ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಿಕೆ’ ಸಿನಿಮಾ ವಿವಾದ: ಸಂಕುಚಿತ ಪ್ರತಿರೋಧ

Last Updated 2 ಜನವರಿ 2015, 15:17 IST
ಅಕ್ಷರ ಗಾತ್ರ

ಸಕಾರಾತ್ಮಕ ಪ್ರತಿರೋಧ ಯಾವತ್ತೂ ಮೌಲಿಕ ಚರ್ಚೆಗಳಿಗೆ ವೇದಿಕೆ ಕಲ್ಪಿಸಿಕೊ­ಡು­ತ್ತದೆ. ನಕಾರಾತ್ಮಕ ಪ್ರತಿರೋಧವೂ ಮಹ­ತ್ವದ ವಿಚಾರಗಳ ಅಭಿವ್ಯಕ್ತಿಗೆ ಪ್ರೇರಣೆ ಒದಗಿಸ­ಬ­ಹುದು. ಆದರೆ ಪ್ರತಿರೋಧವನ್ನೊಡ್ಡಿದ ಶಕ್ತಿ­ಗಳನ್ನು ವಿತಂಡವಾದಿ ಮತ್ತು ಸಂಕುಚಿತ ದೃಷ್ಟಿ­ಕೋನ­­ಗಳು ನಿಯಂತ್ರಿಸುತ್ತಿದ್ದರೆ ಅಂಥವರ ಪ್ರತಿ­ರೋಧದ ಆಲೋಚನೆಗಳು ಆರೋಗ್ಯಕರ ಚರ್ಚೆ ಹುಟ್ಟು­ಹಾಕುವ ಬದಲು ಸಮಾಜವನ್ನು ಜಾತಿ, -ಧರ್ಮ­ಗಳ ನೆಲೆಯಲ್ಲಿ ವಿಂಗಡಿಸುವ ಹುನ್ನಾರದ ಭಾಗಗಳಾಗಿ ಬಿಡುತ್ತವೆ.

ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಜ್‌­ಕುಮಾರ್‌ ಹಿರಾನಿ ಅವರು ನಿರ್ದೇಶಿಸಿದ, ಅಮೀರ್ ಖಾನ್ ನಟನೆಯ ‘ಪಿಕೆ’ ಸಿನಿಮಾಗೆ ಎದು­ರಾ­ಗಿರುವ ಪ್ರತಿರೋಧವೂ ಇಂಥ ನಕಾರಾತ್ಮಕ ಹುನ್ನಾರದ ಭಾಗ ಎನಿಸುತ್ತದೆ. ಸಿನಿಮಾವೊಂದನ್ನು ನಿಷೇಧಿಸಬೇಕು ಎಂದು ಒತ್ತಾ­ಯಿಸಿ ಈ ಹಿಂದೆಯೂ ಹೋರಾಟಗಳು ನಡೆ­ದಿವೆ. ಸಿನಿಮಾದ ವಿರುದ್ಧ ದೂರು ನೀಡಿ, ಪ್ರತಿ­ರೋಧ ವ್ಯಕ್ತಪಡಿಸಿ ತಮ್ಮ ಅಸ್ಮಿತೆಯನ್ನು ಪ್ರತಿ­ಷ್ಠಾ­ಪಿ­ಸುವ ಪ್ರಯತ್ನಗಳು ನಡೆಯುತ್ತಲೇ ಇರು­ತ್ತವೆ. ಈಗಿನದು ಹೊಸ ಸೇರ್ಪಡೆಯಷ್ಟೇ.

ಬೌದ್ಧಿಕ ವಿವೇಕವನ್ನು ಜನಸಾಮಾನ್ಯರಿಗೆ ದಾಟಿಸಿ ಆ ಮೂಲಕ ಸದಾಶಯಗಳ ಪ್ರಜ್ಞೆ­ಯನ್ನು ಕಟ್ಟಿಕೊಡುವ ಹೊಣೆಗಾರಿಕೆ ಸಿನಿಮಾ ಮಾಧ್ಯ­ಮದ್ದು. ಜಾತಿ, -ಧರ್ಮಗಳ ಗೋಡೆ­ಗಳನ್ನು ಮತ್ತಷ್ಟು ಪ್ರಬಲವಾಗಿಸುವ ರೊಚ್ಚು, ಆವೇಶ­ಗಳೊಂದಿಗಿನ ಸಂಘರ್ಷವೇ ಎಲ್ಲರಿಗೂ ಪರಮ­ಮಾರ್ಗ ಎನ್ನಿಸಿರುವ ಹೊತ್ತಿನಲ್ಲಿ, ಸಿನಿಮಾ­ದಂತಹ ಮಾಧ್ಯಮ ವರ್ತಮಾನದ ಸಂಕಟ­ಗಳಿಗೆ ಪ್ರತಿಸ್ಪಂದಿಸುವ ಜವಾಬ್ದಾರಿಯನ್ನು ನಿರ್ವಹಿಸಲೇಬೇಕಾಗುತ್ತದೆ.

ಹಿರಾನಿ ಈ ಸಿನಿಮಾದ ಮೂಲಕ ನಮ್ಮ ಕಾಲದ ವೈರುಧ್ಯಗಳನ್ನು ಕಾಣಿಸಿ ಬೌದ್ಧಿಕ ವಿವೇಕವನ್ನು ಜಾಗೃತಗೊಳಿಸುವಲ್ಲಿ ಯಶಸ್ವಿ­ಯಾ­ಗಿದ್ದಾರೆ. ಎಲ್ಲ ಧರ್ಮಗಳೊಳಗೂ ಅಡಗಿ ಕುಳಿತು ಜನರ ವಿವೇಕವನ್ನೇ ಬಲಿ ತೆಗೆದು­ಕೊಳ್ಳುತ್ತಿ­ರುವ ಮೌಢ್ಯಾಧಾರಿತ  ‘ಸಂಘರ್ಷೋದ್ಯಮ’­ದ ಸೂಕ್ಷ್ಮಗಳನ್ನು ಅನಾ­ವರಣ­ಗೊಳಿಸಿದ್ದಾರೆ. ಸಂಘರ್ಷದಿಂದ ಸಂಘ, ಸಂಸ್ಥೆ, ಪಕ್ಷ ಅಥವಾ ವ್ಯಕ್ತಿಗೆ ಅಧಿಕಾರ, ಹಣ, ಪ್ರತಿಷ್ಠೆ ಮತ್ತಿತರ ಲಾಭಗಳು ದೊರಕಿದರೆ ಅದು ಕೂಡಾ ಒಂದು ವ್ಯಾವಹಾರಿಕ ಉದ್ಯಮ­ವಾಗಿಯೇ ಪರಿವರ್ತಿತವಾಗುತ್ತದೆ.

ಇಂಥ ಸಂಘರ್ಷ­ಗಳೇ ವಿಜೃಂಭಿಸಿ ವ್ಯಕ್ತಿಯನ್ನು ಧರ್ಮ, ಜಾತಿಯ ನೆಲೆಯಲ್ಲಿ ನೋಡುವ ದೃಷ್ಟಿಕೋನ­ಗಳು ‘ಸಾಂಸ್ಥಿಕ’ ಪ್ರಾಬಲ್ಯದೊಂದಿಗೆ ಆವರಿಸಿಕೊಂಡಾಗ ‘ಪಿಕೆ’ಯಂತಹ ಸಿನಿಮಾಗಳು ವಿವೇಕದ ಪ್ರಜ್ಞಾ ಬೆಳಕನ್ನು ಬೆಳಗಿಸುತ್ತವೆ. ಆದರೆ, ಅಂತಹ ವಿವೇಕದೊಂದಿಗೆ ಗುರುತಿಸಿ­ಕೊಂಡ ಸಿನಿಮಾಗಳು ವಿವಾದದ ಕಿಡಿಯನ್ನು ಹೊತ್ತಿಸುತ್ತಿರುವುದು ನಮ್ಮ ಕಾಲದ ದುರಂತ.
‘ಪಿಕೆ’ ಸಿನಿಮಾದಲ್ಲಿ ಎಲ್ಲ ಧರ್ಮಗಳನ್ನೂ ಪ್ರತಿನಿಧಿಸುವ ಪಾತ್ರಗಳಿವೆ.

ಜನರು ನಂಬಿರುವ ವಿವಿಧ ದೇವರುಗಳ ದಾರ್ಶನಿಕ ಅನಾವರಣ­ವಿದೆ. ಭಕ್ತನೊಬ್ಬ ತಪಸ್ಸಿಗೆ ಕುಳಿತಾಗ ‘ದರ್ಶನ’ ನೀಡುವ ಚಮತ್ಕಾರಿಕ ತಂತ್ರವನ್ನು ಆಧರಿಸಿ ದೇವರನ್ನು ಪ್ರತ್ಯಕ್ಷಗೊಳಿಸಿ ಮಾಯಗೊಳಿಸು­ವಂತಹ ಅನೇಕ ಸಿನಿಮಾಗಳು ಈಗಾಗಲೇ ಬಂದಿವೆ. ಆದರೆ, ಈ ಸಿನಿಮಾ ದೇವರುಗಳನ್ನು ಕಾಣಿಸುವ ಬಗೆಯೇ ವಿಭಿನ್ನ. ನಿಜದ ದೈವ­ವಾಗ­ಬಹು­ದಾದ ಮೌಲಿಕ ವಿವೇಕವನ್ನು ದೇವರ ಮೂಲಕವೇ ಇದು ಮುಂದಿಡುತ್ತದೆ. ಈ ಬಗೆಯ ನಿರೂಪಣೆ ಭಾರತದ ಸಿನಿಮಾಗಳ ಮಿತಿಯೂ ಹೌದು, ಶಕ್ತಿಯೂ ಹೌದು.

ದೇವರು­ಗಳನ್ನು ಚಮತ್ಕಾರಿಕವಾಗಿ ಬಿಂಬಿಸಿ ಮೌಢ್ಯದ ಬೇರುಗಳನ್ನು ಮತ್ತಷ್ಟು ಪ್ರಬಲ­ಗೊಳಿ­ಸುವುದು ಒಂದು ಮಿತಿಯಾದರೆ, ಅದೇ ಚಮತ್ಕಾರಿಕ ತಂತ್ರ ಬಳಸಿ ವಿವೇಕವನ್ನು ಬಿತ್ತು­ವುದು ಮತ್ತೊಂದು ಶಕ್ತಿ. ಆದರೆ, ಈ ಸಿನಿಮಾ­ದಲ್ಲಿ ದೇವರನ್ನು ಮುಗ್ಧವಾಗಿ ನಂಬುವ ಮನಸ್ಸುಳ್ಳ­ವರನ್ನು ಮೂರ್ಖರನ್ನಾಗಿಸುವುದನ್ನೇ ಬಂಡವಾಳ ಮಾಡಿಕೊಂಡವರ ಬಗ್ಗೆ ಎಚ್ಚರಿಸುವ ಕೌಶಲವಿದೆ. ಹೀಗಾಗಿ ಜನರು ದೇವರ ಕುರಿತು ಇರಿಸಿಕೊಂಡಿರುವ ನಂಬಿಕೆಗಳನ್ನು ಈ ಸಿನಿಮಾ ಪ್ರಶ್ನಿಸುವುದಿಲ್ಲ. ಧಾರ್ಮಿಕ ಭಾವನೆಗಳನ್ನು ಗಾಸಿಗೊಳಿ­ಸು­ವುದಿಲ್ಲ. ಧರ್ಮ ಕಂಡುಕೊಳ್ಳ­ಬಹುದಾದ ಮನುಷ್ಯಮುಖಿ ಚಲನೆಯ ಸಾಧ್ಯತೆಗಳ ಹೊಳಹುಗಳನ್ನು ಮುಂದಿಡುತ್ತದೆ.

ಸಂಭಾಷಣೆಯಲ್ಲಿ ಬಳಕೆಯಾಗುವ  ‘ರಾಂಗ್‌ ನಂಬರ್’ ಪರಿಭಾಷೆಯಂತೂ ಜನರನ್ನು ಕೂಪಮಂಡೂಕ ಸ್ಥಿತಿಯಲ್ಲಿರಿಸಿದ ಭಾರತದ  ‘ಅಧರ್ಮಾಧಾರಿತ ದೈವಿಕ ರಾಜ­ಕಾರಣ’ದ ಸಾಂಪ್ರದಾಯಿಕತೆ ಮತ್ತು ನಿಶ್ಚಲ ಸ್ವರೂಪವನ್ನೇ ಸಂಕೇತಿಸುತ್ತದೆ. ಈ ಸಿನಿಮಾವನ್ನು ನೋಡುವ ಕಾಲಕ್ಕೇ ನನಗೆ ಬಂಡಾಯ ಸಾಹಿತ್ಯ ಚಳವಳಿಯ ಮಹತ್ವದ ಕವಿ ಜಂಬಣ್ಣ ಅಮರಚಿಂತ ಅವರು ಗಾಂಧಿ ಕುರಿತು ಬರೆದ ಹನಿಗವನವೊಂದು ನೆನಪಾಯಿತು;  ‘ಗಾಂಧಿ..., ಹುಟ್ಟು ಕುರುಡರ ಓಣಿಯಲ್ಲಿ ಚಾಳೀಸು ಮಾರಿದಾತ...!’

ಹಿರಾನಿ ಅವರ ‘ಲಗೇ ರಹೋ ಮುನ್ನಾ­ಭಾಯಿ’ ಚಿತ್ರದಲ್ಲೂ ಗಾಂಧಿ ಕಾಲಾತೀತ ವ್ಯಕ್ತಿತ್ವ­ವಾಗಿ ಕಾಣಿಸಿಕೊಂಡಿದ್ದಾರೆ. ಗಾಂಧಿ ಅವರನ್ನು ತಮ್ಮ ಸಿನಿಮಾ ಕಥನದ ನಿರೂಪಣೆಯ ಪರಿಧಿ­ಯೊಳಗೆ ತಂದುಕೊಳ್ಳುವ ಹಿರಾನಿ ಅವರ ಹಂಬ­ಲದ ತೀವ್ರ ಅಭಿವ್ಯಕ್ತಿಯ ವೈಶಿಷ್ಟ್ಯವನ್ನು ‘ಪಿಕೆ’ ಸಿನಿಮಾದಲ್ಲೂ ಕಾಣಬಹುದು. ವಿವಿಧ ಕಾಗದಗಳ ಮೇಲಿನ ಗಾಂಧಿ ಚಿತ್ರಗಳ ಬದಲಾಗಿ ನೋಟುಗಳ ಮೇಲಿನ ಗಾಂಧಿಗೇ ಹೆಚ್ಚಿನ ಬೆಲೆ ನೀಡುವ ಪ್ರವೃತ್ತಿಯನ್ನು ಹಿರಾನಿ ಈ ಚಿತ್ರದಲ್ಲಿ ಭಿನ್ನವಾಗಿ ಕಾಣಿಸಿದ್ದಾರೆ. ‘ಲಗೇ ರಹೋ ಮುನ್ನಾಭಾಯಿ’ ಸಿನಿಮಾದಲ್ಲೂ ಈ ಕುರಿತು ಭಿನ್ನ ಪ್ರಯೋಗ ನಡೆಸಿ ಅವರು ಯಶಸ್ವಿಯಾಗಿದ್ದರು.

‘ನನ್ನ ಎಲ್ಲ ಪ್ರತಿಮೆಗಳನ್ನೂ ಧ್ವಂಸಗೊಳಿಸಿ ನಾನು ಪ್ರತಿಪಾದಿಸಿದ ಮೌಲಿಕ ಆಶಯಗಳ­ನ್ನಷ್ಟೇ ಇರಿಸಿಕೊಳ್ಳಿ’ ಎಂಬ ಸಂದೇಶವನ್ನು ಗಾಂಧಿ ಪಾತ್ರದ ಮೂಲಕವೇ ರವಾನಿಸಿದ್ದರು. ಇದೀಗ  ‘ಪಿಕೆ’ ಸಿನಿಮಾದಲ್ಲೂ ಗಾಂಧಿಯ ವಿನೂತನ ಮಾದರಿ ಅನಾವರಣವಾಗಿದೆ. ಅಹಿಂಸೆಯ ಮೂಲಕ ಸ್ವಾತಂತ್ರ್ಯದ ಕನಸು ಸಾಕಾರಗೊಳಿಸಿದ ನಿಜದ ಪ್ರಜಾಸತ್ತಾತ್ಮಕ ದೈವದ ಪಾತ್ರವನ್ನು ನಿರ್ವಹಿಸಿದ ಗಾಂಧಿ ಅವರಾಗಲೀ, ಜನರೊಳಗೇ ಬೆರೆತುಹೋಗಿರುವ ಕಾಲ್ಪನಿಕ ದೈವಗಳನ್ನಾಗಲೀ ಕಾಣಿಸಿ ಮನುಷ್ಯತ್ವದ ಮೌಲ್ಯವನ್ನು ಅಂತರ್ಗತ­ಗೊಳಿಸಿಕೊಳ್ಳುವ ಹಾಗೆ ಸಿನಿಮಾವೊಂದನ್ನು ನಿರೂಪಿಸುವುದು ಸವಾಲಿನ ಕೆಲಸ. ಅಂಥ ಸವಾಲಿನ ಕೌಶಲದ ಕಾರ್ಯವನ್ನು ಹಿರಾನಿ  ‘ಪಿಕೆ’ ಎಂಬ ಸಿನಿಮಾ ಕಲಾಕೃತಿಯ ಮೂಲಕ ನಿರ್ವಹಿಸಿದ್ದಾರೆ.

‘ಪಿಕೆ’ ಸಿನಿಮಾ ಸಂಕುಚಿತತೆಯ ಅಸ್ಮಿತೆಯ ಪ್ರಶ್ನೆಗಳಾಚೆಗೆ ನಮ್ಮೊಡನೆ ಸಂವಾದಿಸಿಕೊಳ್ಳುವ ಗುಣ ಹೊಂದಿದೆ. ಈ ಕಲಾಕೃತಿಯ ಜೊತೆಗಿನ ವಿವೇಚನಾತ್ಮಕ ಆಲೋಚನೆಗಳನ್ನೇ ಕಡೆಗಣಿಸಿ  ‘ಧಾರ್ಮಿಕ  ನಂಬಿಕೆಗಳನ್ನು ಗಾಸಿಗೊಳಿಸುವ ಪ್ರಯತ್ನವಿದು’ ಎಂದು ಗುರುತಿಸಿದರೆ ಅದನ್ನು ಸಂಕುಚಿತ ಪ್ರತಿರೋಧದ ವಿಚಿತ್ರ ಗುಣಲಕ್ಷಣ ಎಂದೇ ಕರೆಯಬೇಕಾಗುತ್ತದೆ.

ಸಿನಿಮಾ ಕಲಾಕೃತಿಯನ್ನು ಮುಕ್ತವಾಗಿ ನೋಡಬೇಕು. ಅಲ್ಲಿಯ ಬಿಂಬಗಳನ್ನು ಸಹೃದಯತೆಯೊಂದಿಗೆ ವೀಕ್ಷಿಸಬೇಕು. ಪೂರ್ವ­ಗ್ರಹ­ಪೀಡಿತ ಮನಸ್ಸಿನೊಂದಿಗೆ ಸಿನಿಮಾ­ವೊಂದನ್ನು ವೀಕ್ಷಿಸಿದಾಗ ಅದರೊಳಗಿನ ವಿಶೇಷ­ಗಳು ಗೊತ್ತಾಗುವುದಿಲ್ಲ. ನಮ್ಮ ಕಾಲದ ಅನೇಕ ವಾಸ್ತವ­ಗಳು ಕಲಾತ್ಮಕ ಸ್ಪರ್ಶದೊಂದಿಗೆ ಸಿನಿಮಾ­ದಲ್ಲಿ ಬಿಂಬಿತವಾದಾಗ ಅವುಗಳ ಕುರಿತು ಸಕಾರಾತ್ಮಕ ಚರ್ಚೆಗಳನ್ನು ನಡೆಸಿ ಜನರಲ್ಲಿ ವಿವೇಕ ಜಾಗೃತಗೊಳಿಸುವ ಪ್ರಯತ್ನಗಳಾಗಬೇಕು.

ಜನರ ಮಧ್ಯೆ ಗುರುತಿಸಿಕೊಂಡು ಅಧಿಕಾರ ಮತ್ತು ಹಣದ ಲಾಭ ಗಿಟ್ಟಿಸಿಕೊಳ್ಳುವ ಜಾಯ­ಮಾನದ ಸಂಕುಚಿತ ಅಪೇಕ್ಷೆಗಳನ್ನೇ ಮುಖ್ಯ­ವಾಗಿಸಿ­ಕೊಂಡು ವಾದಗಳನ್ನು ಮಂಡಿಸಿದರೆ, ಸಿನಿಮಾ ಕಲಾಕೃತಿಯ ಸಾರ್ವಕಾಲಿಕ ಶ್ರೇಷ್ಠತೆಯ ಸಾಧ್ಯತೆಗಳಿಗೆ ಕಡಿವಾಣ ಬಿಗಿದಂತಾಗುತ್ತದೆ. ‘ಟೀಕಿಸಲೇಬೇಕು, ನಮ್ಮ ಸಮಸ್ತ ನಂಬಿಕೆ­ಗಳಿಗೂ ಇದು ಸವಾಲೆಸೆಯುತ್ತದೆ, ಜನರಿಗೆ ಇದು ಅಪಾಯಕಾರಿ’ ಎಂದು ಹಟ ತೊಟ್ಟು ಇಂಥ ಸಿನಿಮಾಗಳನ್ನು ನೋಡಿದಾಗ ಅಲ್ಲಿರುವ ಎಲ್ಲ ಬಿಂಬಗಳೂ ನಕಾರಾತ್ಮಕವಾಗಿಯೇ ಕಾಣಿಸು­ತ್ತವೆ.

ನಿರ್ದೇಶಕ ತಲುಪಿಸಬೇಕೆಂದು­ಕೊಂಡ ವಿವೇಕ ನಮ್ಮೊಳಗೆ ಅಂತರ್ಗತ­ವಾಗು­ವುದಿಲ್ಲ. ಇಂಥ ವಿವೇಚನಾತ್ಮಕ ಸಿನಿಮಾ ಕಲಾ­ಕೃತಿ­­ಗಳನ್ನು ಸಂಕುಚಿತ ದೃಷ್ಟಿಕೋನದೊಂದಿಗೆ ವಿರೋಧಿಸಿದರೆ ಸಿನಿಮಾವೊಂದನ್ನು ಸಮ­ಕಾಲೀನ­ವಾಗಿಸಿ ಸಾರ್ವಕಾಲಿಕತೆಯ ಎತ್ತರಕ್ಕೆ ಕೊಂಡೊ­ಯ್ಯುವ ಭವಿಷ್ಯದ ಎಲ್ಲ ಪ್ರಯೋಗಗಳಿಗೆ ಹಿನ್ನಡೆ ಉಂಟಾಗುತ್ತದೆ. ಲಾಂಗು, ಮಚ್ಚು, ಹೆಣ್ಣಿನ ದೇಹ ಪ್ರದರ್ಶನ­ವನ್ನೇ ಮುಖ್ಯವಾಗಿಸಿಕೊಂಡು ಸಿನಿಮಾವನ್ನು ದಂಧೆಯನ್ನಾಗಿಸುವ ಪ್ರಯತ್ನಗಳನ್ನು ವಿರೋಧಿ­ಸ­ಲೇಬೇಕು.

ಸಿನಿಮಾದೊಂದಿಗೆ ಇರುವ ಕಲೆಯ ಗುಣ­ವನ್ನು ನಿರಾಕರಿಸುವಂತಹ ಉಡಾಫೆಯ ಮನೋಭಾವಕ್ಕೆ ಬಹುದೊಡ್ಡ ಪ್ರತಿರೋಧ ಜನ­ರಿಂದಲೇ ಎದುರಾಗಬೇಕಿದೆ. ಸಾರ್ವಕಾಲಿಕ ಶ್ರೇಷ್ಠ ಕಲಾಕೃತಿ ಆಗಬಹುದಾದ ಸಿನಿಮಾ­ವೊಂ­ದನ್ನು ಜನರ ಭಾವನೆಗಳ ನೆಪದಲ್ಲಿ ವಿರೋಧಿ­ಸಿದರೆ ಪ್ರಯೋಜನವಿಲ್ಲ. ‘ಪಿಕೆ’ ಸಿನಿಮಾ ಜನರ ನಂಬಿ­ಕೆ­ಗಳಿಗೆ ವಿರುದ್ಧವಾಗಿದ್ದರೆ ₨ 200 ಕೋಟಿಗೂ ಅಧಿಕ ಗಳಿಕೆ ಹೇಗೆ ಸಾಧ್ಯವಾಗುತ್ತಿತ್ತು?

ವಾಸ್ತವದ ಊನಗಳನ್ನು ವಿನೂತನವಾಗಿ ಕಾಣಿಸಿ ವಾಣಿಜ್ಯಿಕ ಯಶಸ್ಸು ಗಳಿಸುವ ಪ್ರಯೋಗ­ಗಳನ್ನು ಪ್ರೀತಿಯಿಂದ ಒಪ್ಪಿಕೊಳ್ಳ­ಬೇಕಾ­ದುದು ಜವಾಬ್ದಾರಿಯುತ ಪ್ರೇಕ್ಷಕರ ಗುಣ­ಲಕ್ಷಣ. ಇಂಥ ಪ್ರೇಕ್ಷಕರು ದೇಶದಾದ್ಯಂತ ಇದ್ದಾರೆ. ಕನ್ನಡದಲ್ಲೂ ಇಂಥ ಅನೇಕ ಪ್ರಯೋಗ­ಗಳನ್ನು ಪ್ರೀತಿಯಿಂದ ಸ್ವೀಕರಿಸಿದ ಪ್ರೇಕ್ಷಕ ಪರಂಪರೆಯೇ ಇದೆ. ಇದೇ ತರಹದ ಜವಾ­ಬ್ದಾರಿಯ ನಿರ್ವಹಣೆ ‘ಪಿಕೆ’ ಸಿನಿಮಾ ಬಂದಾಗಲೂ ಆಗಿದೆ.

ಈ ಬಗೆಯ ಹೊಣೆಗಾರಿಕೆ­ಯಿಂದ ‘ಕ್ಲೀಷೆ ಎನ್ನಿಸುವಂತಹ ಕಥನಗಳ ಸಿನಿಮಾಗಳನ್ನು ಇನ್ನೆಷ್ಟು ನೀಡುತ್ತೀರಿ?’ ಎಂಬ ಪ್ರಶ್ನೆಯನ್ನೂ ಎತ್ತಬೇಕಿದೆ. ಯಾವುದೋ ಒಂದು ಧರ್ಮ, ದೇವರ ಅಸ್ತಿತ್ವವೊಂದಕ್ಕೆ ಧಕ್ಕೆ­ಯಾಗುತ್ತದೆ ಎಂಬ ಹುಯಿಲೆಬ್ಬಿಸಿ ಜನರ ಭಾವನೆಗಳ ಜೊತೆಗೆ ಆಟ­ವಾಡುವ ಪ್ರವೃತ್ತಿಯ ರಾಜಕಾರಣ ಕೊನೆಗೊಳ್ಳಬೇಕಾದ ಅಗತ್ಯವಿದೆ. 

ಕಲಾಕೃತಿಯೊಂದನ್ನು ಗೆಲ್ಲಿಸುವ ಮತ್ತು ಆ ಮೂಲಕ ಸಂಕುಚಿತತೆಯ ಹುನ್ನಾರಗಳನ್ನು ಸೋಲಿ­­ಸುವ ಸಂವಾದಗಳಲ್ಲಿ ತೊಡಗುವ ಮುಖಾಂ­ತರ, ಮುಖ್ಯವಾಹಿನಿ ಸಿನಿಮಾಗಳಲ್ಲಿ ಪ್ರೇಕ್ಷ­­ಕರು ವ್ಯಾಪಕ ರಚನಾತ್ಮಕ ಬದಲಾವಣೆ­ಯನ್ನು ತರಬೇಕಿದೆ. ಹಾಗಾಗದಿದ್ದರೆ ಮತ್ತೆ ನಮ್ಮ ಮುಖ್ಯವಾಹಿನಿ ಸಿನಿಮಾಗಳು ಸಾಂಪ್ರ­ದಾಯಿ­ಕತೆಯ ಜಾಡ್ಯದೊಂದಿಗೇ ಗುರುತಿಸಿ­ಕೊಂಡು ಜನರ ಆಲೋಚನೆಯ ಶಕ್ತಿಯನ್ನೇ ಕಳೆದಿ­ಡುತ್ತವೆ. ಯಥಾಸ್ಥಿತಿವಾದಗಳೊಂದಿಗೆ ಜಡ­ಗೊಳ್ಳು­ತ್ತವೆ. ಈ ಎಚ್ಚರವನ್ನು ಗಮನದಲ್ಲಿ ಇರಿಸಿ­ಕೊಂಡು ನಾವು ಹೊಸ ಪ್ರಯೋಗಗಳಲ್ಲಿ ತೊಡಗಿದ ಪ್ರತಿಭಾನ್ವಿತ ನಿರ್ದೇಶಕರ ಸಿನಿಮಾ ಕೊಡುಗೆಗಳನ್ನು ಪ್ರೋತ್ಸಾಹಿಸಬೇಕಾಗುತ್ತದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.ini

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT