ಶನಿವಾರ, ಜುಲೈ 2, 2022
20 °C

ಚುರುಮುರಿ: ಮನೆ ಮನೆ ಕಥೆ

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

‘ಗುರೂ... ಇನ್ಮೇಲೆ ಸರ್ಕಾರಿ ನೌಕರರು ಆಫೀಸ್‌ಗೆ ಬರ್ತಿದ್ದಂಗೆ ತಮ್ಮ ಜೇಬಲ್ಲಿ ಎಷ್ಟು ರೊಕ್ಕದಾವೆ ಅಂತ ಎಣಿಸಿ ಬಾಗಲಲ್ಲೇ ಲೆಕ್ಕ ಬರೆಸ್ಬೇಕಂತೆ ಹೌದಾ?’ ತೆಪರೇಸಿಯನ್ನ ಗುಡ್ಡೆ ಕೇಳಿದ.

‘ಹೌದಂತೆ, ಲಂಚ ಹೊಡಿಯಾದು ತಡಿಯೋಕೆ ಗೌರ್ಮೆಂಟ್‌ನೋರು ಈ ರೂಲ್ಸ್ ಮಾಡಿದಾರಂತೆ...’

‘ನೀನೊಳ್ಳೆ, ಲಂಚನ ಆಫೀಸ್‌ನಾಗೇ ಹೊಡೀಬೇಕೇನು? ಸಂಜಿಮುಂದ ಕ್ಯಾಂಟೀನ್‌ನಾಗೆ ಇಸ್ಕಂಡ್ರಾತು, ಇಲ್ಲ ಮನಿಗೆ ಬಾ ಅಂದ್ರಾತು, ಇಲ್ಲ ರಾತ್ರಿ ಎಲ್ಲಾದ್ರು ಸಿಗು ಅಂದ್ರೆ ಮುಗೀತಪ...’ ಗುಡ್ಡೆ ನಕ್ಕ.

‘ದೊಡ್ಡವಲ್ಲಲೆ, ನೂರಿನ್ನೂರು ಟೇಬಲ್‌ನಲ್ಲೇ ಸೆಟ್ಲ್ ಆಗ್ತಾವಲ್ಲ, ಅವು ನಿಲ್ತಾವೆ ಅಂತ ಈ ರೂಲ್ಸು’.

‘ಓಕೆ, ಈಗ ನಮ್ ಜೇಬಲ್ಲಿ ಜಾಸ್ತಿ ರೊಕ್ಕ ಇದ್ವು ಅಂತ ಸುಳ್ಳೇ ನಾವೇ ಆಫೀಸ್ ಬುಕ್ಕಲ್ಲಿ ಬರೆದ್ರಾತು’.

‘ಯಾರಾದ್ರು ಬರ್ಕೊಳೋನು ಇದ್ರೆ?’

‘ಅವನಿಗೇ ಲಂಚ ಕೊಟ್ಟು, ಜಾಸ್ತಿ ಬರಿಯಲೇ ಅಂದ್ರಾತು’.

‘ನೀನೂ ಪಾಕಡ ಬಿಡಲೆ, ಮೊನ್ನಿ ಏನಾತು ಗೊತ್ತಾ? ಜುಗ್ಗ ನಮ್ ಕಡೆಮನಿ ಕೊಟ್ರ ಅದಾನಲ್ಲ, ಆಫೀಸ್‌ನಲ್ಲಿ ನನ್ ಹತ್ರ ಎಂಟುನೂರು ರುಪಾಯಿ ಅದಾವೆ ಬರ್ಕಳ್ರಿ ಅಂದನಂತೆ. ಎಣಿಸಿದಾಗ ಇದ್ದದ್ದು ಬರೀ ಐನೂರಂತೆ. ಅಯ್ಯೋ ನಿನ್ನಿ ಇದ್ದ ರೊಕ್ಕ ಎಲ್ಲೋದ್ವು, ನಾ ಎಲ್ಲೂ ಖರ್ಚು ಮಾಡಿಲ್ಲ ಅಂತ ಗೋಳಾಡಿದ್ನಂತೆ’.

‘ಸರಿ ಮುಂದ?’

‘ಆಫೀಸ್ ಬಾಸು ಅವನನ್ನ ಕರೆದು ‘ನಿನ್ ಜೇಬಿನಾಗಿದ್ದ ರೊಕ್ಕ ಎಲ್ಲೋದ್ವು ಅಂತ ನಂಗೊತ್ತು, ನಿನ್ ಹೆಂಡ್ತಿ ಎತ್ತಿರ್ತಾಳೆ ಹೋಗಿ ಕೇಳು ಅಂದ್ರಂತೆ’.

‘ಅಲೆ ಇವ್ನ, ಕೊಟ್ರನ ಹೆಂಡ್ತಿ ರೊಕ್ಕ ಎತ್ತಿದ್ದು ಅವನ ಬಾಸ್‌ಗೆ ಹೆಂಗ್ ಗೊತ್ತಾತಂತೆ?’

‘ಕೊಟ್ರನೂ ಅದ್ನೇ ಕೇಳಿದ್ನಂತೆ. ಅದ್ಕೆ ಬಾಸು, ಇದು ಮನೆ ಮನೆ ಕಥೆ ಕಣಯ್ಯ, ನನ್ ಹೆಂಡ್ತಿನೂ ಅದೇ ಮಾಡೋದು ಅಂದ್ರಂತೆ!’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.