ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಇಂಡಿಯನ್ ವೈರಸ್!

Last Updated 8 ಜನವರಿ 2021, 19:31 IST
ಅಕ್ಷರ ಗಾತ್ರ

‘ಯಾಕೋ ಮೈಯಾಗೆ ಚಳಿ ಚಳಿ ಕಣ್ರಲೆ, ಕಣ್ಣಾಗೆ ಕರ್‍ರಗೆ ಬೆಳ್ಳಗೆ ಏನೇನೋ ಕಾಣಾಕತ್ಯಾವು’ ಎಂದ ಗುಡ್ಡೆ ನಡುಗುತ್ತ.

‘ಕರ್‍ರಗೆ ಬೆಳ್ಳಗೆ ಅಂದ್ರೆ ಆಫ್ರಿಕನ್ ವೈರಸ್ಸೇ ಇರ್ಬೇಕು. ಮೊದ್ಲು ಹೋಗಿ ಟೆಸ್ಟ್ ಮಾಡಿಸ್ಕಾ. ನಮಗೆಲ್ಲ ಅಂಟಿಸಿಬಿಟ್ಟೀಯ...’ ದುಬ್ಬೀರ ರೇಗಿದ.

‘ಏನಿಲ್ಲ ಬಿಡಲೆ, ಒಂದು ಫುಲ್ ಸುಡೋ ಸುಡೋ ಚಾ ಬಿದ್ರೆ ಎಲ್ಲ ಸರಿ ಹೋಗ್ತತಿ, ಯಾರಾದ್ರು ಚಾ ಹೇಳ್ರಲೆ...’ ಗುಡ್ಡೆ ನಕ್ಕ.

‘ಓ ಇದು ಚಾ ವೈರಸ್ಸಾ?’ ಎಂದ ತೆಪರೇಸಿ, ‘ಅಲ್ಲಲೆ, ಇವೇನಿವು ಚೀನಾ ಆತು, ಬ್ರಿಟನ್ ಆತು, ಈಗ ಆಫ್ರಿಕನ್ ವೈರಸ್ಸು... ನಾವೇನು ಬದುಕಬೇಕೋ ಬ್ಯಾಡೋ? ನಂಗಂತೂ ತೆಲಿ ಕೆಟ್ಟೋಗೆತಪ’ ಎಂದ.

‘ಲಸಿಕೆ ಬಂದೇತಲ್ಲ ಬಿಡಲೆ, ಯಾಕೆ ತೆಲಿ ಕೆಡಿಸ್ಕಂತಿ?’ ಪರ್ಮೇಶಿ ಸಮಾಧಾನ ಮಾಡಿದ.

‘ಅಯ್ಯೋ ಲಸಿಕೆ ನಮ್ಮತ್ರ ಬರೋದ್ರೊಳಗೆ ಇನ್ನೊಂದು ಯಾವದಾರ ಹೊಸ ವೈರಸ್ಸು ಅಟಕಾಯಿಸ್ಕಂತತಿ ಅಷ್ಟೆ. ನೀನರೆ ಚಾ ಹೇಳು, ಕುಡಿದು ಸಾಯಾಣ ಅತ್ಲಾಗಿ’ ತೆಪರೇಸಿ ತೆಲಿ ಒಗೆದ.

‘ತೀರ ಅಷ್ಟಾಕಂದು ಮನಸ್ಸಿಗೆ ಹಚ್ಕಾಬ್ಯಾಡಲೆ ತೆಪರ, ರಾತ್ರಿ ಸಿಗು ಎಲ್ಲ ಸರಿ ಮಾಡ್ತೀನಿ’ ದುಬ್ಬೀರ ಬೆನ್ನು ತಟ್ಟಿದ.

‘ಅಲ್ಲ ನನಗೆ ಒಂದು ಆಶ್ಚರ್ಯ. ವೈರಸ್ ಎಲ್ಲ ಬೇರೆ ದೇಶದಾವೇ ಇಲ್ಲಿಗೆ ಬರ್ತಾವಲ್ಲ, ನಮ್ಮ ದೇಶದ ವೈರಸ್ ಒಂದೂ ಇಲ್ಲ ಯಾಕೆ?’

‘ಯಾಕಿಲ್ಲ? ದೇಶದ ತುಂಬ ಇರೋ ರಾಜಕಾರಣಿಗಳೇ ನಮ್ಮ ವೈರಸ್‍ಗಳು. ಆದ್ರೆ ಅವಕ್ಕೆ ಲಸಿಕೆ ಇಲ್ಲ ಅಷ್ಟೆ...’

‘ಲೇಯ್, ಸರಿಯಾಗಿ ಮಾತಾಡು. ಎಲ್ಲ ರಾಜಕಾರಣಿಗಳೂ ಕೆಟ್ಟೋರಲ್ಲ, ಒಳ್ಳೇರೂ ಇರ್ತಾರೆ’ ತೆಪರೇಸಿ ಮೇಲೆ ದುಬ್ಬೀರ ರೇಗಿದ.

‘ಹೌದೌದು, ದುಬ್ಬೀರನ ಪಕ್ಷದ ರಾಜಕಾರಣಿಗಳು ತುಂಬಾ ಒಳ್ಳೇರು...’ ಗುಡ್ಡೆ ನಕ್ಕ.

‘ದುಬ್ಬೀರನ ಪಕ್ಷನಾ? ಯಾವುದು?’

‘ಎ.ಎಂ.ಪಿ.ಪಿ ಅಂತ’.

‘ಅಂದ್ರೆ?’

‘ಎಣ್ಣೆ ಮಕ್ಕಳ ಪ್ರಾಮಾಣಿಕ ಪಕ್ಷ ಅಂತ...’ ಗುಡ್ಡೆ ಕೀಟಲೆಗೆ ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT