ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಭಾರತ್ ಹಲ್ವಾ!

Published 8 ಫೆಬ್ರುವರಿ 2024, 18:51 IST
Last Updated 8 ಫೆಬ್ರುವರಿ 2024, 18:51 IST
ಅಕ್ಷರ ಗಾತ್ರ

‘ಮಂಜಮ್ಮ, ತಿಂಡಿ ಏನೈತೆ?’ ಗುಡ್ಡೆ ಕೇಳಿದ.

‘ತಿಂಡಿನಾ? ಸ್ಪೆಷಲ್ಲು... ಭಾರತ್ ಅಕ್ಕಿ ಇಡ್ಲಿ, ಭಾರತ್ ದೋಸೆ, ಭಾರತ್ ಚಿತ್ರಾನ್ನ...’ ಮಂಜಮ್ಮನ ಮುಖದಲ್ಲಿ ಖುಷಿ.

‘ಯಾಕೆ ಇಂಡಿಯಾ ಇಡ್ಲಿ, ದೋಸೆ ಇಲ್ವಾ?’

‘ಅದ್ನ ನೀವು ಬೇರೆ ದೇಶ ಕೇಳ್ತಿದೀರಲ್ಲ, ಅಲ್ಲಿ ತಿನ್ಕಳಿ...’

ಗುಡ್ಡೆಗೆ ಸಿಟ್ಟು ಬಂತು. ‘ಮಂಜಮ್ಮ ನೆಟ್ಟಗೆ ಮಾತಾಡು, ನಾವೆಲ್ಲಿ ಬೇರೆ ದೇಶ ಕೇಳಿದ್ವಿ? ನಮ್ ತೆರಿಗೆ ರೊಕ್ಕ ನಮಿಗೆ ಕೊಡದಿದ್ಕೆ ಹಂಗಂದ್ವಿ. ಈಗ ಅಪ್ಪ ಆಸ್ತಿ ಕೊಡದಿದ್ರೆ ಮಗ ಬೇರೆ ಮನಿ ಮಾಡ್ತೀನಿ ಅನ್ನಲ್ವ, ಹಂಗೆ’ ಎಂದ.

‘ಏನೇ ಆಗ್ಲಿ, ದೇಶ ಒಡೆಯೋ ಮಾತಾಡೋದು ತಪ್ಪು. ಹೋಗ್ಲಿ, ಭಾರತ್ ಹಲ್ವಾ ಏನರೆ ಮಾಡಿದೀಯ ಮಂಜಮ್ಮ?’ ಕೊಟ್ರೇಶಿ ತಿಪ್ಪೆ ಸಾರಿಸಿದ.

‘ಹಲ್ವಾ ಹೋದ್ಸಲಾನೇ ಕೊಟ್ರಲ್ಲೋ ಕೊಟ್ರಾ. ನಮ್ ಭದ್ರಾ ಮೇಲ್ದಂಡೆಗೆ 5,300 ಕೋಟಿ ಅಂತ ನಿರ್ಮಲಕ್ಕ ಹೇಳಿ ವರ್ಷಾತು, ನಯಾಪೈಸೆ ಬರ್ಲಿಲ್ಲ’ ಗುಡ್ಡೆ ನಕ್ಕ.

‘ಮತ್ತೆ ನಮ್ ಸರ್ಕಾರ ಬರುತ್ತೆ, ಕೊಡ್ತಾರೆ ತಗಾ, ನೀನು ನನ್ ಉದ್ರಿ ಬಾಕಿನೇ ವರ್ಷದಿಂದ ತೀರ್ಸಿಲ್ಲ, ಇನ್ನು ಕೋಟಿಗಟ್ಲೆ ರೊಕ್ಕ ಪಟ್ ಅಂತ ಬಂದ್ಬಿಡುತ್ತಾ?’ ಮಂಜಮ್ಮ ವಾದಿಸಿದಳು.

‘ಬಿಡು ಮಂಜಮ್ಮ, ಈಗ ಈ ಭಾರತ್ ಅಕ್ಕಿ ಹೆಂಗೈತೆ? ಹುಳ ಗಿಳ ಆಗಿಲ್ಲ ತಾನೆ?’ ದುಬ್ಬೀರ ಮಾತು ಬದಲಿಸಿದ.

‘ನಮ್ ಸಿದ್ರಾಮಣ್ಣ ಜಾಸ್ತಿ ದುಡ್ಡಿಗೆ ಅಕ್ಕಿ ಕೇಳಿದಾಗ ಕೊಡ್ಲಿಲ್ಲ, ಈಗ ಗೋಡನ್‌ನಲ್ಲಿ ಮುಗ್ಗಲು ಹಿಡಿದಿರ್ಬೇಕು, ಅದ್ಕೆ ಕಮ್ಮಿ ರೇಟಿಗೆ ಕೊಡ್ತದಾರೆ’ ಗುಡ್ಡೆ ಪಟ್ಟು ಬಿಡಲಿಲ್ಲ.

‘ಲೇ ಗುಡ್ಡೆ, ದೇಶದ ಬಗ್ಗೆ ಮಾತಾಡಿದ್ರೆ ಸುಮ್ನಿರಲ್ಲ ನೋಡು’ ಮಂಜಮ್ಮ ರಾಂಗಾದಳು.

‘ಅಲೆ ಇವ್ನ, ನಾನೆಲ್ಲಿ ದೇಶದ ಬಗ್ಗೆ ಮಾತಾಡಿದೆ?’

‘ಮತ್ತೆ? ಈ ಅಕ್ಕಿ ಯಾವುದು? ಭಾರತ್ ಅಕ್ಕಿ. ಅದ್ರಲ್ಲಿ ದೇಶ ಇಲ್ವಾ?’

ಗುಡ್ಡೆ ಪಿಟಿಕ್ಕನ್ನಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT