ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕಲ್ಲು ಹೇಳಿದ ಕತೆ!

Last Updated 26 ನವೆಂಬರ್ 2020, 20:01 IST
ಅಕ್ಷರ ಗಾತ್ರ

ಯಾರಿಂದಲೋ ತಪ್ಪಿಸಿಕೊಂಡು ಬಂದವನಂತೆ ಹರಟೆಕಟ್ಟೆಗೆ ಓಡೋಡಿ ಬಂದ ಬ್ರೇಕಿಂಗ್ ನ್ಯೂಸ್ ಪತ್ರಕರ್ತ ತೆಪರೇಸಿ ‘ಲೇಯ್ ನನ್ನೆಂಡ್ತಿ ಪಮ್ಮಿ ರಾಂಗಾಗಿದಾಳೆ. ಇಲ್ಲಿಗೆ ಬಂದ್ರೆ ನಾ ಬಂದಿಲ್ಲ ಅಂತ ಹೇಳ್ರಲೆ, ಪ್ಲೀಸ್’ ಎಂದ ಏದುಸಿರು ಬಿಡುತ್ತ.

‘ಯಾಕೋ ಏನಾತೋ?’ ಗುಡ್ಡೆ ಕೇಳಿದ.

‘ಏನಿಲ್ಲ ಕಣ್ರಲೆ, ಒಂದೇ ಒಂದು ಸುಳ್ಳು ಹೇಳಿದ್ದೆ. ಅದ್ಕೆ ಪಮ್ಮಿ ರೊಚ್ಚಿಗೆದ್ದುಬಿಟ್ಟಿದಾಳೆ...’

‘ಅಲ್ಲೋ ನೀವು ಟಿ.ವಿ.ಯೋರು ಹೇಳೋದು ತೊಂಬತ್ತೊಂಬತ್ತು ಸುಳ್ಳು, ಒಂದು ಅನುಮಾನ. ಅದು ಪಮ್ಮಿಗೆ ಗೊತ್ತಿಲ್ವ? ಅದೇನಾತು ಒದರು...’ ದುಬ್ಬೀರನಿಗೆ ನಗು.

‘ಏನಿಲ್ಲ ಇವತ್ತು ಕೆಲ್ಸ ಮುಗಿಸಿ ಮನೆಗೆ ಬಂದ್ನಾ... ಏನ್ರಿ ಇವತ್ತಿನ ಸುದ್ದಿ ಅಂದ್ಲು. ನಾನು ಕಲ್ಲು ಅಂದೆ...’

‘ಕಲ್ಲಾ? ಅದೆಂಥ ಸುದ್ದಿಲೆ?’

‘ಇರು ಹೇಳ್ತೀನಿ. ಚೀನಾದೋರು ಚಂದ್ರನ ಮೈಮೇಲಿಂದ ಕಲ್ಲು ತರಾಕೆ ರಾಕೆಟ್ ಬಿಟ್ಟಾರಲ್ಲ, ಅದು. ಆದ್ರೆ ಕಲ್ಲು ತರಾಕೆ ಅಲ್ಲಿಗೇ ಹೋಗಬೇಕಿಲ್ಲ, ಇಲ್ಲೇ ನಮ್ಮಲ್ಲೇ ಅಂಥವು ಬಾಳದವು ಅಂದೆ...’

‘ಹೌದಾ? ಯಾವವು?’ ಗುಡ್ಡೆಗೆ ಕುತೂಹಲ.

‘ಮಂತ್ರಿ ಆಗೋರ ಆಸೆಗೆ ಹೈಕಮಾಂಡ್ ಕಲ್ಲು, ಮುಖ್ಯಮಂತ್ರಿ ಈಗಲೇ ಬದಲಾವಣೆ ಆಗ್ತಾರೆ ಅಂತಿದ್ದ ಸಿದ್ದಣ್ಣನ ಆಸೆಗೆ ಕಲ್ಲು, ಬೈಎಲೆಕ್ಷನ್ ಗೆಲ್ತೀವಿ ಅಂತಿದ್ದ ಜೆಡಿಎಸ್, ಕಾಂಗ್ರೆಸ್ ಆಸೆಗೆ ಕಲ್ಲು, ಟ್ರಂಪ್ ಗೆದ್ದೇ ಗೆಲ್ತಾರೆ ಅಂತಿದ್ದ ‘ನಮೋ’ ಆಸೆಗೆ ಕಲ್ಲು... ಹಿಂಗೆ ಹೇಳ್ತಾ ಹೋದೆ...’

‘ಸರಿ ಮುಂದೇನಾತು?’

‘ನಂದೂ ಒಂದು ಆಸೆ ಇತ್ತಲ್ಲ, ಚಂದ್ರಾ ಲೇಔಟ್‍ನಾಗೆ ಸೈಟ್ ಕೊಡುಸ್ತೀನಿ ಅಂತ ಹೇಳಿದ್ರಲ್ಲ, ಏನಾತು ಅಂತ ಪಮ್ಮಿ ಕೇಳಿದ್ಲು. ಅದಕ್ಕೆ ನಾನು ತಡಿ, ಚೀನಾದೋರು ಹೆಂಗೂ ಚಂದ್ರನ ಮೇಲಿನ ಕಲ್ಲು ತರಾಕೆ ಹೋಗ್ಯಾರಲ್ಲ, ಅಲ್ಲಿ ಲೇಔಟ್ ಏನರೆ ಆಗಿದ್ರೆ ಕೊಡುಸ್ತೀನಿ ಅಂದೆ... ಅಷ್ಟೆ ಕಣ್ರಲೆ, ಪಮ್ಮಿ ಕಲ್ಲು ತಗಂಡು ಬೆನ್ಹತ್ತಿದ್ಲು, ನಾ ಓಡಿ ಇಲ್ಲಿಗೆ ಬಂದೆ...’ ತೆಪರೇಸಿ ಉಸಿರುಬಿಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT