ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಪರೇಸಿ ತರ್ಕ!

Last Updated 21 ಫೆಬ್ರುವರಿ 2019, 20:21 IST
ಅಕ್ಷರ ಗಾತ್ರ

ಸಂಪಾದಕರ ಚೇಂಬರಿಗೆ ಅವಸರವಸರವಾಗಿ ನುಗ್ಗಿ ಬಂದ ಪತ್ರಕರ್ತ ತೆಪರೇಸಿ ‘ಸರ್ ಅರ್ಜೆಂಟ್ ಬಿಗ್ ಬ್ರೇಕಿಂಗ್ ಕೊಟ್ಟುಬಿಡಿ. ಮೋದಿಯವರು ಮತ್ತೆ ಪ್ರಧಾನಿ ಆಗೋದು ಗ್ಯಾರಂಟಿ ಆತು’ ಎಂದ.

ಸಂಪಾದಕರು ತೆಪರೇಸಿಯ ಮುಖ ನೋಡಿದರು. ‘ಏನ್ರಿ, ಎಲ್ಲಿಂದ ಬರ್ತಿದ್ದೀರಿ? ಆರೋಗ್ಯ ಸರಿ ಇದೆ ತಾನೆ?’ ಎಂದು ಪ್ರಶ್ನಿಸಿದರು.

‘ಸರ್... ಐಯಾಮ್ ಓಕೆ, ಬೇಗ ಬಿಗ್ ಬ್ರೇಕಿಂಗ್ ಕೊಟ್ಟುಬಿಡಿ. ಬೇರೆ ಚಾನೆಲ್‍ನವರು ಹಾಕೋ ಮುಂಚೆ ನಾವು ಹಾಕಿಬಿಟ್ರೆ ನಮ್ಮ ಚಾನೆಲ್‍ಗೆ ದೊಡ್ಡ ಹೆಸರು ಬರುತ್ತೆ. ‘ನಮ್ಮಲ್ಲೇ ಮೊದಲು’ ಅಂತ ಬೇಗ ಹಾಕಿಬಿಡಿ ಸಾ...’ ತೆಪರೇಸಿ ಅವಸರ ಮತ್ತಷ್ಟು ಹೆಚ್ಚಾಯಿತು.

ಸಂಪಾದಕರು ಗರಂ ಆದರು. ‘ರಾತ್ರಿ ಕನಸು ಬಿದ್ದಿತ್ತೇನ್ರಿ ಅಥವಾ ಯಾರಾದ್ರೂ ಜ್ಯೋತಿಷಿ ಹೇಳಿದ್ರಾ? ಏನು ಹುಡುಗಾಟಿಕೆ ಆಡ್ತೀರಾ? ನಾವು ಸುಮ್‌ಸುಮ್ನೆ ಹಂಗೆ ಹಾಕಿಬಿಟ್ರೆ ವಿರೋಧ ಪಕ್ಷದೋರು ಸುಮ್ನೆ ಬಿಡ್ತಾರಾ?’

‘ಸಾರ್ ಸುಮ್‌ಸುಮ್ನೆ ಅಲ್ಲ, ಗ್ಯಾರಂಟಿ ಮೋದಿ ಅವರೇ ಪ್ರಧಾನಿ ಆಗೋದು. ಬೇಕಾದ್ರೆ ಬರೆದಿಟ್ಕೊಳಿ’ ತೆಪರೇಸಿ ವಾದಿಸಿದ.

‘ಏನು ಬರೆದಿಟ್ಕೊಳ್ಳೋದು? ಇದು ನ್ಯೂಸ್ ಚಾನೆಲ್ಲು. ಜ್ಯೋತಿಷ ಕೇಂದ್ರ ಅಲ್ಲ. ಅಲ್ಲಾರಿ, ದಿನಾ ಏನಾದ್ರೂ ಒಂದು ಇಂಥವು ವಿಚಿತ್ರ ತರ್ತೀರಲ್ಲ, ಲೋಕಸಭೆ ಎಲೆಕ್ಷನ್ನೇ ಇನ್ನೂ ಡಿಕ್ಲೇರ್ ಆಗಿಲ್ಲ. ಅದೆಂಗ್ರೀ ಮೋದಿ ಮತ್ತೆ ಪ್ರಧಾನಿ ಆಗ್ತಾರೆ ಅಂತ ಹೇಳ್ತೀರಿ?’

‘ಹೆಂಗೆ ಅಂದ್ರೆ? ಕುಮಾರಸ್ವಾಮಿ ಈಗ ಮುಖ್ಯಮಂತ್ರಿ ಆಗಿಲ್ವಾ? ಹಂಗೆ...’

ತೆಪರೇಸಿ ಸಮರ್ಥನೆ ಕೇಳಿ ಸಂಪಾದಕರಿಗೆ ಮತ್ತೂ ಕೋಪ ಬಂತು. ‘ಅಲ್ರೀ ಅದಕ್ಕೂ ಇದಕ್ಕೂ ಏನ್ರೀ ಸಂಬಂಧ?’

‘ಸಂಬಂಧ ಐತೆ ಸಾ, ವಿಧಾನಸಭೆ ಎಲೆಕ್ಷನ್‍ಗೂ ಮೊದ್ಲು ಸಿದ್ದರಾಮಯ್ಯ ‘ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲ್ಲ’ ಅಂತ ಪದೇ ಪದೇ ಹೇಳ್ತಿದ್ರು. ಆದ್ರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆದ್ರೋ ಇಲ್ವೋ?’

‘ಆದ್ರು, ಅದಕ್ಕೆ?’

‘ಈಗ ಅದೇ ಸಿದ್ದರಾಮಯ್ಯ ‘ಅವರಪ್ಪನಾಣೆ ಮೋದಿ ಮತ್ತೆ ಪ್ರಧಾನಿ ಆಗಲ್ಲ ಅಂತಿದಾರೆ. ನ್ಯೂಸ್ ನೋಡ್ಲಿಲ್ವಾ?’

ಸಂಪಾದಕರು ತಲೆ ಮೇಲೆ ಕೈ ಹೊತ್ತುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT