ಶುಕ್ರವಾರ, ಡಿಸೆಂಬರ್ 2, 2022
20 °C

ಚುರುಮುರಿ: ಕಾಲೆಳೆಯೋ ಕ್ವಶ್ಚನ್

ತುರುವೇಕೆರೆ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಹರಟೆಕಟ್ಟೇಲಿ ಮಾಮೂಲಿ ಪಟಾಲಂ ನೆರೆದಿತ್ತು. ‘ಲೇಯ್, ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ರ ಹೇಳುದ್ರೆ ಸಾಯಂಕಾಲ ನಾನ್ ಪಾರ್ಟಿ ಕೊಡುಸ್ತೀನಿ, ಇಲ್ಲ ಅಂದ್ರೆ ನೀವು ಕೊಡುಸ್ಬೇಕು’ ಎಂದ ಪರ್ಮೇಶಿ.

‘ಆಯ್ತು, ಅದೇನ್ ಮಹಾ ಬೇತಾಳ ಪ್ರಶ್ನೆನಾ? ಕೇಳೇಬಿಡು ನೋಡ್ತೀವಿ’ ಎಂದು ಎಲ್ಲಾ ಕಿವಿ ನೆಟ್ಟಗೆ ಮಾಡಿಕೊಂಡರು.

‘ಒದ್ದುಬಿಡ್ತೀನಿ ಅಂತ ಅವಾಗವಾಗ ಹೇಳೋರು ಯಾರು?’

‘ನಾವೇ ಭಾರತೀಯರು’ ಎಂದ ಕಲ್ಲೇಶಿ.

‘ಝಾಡಿಸಿ ಒದಿ ಅಂತ ಹಾಡು ಹೇಳಿರೋರು ಯಾರು?’

‘ಇನ್ಯಾರು? ನಮ್ಮ ಆಟೊರಾಜ ಶಂಕರನಾಗ್’ ಎಂದ ಭದ್ರ.

‘ವೆರಿಗುಡ್, ಬೇರೆಯವರ ಹತ್ತಿರ ಇರೋದನ್ನ ಏನಾದರೂ ಮಾಡಿ ಕಿತ್ಕೊಬೇಕು ಅನ್ನೋ ಆಸೆ ಇರೋದು ಯಾರಿಗೆ?’

‘ಆಫ್‍ಕೋರ್ಸ್, ನಮಗೇ’ ಒಪ್ಪಿಕೊಂಡ ಗುದ್ಲಿಂಗ.

‘ಯಾರಾದರೂ ಮುಂದೆ ಹೋಗ್ತಾರೆ ಅಂದ್ರೆ ತೊಡರುಗಾಲು ಹಾಕೋರು ಯಾರು?’

‘ಅನುಮಾನನೇ ಇಲ್ಲ, ನಾವೇನೆ!’

‘ಪದೇ ಪದೇ ತಪ್ಪು ಮಾಡಿ ಪೆನಾಲ್ಟಿ ಕಟ್ಟೋರು ಯಾರು?’

‘ಒಂದು ರೀತೀಲಿ ನಾವೇನೆ!’

‘ನಮ್ಮನ್ನ ಕಾರ್ನರ್ ಮಾಡಿದಾರೆ ಅಂತ ಹಳಹಳಿಸೋರು ಯಾರು?’

‘ನಾವೇ!’

‘ವ್ಯವಸ್ಥೆಯಲ್ಲಿ ಒದ್ ಆಡೋರು, ಪದೇ ಪದೇ ಅಲ್ಲಿಂದಿಲ್ಲಿಗೆ ಕಿಕ್ ಮಾಡ್ತಾರೆ ಅಂತ ಗೋಳಾಡೋದು ಯಾರು?’

‘ನಮ್ಮ ಅಧಿಕಾರಶಾಹಿ’.

‘ಸಿಕ್ಕಾಪಟ್ಟೆ ಗೋಲ್‍ಮಾಲ್ ಮಾಡೋರು ಯಾರು?’

‘ನಮ್ಮ ರಾಜಕೀಯದವರು!’

‘ಇಷ್ಟೆಲ್ಲಾ ಅರ್ಹತೆ ಇದ್ರೂ ನಾವ್ಯಾಕೆ ವಿಶ್ವಕಪ್ ಫುಟ್‍ಬಾಲ್ ಆಡಲ್ಲ?’

ಏನು ಹೇಳುವುದೋ ತೋಚದೆ ಎಲ್ಲಾ ಮುಖ ಮುಖ ನೋಡಿಕೊಂಡರು. ಪಾರ್ಟಿ ಕೊಡುಸ್ದಿದ್ರೆ ಪರ್ಮೇಶಿ ಫುಟ್‍ಬಾಲ್ ಆಡ್ಬಿಡ್ತಾನೆ ಅಂತ ಎಲ್ಲಾ ಹ್ಯಾಪ್‌ಮೋರೆ ಹಾಕಿಕೊಂಡು ಜೇಬಲ್ಲಿದ್ದ ದುಡ್ಡು ಮುಟ್ಟಿ ನೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.