ಗುರುವಾರ , ಸೆಪ್ಟೆಂಬರ್ 23, 2021
20 °C

ನಮ್ಮ ಒಲಿಂಪಿಕ್ಸ್

ಆನಂದ Updated:

ಅಕ್ಷರ ಗಾತ್ರ : | |

Prajavani

‘ಒಲಿಂಪಿಕ್ಸ್ ಹೀರೊಗಳಿಗೆ ಸರ್ಕಾರಗಳು ಘೋಷಿಸಿರುವ ನಗದು ಬಹುಮಾನ ಮುಂದಿನ ಒಲಿಂಪಿಕ್ಸ್ ಹೊತ್ತಿಗೆ ಅವರಿಗೆ ಸಿಗಬಹುದೇನು?’ ಎಂದು ಹೆಂಡತಿ ಕೇಳಿದಾಗ ಆಶ್ಚರ್ಯವಾಯಿತು.

‘ಫೈಲ್ ಪುಟ್‍ಅಪ್ ಆಗಬೇಕು, ವಿವಿಧ ಮಂದಿಯ ಸಹಿ ಬೀಳಬೇಕು, ಇಲಾಖೆಗೆ ಅನುದಾನ ಬಿಡುಗಡೆ ಆಗಿಲ್ಲ ಎಂದರೆ ಅದನ್ನು ಮಂಜೂರು ಮಾಡಿಸಿಕೊಳ್ಳಬೇಕು, ಎಷ್ಟು ಪ್ರೊಸೀಜರ್ಸ್‌ ಇದೆ. ಇದೇನು ಚೋಪ್ರಾ ಜಾವೆಲಿನ್ ಎಸೆದಷ್ಟು ಸುಲಭ ಅಂದು ಕೊಂಡಿರಾ? ಎಲ್ಲಾ ಹೇಗೋ ಮುಗಿ(ಸಿ)ದ ಮೇಲೆ ಮಂತ್ರಿಗಳ ಬಳಿ ಹೋಗಬೇಕು, ಚೆಕ್ ವಿತರಣೆ ಮಾಡಲು ಅವರು ಡೇಟ್ ಕೊಡಬೇಕು, ಅವರಿಗೆ ಸಾವಿರಾರು ಕೆಲಸಗಳಿರುತ್ತವೆ...’ ಎಲ್ಲ ವಿವರಣೆಯನ್ನೂ ಅವಳೇ ಕೊಡುತ್ತಿದ್ದಳು.

‘ಅಂದಹಾಗೆ ನಮ್ಮದೇ ಆದ ರಾಜಕೀಯ ಒಲಿಂಪಿಕ್ಸ್ ಇದ್ದರೆ ಯಾರು ಯಾರಿಗೆ ಚಿನ್ನ ಸಿಗಬಹುದು?’ ಎಂದು ಕೇಳಿದಳು. ‘ನೀನೇ ಹೇಳು’ ಎಂದೆ. ‘ಬ. ಬೊಮ್ಮಾಯಿ ಅವರಿಗೆ ಮಾರ್ಗದರ್ಶನ ಮಾಡಲಿರುವ ಬಿಎಸ್‍ವೈ ಅವರಿಗೆ ಕೋಚ್ ಅವಾರ್ಡ್. ಉಪ ಮುಖ್ಯಮಂತ್ರಿ ಆಗದೆ ಮುನಿಸಿಕೊಂಡಿದ್ದರೂ ಜನಸೇವೆ ಎಂಬ ಏಕೈಕ ಕಾರಣಕ್ಕೆ ಬರೀ ಮಂತ್ರಿ ಆಗಲು ಒಪ್ಪಿರುವವರಿಗೆ ಪದಕ ಕೊಡಲೇಬೇಕು. ಏನಂತೀರಿ?’

ನಾನು ಸುಮ್ಮನಿದ್ದೆ.

‘ಚೋಪ್ರಾನಂತೆ ಮೊದಲ ಜಿಗಿತದಲ್ಲೇ ದಾಖಲೆ ಮಾಡಿದ ಜ್ಞಾನೇಂದ್ರ ಮತ್ತು ಸುನಿಲ್ ಕುಮಾರ್‌ಗೂ ಸಿಗಬೇಕು. ‘ಏಕವಚನ ಪ್ರಯೋಗಪಟು’ ಎಂಬ ಅವಾರ್ಡ್ ಸಿದ್ದರಾಮಯ್ಯನವರಿಗೇ ಮೀಸಲು’ ಎಂದಳು.

‘ಒಂದೆರಡು ಸಮಾಧಾನಕರ ಬಹುಮಾನ ಗಳೂ ಇವೇರಿ’ ಎಂದಳು. ಹೇಳು ಎಂದೆ. ಕೇಳೋ ದಷ್ಟೇ ನನ್ನ ಕೆಲಸ. ‘ಎಲ್ಲರನ್ನೂ ಪಾಸ್ ಮಾಡಿಸಿ ತಾವು ಮಾತ್ರ ಹಾಗೇ ಉಳಿದುಕೊಂಡ ಸುರೇಶ್ ಕುಮಾರ್ ಮತ್ತು ಪಾಪ, ಏನೂ ಗಿಟ್ಟಿಸಿಕೊಳ್ಳದ ಮಾಜಿ ಸೂಪರ್ ಮುಖ್ಯಮಂತ್ರಿ ವಿಜಯೇಂದ್ರ ಅವರಿಗೆ ಕಣ್ಣೊರೆಸುವ ಬಹುಮಾನ ನೀಡಲೇ ಬೇಕು’ ಎಂದಳು. ಮುಗಿಯಿತು ಎಂದುಕೊಂಡೆ.

‘ಹಗರಣ ನಡೆಯುವುದಕ್ಕೆ ಮುಂಚೆಯೇ ‘ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ ಮಾಡುವೆ’ ಎಂದು ಹೆದರಿಸುವ ಎಚ್‍ಡಿಕೆಗೂ ಬಹುಮಾನ ಕೊಡಲೇಬೇಕ್ರಿ’ ಎಂದಳು.

‘ಕೊಡು’ ಎಂದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.