ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಜಾರಿಬಿದ್ದ ಅನು

Published 30 ಮೇ 2024, 0:03 IST
Last Updated 30 ಮೇ 2024, 0:03 IST
ಅಕ್ಷರ ಗಾತ್ರ

ಅಂಗಡಿಯಿಂದ ತರಕಾರಿ ತರುವಾಗ ಅನು ಜಾರಿಬಿದ್ದಳು. ತರಕಾರಿಗಿಂತ ಹೆಂಡತಿ ಮುಖ್ಯ ಎಂದುಕೊಂಡು ಗಿರಿ, ಕೊಚ್ಚೆಯಲ್ಲಿ ಬಿದ್ದಿದ್ದ ತರಕಾರಿಯನ್ನು ಅಲ್ಲೇ ಬಿಟ್ಟು ಹೆಂಡತಿಯನ್ನು ಆಸ್ಪತ್ರೆಗೆ ಕರೆದೊಯ್ದ. ಇಂಜೆಕ್ಷನ್, ಮಾತ್ರೆ ಕೊಟ್ಟ ಡಾಕ್ಟರ್ ಬೆಡ್‍ರೆಸ್ಟ್‌ಗೆ ಸೂಚಿಸಿದರು. ಅಕ್ಕಪಕ್ಕದವರು ಬಂದು ಸುಮಿಗೆ ಸಾಂತ್ವನ ಹೇಳಿದರು.

‘ಗಂಡಂದಿರು ಕಡ್ಡಾಯವಾಗಿ ಅಡುಗೆ ಕಲಿಯಬೇಕು. ಹೆಂಡ್ತಿಗೆ ಕಾಯಿಲೆ, ಕೋಪ ಬಂದಾಗ ಅಡುಗೆ ಮಾಡಿ ಉಣ್ಣಲು ಅನುಕೂಲ’ ಎಂದು ನೆರೆಹೊರೆ ಹೆಂಗಸರು ಸಾಂಬಾರ್ ತಂದುಕೊಟ್ಟು ಗಿರಿಗೆ ಸಮಾಧಾನ ಹೇಳಿ ಹೋದರು.

ಮಾರನೇ ದಿನದಿಂದ ನೆಂಟರು-ಇಷ್ಟರು ಹಣ್ಣು, ಬನ್ನು ಹಿಡಿದು ಅನುವಿನ ಆರೋಗ್ಯ ವಿಚಾರಿಸಲು ಸಾಲುಗಟ್ಟಿ ಬಂದರು.

‘ಬ್ರೆಡ್ಡು, ಬಾಳೆಹಣ್ಣು ತರುವಷ್ಟು ದೊಡ್ಡ ಕಾಯಿಲೆ ಅಲ್ಲ, ಸೊಂಟ ಉಳುಕಿದೆ ಅಷ್ಟೇ’ ಅಂದಳು ಅನು.

ತಾನು ಎಲ್ಲಿ ಜಾರಿದೆ, ಹೇಗೆ ಜಾರಿದೆ, ಜಾರಿದ ಮೇಲೆ ಏನೇನಾಯಿತು ಅಂತ ಬಂದವರಿಗೆಲ್ಲಾ ಕಥೆ ಹೇಳೀಹೇಳಿ ಅನು ಆಯಾಸಗೊಂಡಳು.

ಮನೆಗೆ ಬಂದವರಿಗೆ ಹೋಟೆಲ್‍ನಿಂದ ಗಿರಿ ಊಟ, ತಿಂಡಿ ತರಿಸಿ ಅತಿಥಿ ಸತ್ಕಾರ ಮಾಡಿದ. ‘ಆಸ್ಪತ್ರೆ ಖರ್ಚಿಗಿಂತ, ನಿನ್ನ ಆರೋಗ್ಯ ವಿಚಾರಿಸಲು ಬಂದವರಿಗೆ ಮಾಡುವ ಆತಿಥ್ಯದ ಖರ್ಚೇ ಜಾಸ್ತಿಯಾಗ್ತಿದೆ’ ಅಂದ.

‘ಮಾಡಲೇಬೇಕೂರೀ...ಸಂಜೆ ನಮ್ಮ ಮಹಿಳಾ ಸಂಘದ 20-30 ಫ್ರೆಂಡ್ಸ್ ನನ್ನ ನೋಡಲು ಬರ್ತಿದ್ದಾರೆ, ಅವರಿಗೆಲ್ಲಾ ಮಸಾಲೆ ದೋಸೆ ಆರ್ಡರ್ ಮಾಡಿರಿ’ ಎಂದಳು.

‘ಸೊಂಟ ರಿಪೇರಿಯಾಗಿದೆ, ಆರೋಗ್ಯವಾಗಿದ್ದೇನೆ ಅಂತ ವಾಟ್ಸ್‌ಆ್ಯಪ್, ಫೇಸ್‍ಬುಕ್‍ಗೆ ಮಾಹಿತಿ ಹಂಚಿಬಿಡು. ಇನ್ಯಾರೂ ಬರೋದು ಬೇಡ...’

‘ಯಾಕ್ರೀ?’

‘ಮದ್ವೆ, ಗೃಹ ಪ್ರವೇಶದಲ್ಲಿ ಮುಯ್ಯಿ ಕೊಡುವಂತೆ, ಪೇಷೆಂಟ್ ನೋಡಲು ಬರುವವರು ಕವರ್‍ನಲ್ಲಿ ಕ್ಯಾಷ್ ಇಟ್ಟು ಮುಯ್ಯಿ ಕೊಡುವ ಪದ್ಧತಿ ನಮ್ಮಲ್ಲಿ ಇಲ್ಲವಲ್ಲಾ...!’ ಅಂದ ಗಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT