ಶನಿವಾರ, ಜುಲೈ 2, 2022
25 °C

ಚುರುಮುರಿ: ಫ್ಯಾಮಿಲಿ–ಟಿಕೆಟ್!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

ಚುರುಮುರಿ

‘ಏನ್ ಮಳಿನೋ ಮಾರಾಯ ಇದು? ಮಳಿಗಾಲ ಇನ್ನೂ ಶುರುನೇ ಆಗಿಲ್ಲ, ಆಗ್ಲೇ ಕೆತ್ತಿ ಬಡೀತಾ ಕುಂತೈತಿ... ಕೆರಿ ಕಟ್ಟಿ ಎಲ್ಲ ಈಗ್ಲೇ ಕೋಡಿ ಬಿದ್ದಾವಂತೆ’ ದುಬ್ಬೀರ ತಲೆ ಕೊಡವಿದ.

‘ಈ ರಾಜಕೀಯದೋರ ಚಾಳಿ ಅದ್ಕೂ ಬಡದಂಗೆ ಕಾಣುಸ್ತತಿ. ಚುನಾವಣಿ ಇನ್ನೂ ವರ್ಷ ಐತಿ, ಆಗ್ಲೇ ಇವರು ಮಿಶನ್ನು, ಟಾರ್ಗೆಟ್ಟು ಅಂತ ಶುರು ಹಚ್ಕಂಡಾರಲ್ಲ, ಹಂಗೆ’ ಗುಡ್ಡೆ ನಕ್ಕ.

‘ಹೌದೂ ಈ ಮಿಶನ್ ಅಂದ್ರೆ ಏನ್ಲೆ ಗುಡ್ಡೆ?’ ಕೊಟ್ರೇಶಿ ಕೇಳಿದ.

‘ಅದೂ ಒಂಥರ ಮಿಶನ್ ಗನ್ ಇದ್ದಂಗೆ... ಎದುರಾಳಿಗಳನ್ನ ಶೂಟ್ ಮಾಡೋ ತರ ಸೋಲ್ಸಿ ಎಲೆಕ್ಷನ್ ಗೆಲ್ಲೋದು’.

‘ಲೇ... ಮಿಶನ್ ಅಂದ್ರೆ ವೋಟ್ ಹಾಕೋ ಮಿಶನ್ ಕಣ್ರಲೆ, ಮಿಶನ್‌ಗಳನ್ನ ಬುಕ್ ಮಾಡ್ಕಂಡು ಎಲೆಕ್ಷನ್ ಗೆಲ್ಲೋದು’ ದುಬ್ಬೀರ ತಿದ್ದಿದ.

‘ಅದಿರ್‍ಲಿ, ಒಂದ್ ಫ್ಯಾಮಿಲಿಗೆ ಒಂದೇ ಟಿಕೆಟಂತಲ್ಲೋ ತೆಪರಾ? ಮತ್ತೆ ಎರಡು ಬೇಕಂದ್ರೆ ಹೆಂಗೆ?’ ಕೊಟ್ರೇಶಿ ಪ್ರಶ್ನೆ.

‘ಹೆಂಗೆ ಅಂದ್ರೆ? ಅಪ್ಪ ಮಗ ಬ್ಯಾರೆ ಆಗಿದೀವಿ, ಆಸ್ತಿ ಪಾಲಾಗೇತಿ, ಎರಡು ಟಿಕೆಟ್ ಕೊಡಿ ಅಂದ್ರಾತು’.

‘ಅಥ್ವ ಒಬ್ರಿಗೇ ಎರಡು ಫ್ಯಾಮಿಲಿ ಇದ್ರೆ?’ ಗುಡ್ಡೆ ಕೊಕ್ಕೆ.

‘ಅದು ನಿನ್ ಪ್ರಾಬ್ಲಂ... ನನ್ನತ್ರ ಉತ್ತರ ಇಲ್ಲ’ ತೆಪರೇಸಿ ನಕ್ಕ.

‘ಈಗ ನಮ್ ದುಬ್ಬೀರಂಗೆ ಮದುವಿನೇ ಆಗಿಲ್ಲಪ, ಅವ್ನಿಗೆ ಹೆಂಗೆ?’ ಕೊಟ್ರೇಶಿ ಕಿಸಕ್ಕೆಂದ.

‘ಅವ್ನಿಗೂ ಟಿಕೆಟ್ ಸಿಗುತ್ತೆ, ಅದೂ ಫ್ಯಾಮಿಲೀನೆ’.

‘ಫ್ಯಾಮಿಲೀನಾ? ಹೆಂಗೆ?’

‘ಅವುಂದು ಒನ್ ಮ್ಯಾನ್ ಫ್ಯಾಮಿಲಿ. ಈಗ ಒನ್ ಮ್ಯಾನ್ ಆರ್ಮಿ ಅನ್ನಲ್ವಾ? ಆ ಥರ...’‌

ತೆಪರೇಸಿ ಮಾತಿಗೆ ಮೀಸೆ ತಿರುವಿದ ದುಬ್ಬೀರ, ‘ಹೆಂಗಲೆ ಕೊಟ್ರ, ನಂದು ಒನ್ ಮ್ಯಾನ್ ಆರ್ಮಿ’ ಎಂದ. ಕೊಟ್ರೇಶಿ ಪಿಟಿಕ್ಕನ್ನಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು