ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಕ್ಕಣ್ಣನ ಜೆರ್ಸಿ

Last Updated 30 ಜೂನ್ 2019, 19:45 IST
ಅಕ್ಷರ ಗಾತ್ರ

ಶನಿವಾರ ಬೆಳಗ್ಗೆಯಿಂದ ಬೆಕ್ಕಣ್ಣನದು ಒಂದೇ ವರಾತ. ‘ನನಗ ಕೇಸರಿ ಜೆರ್ಸಿ ಕೊಡಸು’.

‘ಏನಲೇ ಅದು...’ ಎಂದರೆ, ಪೇಪರಿನಲ್ಲಿ ಭಾರತೀಯ ಕ್ರಿಕೆಟ್ ಕಲಿಗಳು ಇಂಗ್ಲೆಂಡ್ ಮ್ಯಾಚಿಗೆ ಕೇಸರಿ ಬಣ್ಣದ ಜೆರ್ಸಿ ಹಾಕಿಕೊಂಡು ಆಡುತ್ತಾರೆಂಬ ಸುದ್ದಿ ತೋರಿಸಿತು.

‘ನಿನಗೆದಕ್ಕಲೇ... ನೀ ಏನ್ ಅಲ್ಲಿ ಹೋಗಿ ಆಡಾಂವ ಏನು...’

‘ನಾನೂ ಕ್ರಿಕೆಟ್ ಅಭಿಮಾನಿ ಅದೀನಿ’ ಜೋರುದನಿಯಲ್ಲಿ ವಾದಿಸಿತು.

‘ಮೊದ್ಲೇ ಹುಲಿಬಣ್ಣ ನಿಂದು... ನಿನಗ ಚಂದ ಕಾಣೂದಿಲ್ಲಲೇ’ ಎಂದರೆ ಅದಕ್ಕೂ ಜಗ್ಗದೇ ಹಟ ಮಾಡಿತು. ಕೊನೆಗೆ ನಿಜವನ್ನೇ ಹೇಳಿದೆ. ‘ನನ್ ಹತ್ರ ರೊಕ್ಕ ಎಲ್ಲೈತಿ. ನನಗೇನ್ ಟೇಬಲ್ ಕೆಳಗಿಂದ ಬರ್ತದೇನು. ತಿಂಗಳ ಕೊನಿ ಬ್ಯಾರೆ. ಪಗಾರ ಆಗಿಂದ ಕೊಡಿಸ್ತೀನೇಳು’ ಎಂದು ಸಮಾಧಾನಿಸಿದರೂ ಕೇಳದೇ ಸಿಟ್ಟು ಮಾಡಿಕೊಂಡು ಹೊರಗೋಡಿತು.

ಭಾನುವಾರ ಬೆಳಗ್ಗೆ ನೋಡಿದರೆ ಕೇಸರಿ ಜೆರ್ಸಿ ಹಾಕಿಕೊಂಡೇ ಬಂದಿತ್ತು!

‘ಏನಲೇ ನಿನ್ನ ಅವತಾರ... ಯಾರು ಕೊಡಿಸಿದ್ರು...’ ಕೇಳಿದೆ.

‘ನಿರ್ಮಲಕ್ಕ ಕೊಡಿಸ್ಯಾಳ’ ಎಂದು ಹೆಮ್ಮೆಯಿಂದ ಉಲಿಯಿತು. ನಾನು ಬೆಕ್ಕಸಬೆರಗಾದೆ.

‘ಎಲ್ಲೆಲ್ಲಿ ಹೆಂಗ ಹೆಗ್ಗಣ ಹಿಡಿಬಕು, ಎಲ್ಲಿ ಬೋನು ಇಡಬಕು ಅಂತೆಲ್ಲ ಒಂದು ಪ್ರಸೆಂಟೇಶನ್ ಕೊಟ್ಟೆ. ಆಕಿ ಮುಖ ಗಂಟು ಮಾಡಿಕಂಡೇ ಕೂತಿದ್ದಳು. ‘ಜೇಟ್ಲಿ ಕಾಲದಾಗ ಆರ್‌ಬಿಐ ಗವರ್ನರ್ ಮತ್ತ ಈಗ ನೀ ಕುರ್ಚಿ ಹಿಡಿದ ನಾಕ್ ದಿನಕ್ಕನ ಡೆಪ್ಯುಟಿ ಗವರ್ನರ್, ಇವರಿಬ್ರೂ ಎದಕ್ಕ ರಾಜೀನಾಮೆ ಕೊಟ್ಟಾರ ಅನ್ನೂ ಗುಟ್ಟು ನನಗ ಗೊತ್ತದ, ಇವತ್ತೇ ಪ್ರೆಸ್ ಮೀಟ್ ಮಾಡ್ತೀನೇಳು’ ಅಂದೆ. ಆಕಿ ಕ್ಲೀನ್ ಬೌಲ್ಡ್. ‘ಎಲ್ಲರ ಮುಂದೂ ಹೇಳಿಕೋತ ಅಡ್ಯಾಡಬ್ಯಾಡಪಾ, ಸುಮ್ನ ಕುತ್ತು ಕ್ರಿಕೆಟ್ ನೋಡ್ಹೋಗು’ ಅಂತ್ಹೇಳಿ ಇದನ್ನ ಕೊಟ್ಟಳು. ಲ್ಯಾಪ್ಟಾನಾಗೆ ಕ್ರಿಕೆಟ್ ಹಾಕವ್ವ. ಹಂಗ ತಟ್ಟೆಯಾಗ ಡ್ರೂಲ್ಸ್, ಹಾಲು ಕೊಡು. ತಿನ್ಕೋತ, ಕುಡ್ಕೋತ ಕ್ರಿಕೆಟ್ ನೋಡ್ತೀನಂತ... ಹೆಗ್ಗಣ ಹಿಡಿಯೂದು ಯಾವಂಗ ಬೇಕಾಗೇದ’ ಎಂದು ಡೌಲಿನಿಂದ ಉತ್ತರಿಸಿ, ಜೆರ್ಸಿ ಸರಿಪಡಿಸಿಕೊಂಡು ಸೋಫಾ ಮೇಲೆ ಪವಡಿಸಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT