ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಬಿಪ್ ಬೈಗುಳ

Last Updated 17 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ನ್ಯೂಸ್ ಚಾನೆಲ್‍ನವರು ನಾಯಕರನ್ನು ಮುತ್ತಿಕೊಂಡರು. ‘ಸಾರ್, ಆ ಪಕ್ಷದವರು ನಿಮ್ಮನ್ನು ಬಿಪ್ ಬಿಪ್ ಎಂದು ಬೈದಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?’ ಕೇಳಿದರು.

‘ಆ ಪಕ್ಷದ ಬಿಪ್... ಬಿಪ್ ಮಕ್ಕಳಿಗೆ ಮಾಡಲು ಕೆಲ್ಸ ಇಲ್ಲ, ಅವರು ಸಂಸ್ಕೃತಿ- ಸಂಸ್ಕಾರವಿಲ್ಲದ ಅಯೋಗ್ಯರು...’ ನಾಯಕರು ಉರಿದುಬಿದ್ದರು.

‘ಮೊನ್ನೆ ನೀವು ಅವರಿಗೆ ಹತ್ತಾರು ಬಿಪ್ ಬೈಗುಳ ಬೈದಿರಲ್ಲಾ ಸಾರ್’.

‘ಬಿಡ್ತೀನಾ, ಬದುಕಿರುವವರನ್ನು ಬೇಕಾದ್ರೆ ಬೈಯಲಿ, ಸತ್ತಿರುವ ನಮ್ಮ ಪಕ್ಷದ ನಾಯಕರನ್ನು ಬೈದು ಮರಣೋತ್ತರ ಮಾನಹಾನಿ ಮಾಡಿದರೆ ಸುಮ್ಮನಿರಬೇಕೇನ್ರೀ? ಅವರ ಪಕ್ಷದ ಸತ್ತ ನಾಯಕರನ್ನು ಸಮಾಧಿಯಿಂದ ಎಳೆದು ಬೀದಿಗೆ ತರ್ತೀವಿ...’

‘ನೀವು ಬೈಗುಳ ಪರಾಕ್ರಮಿ ಸಾರ್, ನಿಮ್ಮ ಕರ್ಣಕಠೋರ ಬಿಪ್ ಬೈಗುಳಗಳಿಗೆ ಎದುರಾಳಿಗಳು ದಂಗಾಗಿಬಿಡ್ತಾರೆ’.

‘ಪಕ್ಷ ನನಗೆ ತಾಯಿ ಇದ್ದಂತೆ. ತಾಯಿ ತಂಟೆಗೆ ಬಂದರೆ ಸುಮ್ನೆ ಬಿಡೋಲ್ಲ’ ನಾಯಕರು ಗುಡುಗಿದರು.

‘ಸಾರ್ವಜನಿಕವಾಗಿ ಬಿಪ್ ಬೈಗುಳ ಬಳಸಿದರೆ ನಿಮ್ಮ ವ್ಯಕ್ತಿತ್ವಕ್ಕೆ, ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗೋದಿಲ್ವೇ ಸಾರ್?’

‘ಶತ್ರುಗಳನ್ನು ಸದೆಬಡಿಯಲು ನಮ್ಮ ಹತ್ರ ಕತ್ತಿ-ಗುರಾಣಿ ಇಲ್ಲ. ನಮಗೆ ನಾಲಿಗೆಯೇ ಅಸ್ತ್ರ...’

‘ಆದರೂ ಹಿತಕರವಾಗಿ ಬೈಯುವುದನ್ನು ಅಭ್ಯಾಸ ಮಾಡಿಕೊಳ್ಳಿ ಸಾರ್, ಬೈಗುಳಗಳನ್ನು ಟಿ.ವಿಯಲ್ಲಿ ನೇರ ಪ್ರಸಾರ ಮಾಡಲಾಗದೆ, ಬಿಪ್ ಸೌಂಡ್ ಬಳಸಬೇಕಾಗುತ್ತದೆ’.

‘ಸೋಶಿಯಲ್ ಮೀಡಿಯಾಗಳಲ್ಲಿ ಬಿಪ್ ಇಲ್ಲದೆ ನಮ್ಮ ಬೈಗುಳ ಪ್ರಸಾರವಾಗುತ್ತದಲ್ಲ, ಕುತೂಹಲವಿದ್ದವರು ಅಲ್ಲಿ ನೋಡಿಕೊಳ್ತಾರೆ ಬಿಡ್ರೀ...’

‘ಆದ್ರೆ ಬೈಗುಳದ ಪೂರ್ಣ ಕ್ರೆಡಿಟ್ ನಮಗೆ ಸಿಗೋಲ್ಲವಲ್ಲ ಸಾರ್...’

‘ನಾವು ಬೈದಾಡೋದು ನಿಮಗೆ ಕ್ರೆಡಿಟ್ ಏನ್ರೀ? ನಾವು ಬೈದದ್ದನ್ನು ಅವರಿಗೆ ಹೇಳಿ ಅವರಿಂದ ನಮ್ಮನ್ನು ಬೈಸ್ತೀರಿ, ಅವರು ಬೈದ್ರು ಅಂತ ನಮ್ಮ ಹತ್ರ ಬಂದು ನಮ್ಮಿಂದ ಅವರನ್ನು ಬೈಸ್ತೀರಿ. ನಿಮ್ಮದು ಇದೇ ಆಗೋಯ್ತಲ್ರೀ...’ ರೇಗಿದ ನಾಯಕರು ಕಾರು ಹತ್ತಿ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT