‘ಮೂರು ವರ್ಷ ಆಯಿತು. ಊರು ಬಿಟ್ಟು ಎಲ್ಲೂ ಹೋಗಿಲ್ಲ. ನೆಂಟರನ್ನೂ ಮನೆಗೆ ಬರಬೇಡಿ ಅಂತ ಹೇಳಿದ್ದೇವೆ. ಬಂಧು–ಮಿತ್ರರ ಮನೆಯ ಮದುವೆ, ಸೀಮಂತ ಯಾವುದಕ್ಕೂ ಎಡತಾಕಿಲ್ಲ...’

ಬೆಂಗಳೂರಿನ ಮಲ್ಲೇಶ್ವರದಲ್ಲಿ ಕಾಲೇಜೊಂದರ ಬಳಿ ಮಹಿಳೆಯೊಬ್ಬರು, ಪರಿಚಿತರಿಗೆ ಹೇಳುತ್ತಿದ್ದ ಮಾತಿದು. ಅವರ ಮಗ ದ್ವಿತೀಯ ಪಿ.ಯು. ವಿದ್ಯಾರ್ಥಿ; ಒಳಗೆ ಪರೀಕ್ಷೆ ಬರೆಯುತ್ತಿದ್ದ. ತಾಯಿ, ಹೊರಗೆ ಕಾಯುತ್ತಾ ನಿಂತಿದ್ದರು. ಪಿ.ಯು. ಎಂಬ ಪರ್ವ ಘಟ್ಟ ದಾಟಿಸಲು ಪೋಷಕರಿಂದ ಇಷ್ಟೆಲ್ಲ ತ್ಯಾಗ!

ಆ ತಾಯಿ ಮಾತು ಕಿವಿಗೆ ಬಿದ್ದಾಗ, ‘ತುಸು ಅತಿಯಾಯಿತು’ ಅಂತ ಆ ಕ್ಷಣಕ್ಕೆ ಅನಿಸಿದ್ದು ನಿಜ. ಬಳಿಕ ಸಾವಧಾನದಿಂದ ಯೋಚಿಸಿದಾಗ, ಈ ಪೀಳಿಗೆ ಮಕ್ಕಳು ಎಂಥ ಅದೃಷ್ಟವಂತರು ಅಂತ ಅನಿಸದೇ ಇರಲಿಲ್ಲ. ಇದರ ಇನ್ನೊಂದು ಮಗ್ಗುಲು: ಒತ್ತಡ, ತೀವ್ರ ಸ್ಪರ್ಧೆ. ಅದರ ಪರಿಣಾಮಗಳು ಬೇರೆಯೇ ಬಗೆಯವು.

ಮಕ್ಕಳ ಓದು ಮತ್ತು ಅಂಕ ಇವೆರಡೂ ಈಗ ಒಂದು ರೀತಿ ಕನವರಿಕೆಯಂತಾಗಿವೆ. ಇದಕ್ಕೆ ನಗರ, ಗ್ರಾಮಾಂತರ ಎಂಬ ಪ್ರಾಂತ್ಯಭೇದ ಇಲ್ಲ. ಹಾಗೆ ನೋಡಿದರೆ, ಎಲ್ಲ ಬಗೆಯ ಭೇದಗಳ ಗೆರೆ ಕ್ರಮೇಣ ತೆಳುವಾಗತೊಡಗಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿ.ಯು. ನಡುವಣ ಮೂರು ವರ್ಷಗಳ ಅವಧಿ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ, ಪೋಷಕರಿಗೆ ಕೂಡ ಪರೀಕ್ಷೆಯ ಕಾಲ.

‘ಶಿಕ್ಷಣವೇ ಶಕ್ತಿ’ ಎಂಬುದು ಸಮಾಜದ ಅಂಚಿನ ಸಮುದಾಯಗಳಿಗೆ, ಆ ಸಮುದಾಯಗಳ ಕಟ್ಟ ಕಡೆಯ ವ್ಯಕ್ತಿಗೂ ಈಗ ಮನವರಿಕೆ ಆಗಿದೆ. ಆದರೆ, ನಮ್ಮನ್ನು ಪ್ರತಿನಿಧಿಸುವ ಸರ್ಕಾರಕ್ಕೆ ಅದು ತಿಳಿಯುತ್ತಿಲ್ಲ. ಹೆಚ್ಚು ಮುತುವರ್ಜಿ ವಹಿಸಬೇಕಾಗಿದ್ದ ಕ್ಷೇತ್ರವನ್ನು ಬೇಕೆಂತಲೋ ಅಥವಾ ಅರಿವಿನ ಕೊರತೆಯಿಂದಲೋ ಕಡೆಗಣಿಸಿದೆ. ಪರಿಣಾಮ: ಎಡವಟ್ಟಿನ ಮೇಲೆ ಎಡವಟ್ಟು.

ಒಂದು ಪ್ರಶ್ನೆ ಪತ್ರಿಕೆಯನ್ನು ನೆಟ್ಟಗೆ ರೂಪಿಸಲಾಗದ ದುಃಸ್ಥಿತಿಯನ್ನು ಯಾರಾದರೂ ಸಮರ್ಥಿಸಿ ಕೊಳ್ಳಲಾದೀತೆ? ತಂತ್ರಜ್ಞಾನದಲ್ಲಿ ದಾಪುಗಾಲು ಇಟ್ಟಿದ್ದೇವೆ. ಆದರೂ ಪ್ರಶ್ನೆಪತ್ರಿಕೆಯ ಸೋರಿಕೆ ತಡೆಗಟ್ಟಲು ನಮ್ಮಿಂದ ಆಗುತ್ತಿಲ್ಲ ಎನ್ನುವುದು ಏನನ್ನು ಸೂಚಿಸುತ್ತದೆ? ವೇಳಾಪಟ್ಟಿಗೆ ಅನುಗುಣವಾಗಿ ಪರೀಕ್ಷೆ ನಡೆಸಲು ಆಗುತ್ತಿಲ್ಲ.

ಮೌಲ್ಯಮಾಪನಕ್ಕೆ ಪ್ರತೀ ಸಲ ಏನೋ ಒಂದು ವಿಘ್ನ. ಫಲಿತಾಂಶಕ್ಕೂ ವಿಳಂಬವ್ಯಾಧಿಗೂ ಬಿಡಿಸಲಾಗದ ನಂಟು! ನಮ್ಮ ಶಿಕ್ಷಣ ವ್ಯವಸ್ಥೆ ಈ ಪರಿ ಊನಗೊಂಡಿದೆ. ಶಾಲಾ ಶಿಕ್ಷಣದ ವ್ಯಥೆ ಒಂದು ಬಗೆಯದಾದರೆ, ಕಾಲೇಜು ಶಿಕ್ಷಣದ ತೊಡಕುಗಳು ಹತ್ತು ಹಲವು ಬಗೆಯವು. ಸರ್ಕಾರಿ ಶಾಲೆ ಎಂದರೆ ಜನಸಾಮಾನ್ಯರು ಕೂಡ ಮೂಗು ಮುರಿಯುವಂತಾಗಿದೆ.

ಮಕ್ಕಳ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಕೆಲವು ಶಾಲೆಗಳು ಸನಿಹದ ಶಾಲೆಯಲ್ಲಿ ವಿಲೀನಗೊಂಡಿದ್ದೂ ಆಗಿದೆ. ಶಿಕ್ಷಕರ ಕೊರತೆ ಎಂದೆಂದೂ ನೀಗದ ಸಮಸ್ಯೆ. ಕಲಿಕೆಯ ಮಟ್ಟ ಪಾತಾಳಕ್ಕೆ ಇಳಿದಿದೆ ಎಂದು ‘ಪ್ರಥಮ್’ನಂಥ ಸ್ವಯಂ ಸೇವಾ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳು ಪದೇ ಪದೇ ಸಾರಿವೆ.

ಅಲಕ್ಷ್ಯಕ್ಕೆ ಒಳಗಾದ ಸರ್ಕಾರಿ ಶಾಲೆಗಳ ಅಳಿವು–ಉಳಿವಿನ ಪ್ರಶ್ನೆ ಸಂದರ್ಭಾನುಸಾರ ಚರ್ಚೆಗೆ ಒಳಗಾದರೂ ಸುಧಾರಣೆ ಪ್ರಯತ್ನಗಳು ಮಾತ್ರ ಅಷ್ಟಕ್ಕಷ್ಟೆ. ಶಾಲೆಗಳಷ್ಟೆ ಅಲ್ಲ, ಅವುಗಳ ಜತೆಗೆ ಸರ್ಕಾರಿ ಕಾಲೇಜುಗಳೂ ಸೊರಗಲಾರಂಭಿಸಿವೆ. ಕಾಲೇಜು ಶಿಕ್ಷಣ ಇಲಾಖೆ ಅಧೀನದಲ್ಲಿ ರಾಜ್ಯದಲ್ಲಿ ಒಟ್ಟು 411 ಪ್ರಥಮ ದರ್ಜೆ ಕಾಲೇಜುಗಳಿವೆ. ಈ ಕಾಲೇಜುಗಳ ಪೈಕಿ 335ರಲ್ಲಿ ಪ್ರಾಂಶುಪಾಲರ ಹುದ್ದೆ ಖಾಲಿ ಬಿದ್ದಿದೆ. ಈ ಕಾಲೇಜುಗಳನ್ನು ‘ಹಂಗಾಮಿ’ಗಳ ಅಧೀನಕ್ಕೆ ಒಪ್ಪಿಸಿ ಸರ್ಕಾರ ಗಡದ್ದಾದ ನಿದ್ದೆಗೆ ಜಾರಿದೆ.

ಒಂದಷ್ಟು ಮಂದಿ ಪ್ರಾಂಶುಪಾಲರ ನಿವೃತ್ತಿಯಿಂದ ತಿಂಗಳ ಮಟ್ಟಿಗೊ ಎರಡು ತಿಂಗಳ ಮಟ್ಟಿಗೊ ಉಂಟಾದ ತೆರಪಲ್ಲ ಇದು. ಕಾಲೇಜುಗಳನ್ನು ವರ್ಷಾನುಗಟ್ಟಲೆ ಇಂಥ ಹಂಗಾಮಿ ವ್ಯವಸ್ಥೆಯಡಿ ನೂಕಿದೆ ಸರ್ಕಾರ. ಯಾವುದೇ ಒಂದು ಕಾಲೇಜಿಗೆ ಪೂರ್ಣಾವಧಿಗೆ ನೇಮಕಗೊಂಡ ಪ್ರಾಂಶುಪಾಲರು ಮೂರ್ನಾಲ್ಕು ವರ್ಷಗಳ ಕಾಲ ಇಲ್ಲದೆ ಹೋದರೆ ಆ ಕಾಲೇಜು ಆಡಳಿತ ಹೇಗಿರಬಹುದು ಯೋಚಿಸಿ! ಒ.ಒ.ಡಿ. ಮೇಲೆ ನಿಯೋಜನೆಗೊಂಡವರು ಇಲ್ಲವೇ ಉಸ್ತುವಾರಿ ಪ್ರಾಂಶುಪಾಲರ ಹಂಗಾಮಿ ವ್ಯವಸ್ಥೆಯಡಿ ಈ ಕಾಲೇಜುಗಳ ಆಡಳಿತ ದೇಕುತ್ತಿದೆ.

ಸೇವಾ ಹಿರಿತನದ ಆಧಾರದ ಮೇಲೆ 2010ರಲ್ಲಿ 18 ಮಂದಿ ಆಯ್ಕೆ ಶ್ರೇಣಿ ಉಪನ್ಯಾಸಕರು ಪ್ರಾಂಶುಪಾಲರ ಹುದ್ದೆಗೆ ಪದೋನ್ನತಿ ಪಡೆದದ್ದು ಬಿಟ್ಟರೆ, ನಂತರ ಮುಂಬಡ್ತಿ ಮೂಲಕವಾಗಲಿ, ನೇರ ನೇಮಕಾತಿ ಮೂಲಕವಾಗಲಿ ಪ್ರಾಂಶುಪಾಲರ ಹುದ್ದೆಗಳು ಭರ್ತಿ ಆಗಿದ್ದೇ ಇಲ್ಲ.

ಪ್ರಾಂಶುಪಾಲರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ತುಂಬಬೇಕು ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸೂಚಿಸಿದೆ. ಅದಕ್ಕೆ ಸೇವಾನಿರತ ಅಧ್ಯಾಪಕರಿಂದ ವಿರೋಧ ವ್ಯಕ್ತವಾಗಿದೆ. ಸೇವಾ ಹಿರಿತನ ಆಧಾರದಲ್ಲಿ ಅರ್ಧದಷ್ಟು ಹುದ್ದೆಗಳನ್ನೂ, ನೇರ ನೇಮಕಾತಿ ಮೂಲಕ ಉಳಿದ ಅರ್ಧದಷ್ಟು ಹುದ್ದೆಗಳನ್ನೂ ತುಂಬಲಿ ಎಂಬುದು ಅಧ್ಯಾಪಕ ವರ್ಗದ ಮನದ ಇಂಗಿತ.

ಈ ಸಂಬಂಧ ಏನೇ ತೊಡಕುಗಳಿದ್ದರೂ ಅದನ್ನು ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಸರ್ಕಾರ ಈ ರೀತಿ ಕೈಕಟ್ಟಿ ಕುಳಿತಿರುವುದು ವಿದ್ಯಾರ್ಥಿ ಸಮೂಹಕ್ಕೆ ಮಾಡಿದ ಘೋರ ಅನ್ಯಾಯ. ಬೆಂಗಳೂರು ನಗರದಲ್ಲಿ 20 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಅದರಲ್ಲಿ ನಾಲ್ಕು ಕಾಲೇಜುಗಳು ಮಾತ್ರ ಕಾಯಂ ಪ್ರಾಂಶುಪಾಲರ ‘ಭಾಗ್ಯ’ ಹೊಂದಿವೆ. ಉಳಿದ ಕಾಲೇಜುಗಳ ಆಡಳಿತ ನಿರ್ವಹಣೆ, ಹಂಗಾಮಿ ವ್ಯವಸ್ಥೆಗೆ ಒಳಪಟ್ಟಿದೆ. 2014ರಲ್ಲಿ ಒ.ಒ.ಡಿ. ವ್ಯವಸ್ಥೆಯಡಿ ಪ್ರಾಂಶುಪಾಲರ ನೇಮಕಕ್ಕೆ ಕೌನ್ಸೆಲಿಂಗ್ ನಡೆಯಿತು.

280 ಮಂದಿ ತಾತ್ಕಾಲಿಕ ಪ್ರಾಂಶುಪಾಲರ ಹುದ್ದೆ ನಿರ್ವಹಿಸಲು ಒಪ್ಪಿಗೆ ಸೂಚಿಸಿದ್ದರು. ಸ್ಥಳ ನಿಯುಕ್ತಿಯೂ ಆಗಿತ್ತು. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಹಿಂದೆ ತಾವು ಬೋಧನೆ ಮಾಡುತ್ತಿದ್ದ ಕಾಲೇಜಿಗೆ ವಾಪಸು ಬಂದಿದ್ದಾರೆ.

ಹೀಗೆ ವಾಪಸು ಬಂದವರಲ್ಲಿ ಒಬ್ಬರು, ಪ್ರಾಂಶುಪಾಲರಾಗಿ ತಾತ್ಕಾಲಿಕವಾಗಿ ಕೆಲಸ ನಿರ್ವಹಿಸಿದಾಗ ಎದುರಾದ ತೊಡರುಗಳಿಗೆ ಸಂಬಂಧಿಸಿದ ಮಾಹಿತಿ ಹಂಚಿಕೊಂಡರು. ‘ಪವರ್ಸ್ ಇರುವುದಿಲ್ಲ. ನಿರ್ಧಾರ ಕೈಗೊಳ್ಳಲು ಆಗದು. ಅಟೆಂಡರ್ ಕೂಡ ಮಾತು ಕೇಳುವುದಿಲ್ಲ. ಕೆಲಸ ತೆಗೆಸುವುದೇ ಕಷ್ಟ. ದಿನ ದೂಡಬಹುದಷ್ಟೆ. ಅದರಿಂದ ಏನು ಪ್ರಯೋಜನ? ಹೋಗಲಿ, ಮಾನಿಟರಿ ಬೆನೆಫಿಟ್ ಆದರೂ ಇದೆಯೇ ಎಂದರೆ ಅದು ಕೂಡ ಇಲ್ಲ...’ ಎಂದು ಅಸಹಾಯಕತೆ ತೋಡಿಕೊಂಡರು.

ಪೂರ್ಣಾವಧಿಗೆ ನೇಮಕಗೊಂಡ ಪ್ರಾಂಶುಪಾಲರೇ ಇಲ್ಲದಿದ್ದರೆ ಆ ಕಾಲೇಜಿನ ಸಮಸ್ತ ಆಗುಹೋಗುಗಳಿಗೆ ಯಾರನ್ನು ಉತ್ತರದಾಯಿ ಮಾಡುವುದು? ದೈನಂದಿನ ಆಡಳಿತ ಸುಸೂತ್ರವಾಗಿ ಸಾಗುವುದಾದರೂ ಹೇಗೆ? ಇಲಾಖೆಯ ಉನ್ನತ ಅಧಿಕಾರಿಗಳಿಗೆ, ಸಂಬಂಧಿಸಿದ ಖಾತೆಯ ಹೊಣೆ ಹೊತ್ತ ಸಚಿವರಿಗೆ ಇಂಥ ಮೂಲ ಪ್ರಶ್ನೆಗಳು ಕಾಡದೇ ಇರಲು ಕಾರಣ ಏನಿರಬಹುದು? ಅಸಡ್ಡೆಯೋ ಅಥವಾ ಉನ್ನತ ಶಿಕ್ಷಣಕ್ಕೆ ಮಾಡುವ ವೆಚ್ಚ ಅನುತ್ಪಾದಕ ಎಂಬ ಧೋರಣೆಯೋ!?

ಉನ್ನತ ಶಿಕ್ಷಣಕ್ಕೆ ದಾಖಲಾಗುವ ವಿದ್ಯಾರ್ಥಿಗಳ ಅನುಪಾತವನ್ನು (gross enrolment ratio) 2020ರ ವೇಳೆಗೆ ಶೇಕಡ 30ಕ್ಕೆ ಏರಿಸಬೇಕೆಂದು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಗುರಿ ಇರಿಸಿಕೊಂಡಿದೆ. ಈ ನಿಟ್ಟಿನಲ್ಲಿ ಗ್ರಾಫ್ ಏರುಮುಖವಾಗಿದೆ. 2012–13ರಲ್ಲಿ ಶೇ21.5ರಷ್ಟಿದ್ದ ಈ ಅನುಪಾತ, 2014–15ರ ವೇಳೆಗೆ ಶೇ 23.6ಕ್ಕೆ ಏರಿದೆ. ಶೋಷಿತ ವರ್ಗಗಳ ವಿದ್ಯಾರ್ಥಿಗಳು, ಹೆಣ್ಣುಮಕ್ಕಳು ಗಣನೀಯ ಪ್ರಮಾಣದಲ್ಲಿ ಉನ್ನತ ಶಿಕ್ಷಣ ಪಡೆಯಲು ಮುಂದಾಗುತ್ತಿದ್ದಾರೆ.

ಇವರಲ್ಲಿ ಹೆಚ್ಚಿನವರಿಗೆ ಖಾಸಗಿ ಕಾಲೇಜುಗಳು ಎಟುಕದೆ ಇರುವ ಸಾಧ್ಯತೆಯೇ ಹೆಚ್ಚು. ಅಂಥವರೆಲ್ಲ ಶಿಕ್ಷಣ ಅರಸಿ ಬರುವುದು ಸಹಜವಾಗಿಯೇ ಸರ್ಕಾರಿ ಕಾಲೇಜುಗಳಿಗೆ. ಆ ಕಾಲೇಜುಗಳನ್ನು ಸೊರಗಿಸಿದರೆ ಶೋಷಿತ ವರ್ಗಗಳ ಸಬಲೀಕರಣದ ಆಶಯಕ್ಕೇ ಕೊಡಲಿ ಪೆಟ್ಟು ಕೊಟ್ಟಂತೆ. ಕಂಡ ಕಂಡ ವೇದಿಕೆಯಲ್ಲಿ ಸಾಮಾಜಿಕ ನ್ಯಾಯದ ಪರ ಮಾತನಾಡುವ ನಮ್ಮ ಆಳುವ ವರ್ಗಕ್ಕೆ ಇಂಥ ಸಾಮಾನ್ಯ ಸಂಗತಿ ತಿಳಿಯದೇ ಹೋದದ್ದು ದೊಡ್ಡ ವಿಪರ್ಯಾಸ!

ಸರ್ಕಾರಿ ಶಾಲೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿರಬಹುದು. ಆದರೆ ಸರ್ಕಾರಿ ಕಾಲೇಜುಗಳಿಗೆ ಆ ಸ್ಥಿತಿ ಒದಗಿಲ್ಲ ಎಂಬುದು ಸಮಾಧಾನದ ಸಂಗತಿ. ಮೂಲ ವಿಜ್ಞಾನ ಬೇಡಿಕೆ ಕಳೆದುಕೊಂಡಿರುವ ಈ ದಿನಮಾನದಲ್ಲೂ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿಗೆ ಸೇರಲು ವಿದ್ಯಾರ್ಥಿಗಳಿಂದ ನೂಕುನುಗ್ಗಲು ಇದೆ. ಯುಜಿಸಿಯಿಂದ ‘ಕಾಲೇಜ್ ವಿತ್ ಪೊಟೆನ್ಷಿಯಲ್ ಫಾರ್ ಎಕ್ಸಲೆನ್ಸ್’ ಮಾನ್ಯತೆ ಪಡೆದಿದೆ. ಇಂಥ ಕಾಲೇಜು ಕೂಡ ಹಂಗಾಮಿ ಪ್ರಾಂಶುಪಾಲರ ಆಡಳಿತ ವ್ಯವಸ್ಥೆಗೆ ಒಳಪಟ್ಟಿದೆ.

ಅದೇ ರೀತಿ ಕಾಮರ್ಸ್ ಕೋರ್ಸ್‌ಗಳಿಗೂ ಬೇಡಿಕೆ ಇದೆ. ಸರ್ಕಾರಿ ಆರ್.ಸಿ. ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಇದೆ. ಆದರೆ ಪ್ರವೇಶ ಬಯಸಿ ಪ್ರತೀ ವರ್ಷ ಏನಿಲ್ಲ ಅಂದರೂ ಮೂರು ಸಾವಿರ ಅರ್ಜಿಗಳು ಬರುತ್ತವಂತೆ. ಅಂದರೆ ಬೇಡಿಕೆ ಪೂರೈಸಲು ಆಗುತ್ತಿಲ್ಲ ಎಂದು ಅರ್ಥ. ಇಂಥ ಕಾಲೇಜುಗಳನ್ನು ಬಲಪಡಿಸಿದರೆ ಅದರಿಂದ ಸಾಮಾಜಿಕ ನ್ಯಾಯಕ್ಕೆ ತಾನಾಗಿಯೇ ಬಲ ಬರುತ್ತದೆ.

ನಮ್ಮ ಸಮಾಜ ಮೊದಲೇ ಅಸಮಾನತೆಗಳ ತವರು. ಜಾತಿ, ಧರ್ಮ, ಲಿಂಗ ತಾರತಮ್ಯ ಇನ್ನೂ ಪೂರ್ಣಪ್ರಮಾಣದಲ್ಲಿ ನಿವಾರಣೆ ಆಗಿಲ್ಲ. ಉನ್ನತ ಶಿಕ್ಷಣ ಪ್ರವೇಶದಲ್ಲೂ ಇದನ್ನು ಕಾಣಬಹುದು. ಉನ್ನತ ಶಿಕ್ಷಣ ಪಡೆಯುವವರಲ್ಲಿ ಪರಿಶಿಷ್ಟರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಶೇಕಡಾವಾರು ಪ್ರಮಾಣ ಕಡಿಮೆ ಇದೆ. ಇದನ್ನು ಸರಿದೂಗಿಸುವ ಪ್ರಯತ್ನ ಆಗಬೇಕು. ಇಂಥ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸದಿದ್ದರೆ ಶಿಕ್ಷಣ ಕೂಡ ಮತ್ತೊಂದು ಬಗೆಯ ಆರ್ಥಿಕ ಅಸಮಾನತೆಗೆ ಸಾಧನವಾಗಬಹುದು.

ಆದರೆ ನಮ್ಮ ಸರ್ಕಾರ ಈ ಕುರಿತು ಗಂಭೀರವಾಗಿ ಯೋಚಿಸಿದಂತೆ ಕಾಣುವುದಿಲ್ಲ. ಸರ್ಕಾರದ ಆದ್ಯತೆಗಳ ಹಿಂದಿನ ಮರ್ಮವೇ ಅರ್ಥವಾಗದು. ಅದರ ಆದ್ಯತಾ ಪಟ್ಟಿಯಲ್ಲಿ ಶಿಕ್ಷಣ ಕಡೆಯ ಸ್ಥಾನ ಪಡೆದಂತಿದೆ. ಉನ್ನತ ಶಿಕ್ಷಣಕ್ಕೆ ಕಾಲೇಜು ಸೇರುವವರ ಸಂಖ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಲಿದೆ. ಅವರಿಗೆ ಪ್ರವೇಶ ಅವಕಾಶ ದೊರಕಿಸಿಕೊಡಲು, ಗುಣಮಟ್ಟದ ಶಿಕ್ಷಣ ಒದಗಿಸಲು ಸರ್ಕಾರ ಸನ್ನದ್ಧಗೊಂಡಂತೆ ಕಾಣುತ್ತಿಲ್ಲ.

ಸರ್ಕಾರಿ ಕಾಲೇಜುಗಳ ಬೋಧಕರಲ್ಲಿ ಅತಿಥಿ ಉಪನ್ಯಾಸಕರ ಪಾಲು ಶೇ 60ಕ್ಕೂ ಹೆಚ್ಚು. ಅವರ ಸಂಖ್ಯೆ 14 ಸಾವಿರದಷ್ಟು. ಅಗತ್ಯಾನುಸಾರ ಕಾಲಕಾಲಕ್ಕೆ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದರ ಪರಿಣಾಮ ಇದು. ಸರ್ಕಾರಿ ಕಾಲೇಜುಗಳನ್ನು ಬಲಪಡಿಸುವ ಅಗತ್ಯವನ್ನು ಮತ್ತು ದೀರ್ಘಾವಧಿಯಲ್ಲಿ ಅದರಿಂದ ಆಗುವ ಬಹುಮುಖಿ ಪ್ರಯೋಜನಗಳನ್ನು ಸರ್ಕಾರ ಇನ್ನಾದರೂ ಮನಗಾಣುವುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.