳಿಯ ಪರೋಪಜೀವಿ ಅಲ್ಲ, ಬದಲಾಗಿ ಅವನೇ ಚಳವಳಿಯ ಕೇಂದ್ರವಾಗಿದ್ದಾನೆ, ಚಳವಳಿಗೆ ಪ್ರೇರಕಶಕ್ತಿಯಾಗಿದ್ದಾನೆ. ಅವನ ಕಲ್ಪನಾಶಕ್ತಿಯೇ ಸಮಾಜದ ಸ್ವರೂಪ ಹೇಗಿರಬೇಕೆಂದು ನಿರ್ಧರಿಸುತ್ತದೆ. ಕವಿಗಳಿಗೆ ಕನಸನ್ನು ಸಾಕಾರಗೊಳಿಸುವ ಶಕ್ತಿ ಇಲ್ಲದಿರಬಹುದು. ಆದರೆ ಕನಸು ಕಾಣುವುದು ಹೇಗೆಂದು ಕಲಿಸು ವುದೂ ಅಸಾಧಾರಣವಾದ ಕೊಡುಗೆಯೇ ಅಲ್ಲವೇ?

ಗಾಂಧೀಜಿಯಂತಹ ಚಳವಳಿಗಾರರು ಹೋರಾಟದ ಮಾರ್ಗಗಳನ್ನು ಕಂಡುಕೊಳ್ಳಲು; ಫೀನಿಕ್ಸ್ ಆಶ್ರಮ, ಸೇವಾಗ್ರಾಮದಂತಹ ಸಾಮಾಜಿಕ ರಚನೆಗಳನ್ನು ನಿರ್ಮಿಸಿಕೊಳ್ಳಲು ಕಲಿತದ್ದು ಟಾಲ್‍ಸ್ಟಾಯ್‌ನಂತಹ ಕಲ್ಪನಾಜೀವಿಯಿಂದಲೇ ಅಲ್ಲವೇ? ಹಾಗೆ ನೋಡಿದರೆ ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಎಂಬ ಕನಸು ಕಂಡ ಕಾರ್ಲ್‌ ಮಾರ್ಕ್ಸ್ ಸಹ ಕಲ್ಪನಾಜೀವಿಯೇ ಆಗಿದ್ದ.ಮಾರ್ಕ್ಸ್ ತನ್ನ ಸುದೀರ್ಘ ಬರವಣಿಗೆಗಳಲ್ಲಿ ಕವಿಗಳ ಹಾಗೆ ಉಪಮೆ, ರೂಪಕಗಳನ್ನು ಸೃಷ್ಟಿಸದೇ ಹೋಗಿರಬಹುದು. ಆದರೆ, ಅವನು ಕಂಡ ಕನಸೇ ಕಮ್ಯುನಿಸ್ಟ್ ಚಳವಳಿಗೆ ಮೂಲ ಪ್ರೇರಣೆಯಾಗಿತ್ತು. ತನ್ನ ಕಲ್ಪನೆಯ ಸಮಾಜವಾದ ರಷ್ಯಾದಂತಹ ದಿವಾಳಿಯೆದ್ದಿದ್ದ ದೇಶದಲ್ಲಿ ಬೋಲ್ಷವಿಕ್ ಕ್ರಾಂತಿಯ ರೂಪ ಪಡೆಯುತ್ತದೆ ಎಂಬುದು ಆ ಕಲ್ಪನಾಜೀವಿಯ ಕಲ್ಪನೆಗೂ ನಿಲುಕದೇ ಹೋದುದು ದುರದೃಷ್ಟಕರ. ಕಾರ್ಲ್‌ ಮಾರ್ಕ್ಸ್ ಬಂಡವಾಳಶಾಹಿ ವ್ಯವಸ್ಥೆಗೆಂದು ರೂಪಿಸಿದ್ದ ಸಿದ್ಧಾಂತವನ್ನುಬಂಡವಾಳವೇ ಇಲ್ಲದಿದ್ದ ಒಂದು ಬಡರಾಷ್ಟ್ರಕ್ಕೆ ಅನ್ವ ಯಿಸಿದ ಕಾರಣ, ಮಾರ್ಕ್ಸ್‌ವಾದದ ಬಗ್ಗೆ ಭೈರಪ್ಪನವರಿಗೆ ಜುಗುಪ್ಸೆ ಮೂಡಿರಬಹುದೇನೋ!

ನಿಜ, ಭೈರಪ್ಪನವರು ಅಭಿಪ್ರಾಯಪಡುವಂತೆ ರಾಜ ಕೀಯ ಪ್ರೇರಿತವಾದ ‘ಚಳವಳಿ ಸಾಹಿತ್ಯ’ದಿಂದ ನಮ್ಮ ಕೆಲವು ಸಾಹಿತಿಗಳು ಲಾಬಿಗಿಳಿದು ನಾನಾ ಸವಲತ್ತುಗಳನ್ನು ಪಡೆಯುತ್ತ ಭ್ರಷ್ಟರಾದುದುಂಟು. ತಾನು ಭೈರಪ್ಪನವರಂತೆ ಲೆಕ್ಕವಿಲ್ಲದಷ್ಟು ಹೃದಯವಂತ ಓದುಗರನ್ನು ಸಂಪಾದಿ ಸಲಾರೆ ಎಂದು ಮನಗಾಣುವ ಒಬ್ಬ ಲೇಖಕ ಹತಾಶೆಗೊಳ್ಳುತ್ತಾನೆ. ಅಂತಹವನು ಹೃದಯಹೀನ ಪ್ರಭುತ್ವ ದಯಪಾಲಿಸುವ ಪ್ರಶಸ್ತಿಯಾದರೂ ಕೊನೆಯಪಕ್ಷ ತನ್ನ ಮುಡಿಗೇರಲಿ, ಆ ಮೂಲಕವಾದರೂ ತನ್ನ ಹೆಸರು ಅಜರಾಮರವಾಗಲಿ ಎಂದು ಹುಸಿ ಸಾಂತ್ವನಕ್ಕಾಗಿ ಹಂಬಲಿಸುತ್ತಾನೆ. ಇದು ನಿಜಕ್ಕೂ ದುರ್ದೈವ.

ಆದರೆ ಹುಸಿಯ ಬೆನ್ನೇರಿದ ಸಾಹಿತಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಚಳವಳಿಯನ್ನೇ ಸಾರಾಸಗಟಾಗಿ ತಿರಸ್ಕರಿಸಿಬಿಡುವುದು ಸರಿಯೇ? ಔಚಿತ್ಯವೇ ಸಾಹಿತ್ಯದ ಜೀವಾಳವೆಂದು ನಂಬುವ ಭೈರಪ್ಪನವರು ಸಾಹಿತ್ಯದಲ್ಲಿ ಚಳವಳಿಯಔಚಿತ್ಯ, ಮಹತ್ವ ನಿರ್ಲಕ್ಷಿಸಿದರೆ ಹೇಗೆ? ಸೇನೆಗೆ ಸೇರಿದಕೆಲವು ಪುಂಡ ಪೋಕರಿಗಳು ನಡೆಸುವ ದೌರ್ಜನ್ಯವನ್ನು ಇಟ್ಟುಕೊಂಡು ಇಡೀ ಭಾರತೀಯ ಸೇನೆಯನ್ನೇ ನಿಂದಿಸುವುದು ಅಚಾತುರ್ಯ ಎನ್ನುವುದಾದರೆ, ಚಳವಳಿಯ ಬಗ್ಗೆ ಭೈರಪ್ಪನವರು ಬೆಳೆಸಿಕೊಂಡಿರುವ ಸಿನಿಕತನ ವನ್ನು ಸಹ ಅಚಾತುರ್ಯವೆಂದೇ ಕರೆಯಬೇಕಾಗುತ್ತದೆ.

ಚಳವಳಿ ಅಥವಾ ಕ್ರಾಂತಿ ಎಂದ ಮಾತ್ರಕ್ಕೆ ಅದು ಸಾಮಾಜಿಕ ನೆಲೆಯದ್ದೇ ಆಗಿರಬೇಕಿಲ್ಲ. ವ್ಯಕ್ತಿಯ ಅಂತರಂಗದ ಪರಿವರ್ತನೆಯೂ ಒಂದು ಕ್ರಾಂತಿಯೇ ಆಗಿದೆ. ಕಾವ್ಯಗುರು ಕಿ.ರಂ. ಅವರು ಒಮ್ಮೆ ‘ನಾನು ನನ್ನ ವಿದ್ಯಾರ್ಥಿದೆಸೆಯಲ್ಲಿ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಮೂರೇ ದಿನದಲ್ಲಿ ಓದಿದೆ. ಓದಿ ಮುಗಿಸಿದ ಮೇಲೆ ನಾನು ಪೂರ್ತಿಯಾಗಿ ಬದಲಾಗಿಹೋಗಿದ್ದೆ’ ಎಂದಿದ್ದರು. ವ್ಯಕ್ತಿಯ ಅಂತರಂಗದ ಈ ಪರಿವರ್ತನೆ ಯಾವ ಗದ್ದಲದ ಕ್ರಾಂತಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ. ಸಾಹಿತಿಗಳಿಂದ ಆಗಬಲ್ಲ ಇಂತಹ ಒಂದೆರಡಲ್ಲ, ನೂರಾರು ಪವಾಡಗಳನ್ನು ಉದಾಹರಿಸಬಹುದು.

ಭೈರಪ್ಪನವರು ಎನ್ನುವಂತೆ ಸಾಹಿತ್ಯದಿಂದ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ, ನಿಜ. ಆದರೆ ಸಮಾಜ ತಾನು ಬದಲಾಗಬೇಕೆಂದು ನಿರ್ಧರಿಸಿದರೆ ಅದು ನಿಸ್ಸಂಶಯವಾಗಿ ಸಾಹಿತ್ಯಕ್ಕೇ ಮೊರೆ ಹೋಗುತ್ತದೆ. ಇದನ್ನು ಚರಿತ್ರೆಯುದ್ದಕ್ಕೂ ಕಾಣಬಹುದು. ತನ್ನನ್ನು ಕವಿಯೆಂದೂ ಕರ್ಮಯೋಗಿಯೆಂದೂ ನಿರ್ವಚಿಸಿಕೊಳ್ಳುವ ಶ್ರೀಕೃಷ್ಣ ಸಹ ‘ಶ್ರೇಷ್ಠನಾದವನು ಯಾವುದನ್ನು ಪ್ರಮಾಣವೆಂದು ಸೂಚಿಸುತ್ತಾನೋ ಅದನ್ನೇ ಸಮಾಜ ಅನುಸರಿಸುತ್ತದೆ’ ಎಂದಿದ್ದಾನೆ. ಆದ್ದರಿಂದ ಸಮಾಜವು ಸ್ವಯಂ ಪರಿವರ್ತನೆಗಾಗಿ ಕಾವ್ಯದತ್ತ ಮುಖ ಮಾಡುವವರೆಗೂ ಕವಿಯಾದವನು ಕಾಯಬೇಕಾಗುತ್ತದೆ, ಕನಸುತ್ತಿರಬೇಕಾಗುತ್ತದೆ. ಅದಕ್ಕಾಗಿ ಅನಂತ ತಾಳ್ಮೆ ಬೇಕಾಗುತ್ತದೆ. ಆ ತಾಳ್ಮೆ ಇಂದು ‘ಸ್ಲೋಗನ್ ಸಾಹಿತಿ’ಗಳಲ್ಲಾಗಲೀ, ‘ಶುದ್ಧ ಸಾಹಿತಿ’ಗಳಲ್ಲಾಗಲೀ ಕಾಣಿಸುತ್ತಿಲ್ಲ.

ಚಳವಳಿಯ ಹೆಸರಿನಲ್ಲಿ ಲಾಬಿಗಿಳಿಯುವುದು ಒಂದು ಅತಿರೇಕವಾದರೆ, ಆ ಲಾಬಿಯನ್ನು ಕಂಡು ಚಳವಳಿಯ ಬಗ್ಗೆ ಸಿನಿಕತನ ಬೆಳೆಸಿಕೊಳ್ಳುವುದು ಮತ್ತೊಂದು ಅತಿರೇಕವಾಗಿದೆ. ಈ ಎರಡೂ ಅತಿರೇಕಗಳಿಂದ ಅಂತಿಮವಾಗಿ ಚಳವಳಿಗೆ ಅನ್ಯಾಯವಾಗುತ್ತದೆ. ಭೈರಪ್ಪನವರಂತಹ ಸಾಹಿತಿಗಳು ಚಳವಳಿಗಳನ್ನು ನಿರ್ಲಕ್ಷಿಸಬಹುದು, ಆದರೆ ಚಳವಳಿಗಳು ಸಾಹಿತಿಗಳನ್ನು ಎಂದೂ ನಿರ್ಲಕ್ಷಿಸುವುದಿಲ್ಲ. ಸಾಹಿತ್ಯದಿಂದ ದೂರವಾಗಲು ನಿರ್ಧರಿಸಿದರೆ ತಾನು ಅನಿವಾರ್ಯವಾಗಿ ಪಶುತ್ವವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಚಳವಳಿಗೆ ಆಂತರ್ಯದಲ್ಲಿ ತಿಳಿದಿರುತ್ತದೆ.

ಲೇಖಕ: ಸಹಾಯಕ ಪ್ರಾಧ್ಯಾಪಕ, ಜ್ಯೋತಿನಿವಾಸ್‌ ಕಾಲೇಜ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT