ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಎಲ್‌ ಟೂರ್ನಿ

Last Updated 18 ಜೂನ್ 2020, 19:31 IST
ಅಕ್ಷರ ಗಾತ್ರ

‘ಕೊರೊನಾ ಕಾಟ ಮುಂದುವರಿದರೆ ಕ್ರೀಡಾಂಗಣಗಳನ್ನು ಬಯಲು ಆಸ್ಪತ್ರೆ ಮಾಡಲಿದೆಯಂತೆ ಸರ್ಕಾರ...’ ಓದುತ್ತಿದ್ದ ನ್ಯೂಸ್ ಪೇಪರ್ ಮಡಿಸಿಟ್ಟು ಸುನಿ ಹೇಳಿದಳು.‌

‘ಮಾಡಲಿಬಿಡು, ಹೇಗೂ ಈಗ ಕ್ರೀಡಾಂಗಣಗಳಲ್ಲಿ ಕ್ರೀಡಾಕೂಟಗಳು ನಡೆಯುತ್ತಿಲ್ಲ, ಕೊರೊನಾವಾದರೂ ಆಡಿಕೊಳ್ಳಲಿ’ ಅಂದ ಗಿರಿ.

‘ಐಪಿಎಲ್ ಆಡಲೇಬೇಕು ಅಂತ ಲಾಕ್‍ಡೌನ್‍ನಲ್ಲಿ ಕ್ರಿಕೆಟ್ ಪ್ಲೇಯರ್ಸ್ ತಮ್ಮ ಮನೆ ಕಾಂಪೌಂಡಿನಲ್ಲಿ ಪ್ರ್ಯಾಕ್ಟೀಸ್ ಮಾಡಿ ಬೆವರು ಹರಿಸಿದ್ದು ವ್ಯರ್ಥವಾಗುತ್ತಲ್ಲಾರೀ’ ಸುಮಿಗೆ ನಿರಾಶೆ.

‘ಈ ಬಾರಿ ಐಪಿಎಲ್ ಬದಲು ಐಸಿಎಲ್ ಟೂರ್ನಿ ನಡೆಯುತ್ತಿದೆ, ನಿತ್ಯ ಬೌಂಡರಿ, ಸಿಕ್ಸರ್, ಸೆಂಚುರಿಗಳು ದಾಖಲಾಗುತ್ತಿವೆ’ ಅಂದ ಶಂಕ್ರಿ.

‘ಐಸಿಎಲ್ ಟೂರ್ನಿನಾ?!’

‘ಇಂಡಿಯನ್ ಕೊರೊನಾ ಲೀಗ್. ದೇಶದ ಎಲ್ಲಾ ಕಡೆ ಪಂದ್ಯಾವಳಿಗಳು ಶುರುವಾಗಿವೆ’.

ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್‌, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‍ರೈಸರ್ಸ್‌ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇಯರ್ಸ್‌, ಕೋಲ್ಕತ್ತ ನೈಟ್ ರೈಡರ್ಸ್‌ ತಂಡಗಳೂ ಟೂರ್ನಿಯಲ್ಲಿವೆಯಾ?’

‘ಐಸಿಎಲ್‍ನಲ್ಲಿ ಇದೇ ಹೆಸರಿನ ತಂಡಗಳಿವೆ. ಎಲ್ಲ ತಂಡಗಳೂ ಸೆಂಚುರಿ ಮೇಲೆ ಸೆಂಚುರಿ ಬಾರಿಸುತ್ತಲೇ ಇವೆ’.

‘ಹೌದಾ...?! ಯಾವ ತಂಡ ಮೊದಲ ಸ್ಥಾನದಲ್ಲಿದೆ?’

‘ಮುಂಬೈ ತಂಡ ಹೆಚ್ಚು ಅಂಕ ಗಳಿಸಿ ಮೊದಲ ಸ್ಥಾನದಲ್ಲಿದೆ. ಡೆಲ್ಲಿ, ಚೆನ್ನೈ, ಹೈದರಾಬಾದ್ ತಂಡಗಳು ತೀವ್ರ ಪೈಪೋಟಿ ನೀಡುತ್ತಿವೆ. ಬೆಂಗಳೂರು ತಂಡ ಈ ಬಾರಿಯೂ ಹಿಂದಿದೆ...’

‘ಕೊರೊನಾ ಸೋಂಕಿತರ ಸ್ಕೋರ್ ಹೇಳ್ತಿದ್ದೀರಾ? ಅಯ್ಯೋ, ಎಲ್ಲ ತಂಡಗಳೂ ವಿಪರೀತ ಸ್ಕೋರು ಮಾಡುತ್ತಲೇ ಇವೆ, ಯಾವ ತಂಡ ಎಲ್ಲಿ ನಿಲ್ಲುತ್ತದೋ ಗೊತ್ತಾಗುತ್ತಿಲ್ಲ’.

‘ಇದು ಗೆಲ್ಲುವ ಟೂರ್ನಿ ಅಲ್ಲ, ಇಲ್ಲಿ ಸೋಲಿಗೆ ಕಿಮ್ಮತ್ತು. ಯಾವ ತಂಡ ಸೋಲಲ್ಲಿ ಗೆಲುವು ದಾಖಲಿಸುವುದೋ ಎಂದು ತಿಳಿಯಲು ಟೂರ್ನಿ ಮುಗಿಯುವವರೆಗೂ ಕಾಯಬೇಕು...’ ಎಂದು ಗಿರಿ ಟಿ.ವಿ. ಆಫ್ ಮಾಡಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT