ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಏಕವೇ ಮಂತ್ರ!

Last Updated 27 ಜೂನ್ 2022, 3:33 IST
ಅಕ್ಷರ ಗಾತ್ರ

‘ಸತ್ಯಕ್ಕೇ ಜಯ, ಮೋದಿಗೇ ಜಯ’ ಎಂದು ಬೆಕ್ಕಣ್ಣ ರಾಗವಾಗಿ ಹಾಡುತ್ತಿತ್ತು.

‘ಬೆಳ್ಬೆಳಗ್ಗೆ ಏನು ರಾಗ ತೆಗೆದೀಯಲೇ’ ಅಂತ ಬೈದರೆ, ‘ನಮ್ಮ ಮೋದಿಮಾಮಂಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ಕೊಟ್ಟೈತಿ, ಗೊತ್ತೈತಿಲ್ಲೋ... ಪಾಪ... ಹದಿನೇಳ್ ವರ್ಷದಿಂದ ಸುಳ್ ಆರೋಪ ಸಹಿಸಿಕೆಂಡು ಎಷ್ಟು ಸಂಕಟಪಟ್ಟಾರೆ’ ಎಂದು ಕಣ್ಣೊರೆಸಿಕೊಂಡಿತು.

ಮತ್ತೆ ತುಸುಹೊತ್ತಿಗೆ ‘ಸತ್ಯಕ್ಕೇ ಜಯ, ಶಿಂಧೆಗೇ ಜಯ’ ಎಂದು ಹಾಡತೊಡಗಿತು.

‘ಶಿಂಧೆಗೇ ಜಯ ಅಷ್ಟೇ ಎದಕ್ಕ, ಆಪರೇಶನ್ ಕಮಲಕ್ಕೇ ಜಯ ಅಂತನೂ ಜೋಡಿಸಿಕೊಂಡು ಹಾಡು’ ಎಂದು ನಾನು ಕಿಚಾಯಿಸಿದೆ.

‘ಹಂಗೆ ಸೇರಿಸಿಕೊಂಡು ಹಾಡಬೇಕಂದ್ರ ಭಾಳ ಅದಾವು. ಚಕ್ರತೀರ್ಥರಿಗೆ ಜಯ, ನಲ್ವತ್ತು ಪರ್ಸೆಂಟಿಗೆ ಜಯ, ಬುಲ್ಡೋಜರ್‍ರಿಗೆ ಜಯ... ಪಟ್ಟಿ ಉದ್ದ ಐತಿ. ಹಿಂಗಾಗಿ ಎಲ್ಲಿಂದ ಶುರುಮಾಡಿ, ಎಲ್ಲಿಗೆ ನಿಲ್ಲಿಸಬೇಕಂತ ತಿಳಿಯಂಗಿಲ್ಲ’ ಎಂದು ಯೋಚನಾಮಗ್ನವಾಗಿ ಹೇಳಿತು.

‘ಹೋಗಲಿಬಿಡು... ದೊಡ್ಡೋರ ಮಾತು ನಮಗ್ಯಾಕ, ನಮ್ಮ ಚಿಂತೆಯೇ ನಮಗೆ ಹಾಸಲುಂಟು ಹೊದೆಯಲುಂಟು’ ಎಂದು ಒಣವೇದಾಂತವನ್ನೂ ಹೊಸೆಯಿತು.

‘ನಿನಗೇನ್ ಚಿಂತಿ... ನೀನೇನ್ ದುಡಿಬೇಕಾ, ದುಃಖ ಪಡಬೇಕಾ? ದುಡಿಯೋಳು ನಾನು, ಕುಂತು ತಿನ್ನೂದು ನೀನು’ ಎಂದು ನಾನು ಬೈದರೆ, ಈ ಕಿವಿಯಲ್ಲಿ ಕೇಳಿ, ಆ ಕಿವಿಯಲ್ಲಿ ಬಿಟ್ಟು, ‘ಆಪರೇಶನ್ ಕಮಲ ತಡೀಬೇಕಂದ್ರ ಒಂದೇ ಪರಿಹಾರ ಐತಿ...’ ಎಂದು ಮಹಾಜ್ಞಾನಿಯ ಹಾಗೆ ಹೇಳಿತು.

‘ದೇಶದಾಗಿರೋ ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು, ಒಟ್ಟು ಎಲ್ಲಾ ಪಕ್ಷಗಳನ್ನು ಬ್ಯಾನ್ ಮಾಡಿ, ಎಲ್ಲಾ ಥರದ ವಿರೋಧಿಗಳನ್ನು, ಪ್ರಶ್ನೆ ಮಾಡೋರನ್ನು ರಾಷ್ಟ್ರದ್ರೋಹಿಗಳು,ಭಯೋತ್ಪಾದಕರು ಅಂತ್ಹೇಳಿ ಒಂದು ಪ್ರತ್ಯೇಕ ಜೈಲಿನೊಳಗೆ ತಳ್ಳಬೇಕು. ಕಮಲಕ್ಕನ ಪಕ್ಷವೊಂದೇ ಅಧಿಕೃತ ಪಕ್ಷ ಅಂತ ಘೋಷಣೆ ಮಾಡಬಕು. ಏಕ್ ಭಾರತ್, ಏಕ್ ಭಾಷಾ, ಏಕ್ ಪಕ್ಷ, ಏಕ್ ನಾಯಕ್... ಎಲ್ಲಾನೂ ಏಕ್... ಆವಾಗ ಏನೂ ದೋನಂಬರ್ ಬಿಜಿನೆಸ್ಸೇ ನಡಿಯಂಗಿಲ್ಲ’ ಎಂದು ಖೊಳ್ಳನೆ ನಕ್ಕಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT