ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಹ್ಯಾಕರ್ ಪ್ರಶಸ್ತಿ

Last Updated 31 ಅಕ್ಟೋಬರ್ 2021, 22:00 IST
ಅಕ್ಷರ ಗಾತ್ರ

ಮೊನ್ನೆಯಿಂದ ಬೆಕ್ಕಣ್ಣ ಯಾರದ್ದೇ ಕರೆ ಬಂದರೂ ಮೊಬೈಲ್ ಎತ್ತಿದೊಡನೆ ‘ಸ್ವಚ್ಛ ಭಾರತ’ ಎನ್ನುತ್ತಿತ್ತು.

‘ಇದೇನಲೇ ಹೊಸಾ ಸುಪ್ರಭಾತ... ಭಾರತ ಸ್ವಚ್ಛವಾಗತೊಡಗಿ ಬರೋಬ್ಬರಿ ಏಳು ವರ್ಷ ಆದುವಲ್ಲ... ರಗಡ್ ಥಳಥಳ ಆಗೈತೇಳು...’ ಎಂದೆ.

‘ಹಾಯ್, ಹಲೋ ಬದಲಿಗೆ ಸ್ವಚ್ಛ ಭಾರತ ಅಂತ ಅಚ್ಚ ಕನ್ನಡದಾಗೆ ಹೇಳ್ರಿ ಅಂತ ಕ್ರೀಡಾ ಸಚಿವರು ಯುವಜನರಿಗೆ ಕರೆ ಕೊಟ್ಟಾರ. ಎಲ್ಲಾರೂ ಹೇಳಾಕಹತ್ತಿದರ ದೇಶ ತಾನಾಗೇ ಸ್ವಚ್ಛ ಆಗತದ’ ಎಂದಿತು.

‘ಹುಚ್ ಪ್ಯಾಲಿ... ಬರೀ ಬಾಯೊಳಗ ಅಂದ್ರ ಆಗಂಗಿಲ್ಲಲೇ. ಕಂಡ್ಕಂಡಲ್ಲಿ ಕಸ ಹಾಕಬಾರದು, ಎಲ್ಲಿ ಕಸ ಕಂಡ್ರೂ ತೆಗೀಬಕು, ಮೊದ್ಲಿಗಿ ನಮ್ಮ ನಾಲಗಿ ಸ್ವಚ್ಛ ಇಟ್ಟುಕೋಬೇಕು...’

ನಾನು ಮಾತು ಮುಗಿಸುವ ಮೊದಲೇ ಬೆಕ್ಕಣ್ಣ ‘ಕಸ ತೆಗಿಲಾಕ ಪೌರಕಾರ್ಮಿಕರು ಅದಾರಲ್ಲ, ನಾವೆದಕ್ಕೆ ತೆಗಿಯೂಣು’ ಎಂದು ಪೇಪರಿನಲ್ಲಿ ಮುಖ ಹುದುಗಿಸಿತು.

‘ಯುವಜನರಿಗೆ ಸಾಮರ್ಥ್ಯ, ಕೌಶಲ ಇಲ್ಲ ಅಂತ ಹಿರೀತಲೆಗಳು ಸುಳ್ಳೆ ವದರತಿರ್ತಾರ. ನೋಡಿಲ್ಲಿ... ಈ ಶ್ರೀಕಿ ಎಷ್ಟ್ ಬೆರಿಕಿ ಅದಾನ. ಹೆಂಗ ಸರ್ಕಾರಿ ಖಜಾನಿಗೆ ಖನ್ನ ಹಾಕಿ, ಕೋಟಿಗಟ್ಲೆ ರೊಕ್ಕ ಬಾಚ್ಯಾನ...’ ಎಂದು ಉದ್ಗರಿಸಿತು.

‘ವಳ್ಳೆ ಕೆಲಸಕ್ಕೆ ಸಾಮರ್ಥ್ಯ, ಕೌಶಲ ಬಳಸಬೇಕಲೇ... ಹೀಂಗ ಖಜಾನೆ ಸ್ವಚ್ಛ ಮಾಡಾಕ ಬಳಸತಾರೇನು’ ಅಂದೆ.

‘ಏನ್ ತಪ್ಪಾತು... ಎಲ್ಲಾ ಕಡಿಗಿ ಕರುನಾಡಿನ ಖ್ಯಾತಿ ಹಬ್ಬಿಸ್ಯಾನ’.

‘ಅದ್ ಖ್ಯಾತಿಯಲ್ಲ, ಕುಖ್ಯಾತಿ’ ಎಂದು ತಿದ್ದಿದೆ.

‘ಹ್ಯಾಕ್ ಮಾಡೂ ಚಾಣಾಕ್ಷತನಾನ ಕ್ರೀಡಾ ಪ್ರಶಸ್ತಿಗೆ ಅಥವಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಪದ್ಮ ಪ್ರಶಸ್ತಿ, ಹಿಂತಾ ಪ್ರಶಸ್ತಿಗೆ ಪರಿಗಣಿಸಬೇಕು. ಅವಂಗ ಹ್ಯಾಕರ್ ರತ್ನ ಅಂತ ಅಥವಾ ಹ್ಯಾಕರ್ ಪದ್ಮ ಪ್ರಶಸ್ತಿ ಕೊಡಬಕು’ ಬೆಕ್ಕಣ್ಣ ವಾದಿಸಿತು.

‘ಅಷ್ಟರೊಳಗೆ ಪ್ರಶಸ್ತಿ ರೊಕ್ಕ ಇರೂ ಸರ್ಕಾರಿ ಖಾತೆನ ಹ್ಯಾಕ್ ಮಾಡಿ, ಅದನ್ನ ಬಿಟ್ ಕಾಯಿನ್‌ಗೆ ಮಾರಿಕೊಂಡಿರ್ತಾನ ಅಂವ’ ಎಂದು ನಾನು ನಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT