ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದುರೆ ಬಿಸಿನೆಸ್‌!

ಚುರುಮುರಿ
Last Updated 2 ಜುಲೈ 2019, 18:30 IST
ಅಕ್ಷರ ಗಾತ್ರ

‘ಥೂ ನಿನ್ ಜನ್ಮಕ್ಕೆ... ಸಾಕಷ್ಟು ದುಡ್ಡಿದ್ರೂ ಒಂದ್ ಬಿಸಿನೆಸ್ ಮಾಡೋಕಾಗ್ತಿಲ್ಲ ನಿನ್ ಕೈಲಿ.. ಎಲ್ಲಾದ್ರೂ ಕತ್ತೆ ಕಾಯೋಕ್ ಹೋಗು’ ಎಂದು ಅಪ್ಪ ಬೈತಿದ್ದಂತೆ ವಿಜಿ ಕಣ್ಣು ಕೆಂಪಾಯ್ತು.

‘ಕತ್ತೆ ಯಾಕೆ, ಕುದುರೇನೇ ಕಾಯ್ತೀನಿ, ಅವುಗಳನ್ನೇ ಕೊಂಡುಕೊಳ್ತೀನಿ’ ಎಂದು ಚಾಲೆಂಜ್ ಮಾಡಿದವನೇ ಸೀದಾ ರೇಸ್ ಕೋರ್ಸ್‌ಗೆ ಬಂದ ವಿಜಿ.

‘ಏ ದಡ್ಡ, ಇಲ್ಲಿಯ ಕುದುರೆಗಳು ಬರೀ ಓಡ್ತಾವೆ. ‘ಬಿಸಿನೆಸ್’ ಕುದುರೆ ಬೇಕಂದ್ರೆ ನೀ ವಿಧಾನಸೌಧಕ್ಕೇ ಹೋಗಬೇಕು’ ಎಂದು ಸಲಹೆ ಕೊಟ್ಟ ಜೊತೆಗಿದ್ದ ಗೆಳೆಯ ‘ಚಾಣಕ್ಯ’. ವಿಧಾನಸೌಧದ ಎದುರು ಕೆಂಪುಗೂಟದ ಕಾರುಗಳೆಂಬ ಖಾಲಿ ಸಾರೋಟುಗಳು ಮಾತ್ರ ಕಂಡವು. ಕುದುರೆಗಳೇ ಇಲ್ಲ! ‘ಅಣ್ಣಾ, ನಿಮಗೆ ಕುದುರೆಗಳು ಬೇಕಾದರೆ ರೆಸಾರ್ಟ್‌ಗೆ ಹೋಗಿ... ಹರಾಜು ನಡೀತಿರುತ್ತೆ’ ಎಂದ ವಾಚ್‌ಮನ್. ‘ಮಾನ ಹರಾಜಾ’ ಎಂದು ಕೇಳಬೇಕು ಎನಿಸಿದರೂ, ಸುಮ್ಮನೆ ರೆಸಾರ್ಟ್‌ ಕಡೆ ಕಾರು ತಿರುಗಿಸಿದ ವಿಜಿ.

‘ಹೋಗ್ಲಾ, ಇರ‍್ಲಾ... ಹೋಗ್ಲಾ, ಇರ‍್ಲಾ..’ ಎಂದುಕೊಳ್ಳುತ್ತಾ ಕುದುರೆಯೊಂದು ಕೆರೆ-ದಡ ಆಡುತ್ತಿತ್ತು. ‘ದುಡ್ಡು- ಅಧಿಕಾರ, ದುಡ್ಡು- ಅಧಿಕಾರ’ ಎನ್ನುತ್ತಾ ಮತ್ತೊಂದು ಕುದುರೆ ಎರಡು ಕಾಲುಗಳನ್ನೂ ಮೇಲೆತ್ತಿ ಕೆನೆಯುತ್ತಿತ್ತು! ವಿಜಿಗೆ ಆಶ್ಚರ್ಯ... ಟಿ.ವಿಯಲ್ಲಿ ನೋಡುತ್ತಿದ್ದ ಲೀಡರ್‌ಗಳೇ ಡೀಲರ್‌ಗಳಾಗಿದ್ದರು! ‘ಈ ಕುದುರೆಗಳಿಗೆ ಇಷ್ಟೇಕೆ ಡಿಮ್ಯಾಂಡು’ ಡೀಲರ್ ಒಬ್ಬನನ್ನು ವಿಜಿ ಕೇಳ್ದ.

‘ಇವೆಲ್ಲವೂ ಒಂದೇ ಟೀಮ್‌ನಲ್ಲಿದ್ದಿದ್ರೆ ಇವುಗಳನ್ನ ಕೇಳೋರೇ ಇರ್ತಿರಲಿಲ್ಲ.‌‌.. ಬೇರೆ ಟೀಮ್‌ನಲ್ಲಿವೆ. ಆದರೆ, ಕಪ್ ಗೆಲ್ಲೋಕೆ 113 ಕುದುರೆಗಳ ಟೀಂ ಮಾಡಬೇಕು. ಆ ಟೀಮ್‌ಗೆ ಇವುಗಳನ್ನ ಸೇರಿಸ್ಕೋಬೇಕಿದೆ. ಅದಕ್ಕೇ ಹುಲ್ಲು ತೋರಿಸಿ ಇಲ್ಲಿಗೆ ಕರ್ಕೊಂಡ್ ಬಂದಿದೀವಿ. ಇದಕ್ಕೆ ‘ಆಪರೇಷನ್ ಮಲ’ ಅಲ್ಲಲ್ಲ, ‘ಆಪರೇಷನ್ ಕಮಲ’ ಅಂತ ಹೆಸರಿಟ್ಟಿದೀವಿ’ ಎಂದ ಡೀಲರ್.

ಆ ಡೀಲರ್ ಹಂಗಂದ್ರೆ ಅತ್ತ, ಈ ಡೀಲರ್ ಹಿಂಗಂದ್ರೆ ಇತ್ತ ತಲೆ ಆಡಿಸುತ್ತಿದ್ದವು ಬೆಪ್ಪ ಕುದುರೆಗಳು. ‘ಥೋ... ಈ 420 ಕುದುರೆಗಳನ್ನು ನಂಬಿ ಬಿಸಿನೆಸ್ ಮಾಡುವುದಕ್ಕಿಂತ ನಮ್ಮಪ್ಪ ಹೇಳ್ದಂಗೆ ಕತ್ತೆ ಕಾಯೋದೇ ವಾಸಿ’ ಎಂದು ಕೊಳ್ಳುತ್ತಾ ಮನೆಯತ್ತ ಕಾರು ತಿರುಗಿಸಿದ ವಿಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT