ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಪದವಿ ಪಲ್ಲಟ

Last Updated 20 ಜನವರಿ 2021, 2:37 IST
ಅಕ್ಷರ ಗಾತ್ರ

ಮಂತ್ರಿ ಪದವಿ ಸಿಗದೆ ಹತಾಶರಾಗಿದ್ದ ಶಾಸಕರು ಚೀರಾಡಿ, ಹಾರಾಡಿ ಟಿ.ವಿ ಚಾನೆಲ್‍ಗಳ ಟಿಆರ್‌ಪಿ, ಪಕ್ಷದ ನಾಯಕರ ಬಿ.ಪಿ ಏರಿಸಿ, ತಾವೂ ಏರಿಸಿಕೊಂಡಿದ್ದರು.

ನೊಂದ ಶಾಸಕರಿಗೆ ಸಾಂತ್ವನ ಹೇಳಲು ಅಭಿಮಾನಿ ಕಾರ್ಯಕರ್ತರು ಹಾರ-ತುರಾಯಿ ಹಿಡಿದು ಬಂದರು.

‘ಹಾರ ಹಾಕಿ ಅಭಿನಂದಿಸೋ ಸಂದರ್ಭನೇನ್ರೀ ಇದು?’ ಶಾಸಕರು ಸಿಟ್ಟಿಗೆದ್ದರು.

‘ಮಕ್ಕಳಿರುವ ಮನೆಗೆ, ನಾಯಕರ ಮನೆಗೆ ಬರಿಗೈಲಿ ಹೋಗಬಾರದು ಅಂತ ಹಾರ ತಂದೆವು’ ಅಂದರು.

‘ಹೆಣ ನೋಡಲು ಹೋಗುವವರೂ ಹಾರ ತಗೊಂಡು ಹೋಗ್ತಾರೆ...’ ಶಾಸಕರು ಕೋಪದಿಂದ ಗೊಣಗಿಕೊಂಡರು.

‘ನಿಮಗೆ ಮಂತ್ರಿ ಸ್ಥಾನ ತಪ್ಪಿದ್ದಕ್ಕೆ ನೋವಾಗಿದೆ ಸಾರ್’ ಕಣ್ಣು ಒರೆಸಿಕೊಂಡರು.

‘ಯೋಗ್ಯತೆ ಇದ್ದರೂ ಯೋಗ ಇರಬೇಕು...’ ನೊಂದುಕೊಂಡರು.

‘ಇನ್ಮೇಲಾದ್ರೂ ಯೋಗಾಭ್ಯಾಸ ಮಾಡಿ ಸಾರ್’.

‘ಆ ಯೋಗ ಅಲ್ವಲೇ, ಹಣೆಬರಹ ನೆಟ್ಟಗಿರಬೇಕು...’

‘ಮಂತ್ರಿ ಮಾಡಿ ಅಂತ ನಾವೆಲ್ಲಾ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಹೋರಾಟ ಮಾಡ್ತೀವಿ ಸಾರ್’ ಒಬ್ಬ ವೀರಾವೇಶ ಪ್ರದರ್ಶಿಸಿದ.

‘ಬೇಡ, ಅತೃಪ್ತ ಆಪ್ತ ಶಾಸಕರೆಲ್ಲಾ ಡೆಲ್ಲಿಗೆ ಹೋಗಿ, ನಾಯಕತ್ವ ಬದಲಾವಣೆಗೆ ಹೋರಾಟ ಮಾಡ್ತೀವಿ’ ಅಂದ್ರು ಶಾಸಕರು.

ಅಷ್ಟರಲ್ಲಿ ಪಿ.ಎ ಫೋನ್ ತಂದು, ‘ಸಾರ್ ವರಿಷ್ಠರ ಆಫೀಸ್‍ನಿಂದ ಫೋನು, ಮಂತ್ರಿ ಮಾಡಲಿಲ್ಲ ಅಂತ ನಾಯಕರನ್ನು ಬಾಯಿಗೆ ಬಂದಂತೆ ಬೈಯೋದನ್ನು ನಿಲ್ಲಿಸದಿದ್ದರೆ ಮುಂದಿನ ಚುನಾವಣೆಗೆ ಟಿಕೆಟ್ ಕೊಡಲ್ವಂತೆ’ ಎಂದು ಕಿವಿಯಲ್ಲಿ ಹೇಳಿದ. ಫೋನ್‍ನಲ್ಲಿ ಮಾತನಾಡಿದ ಶಾಸಕರು ಮಂಕಾದರು.

‘ಜನಸೇವೆಗೆ ಮಂತ್ರಿ ಆಗಬೇಕೆಂದೇನೂ ಇಲ್ಲ. ಪಕ್ಷ ನನಗೆ ತಾಯಿ ಇದ್ದಂತೆ, ಸಿ.ಎಂ ತಂದೆ ಇದ್ದಂತೆ. ಪಕ್ಷದ ಕಚೇರಿಯಲ್ಲಿ ಕಸ ಗುಡಿಸಿಕೊಂಡು ಪಕ್ಷದ ಕೆಲ್ಸ ಮಾಡ್ತೀನಿ, ನೀವು ಹೋಗ್ರಲಾ...’ ಎಂದು ಎಲ್ಲರನ್ನೂ ಕಳಿಸಿದ ಶಾಸಕರು ದುಃಖ ನುಂಗಿ ನೀರು ಕುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT