ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ಆಟ–ಕೊರೊನಾ ಕಾಟ

Last Updated 19 ಮೇ 2020, 21:26 IST
ಅಕ್ಷರ ಗಾತ್ರ

‘ರೀ, ಮಕ್ಕಳು ರಸ್ತೆಯಲ್ಲಿ ಕ್ರಿಕೆಟ್ ಆಡುವಾಗ ಪೊಲೀಸರು ಬಂದು ಬೈದು, ಬಾಲ್ ಕಿತ್ಕೊಂಡು ಹೋಗಿದ್ದಾರೆ, ಬಾಲ್ ಕೇಳಿದ್ದಕ್ಕೆ ಜೈಲಿಗೆ ಹಾಕ್ತೀವಿ ಅಂದ್ರಂತೆ...’ ಹೊರಗಿನಿಂದ ಬಂದ ಶಂಕ್ರಿಗೆ ಸುಮಿ ಕಂಪ್ಲೇಂಟ್ ಹೇಳಿದಳು.

‘ಜೈಲು ಅಲ್ಲ ಮಮ್ಮಿ, ಕ್ವಾರಂಟೈನ್‍ನಲ್ಲಿ ಇಡ್ತೀವಿ ಅಂದ್ರು’ ಮಗ ತಿದ್ದುಪಡಿ ಮಾಡಿದ.

‘ಲಾಕ್‍ಡೌನ್ ಟೈಮಿನಲ್ಲಿ ವಿರಾಟ್‍ ಕೊಹ್ಲಿ, ರೋಹಿತ್‍ ಶರ್ಮಾ ಅಂಥವರೇ ತೆಪ್ಪಗೆ ಮನೆಯಲ್ಲಿದ್ದಾರೆ, ನೀನು ಯಾಕೆ ಕ್ರಿಕೆಟ್ ಆಡಲು ಹೋಗಿದ್ದೆ?’ ಶಂಕ್ರಿ ರೇಗಿದ.

‘ಮನೇಲಿ ಗಲಾಟೆ ಮಾಡ್ತಿದ್ದ, ಆಚೆ ಆಡಿಕೋ ಹೋಗು ಅಂತ ನಾನೇ ಕಳಿಸಿದೆ... ಪೊಲೀಸರಿಂದ ಬಾಲ್ ಈಸ್ಕೊಂಡು ಬನ್ರೀ’ ಸುಮಿ ಒತ್ತಡ ಹಾಕಿದಳು.

ಹೆಂಡ್ತಿ ಕಾಟ ವಿಪರೀತವಾಗಿ ಶಂಕ್ರಿ ಪೊಲೀಸರಿಗೆ ಫೋನ್ ಮಾಡಿದ, ‘ಸಾಹೇಬ್ರೆ, ನಮ್ಮ ಹುಡುಗರ ಕ್ರಿಕೆಟ್ ಬಾಲ್ ತಗೊಂಡು ಹೋದ್ರಂತೆ ಹಿಹ್ಹಿಹ್ಹಿ...’

‘ನಿಮ್ಮ ಮಗ ಸಕತ್ತಾಗಿ ಬೌಂಡರಿ ಬಾರಿಸ್ತಾನೆ ಕಣ್ರೀ...’ ಅಂದ್ರು ಸಾಹೇಬ್ರು.

‘ಅಷ್ಟೇಅಲ್ಲ ಸಾರ್, ಸಿಕ್ಸರ್ ಹೊಡೆದು ಮರದಿಂದ ತೆಂಗಿನಕಾಯಿ ಉದುರಿಸಿದ್ದ, ಈ ದಾಖಲೆಯನ್ನು ಯಾರೂ ಮುರಿದಿಲ್ಲ’.

‘ಮುರೀತಾರೆ, ಜನ ಅವನ ಕೈಕಾಲು ಮುರೀತಾರೆ... ಅಲ್ಲಾರೀ, ಲಾಕ್‍ಡೌನ್‍ನಲ್ಲಿ ಗುಂಪು ಸೇರಿ ಕ್ರಿಕೆಟ್ ಆಡಬಾರದು ಅಂತ ಗೊತ್ತಿಲ್ವೇನ್ರೀ?’

‘ಮಾಸ್ಕ್ ಹಾಕಿಕೊಂಡು, ಡಿಸ್ಟೆನ್ಸ್ ಮೇನ್‍ಟೇನ್ ಮಾಡಿಕೊಂಡು ಆಡ್ತಿದ್ರು ಸಾರ್... ಪಾಪ! ಬಾಲಕರು ಬಾಲ್‍ನಿಂದ ಬಾಲಾಪರಾಧ ಮಾಡಿದ್ದಾರೆ, ಕ್ಷಮಿಸಿಬಿಟ್ಟು, ಬಾಲ್ ಕೊಡಿ ಸಾರ್’ ಶಂಕ್ರಿ ಗೋಗರೆದ.

‘ನಿಮ್ಮ ಮಗ ನಾಲ್ಕು ಮನೆ ಕಿಟಕಿ ಗಾಜು, ಎರಡು ಕಾರಿನ ಗ್ಲಾಸ್ ಹೊಡೆದಿದ್ದಾನೆ, ಅಜ್ಜಿಯ ಸೊಂಟ, ಬೀದಿ ನಾಯಿ ಕಾಲು ಮುರಿದಿದ್ದಾನೆ ಅಂತ ಕಂಪ್ಲೇಂಟ್ ಬಂದಿದೆ. ಡ್ಯಾಮೇಜ್‍ಗೆ ಪರಿಹಾರ ಕಟ್ಟಿಕೊಟ್ಟು, ತಪ್ಪೊಪ್ಪಿಗೆ ಬರೆದುಕೊಟ್ಟು, ಬಾಲ್ ತಗೊಂಡು ಹೋಗ್ರಿ...’ ಸಾಹೇಬ್ರು ಫೋನ್ ಕಟ್ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT