ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ವೈಟ್ನರ್ ಕಂಪನಿ!

Published : 28 ಆಗಸ್ಟ್ 2024, 23:30 IST
Last Updated : 28 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

‘ಏನ್ಲಾ ವೊತ್ತು ಉಟ್ಟೋಕೆ ಮುಂಚೆ ಬಾ ಅಂತ ಕರ್ದಿದ್ದು? ನಿಂಗಂತೂ ಕ್ಯಾಮೆ ಇಲ್ಲ, ನಮ್ಗೂ ಇಲ್ಲ ಅಂದ್ಕಂಡ್ಯೇನು?’ ರೇಗಿದ ಮಾಲಿಂಗ.

‘ಕ್ಯಾಮೆ ಇಲ್ಲ ಅಂತಾನೆ ಒಸ ಕಸುಬು ಉಡ್ಕಿವ್ನಿ. ವೈಟ್ನರ್ ಕಂಪ್ನಿ ಓಪನ್ ಮಾಡವಾ ಅಂದ್ಕಂಡಿವ್ನಿ. ನೀವೂ ಜೊತೆಗೆ ತಗಲಾಕ್ಕತೀರಾ ಅಂತ ಕೇಳೋಕೆ ಕರ್ದೆ’ ಎಂದ ಗುದ್ಲಿಂಗ.

‘ವೈಟ್ನರ್ ಕಂಪ್ನಿನಾ? ಏನೇನು ನಿನ್ ಪ್ರಾಡಕ್ಟ್ಸು?’ ಕೇಳಿದ ಕಲ್ಲೇಶಿ.

‘ಈ ಕಾಗ್ದ, ಪತ್ರದ ಸಾಲುಗಳನ್ನ ಇನ್ನೂ ಪಸಂದಾಗಿ ಯಾರ್ಗೂ ಸುಳಿವು ಸಿಗ್ದಂಗೆ ಅಳ್ಸೋ ವೈಟ್ನರ್ ಪೆನ್ನು, ರೀಫಿಲ್ಸು, ಗುಳುಂ ಲೆಕ್ಕದ ಖಾತೆಯಲ್ಲಿ ಇಡೀ ಪೇಜಿಗೇ ವೈಟ್ನರ್ ಬಳ್ದು ಹರೋಹರ ಅನ್ಸೋ ಕಡ್ಡಿ ಬ್ರಶ್ಶು ಇವನ್ನೆಲ್ಲಾ ಮಾರಾದು’.

‘ಅಂಗೇ ಅದ್ರಲ್ಲಿ ಜೂನಿಯರ್ ಮಾಡ್ಲೂ ಬಿಡಪ್ಪ, ಮಕ್ಕಳಿಗೆ ಈಗಿಂದನೇ ಕಾಪಿ ಪುಸ್ತಕದಾಗೆ ವೈಟ್ನರ್ ಬಳ್ಯೋದ ಹೇಳ್‌ಕೊಟ್ರೆ ಒಳ್ಳೇದು’.

‘ಹೆಂಡ್ರು ಮಗುಚುಕಾಯ್ ಎಸ್ದು ಮೂತಿನಾಗೆ ಬ್ಲಾಕ್ ಮಾರ್ಕ್ ಆದ್ರೆ ತಕ್ಷಣಕ್ಕೆ ಆಕ್ಕಳಕ್ಕೆ ಒಂದು ಪಾಕೆಟ್ ಫೇಸ್ ವೈಟ್ನರ್ ಬ್ರಾಂಡ್ ಮಾಡು’.

‘ಊ ಅದ್ನೂ ಮಾಡವಾ. ಆಮ್ಯಾಕೆ ಈ ತಂಗುದಾಣ, ವಾಟ್ರು ಟ್ಯಾಂಕು, ಸೇತುವೆ ಮ್ಯಾಗೆ ನಮ್ ನಾಯಕ ಸಿರೋಮಣಿಗಳು ಇಂತ ವರ್ಷ ಕಟ್ಸಿಕೊಟ್ಟವ್ರೆ ಅಂತ ಬರ್ದಿರ್ತಾರಲ್ಲ, ಅದನ್ನ ಅಳ್ಸಿ ತಿದ್ದಕ್ಕೆ ಬ್ರಶ್ಶು, ಆಯಿಲ್ ವೈಟ್ನರ್ ಮಾಡಾದು’.

‘ಈ ಗೇಟು, ಬಾಗ್ಲು, ಎಂಟ್ರೆನ್ಸು ಅಂತ ಏನೇನೋ ಪರೀಕ್ಷೆ ಇದಾವಲ್ಲ, ಅವುಗಳ ಆನ್ಸರ್ ಶೀಟಿಗೆ ಬಳಿಯಕ್ಕೆ ಸ್ಪೆಶಲ್ ವೈಟ್ನರ್ ಮಾಡ್ಬೇಕು’.

‘ವೂ ಕಣ್ಲಾ, ಅಂಗೇ ಈ ಚಳುವಳಿಕಾರರು ಅವರಿವರಿಗೆ ಮಸಿ ಬಳಿತಿರ್ತಾರಲ್ಲ, ಅದನ್ನ ಅಳ್ಸಕ್ಕೆ ಒಂದು ಇನ್‍ಸ್ಟಾಂಟ್ ವೈಟ್ನರ್ ಮಾಡುದ್ರಂತೂ ಸಕತ್ ಕಾಸು ಗೆಬರ್ಕಬಹುದು’.

‘ಇಷ್ಟೇ ಸಾಕಾಗಲ್ಲ ಕಣ್ರೋ... ವೈಟ್ನರ್ ಡ್ರಮ್‌ಗಳನ್ನೇ ತಯಾರಿಸ್ಬೇಕು’.

‘ಅಷ್ಟೊಂದು ಎಲ್ಲಿಗೆ ಹಾಕ್ತೀಯ?’

‘ನಮ್ ಜೈಲಂತ ಬಿಲ್ಡಿಂಗ್‍ಗಳು, ವ್ಯವಸ್ಥೆ ಪೂರಾ ಗಬ್ಬೆದ್ದು ಕಪ್ಪಿಟ್ಟುಹೋಗಿವೆ. ಅವಕ್ಕೆ ಎಷ್ಟು ಬ್ಯಾರಲ್ ವೈಟ್ನರ್ ಹಚ್ಚುದ್ರೂ ಮಸಿ ಮುಚ್ಚಕ್ಕಾ
ಗಲ್ಲ’ ಎಂದ ಪರ್ಮೇಶಿ.

ಎಲ್ಲಾ ಹೌದ್ಹೌದು ಎಂದು ತಲೆಯಾಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT