ಶುಕ್ರವಾರ, ನವೆಂಬರ್ 22, 2019
20 °C

ಯಾನ– ಗುಣಗಾನ

Published:
Updated:
Prajavani

‘ಬಿಸಿಲು ಕಾಯ್ತಿದೆ ಅಂತ ಬಟ್ಟೆ ಒಗೆದು ಒಣಗಿಸಿ ಹತ್ತು ನಿಮಿಷವೂ ಆಗಿಲ್ಲ ಚಟಪಟ ಅಂತ ಮಳೆ, ಎದ್ನೋ ಬಿದ್ನೋ ಅಂತ ನೆನ್ಕೊಂಡೇ ಬಟ್ಟೆ ತೆಗೆದರೆ, ಹಿಂದೆಯೇ ಸುಡುಬಿಸಿಲು...’ ಎನ್ನುತ್ತಾ ಭುಸುಗುಟ್ಟುತ್ತಲೇ ಬಂದಳು ನನ್ನವಳು. ಅಂದರೆ ಮನೆಯೊಳಗೂ ವಾತಾವರಣ ತಂಪಾಗಿಲ್ಲ. ಏನಾಗಿರಬಹುದು ಎಂಬ ಹುಳ ತಲೆತಿನ್ನತೊಡಗಿತು. ಪುಟ್ಟಿ ನನ್ನ ರೆಸ್ಕ್ಯುಗೆ ಬಂದಳು. ‘ನಿನ್ನ ಬ್ಯಾಂಕ್‌ನೊಂದಿಗೆ ಅಮ್ಮನದು ವಿಲೀನವಾಗ್ತಿದೆಯಲ್ಲಪ್ಪಾ, ಖಾತೆಗಳು ಒಂದೇ ಬ್ಯಾಂಕ್‌ನಲ್ಲಿ ಅನ್ನುವುದೇ ಕ್ಯಾತೆ!’

‘ಓ, ಅರ್ಥವಾಯ್ತು, ಅವಳ ಬ್ಯಾಂಕ್ ಐಡೆಂಟಿಟಿ ಕಳ್ಕೊಂಡು ನನ್ನ ಬ್ಯಾಂಕ್ನೊಂದಿಗೆ ವಿಲೀನವಾಗ್ತಿರೋದು ಅವಳಿಗೆ ದುಃಖದ ಸಂಗತಿ, ಅಸಹನೀಯ’. ಪರವಾಗಿಲ್ಲ ಪರಿಹಾರ ಕಾಣಿಸಬಹುದು ಅನ್ನಿಸಿ ಸ್ವಲ್ಪ ಧೈರ್ಯ ಬಂತು.   

ಕಂಠಿಯು ನಾಲ್ಕೈದು ದಿನಗಳಿಂದ ಕಂಡಿರಲಿಲ್ಲವಾದ್ದರಿಂದ ಶೀತವೋ, ವಾತವೋ ನೋಡಿಬರೋಣವೆಂದು ಅವನ ಮನೆಗೆ ಹೊರಟೆ. ಸದ್ಯ ಮನೆಯಲ್ಲೇ ಇದ್ದ.

‘ಆಫೀಸಿನಿಂದ ಈಗ ತಾನೇ ಬಂದ್ಯೇನೋ. ಲೇಟಾಗಿ ಹೋಗಿ ಬೇಗ ಬಂದರೆ ರಜೆ ಕಡಿತ ಪಾಲಿಸಿ ನಿಮ್ಮಲ್ಲೂ ಬಂದಿರಬೇಕಲ್ಲ’ ಪ್ರಶ್ನಿಸಿದೆ.

‘ಹೌದು, ಆದರೆ ನಮಗೆ ಒಂದು ರೀತಿ ವರದಾನ. ಬಾಸ್ ರಜೆ ಕೊಡೋಕ್ಕೆ ಅಳ್ತಿದ್ದ, ಈಗ ಹೇಗೂ ಲೇಟ್ ಆಗುತ್ತೆ ರಜೆ ಮಾರ್ಕ್ ಮಾಡ್ಕೊಳ್ಳಿ ಅಂತ ನಾವೇ ತಿರುಗಿಬಿದ್ದಿದ್ದೀವಿ. ಹೀಗಾಗಿ ಎಲ್ಲ ಮಾಮೂಲಿನಂತೆ’ ಹಲ್ಕಿರಿದ.
ಅದೃಷ್ಟವೆಂದರೆ ಇವನದು, ಕೊಂಚ ಅಸೂಯೆಯಾಯಿತು. 

ಐದು ನಿಮಿಷಕ್ಕೆ, ಹಾಲು ಕಾಣಿಸದ ಬ್ಲ್ಯಾಕ್ ಕಾಫಿ ನನ್ನ ಮುಂದೆ ತಂದಿಟ್ಟ... ಒಂದೇ ಗುಟುಕಿಗೆ ಹೌಹಾರಿದೆ, ಕಹಿಕಷಾಯ...

‘ಅಡ್ಜಸ್ಟ್ ಮಾಡ್ಕೊ, ಶ್ರೀಮತಿ ಗರಂ ಆಗಿದ್ದಾಳೆ, ಪತ್ನಿ ಆಸೆ ಪೂರೈಸೋಕ್ಕೆ ಲಕ್ಷಗಟ್ಟಲೆ ಸುರಿದು ಹೆಲಿಕಾಪ್ಟರ್ ಯಾನ ಮಾಡಿಸಿದ ಪತಿರಾಯನ ಗುಣಗಾನ, ನನ್ನ ಮೇಲೆ ಗೊಣಗಾಟ’.

‘ಅಷ್ಟೇನಾ?  ಚಂದ್ರಯಾನ ಮಾಡಿಸ್ತೀನಿ ಅಂತ ಹೇಳಿ ಬೀಸೋ ದೊಣ್ಣೆಯಿಂದ ತಪ್ಪಿಸ್ಕೋ
ಬಾರದೇ?‌’ ಉಚಿತ ಸಲಹೆ ನೀಡಿದೆ.

‘ವ್ಹಾಟ್ ಆ್ಯನ್ ಐಡಿಯಾ, ನಡಿ, ದರ್ಶಿನಿಗೆ ಹೋಗೋಣ. ಕಾಫಿ ಜೊತೆ ಮಸಾಲೆ ಟ್ರೀಟ್’ ಎಂದ. ಕಾಫಿ ಕಪ್ ಅಲ್ಲೇ ಇಟ್ಟು ನಾನೂ ಮೇಲೆದ್ದೆ. 

ಪ್ರತಿಕ್ರಿಯಿಸಿ (+)