ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಹ್ಯಾಪಿ ಓಲ್ಡ್ ಇಯರ್

Last Updated 30 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

‘ಹ್ಯಾಪಿ ನ್ಯೂ ಇಯರ್ ಅಕ್ಕಾ...’ ಶುಭ ಕೋರಿದಳು ತರಕಾರಿ ತಾಯಮ್ಮ.

‘ಕೊರೊನಾ ಕಾಟದಿಂದಾಗಿ ಈ ಸಾರಿ ಹ್ಯಾಪಿ ‘ನೋ’ ಇಯರ್, ಪಾಪಿ ಓಲ್ಡ್ ಇಯರ್...’ ಬೇಸರದಿಂದ ಅನು ತರಕಾರಿ ಮಂಕರಿ ಇಳಿಸಿದಳು.

‘ನನಗಂತೂ ಓಲ್ಡ್ ಇಯರ್- 2020 ಹ್ಯಾಪಿಯಾಗೇ ಇತ್ತು ಅಕ್ಕಾ’.

‘ಕೊರೊನಾ ಹಾವಳಿಯಿಂದ ವ್ಯಾಪಾರ- ವ್ಯವಹಾರ, ಆದಾಯ ಇಲ್ಲದೆ ಜನ ಕಂಗೆಟ್ಟಿದ್ದಾರೆ, ಹಳೆ ವರ್ಷ ಆನಂದಮಯವಾಗಿತ್ತು ಅಂದವಳು ಈ ಜಗತ್ತಿನಲ್ಲಿ ನೀನೊಬ್ಬಳೇ...’

‘ನನ್ನ ತರಕಾರಿ ವ್ಯಾಪಾರಕ್ಕೆ ಕೊರೊನಾ ಅಡ್ಡಿಯಾಗಲಿಲ್ಲ, ಒಳ್ಳೇ ಲಾಭ ಮಾಡಿಕೊಂಡೆ’.

‘ಕಷ್ಟಕಾಲದಲ್ಲೂ ರೇಷನ್, ತರಕಾರಿ ಕೊಳ್ಳಲೇಬೇಕಲ್ಲ...’ ಎಂದು ತರಕಾರಿ ಆರಿಸಿಕೊಂಡಳು ಅನು.

‘ಅಷ್ಟೇ ಅಲ್ಲ, ಕೊರೊನಾ ನೆಪದಲ್ಲಿ ಮನೆ ಮುಂದೆಯೇ ಸಿಂಪಲ್ಲಾಗಿ ಮಗಳ ಮದುವೆ ಮಾಡಿಬಿಟ್ಟೆ. ಮುಂದಿನ ವಾರ ಮಗಳು ಹೆರಿಗೆಗೆ ಬರ್ತಿದ್ದಾಳೆ. ಕೊರೊನಾ ಕೃಪೆಯಿಂದ ನನ್ನ ಗಂಡ ಬದಲಾಗಿದ್ದಾನೆ. ಲಾಕ್‍ಡೌನ್‍ನಲ್ಲಿ ಎಣ್ಣೆ ಅಂಗಡಿ ಬಂದ್ ಆದಾಗಿನಿಂದ ಗಂಡ ಕುಡಿಯೋದನ್ನ ಬಿಟ್ಟಿದ್ದಾನೆ!’ ಖುಷಿಪಟ್ಟಳು ತಾಯಮ್ಮ.

‘ಹೌದೇ?!...’ ಎಂದು ತರಕಾರಿ ದುಡ್ಡು ಕೊಟ್ಟಳು.

‘ಅಷ್ಟೇ ಅಲ್ಲ, ಕುಡಿತದ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಹತ್ತಾರು ಜನರ ಕುಡಿತ ಬಿಡಿಸಿದ್ದಾನೆ’.

‘ವೆರಿಗುಡ್, ಆದರೂ ಕೊರೊನಾದಿಂದ ಇಡೀ ವರ್ಷ ಮಕ್ಕಳ ಎಜುಕೇಷನ್ ಹಾಳಾಯ್ತಲ್ಲ’.

‘ಇಲ್ಲ ಅಕ್ಕಾ, ಮನೆಯಲ್ಲೇ ಕೂತು ಅದೇನೋ ಆನ್‍ಲೈನ್‍ನಲ್ಲೇ ಕಲಿಯಬಹುದಂತೆ, ಮಗನಿಗೆ ಹೊಸ ಮೊಬೈಲ್ ಕೊಡಿಸಿದ್ದೀನಿ. ಮಗ ಎರಡ್ಹೊತ್ತೂ ಮೊಬೈಲ್‍ನಲ್ಲೇ ಮುಳುಗಿರ್ತಾನೆ’ ತಾಯಮ್ಮ ಆನಂದಪಟ್ಟಳು.

‘ಹುಷಾರು, ನಿನ್ನ ಮಗ ಮೊಬೈಲ್‍ನಲ್ಲಿ ಕಲಿಯಬಾರದನ್ನೆಲ್ಲಾ ಕಲಿತುಬಿಟ್ಟಾನು...’ ಎಂದು ತಾಯಮ್ಮನಿಗೆ ತರಕಾರಿ ಮಂಕರಿ ಹೊರಿಸಿದಳು ಅನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT