ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಸೋಲು– ಗೆಲುವು

ಆನಂದ
Published 5 ಜೂನ್ 2024, 23:34 IST
Last Updated 5 ಜೂನ್ 2024, 23:34 IST
ಅಕ್ಷರ ಗಾತ್ರ

‘ಬುಲ್‍ಡೋಜರ್‌ಗೆ ಸೈಕಲ್ ಡಿಕ್ಕಿ ಹೊಡೆದರೆ ಏನಾಗುತ್ತೆ?’ ಮಡದಿ ಪ್ರಶ್ನೆ ಹಾಕಿದಳು. ‘ಸೈಕಲ್ ಪೀಸ್ ಪೀಸ್ ಅಲ್ವೆ?’ ಎಂದು ಮರು ಪ್ರಶ್ನಿಸಿದೆ.

‘ರಾಂಗ್. ಬುಲ್‍ಡೋಜರ್ ಹಳ್ಳಕ್ಕೆ ಬೀಳುತ್ತೆ’ ಎಂದಾಗ ನನಗೆ ಆಶ್ಚರ್ಯ. ‘ಉತ್ತರಪ್ರದೇಶದಲ್ಲಿ ಆಗಿಲ್ಲವೆ? ಅಖಿಲೇಶ್‍ರ ಸೈಕಲ್ ಯೋಗೀಜಿಯ ಬುಲ್‍ಡೋಜರನ್ನು ಬೀಳಿಸಿ ಮುಂದೆ ಸಾಗಿಲ್ಲವೆ?’ ಎಂದಾಗ ನನಗೆ ಜ್ಞಾನೋದಯ ಆಯಿತು.

‘ಇನ್ನೊಂದು ಪ್ರಶ್ನೆ. ಗೆದ್ದರೂ ಸೋತಂ ತಾಗಬೇಕು, ಸೋತರೂ ಗೆದ್ದಂತಿರಬೇಕು. ಹೇಗೆ? ಯಾರು? ಹೇಳಿ ನೋಡೋಣ’. ತಲೆ ಕೆರೆದುಕೊಂಡೆ. ಹೊಳೆಯಲಿಲ್ಲ. ‘ಲೋಕಸಭಾ ಚುನಾವಣಾ ಫಲಿತಾಂಶ ವಿಶ್ಲೇಷಿಸಿ ಗೊತ್ತಾಗುತ್ತೆ’ ಎಂದಳು. ‘ನೀನೇ ಮಾಡು’ ಎಂದು ಬದಿಗೆ ಸರಿದೆ.

‘ಈಗ ನೋಡಿ, ಎನ್‍ಡಿಎ ಗೆದ್ದರೂ ಸೋತಂತಿಲ್ಲವೆ? 400 ಸೀಟ್ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡು ಮೋದೀಜಿ ಹೋದಲ್ಲೆಲ್ಲ ಅಬ್ ಕಿ ಬಾರ್ ಚಾರ್ ಸೌ ಪಾರ್ ಎಂದರು. ಆದರೆ ತೀನ್ ಸೌ ಸಹ ಮುಟ್ಟಲಿಲ್ಲ. ಸೋಲಲಿಲ್ಲ ನಿಜ, ಆದರೆ ಇದು ಗೆದ್ದ ಹಾಗೆ ಎಂದು ಅವರಿಗೂ ಅನಿಸದು’.

‘ಮತ್ತೆ ಇನ್ನೊಂದು?’

‘ಅದು ಇಂಡಿಯಾ ಮೈತ್ರಿಕೂಟದ ಸಾಧನೆ. ಯಾವ ಮತಗಟ್ಟೆ ಸಮೀಕ್ಷೆ ಸಹ ಆ ಘಟಬಂಧನ್‍ಗೆ ಯಾವ ಭರವಸೆಯನ್ನೂ ಕೊಟ್ಟಿರಲಿಲ್ಲ. ಸೊ ವಾಟ್... ಭರ್ಜರಿ ಪ್ರದರ್ಶನ ನೀಡಿದ್ದಾರೆ. ಆದರೂ ಅವರು ಸೋತಿದ್ದಾರೆ ಅಥವಾ ಸೋತು ಗೆದ್ದಿದ್ದಾರೆ’ ಎಂದಳು. 

‘ಯೆಸ್ ಯೆಸ್’ ಎಂದೆ.

‘ಹಾಗೇ ನೋಡಿ, ಎಲ್ಲ ಮತಗಟ್ಟೆ ಸಮೀಕ್ಷೆ ಗಳೂ ಹೀಗೆ ಭರ್ಜರಿಯಾಗಿ ಸೋಲುತ್ತವೆ ಎಂದು ಬೇರೆ ಯಾವ ಸಮೀಕ್ಷೆಯಾಗಲಿ, ರಾಜಕೀಯ ತಜ್ಞರಾಗಲಿ ಮುನ್ಸೂಚನೆ ಕೊಡಲಿಲ್ಲ’.

‘ನಿಜ ನಿಜ’.

‘ಇನ್ನೊಂದು ವಿಪರ್ಯಾಸ ನೋಡಿ. ಕಾಂಗ್ರೆಸ್ ಸತತವಾಗಿ ಮೂರನೇ ಬಾರಿಗೆ ವಿರೋಧ ಪಕ್ಷವಾಗಿ ಸದನದಲ್ಲಿ ಕೂಡುತ್ತೆ. ಆದರೂ ಕಾಂಗೆಸ್ಸಿಗರು ಸಂಭ್ರಮಪಡುತ್ತಾರೆ. ಆದರೆ ಬಿಜೆಪಿ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದರೂ ಪಕ್ಷದಲ್ಲಿ ಲವಲವಿಕೆ ಇರೋಲ್ಲ’.

‘ಯಾರು ಸೋತರೋ ಬಿಟ್ಟರೋ
ಪ್ರಜಾಪ್ರಭುತ್ವ ಮಾತ್ರ ಗೆದ್ದಿದೆ’ ಎಂದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT