ಶುಕ್ರವಾರ, ಮೇ 27, 2022
21 °C

ಚುರುಮುರಿ: ಆದದ್ದೆಲ್ಲ ಒಳ್ಳೇದಕ್ಕೆ...

ಕೆ.ವಿ.ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

Prajavani

‘ಹೀಗಾಗ್ಬಿಟ್ರೆ ಹೇಗೆ? ಮಧ್ಯಮ ವರ್ಗಕ್ಕೆ ಮೇಲಿಂದ ಮೇಲೆ ಪೆಟ್ಟು, ಸಹಿಸ್ಕೊಳ್ಳೋದಾದ್ರೂ ಹೇಗೆ?’
ನನ್ನವಳ ಮಹಿಳಾ ಮಂಡಳಿ ಮೀಟಿಂಗ್‌ನ ಮಾತುಕತೆ ಹಾಲಿನವರೆಗೂ ಕೇಳಿಸುತ್ತಿತ್ತು.

‘ಎಲ್ಲರೂ ಕಾರು, ಸ್ಕೂಟರ್ ಇಟ್ಕೊಂಡಿ ರ್ತಾರ? ನಾವೆಲ್ಲ ಆಟೊನೇ ನಂಬಿರೋವ್ರು?’ ಹಿರಿಯ ಸದಸ್ಯೆಯೊಬ್ಬರ ದುಃಖ.

‘ನಿಜ, ಆದರೆ ಈ ಕಷ್ಟಕಾಲದಲ್ಲಿ ಪೆಟ್ರೋಲು, ಡೀಸೆಲ್ಲು ಬೆಲೆ ಜಾಸ್ತಿ ಆಗಿರುವಾಗ ಅವರು ತಾನೇ ಏನು ಮಾಡ್ತಾರೆ ಪಾಪ?’

‘ದಿನಸಿ, ತರಕಾರಿ ಬೆಲೆ ಏರಿರೋ ಬಿಸಿ ಎಲ್ಲರಿಗೂ ತಟ್ಟಿದೆ...’

‘ಯೆಸ್, ಹೋಟೆಲ್ ರೇಟ್‌ಗಳು ಇನ್‌ಕ್ರೀಸ್ಡ್... ಕಾಫಿ, ಸ್ನ್ಯಾಕ್ಸ್, ಲಂಚ್, ಚಾಟ್ಸ್... ಬಟ್ ಹಾಗಂತ ಹೋಟೆಲ್‌ಗೆ ಹೋಗದೆ ಇರ್ತೀವಾ? ಪಾರ್ಟಿ ಕೊಡದೇ ಇರ್ತೀವಾ?’ ಎಂದಿತು ಮತ್ತೊಂದು ದನಿ ಶುದ್ಧ ಕನ್ನಡದಲ್ಲಿ!

‘ಅನಿವಾರ್ಯವಾದಾಗ ಎಲ್ಲಕ್ಕೂ ಹೊಂದಿಕೊಂಡು ಹೋಗೋದ್ರಲ್ಲಿ ಜಾಣತನ ವಿದೆ. ಆಟೊಲಿ ಒಬ್ಬೊಬ್ಬರೇ ಓಡಾಡೋ ಬದಲು ಹತ್ತಿರದವರೊಂದಿಗೆ ಸೇರಿಕೊಂಡು ಫೇರ್ ಶೇರ್ ಮಾಡಿ, ಹೋಟೆಲ್ ವಿಸಿಟ್‌ನ ವಾರಕ್ಕೊಮ್ಮೆ ಬದಲು ಹದಿನೈದು ದಿನ ಕ್ಕೊಮ್ಮೆ ಇಟ್ಕೊಂಡರಾಯ್ತು. ನಾಲಿಗೆ ಚಪಲಾನೂ ತೀರುತ್ತೆ, ಆದದ್ದೆಲ್ಲ ಒಳ್ಳೇದಕ್ಕೆ ಅಂದ್ಕೊಂಡ್ರಾಯ್ತು, ಪರ್ಸೂ ಕಚ್ಚೊಲ್ಲ ಏನಂತೀರಿ?’ ಇದು ನನ್ನವಳ ಸಲಹೆ, ಹಿಂದೆಯೇ ಚಪ್ಪಾಳೆಯ ಮೂಲಕ ಸದಸ್ಯರ ಅನುಮೋದನೆ!

‘ನನ್ನ ಐಡಿಯಾಗಳನ್ನು ಯಥಾವತ್ ಸಭೆ ಯಲ್ಲಿ ಮಂಡಿಸಿ ಮೆಚ್ಚುಗೆ ಗಿಟ್ಟಿಸಿದೆ! ಮುಂದಿನ ಅಧ್ಯಕ್ಷೆ ನೀನೇ ಹಾಗಾದರೆ?’ ಮೀಟಿಂಗ್ ಮುಗಿಯುತ್ತಲೇ ಬೆಣ್ಣೆ ಹಚ್ಚಿದೆ.

ಹಿರಿಹಿರಿ ಹಿಗ್ಗಿದಳು. ಅಷ್ಟರಲ್ಲೇ ಕಂಠಿ ಬಂದ, ಕೈಯಲ್ಲಿ ಸ್ವೀಟ್ ಬಾಕ್ಸ್ ‘ನಿಮಗೇ’ ಎನ್ನುತ್ತಾ ನನ್ನವಳ ಕೈಗಿತ್ತ.

‘ರಾಜ್ಯೋತ್ಸವ ಪ್ರಶಸ್ತಿ ಮಿಸ್ ಆಯ್ತು ಅಂತ ಬಾಸ್ ಬೇಜಾರಾಗಿದ್ರು. ‘ಈ ಬಾರಿ ಸಿಕ್ಕದ್ದು ಒಳ್ಳೆಯದೇ ಆಯಿತು, ಮುಂದಿನ ವರ್ಷದಿಂದ ಪ್ರಶಸ್ತಿ ಮೊತ್ತ ಐದು ಲಕ್ಷಕ್ಕೆ ಏರಿಕೆಯಾಗಿದೆ’ ಅಂತ ಹುರುದುಂಬಿಸಿದ ಪರಿಣಾಮ ಆಫೀಸಿನಲ್ಲಿ ಎಲ್ಲರಿಗೂ ಸಿಹಿ ಹಂಚಿದರು’ ಹಲ್ಕಿರಿದ.

‘ಉಸ್ತುವಾರಿ ನಿಮ್ಮದೇ ಇರುತ್ತೆ ಬಿಡಿ’ ಎನ್ನುತ್ತಾ ಕಾಫಿ ತಂದಳು ನನ್ನವಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.