ಶಿವ ಕೊಟ್ಟ ‘ಚಿಪ್’

ಮಂಗಳವಾರ, ಮಾರ್ಚ್ 26, 2019
33 °C

ಶಿವ ಕೊಟ್ಟ ‘ಚಿಪ್’

Published:
Updated:
Prajavani

ಇತ್ತೀಚೆಗೆ ಯಾರಿಗೂ ವರ ಕೊಡದೇ, ಶಿವನಿಗೆ ಕೈ ಚುಟುಚುಟು ಅನ್ನುತ್ತಿರಲಾಗಿ... ತಾಳಲಾರದೆ, ನಡುರಾತ್ರಿ ಮೊದಲು ‘ಶಿವ’ ಎನ್ನುವವರಿಗೆ ಒಂದು ವರ ಕೊಟ್ಟೇ ಬಿಡುವ ಎಂದು ನಿರ್ಧರಿಸಿ ಕೈಲಾಸ ಪರ್ವತದಿಂದ ಕೆಳಗಿಳಿದ.

ಹನ್ನೆರಡು ಹೊಡೆಯುವುದಕ್ಕೆ ಸರಿಯಾಗಿ ಪಮ್ಮಿ ‘ಶಿವನೇ’ ಎಂದುಲಿದದ್ದು ಕೇಳಿತು. ದೆವ್ವ ನೋಡಿದವಳಂತೆ ಟಿ.ವಿ. ಮುಂದೆ ಬೆಚ್ಚಿ ಕೂತಿದ್ದವಳ ಎದುರು ಪ್ರತ್ಯಕ್ಷನಾದ ಶಿವ ‘ಒಂದೇ ಒಂದು ವರವ ಕೇಳುವಂಥವಳಾಗು ಭಕ್ತೆಯೇ’ ಎಂದು ಸಂಪ್ರೀತನಾಗಿ ನುಡಿದ. ‘ಯಾವ ಕಾರಣಕ್ಕೆ ವರವ ಬೇಡುತ್ತಿರುವೆ ಎಂದು ನೀನೂ ನೋಡಿಬಿಡು ಶಿವನೇ’ ಎಂದ ಪಮ್ಮಿ ಭಾರತ ಮತ್ತು ಪಾಕಿಸ್ತಾನದ ನ್ಯೂಸ್ ಚಾನೆಲ್‌ಗಳನ್ನು ಪಟಪಟನೆ ಹಾಕಿ ತೋರಿಸಿದಳು.

ಎರಡೂ ದೇಶಗಳ ನ್ಯೂಸ್ ಆ್ಯಂಕರ್‌ಗಳು ಇನ್ನೇನು ಯುದ್ಧ ಶುರುವಾಗಿಯೇ ಬಿಟ್ಟಿತು ಎನ್ನುತ್ತ, ಬಾಯಲ್ಲೇ ಕ್ಷಿಪಣಿಯನ್ನು ಲಂಗುಲಗಾಮಿಲ್ಲದೇ ಉಡಾಯಿಸುತ್ತಿದ್ದರು. ಫೈಟರ್ ಜೆಟ್ ವಿಮಾನಗಳಲ್ಲಿ ಕೂತವರಂತೆ ಯುದ್ಧೋನ್ಮಾದದಲ್ಲಿರುವ ಈ ಆ್ಯಂಕರ್‌ಗಳು ಟಿ.ವಿ. ಪರದೆಯಿಂದೀಚೆ ಹಾರಿ ತನ್ನ ಕೈಯಿಂದ ತ್ರಿಶೂಲವನ್ನು ಕಿತ್ತುಕೊಂಡರೆ ಎಂದು ಬೆದರಿದ ಶಿವ, ‘ಬೇರಾವ ವರವೂ ಬೇಡ, ಇವರನ್ನೆಲ್ಲ ಹೊತ್ತೊಯ್ದುಬಿಡು ಸಾಕು’ ಎಂಬ ಪಮ್ಮಿಯ ಮೊರೆ ಕೇಳದವನಂತೆ ಅಂತರ್ಧಾನನಾಗಿಬಿಟ್ಟ!

ಅಷ್ಟರಲ್ಲೇ ‘ಶಾ’ಣ್ಯಾ ಕಮಲನಯನಗಳನ್ನು ಮುಚ್ಚಿಕೊಂಡು ‘ಶಿವಾ ಶಿವಾ’ ಎಂದೊರಲಿದ್ದು ಕೇಳಿತು. ‘ಶಾ’ಣ್ಯಾನೆದುರು ಪ್ರತ್ಯಕ್ಷನಾಗಿ ‘ಒಂದು ವರ ಕೇಳಪಾ’ ಎಂದ. ‘ಶಾ’ಣ್ಯಾ ಅರೆಕ್ಷಣವೂ ತಡಮಾಡದೇ ಬೇಡಿದ... ‘ಆಡಿಯೂರಪ್ಪ, ಹೆಡಗೆ ಇಂಥವರ ಕೊರಳಿನಲ್ಲಿ ಹುದುಗಿಸಬಲ್ಲ ಒಂದು ಮೈಕ್ರೊಚಿಪ್ ಕರುಣಿಸು ಪ್ರಭುವೇ... ಇವರು ಯಾವಾಗ, ಏನು ಒದರಬೇಕೆಂದು ನಾವು ಕೋಡಿಂಗ್ ಮಾಡಿರುವುದಷ್ಟೇ ಬಾಯಿಂದ ಉದುರತಕ್ಕದ್ದು. ಜೊತೆಗೆ ಚುನಾವಣೆ ಮುಗಿಯುವವರೆಗೆ ಈ ಕಮಲದಳಗಳ ಮತ್ತು ಭಕ್ತಗಣಗಳ ಮಿದುಳಿನ ಸರ್ಕ್ಯೂಟ್ ಆಫ್ ಮಾಡಿಬಿಡು’.

‘ಎರಡಲ್ಲ, ಒಂದೇ ವರ ಕೊಡುವೆ. ‘ಮೈಕ್ರೊ’ ಚಿಪ್ ಏಕೆ, ಈ ‘ಮ್ಯಾಕ್ರೊ’ ಚಿಪ್ಪೇ ತಗೋ’ ಎಂದ ಶಿವ ತೆಂಗಿನ ಚಿಪ್ಪನ್ನು ‘ಶಾ’ಣ್ಯಾ ಕೈಯಲ್ಲಿರಿಸಿ ಅಲ್ಲಿಂದ ಓಟಕಿತ್ತ!

Tags: 

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !