ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾತೋಂಕಾ ಭೂತಗಳು

Last Updated 31 ಮಾರ್ಚ್ 2021, 21:47 IST
ಅಕ್ಷರ ಗಾತ್ರ

ಇದಾನಸೌಧದಿಂದ ಬೇತಾಳನ್ನ ಕೆಳಕ್ಕಿಳಿಸಿ ಹೊತ್ತುಗ್ಯಂಡು ಹೊಂಟೆ. ‘ಬಡ್ಡಿಹೈದ್ನೆ, ಮೆಲ್ಲಗೆ ಇಳುಕ್ಲಾ. ಕೊರೊನಾ ಎರಡನೇ ಅಲೆ ಸುರುವಾಗ್ಯದಂತೆ. ನಾನಿನ್ನೂ ಟೆಸ್ಟೂ ಮಾಡ್ಸಿಲ್ಲ, ವ್ಯಾಕ್ಸೀನೂ ತಗಂಡಿಲ್ಲ!’ ಅಂತ ಮಾತು ಸುರು ಮಾಡ್ತು.

‘ಈವತ್ತು ಒಂದು ಕತೆ ಏಳ್ತಿನಿ ಕಲಾ. ರಾಜಾಹುಲಿಯ ರಾಜ್ಯಕ್ಕೆ ಕೊರೊನಾ ಮಾರಿ ಎರಡನೇ ಬಾರಿ ಬತ್ತಾವಳೆ ಅಂತ ಮಾಹಿತಿ ಸಿಕ್ತು. ಹೋದಸಲ ಮಾರಿಗೆ ಪೂಜೆ ಸಲ್ಲಿಸದ ಕಾರಣ ಆವಮ್ಮ ಸಿಟ್ಕಂಡು ಸೋಂಕು ಹೆಚ್ಚಿಸಿದರೆ ಕಷ್ಟಾಯ್ತದೆ ಅಂತ ಹೆದರಿದ ರಾಜಾಹುಲಿಯು ದೇವಿಗೆ ಪೂಜೆ ಮಾಡಿ ಅಡ್ಡಬಿದ್ದ. ಮಾರವ್ವ ‘ರಾಜಾಹುಲಿ, ನಾನು ಪ್ರಸನ್ನಳಾಗಿರುವೆ. ನಿನಗೇನು ವರ ಬೇಕು ಕೇಳು!’ ಅಂದಳು. ರಾಜಾಹುಲಿಯು ‘ತಾಯೇ ಹೋದ ಸಾರಿಯಂಗೆ ರಾಂಗಾಗಬ್ಯಾಡ, ಈ ಸಾರಿ ನನ್ನ ರಾಜ್ಯದಲ್ಲಿ ನೂರೇ ಜನಕ್ಕೆ ಸೋಂಕು ತರಬೇಕು’ ಎಂದನು. ಮಾರಿಯು ಅದಕ್ಕೆ ಒಪ್ಪಿಕೊಂಡಳು’.

ರಾಜಾಹುಲಿ ಎಚ್ಚರಿಕೆಯಿಂದ ಇರಿ ಅಂತ ಜನಕ್ಕೆ ಕೇಳಿಕೊಂಡನು. ಆದರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನಕ್ಕೆ ಸಾವಿರಗಟ್ಟಲೇ ಹೆಚ್ಚತೊಡಗಿತು. ಈಗ ಹೇಳು, ಮಾರಿಯು ಮಾತು ತಪ್ಪಿ ಸಾವಿರಾರು ಜನಕ್ಕೆ ಅಮರಿಕೊಂಡಿದ್ದು ಯಾಕೆ? ಲಸಿಕೆ ಪ್ರಯೋಜನಕ್ಕೆ ಬರಲಿಲ್ಲವೇ? ರಾಜಾಹುಲಿಯ ತಪ್ಪೇನು? ಲಾಕ್‍ಡೌನ್ ಫಿಕ್ಸಾ? ಏನಿರುತ್ತೆ-ಏನಿರಲ್ಲ? ಇದಕ್ಕೆ ಕಾರಣೀಭೂತರು ಯಾರು?’ ಅಂತ ಟೀವಿಯವರ ಥರ ಪ್ರಶ್ನೆ ಕೇಳಿತು. ನಾನು ಉತ್ತರ ಹೇಳಲೇಬೇಕಾಯ್ತು.

‘ಎಲಾ ಬೇತಾಳವೇ ಮಾರಿ ಸೋಂಕಿದ್ದು ನೂರೇ ಜನಕ್ಕೆ. ವಿದ್ಯಾವಂತರೇ ಮದುವೆ, ಜಾತ್ರೆ, ಧರಣಿ, ಮುಷ್ಕರಗಳಲ್ಲಿ ಅಂತರ ಕಾಪಾಡದೇ ಮಾಸ್ಕು ಹಾಕದೇ ಲಸಿಕೆ ತೆಗೆದುಕೊಳ್ಳದೇ ‘ಎಲ್ಲ್ಯದೆ ಕೊರೊನಾ?’ ಅಂತ ಧಿಮಾಕಲ್ಲಿ ಸೋಂಕು ಹಂಚಿದ್ದರು. ರಾಜಾಹುಲಿ ಮೃದುವಾಗಿ ಹೇಳಿದ್ದೇ ತಪ್ಪು! ನಿನ್ನಂತಾ ಲಾತೋಂಕಾ ಭೂತ್ ಬಾತೋಂಸೆ ನೈ ಮಾನತಾ. ಲಾತ ಕೊಟ್ರೇ ಸರಿ’ ಅಂದಾಗ ಬೆದರಿದ ಬೇತಾಳ ಮಕ್ಕೆ ಮಾಸ್ಕಾಕಿಕೊಂಡು ‘ಆಯ್ತು ಕಪ್ಪಾ, ನನ್ನಿಂದ ಡಿಸ್ಟೆನ್ಸ್ ಮೇಂಟೇನ್ ಮಾಡು’ ಅಂದು ಪರಾರಿಯಾಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT