ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಬಸಣ್ಣನ ಇಕ್ಕಟ್ಟು

Last Updated 24 ಜನವರಿ 2022, 19:30 IST
ಅಕ್ಷರ ಗಾತ್ರ

ಬಸಣ್ಣನು ಕೊರೋನಾ, ಓಮಿಕ್ರಾನ್, ಡೆಲ್ಟಾ ಭೇತಾಳಗಳನ್ನು ಬಲಿ ಹಾಕಲು ಸಕ್ರಮಾದಿತ್ಯನಂತೆ ಮರ ಹತ್ತಿಳಿಯುತ್ತಾ ಮಂಡಿ ನೋವಿಂದ ಬಸವಳಿದಿದ್ದನು. ಬಸಣ್ಣನ ನೋಡುತ್ತಲೇ ವೈರಸ್ಸುಗಳು ಪಣ್ಣಂತ ನೆಗೆದು ಪರಾರಿಯಾಗುತ್ತಿದ್ದವು. ‘ರಾಜಾವುಲಿ ಕಾಲದಲ್ಲಿ ತಂದ ಆಕ್ಸಿಜನ್, ಬೆಡ್, ವೆಂಟಿಲೇಟರ್ ಒಂದ್ನೂ ಕಾಣೆ! ಯಾರು ಹೊತ್ಕೋದ್ರೋ?! ತಜ್ಞರು ಕೊರೋನಾ ಭೇತಾಳವು ವ್ಯಾಲೆಂಟೈನ್ ದಿನದಗಂಟಾ ಇದ್ದು ಹೋಯ್ತದೆ ಎಂದು ಭವಿಷ್ಯ ಹೇಳವ್ರೆ, ಅಲ್ಲೀಗಂಟಾ ಏನು ಮಾಡದು? ಬ್ರಿಟನ್ನಲ್ಲಿ ಎಲ್ಲ ಓಪನ್ ಬುಟ್ಟವ್ರಂತೆ. ಫೋನು ಮಾಡಿ ಯಂಗೆ, ಯಾಥರ ಅಂತ ತಿಳ್ಕಬಕು!’ ಎಂದು ಚರ್ಚರಿತಗೊಂಡನು.

‘ಪಕ್ಷದಲ್ಲಿ ನನ್ನ ನೋಡಿ ಉರುಕಳೋರು ಭಾಳ ಆಗ್ಯವರೆ. ‘ಮುಖ್ಯಮಂತ್ರಿ ರೇಸಲ್ಲಿ ನಾನಿಲ್ಲ, ಮುಂದ್ಲ ಸಾರಿಗೂ ಅವರೇ ಮುಖ್ಯಮಂತ್ರಿ, ನನಗೇನೋ ಸಚಿವ ಸ್ಥಾನದ ಮ್ಯಾಲೆ ಬಯಕೆಯಾಗಿಲ್ಲ’ ಅಂತೆಲ್ಲಾ ನುಲಿತಾ ಭಯದ್ರಸ ಹುಟ್ಟಿಸ್ತಾವ್ರೆ. ಎಲ್ಲಾರೂ ಮಂತ್ರಿಯಾಗಬಕಂತೆ, ಅಡವಾಗಿರ ಖಾತೇನೇ ಬೇಕಂತೆ! ಅವರು ಕೊಡಂಗಿಲ್ಲ ಇವರು ಬುಡಂಗಿಲ್ಲ. ಅದಿರ‍್ಲಿ ಅರಗನ್ನ ನೋಡ್ರಿ, ‘ನಾನೇನು ಓದಿಕ್ಯಂಡಿಲ್ಲ. ಆದ್ರೂ ಸಚಿವುನ್ನ ಮಾಡವ್ರೆ’ ಅಂದ್ಕಂಡು ಡಲ್ಲಾಯ್ತಾವನೆ! ಇದು ಕಂಡೇ ಪೋಲೀಸನೇ ಕಳ್ಳತನ ಮಾಡ್ಸಕೆ ಸುರು ಮಾಡ್ಯವುನೆ. ಈಗ ನಮ್ಮನೆ ತಾವ್ಲೇ ಡ್ರಗ್ಸ್ ಮಾರ್ತಾವರಂತೆ! ರಾಜಾವುಲಿ ಇವುರುನ್ನೆಲ್ಲಾ ಯಂಗೆ ನಿಭಾಯಿಸ್ತಿದ್ರೋ ತಿಳ್ಕಬಕು. ಕೇಳಕೋದ್ರೆ ಚಿಕ್ಕೊನ್ನ ಮಂತ್ರಿ ಮಾಡಿಲ್ಲ ಅಂತ ಸಿಟ್ಕತರೇನೋ!’ ಎಂಬ ಯೋಚನೆಯಲ್ಲಿ ತಬ್ಬುಲಿಯಾದನು.

‘ನೀರಾವರಿ ಯೋಜನೆಗಳ ಹೆಸರಲ್ಲಿ ದುಡ್ಡು ಹೊಡೆದದ್ದೇ ಆಯ್ತು! ನೀರೇ ಬರಲಿಲ್ಲ! ಜನಪ್ರತಿನಿಧಿಗಳಿಗೆ ಕೆಪಿಎಸ್‍ಸಿ, ಬಿಬಿಎಂಪಿ, ಬಿಡಿಎಗಳಿಗೆ ಬೆಂಕಿ ಹಾಕಿ ಮೈಬೆಚ್ಚಗೆ ಮಾಡಿಕ್ಯಳದೇ ಕ್ಯಾಮೆ ಆಗ್ಯದೆ! ಡಿಕೆಶಿ, ಸಿದ್ದಣ್ಣ ಕೇಮೆಘಾಟು ಎಬ್ಬಿಸಿ ಉಸಿರುಗಟ್ಟಿಸಿದ್ರು. ಕುಮ್ಮಿ ಸುಮ್ಮನೆ ಯಕ್ಷಪ್ರಶ್ನೆ ಹಾಕ್ತಾ ಕೂತದೆ. ಕೊನೇಗೆ ಜನದ ತಲೆ ಮೇಲೆ ಎಲ್ಲಾ ಹಾಕಿ ಕೆಟ್ಟೋರನ್ನ ಮಾಡ್ತರೆ!’ ಎಂದು ನಿಟ್ಟುಸಿರು ಬಿಡುತ್ತಾ ನಿದ್ರೆ ಬರದೇ ಹೊರಳು ಸೇವೆ ಮಾಡುತ್ತಿದ್ದನು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT