ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಸ್ಕೂಲ್ ಸಿಲೆಬಸ್

ಚುರುಮುರಿ
Published 21 ಫೆಬ್ರುವರಿ 2024, 19:19 IST
Last Updated 21 ಫೆಬ್ರುವರಿ 2024, 19:19 IST
ಅಕ್ಷರ ಗಾತ್ರ

‘ಶಾಲೆ ಮಕ್ಕಳ ಗಲಾಟೆಯಿಂದ ನಮಗೆ ತೊಂದರೆ ಆಗುತ್ತೆ, ಶಾಲೆಯಲ್ಲಿ ನಿಶ್ಶಬ್ದ ಕಾಪಾಡಿಕೊಳ್ಳಿ ಅಂತ ನೆರೆಹೊರೆ ನಿವಾಸಿಗಳು ಕಂಪ್ಲೇಂಟ್ ಮಾಡಿದ್ದಾರೆ. ಶಾಲೆಯಲ್ಲಿ ಕನ್ನಡ ಕಡೆಗಣಿಸ್ತೀರಿ ಅಂತ ಗುಂಪೊಂದು ಬಂದು ಶಾಲೆಯ ಇಂಗ್ಲಿಷ್ ಬೋರ್ಡ್ ಕಿತ್ತುಕೊಂಡು ಹೋಯ್ತು...’ ಚೇರ್ಮನ್‍ಗೆ ವರದಿ ನೀಡಿದರು ಶಾಲೆಯ ಹೆಡ್‌ ಮಿಸ್.

‘ದಿನಾ ಒಂದೊಂದು ರಗಳೆ ಆಗ್ತಿದೆಯಲ್ರೀ’ ಚೇರ್ಮನ್ ಬೇಸರಗೊಂಡರು.

‘ಮಕ್ಕಳು ಗಲಾಟೆ ಮಾಡಿದರೆ, ಹೋಂವರ್ಕ್ ಮಾಡದಿದ್ದರೆ ಟೀಚರ್‌ಗಳು ಬೈಯಬಾರದು, ಬೆಂಚ್ ಮೇಲೆ ನಿಲ್ಲಿಸಿ ಅವಮಾನ ಮಾಡಬಾರದು ಎಂದು ಕೆಲವು ಪೇರೆಂಟ್ಸ್ ತಾಕೀತು ಮಾಡಿದ್ದಾರೆ’.

‘ಮಕ್ಕಳು ಏನೇ ಮಾಡಿದ್ರೂ ಟೀಚರ್‌ಗಳು ತೆಪ್ಪಗಿರಿ, ಇಲ್ಲಾಂದ್ರೆ ಶಾಲೆ ನಡೆಸಲಾಗೋಲ್ಲ’.

‘ಟೀಚರ್ ಮಾಡಿದ ಜಾತಿ ಅವಹೇಳನ ಪ್ರಕರಣ ಗಂಭೀರವಾಗಿದೆಯಂತೆ. ಶಾಲೆಯ ಬಂದೋಬಸ್ತಿಗೆ ಪೊಲೀಸರು ಬರ್ತಾರೆ ಅಂತ ಇನ್‌ಸ್ಪೆಕ್ಟರ್ ಫೋನ್ ಮಾಡಿದ್ರು ಸಾರ್’.

‘ಪೊಲೀಸರ ಕಾವಲಿನಲ್ಲಿ ಶಾಲೆ ನಡೆಸಲು ಆಗುತ್ತೇನ್ರೀ? ಪೊಲೀಸರು ಲಾಠಿ ಹಿಡಿದು ನಿಂತರೆ ಮಕ್ಕಳು ಶಾಲೆಗೆ ಬರಲು ಹೆದರುವುದಿಲ್ಲವೇನ್ರೀ?’

‘ಮಾನವರೆಲ್ಲಾ ಒಂದೇ, ಮಾನವ ಧರ್ಮ ಒಂದೇ ಎಂದು ಆ ಟೀಚರ್ ಮಹನೀಯರ ನೀತಿ ಪಾಠ ಹೇಳಿದ್ದರು ಸಾರ್’.

‘ಆ ಮಹನೀಯ ಯಾವ ಜಾತಿಯಲ್ಲಿ ಹುಟ್ಟಿದ್ದರು, ಅವರ ಆದರ್ಶಗಳನ್ನು ಉಳಿದ ಜಾತಿಯವರು ಸಹಿಸಿಕೊಳ್ತಾರಾ ಅನ್ನುವ ತಿಳಿವಳಿಕೆ ಟೀಚರ್‌ಗೆ ಇರಬೇಕಾಗಿತ್ತು’.

‘ಇನ್ಮೇಲೆ ಶಾಲೆಯಲ್ಲಿ ನೀತಿ, ಆದರ್ಶದ ಬೋಧನೆ ಮಾಡಬೇಡಿ ಅಂತ ಟೀಚರ್‌ಗಳಿಗೆ ಸೂಚನೆ ನೀಡಿದ್ದೇನೆ. ಮಕ್ಕಳಿಗೆ ಒಳ್ಳೆಯ ನೀತಿ, ನಡವಳಿಕೆ ಕಲಿಸಬೇಕೆನಿಸಿದರೆ ಪೋಷಕರು ಮನೆಯಲ್ಲಿ ಕಲಿಸಿಕೊಳ್ಳಲಿ’.

‘ಹೌದು, ನಮಗೆ ಅದರ ಉಸಾಬರಿ ಬೇಡ. ದೇವರು, ಜಾತಿ, ಧರ್ಮದಂತಹ ಸೆನ್ಸಿಟಿವ್ ವಿಚಾರಗಳಿಲ್ಲದ ಸ್ಕೂಲ್ ಸಿಲೆಬಸ್ ಸಿದ್ಧಮಾಡಿದ್ದೇನೆ, ಇದನ್ನು ಅಳವಡಿಸಿಕೊಳ್ಳಿ’ ಎಂದು ಚೇರ್ಮನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT