ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕಣ್ಣೀರ್ ಕಣ್ಣೀರ್!

Last Updated 29 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಕಣ್ಣಲ್ಲಿ ನೀರು ತುಂಬಿಕೊಂಡು ಹರಟೆಕಟ್ಟೆಗೆ ಬಂದ ತೆಪರೇಸಿ. ಎಲ್ಲರಿಗೂ ಆತಂಕ. ‘ಏನಾಯ್ತೋ? ಯಾಕೆ ಕಣ್ಣಲ್ಲಿ ನೀರು?’ ಗುಡ್ಡೆ ಕೇಳಿದ. ತೆಪರೇಸಿ ಮಾತಾಡಲಿಲ್ಲ.

‘ಯಾರಾದ್ರು ಬೈದ್ರೇನೋ, ಹೊಡೆದ್ರೇನೋ?’ ದುಬ್ಬೀರ ವಿಚಾರಿಸಿದ. ‘ಏಯ್, ನಮ್ ತೆಪರೇಸಿ ಮುಟ್ಟೋನು ಯಾವನದಾನ್ಲೆ? ಅವ್ನು ಪರ್ಸಿ ಪೈಕಿ ಪೈಲ್ವಾನ ಇದ್ದಂಗೆ’ ಕೊಟ್ರೇಶಿ ದುಬ್ಬೀರನ ಮಾತಿಗೆ ಆಕ್ಷೇಪಿಸಿದ.

ಗುಡ್ಡೆಗೆ ಸಿಟ್ಟು ಬಂತು ‘ಲೇಯ್ ತೆಪರ, ಹುಲಿಯಾ ತರ ಕಣ್ಣೀರು ತರಿಸಬಾರ್ದು, ಕುಮಾರಣ್ಣನ ತರ ಕಣ್ಣೀರು ಹಾಕಬಾರ್ದು, ರಾಜಾಹುಲಿ ತರ ಕಣ್ಣೀರು ಒರೆಸಬೇಕು ಕಣಲೆ’ ಅಂದ.

‘ಓ... ಇದು ನಮ್ಮ ಕಟೀಲ್ ಸಾಹೇಬ್ರ ಮಾತು. ಕಾಪಿ ಹೊಡೀಬೇಡ ಮಗನೆ, ಸ್ವಂತ ಮಾತಾಡು’ ದುಬ್ಬೀರ ನಕ್ಕ.

‘ನಮ್ಮ ರಾಜಕಾರಣಿಗಳಿಗೆ ಈ ಕಣ್ಣೀರು ಹಾಕೋದು ಒಂದು ಚಾಳಿ ಆಗೇತಪ. ಈಟೀಟುಕು ಅಳ್ತಾರೆ, ಯಾಕಂಗೆ?’

‘ಯಾಕೇಂದ್ರೆ? ಅದು ಅವರಿಷ್ಟ’ ಗುಡ್ಡೆ ಕಿಸಕ್ಕೆಂದ.

‘ಏಯ್, ಅವರಿಷ್ಟ ಅಂದ್ರೆ ಮನೇಲಿ ಕುತ್ಕಂಡು ಅಳಬೇಕು. ಟಿ.ವಿ.ಯೋರ ಮುಂದೆ ಯಾಕೆ ಅಳಬೇಕು? ಮೊದ್ಲೇ ಟಿ.ವಿ.ಯೋರು ಈ ರಾಜಕಾರಣಿ ಯಾಕೆ ಅತ್ತ, ಎಷ್ಟ್ ಅತ್ತ, ಯಾರನ್ನ ನೆನೆಸ್ಕಂಡು ಅತ್ತ, ಆ ರಹಸ್ಯ ನಾವು ಬಯಲು ಮಾಡ್ತೀವಿ ಅಂತ ಕುಯ್ತಾರೆ ಅದ್ಕೆ ಹೇಳಿದೆ’.

‘ಹೋಗ್ಲಿ ಬಿಡ್ರಲೆ, ಅವ್ರು ಒಂದ್ಸಲ ಅತ್ತು ಅಧಿಕಾರಕ್ಕೆ ಬರ್ತಾರೆ, ನಾವು ಒಂದ್ಸಲ ವೋಟ್ ಹಾಕಿ ಐದು ವರ್ಷ ಅಳ್ತೀವಿ. ಈಗ ನಮ್ಮ ತೆಪರೇಸಿ ಯಾಕೆ ಅತ್ತ ಅದನ್ನ ಕೇಳ್ರಿ’ ದುಬ್ಬೀರ ಟ್ರ್ಯಾಕಿಗೆ ಬಂದ.

‘ಅದನ್ನ ನಾನೇ ಹೇಳ್ತೀನಿ ಬಿಡ್ರಪ’ ಎಂದ ತೆಪರೇಸಿ, ‘ಮನೇಲಿ ಪಮ್ಮಿಗೆ ಪಕೋಡ ಮಾಡು ಅಂದೆ. ಈರುಳ್ಳಿ ಹೆಚ್ಚಿ ಕೊಡಿ ಅಂದ್ಲು. ಹೆಚ್ಚುವಾಗ ಕಣ್ಣೀರು ಬಂತಪ. ಅಷ್ಟಕ್ಕೇ ಎಷ್ಟೆಲ್ಲ ಮಾತಾಡ್ತೀರಲೆ’ ಎಂದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT