ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಬಡವರು ಯಾರು?

Published 4 ಮಾರ್ಚ್ 2024, 23:45 IST
Last Updated 4 ಮಾರ್ಚ್ 2024, 23:45 IST
ಅಕ್ಷರ ಗಾತ್ರ

‘ಭಾರತದಲ್ಲಿ 25 ಕೋಟಿ ಬಡವರನ್ನ ಬಡತನದಿಂದ ಮ್ಯಾಲಕ್ಕೆ ತಂದುದವಿ ಅಂತ ಕೇಂದ್ರ ಸರ್ಕಾರ ಹೇಳಿಕ್ಯತಾ ಅದೆ! ಬಡತನ ಅನ್ನದ್ನ ಹ್ಯಂಗೆ ತೀರ್ಮಾನ ಮಾಡ್ತಾವ್ರೆ ಸಾ?’ ಅಂತ ಚಂದ್ರು ಕೇಳಿದ.

‘ಗ್ಯಾಸ್, ಶೌಚಾಲಯ, ನೀರು-ಕರಂಟು, ಮನೆ ತಗಂಡಿರ ನೀವು ಬಡವರಲ್ಲ!’ ಅಂತಂದ್ರೆ ಹ್ಯಂಗೆ ಸಾ? ಮಂತನಸ್ಥರು ಒಪ್ಪೋ ಮಾತ ಇದು?’ ಅಂತ ತುರೇಮಣೆಗೆ ಕೇಳಿದೆ.

‘ಅಲ್ಲ ಕನ್ರೋ ಬಡವರಿಗು-ಸಾವ್ಕಾರ
ರಿಗೂ ಸಾಮಾಜಿಕ, ಆರ್ಥಿಕ ಅಂತರವೇ ಜಾಸ್ತಿ ಅದಲ್ಲೋ?’ ತುರೇಮಣೆ ಪ್ರಶ್ನೆ ಮಾಡಿದರು.

‘ಸಮಾಜದಲ್ಲಿ ಬಡವರು- ಭಂಡರು ಅಂತ ಎರಡು ವರ್ಗ ಅದೆ ಸಾ. ಅಪೌಷ್ಟಿಕತೆ, ರಕ್ತಹೀನತೆ ಇರೋರು, ಕೈಲಿ ಕಾಸಿಲ್ದೋರು ನಿಜವಾದ ಬಡವರು. ಅಂಕೆ-ಶಂಕೆ ಇಲ್ಲದೆ ಕಾಸು ಮಾಡೋ ಭಂಡರಲ್ಲಿ ಕುಪೌಷ್ಟಿಕತೆ, ರಕ್ತದಾಹ ಜಾಸ್ತಿ ಇರುತ್ತೆ’ ಅಂತಂದೆ.

‘ಬೊಡ್ಡಿಹೈದ್ನೆ ಸ್ಯಾನೆ ಬುದುವಂತಾಗಿದ್ದೀಯ! ಭಂಡರ ವರ್ಗದಲ್ಲಿ ಯಾರ್‍ಯಾರು ಕುಂತವ್ರೆ ಹೇಳ್ಲಾ?’ ಅಂತ ಪ್ರಶ್ನೆ ಹಾಕಿದರು.

‘ಭಂಡರಲ್ಲಿ ದಿನಾ ಕಾಸು ಮಾಡೋ ಪುಡಿ ರೋಜುಗಾರ್ ಭಂಡರು, ಅಲಾಯಿದವಾಗಿ ಬಂದ ಕಾಸು ಉಡಾಯಿಸೊ ಮೋಜುಗಾರ ಭಂಡರು. ಮಿನಿಸ್ಟರು, ಎಂಎಲ್‍ಎ, ಎಂಪಿಯಂತಾ ಅಡವಾದ ಜಾಗಕ್ಕೆ ಕಾಸು ಕಟ್ಟಿ ಅಧಿಕಾರ ಹೊಡೆಯೋ ಜೂಜುಗಾರ ಭಂಡರು ಇರತರೆ’ ಅಂತಂದೆ.

‘ಭೇಷ್ ಕಲಾ. ಆಮೇಲೆ!’ ಅಂತ ತುರೇಮಣೆ ಬೆನ್ನು ತಟ್ಟಿದರು.

‘ಸಾ ಇಂತಾ ಭಂಡರು ಯಾವಾಗಲೂ ಬಿಪಿಎಲ್ ಅಂದ್ರೆ ಬಿಲೋ ಪ್ರಾಪರ್ಟಿ ಲಿಸ್ಟಲ್ಲೇ ಇರತರೆ. ತಮ್ಮ ಹೆಸರಲ್ಲಿ ಒಂದೂ ಕಾರು, ಬೈಕು, ಮನೆ ಇಲ್ಲ. ಬರೀ ಸಾಲವೇ ಅದೆ ಅಂತ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಕೊಡ್ತರೆ’ ಅಂತ ವಿವರಿಸಿದೆ.

‘ಇವರ ಹೆಂಡ್ರು, ಮಕ್ಕಳು, ಸೊಸೆಯರಿಗೆ ಮಾತ್ರ ಎಲೆಕ್ಷನ್ನಿಗೆ ನಿಲ್ಲೋ ಯೇಗ್ತೆ ಇರದು ಅಂತ್ಲೂ ಹೇಳು!’ ಅಂದು ಯಂಟಪ್ಪಣ್ಣ ಶರಾ ಬರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT